ಪುಸ್ತಕಗಳ ಲೋಕಾರ್ಪಣೆ

0
281

 
ವರದಿ: ಸುನೀಲ್ ಬೇಕಲ್
ಪ್ರಾಚೀನ ನಂಬಿಕೆ-ನಡವಳಿಕೆ, ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೇಗುಲಗಳು ಹಾಗೂ ಸ್ಮಾರಕಗಳು ಮಾಹಿತಿಯ ಆಗರವಾಗಿದ್ದು ಶ್ರದ್ಧಾ – ಭಕ್ತಿಯಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಗುಡಿ-ಗೋಪುರ ಹಾಗೂ ದೇವಾಲಯಗಳಲ್ಲಿರುವ ಶಿಲ್ಪಕಲೆ ಚಿತ್ತಾಕರ್ಷಕವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
 
ಧರ್ಮಸ್ಥಳದಲ್ಲಿ ಭಾನುವಾರ ಅವರು ಬೆಂಗಳೂರಿನ ಕೆಂಗೇರಿ ಚಕ್ರಪಾಣಿ ಬರೆದ ದೇಗುಲಗಳ ದಾರಿ ಮತ್ತು ಟಿ. ಎಸ್. ಗೋಪಾಲ್ ಬರೆದ ಗುಡಿ ಗೋಪುರಗಳ ಸುತ್ತ ಮುತ್ತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಾಚೀನ ಕ್ಷೇತ್ರಗಳ ರಕ್ಷಣೆ ಬಗ್ಯೆ ಸರ್ಕಾರ ಮತ್ತು ಸಮಾಜ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೆಲವು ಕಡೆಗಳಲ್ಲಿ ದೇವಸ್ಥಾನ ಹಾಗೂ ಸ್ಮಾರಕಗಳನ್ನು ಅಕ್ರಮ ಒತ್ತುವರಿ ಮಾಡಿಕೊಳ್ಳಲಾಗಿದೆ. ಪುರಾತನ ದೇವಾಲಯಗಳು ನಾದುರಸ್ತಿಯಲ್ಲಿದ್ದರೂ ಅಲ್ಲಿನ ಸಾನ್ನಿಧ್ಯ ನಶಿಸಿ ಹೋಗುವುದಿಲ್ಲ. ದೇವಾಲಯಗಳ ಜೀರ್ಣೋದ್ಧಾರ ಮಾಡುವಾಗ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
 
ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಇನ್ನೂರಕ್ಕೂ ಮಿಕ್ಕಿ ಪ್ರಾಚೀನ ದೇಗುಲಗಳು ಹಾಗೂ ಸ್ಮಾರಕಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ.
ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಸೇವೆಯನ್ನು ಶ್ಲಾಘಿಸಿದ ಹೆಗ್ಗಡೆಯವರು ದೇವಸ್ಥಾನಗಳ ಬಗ್ಯೆ ಅವರ ಸಲಹೆಯನ್ನು ಸ್ವೀಕರಿಸುವುದಾಗಿ ಹೇಳಿದರು.
ಬೆಂಗಳೂರು ಬಿ.ಎಸ್.ಎನ್.ಎಲ್.ನ ಉಪ ಮಹಾ ಪ್ರಬಂಧಕ ಗಣಪತಿ ಎಂ. ಭಟ್ ಅಧ್ಯಕ್ಷತೆ ವಹಿಸಿದರು.
ಟಿ. ಎಸ್. ಗೋಪಾಲ್, ಗೌರಿಪುರ ಚಂದ್ರ ಡಾ. ಚಿಂತಾಮಣಿ ಕೊಡ್ಲಕೆರೆ ಉಪಸ್ಥಿತರಿದ್ದರು. ಕೆಂಗೇರಿ ಚಕ್ರಪಾಣಿ ಸ್ವಾಗತಿಸಿದರು. ಚಂದ್ರಪ್ಪ ಧನ್ಯವಾದವಿತ್ತರು.
 
 
ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ
ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಇದೇ 24ರಿಂದ 29ರ ವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು 27ರಂದು ಭಾನುವಾರ ಸರ್ವಧರ್ಮ ಸಮ್ಮೇಳನ ಮತ್ತು 28ರಂದು ಸೋಮವಾರ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನವನ್ನು ಸರ್ವೊಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ ಗೌಡ ಉದ್ಘಾಟಿಸುವರು. ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
 
 
ನವ ದೆಹಲಿಯ ಡಾ. ಜಯಕುಮಾರ್ ಉಪಾಧ್ಯೆ, ಪುತ್ತೂರಿನ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಮತ್ತು ಧಾರವಾಡದ ವಿದ್ಯಾ ನಿಕೇತನದ ನಿರ್ದೇಶಕ ಪ್ರಶಾಂತ್ ಡಿ’ಸೋಜಾ ಧಾರ್ಮಿಕ ಉಪನ್ಯಾಸ ನೀಡುವರು.
ಚೆನ್ನೈನ ಗಾಯತ್ರಿ ಗಿರೀಶ್ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ.
ಸೋಮವಾರ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸುವರು.
 
 
ಬೆಂಗಳೂರಿನ ಖ್ಯಾತ ಸಾಹಿತಿ ಎಂ. ಎನ್. ವ್ಯಾಸ ರಾವ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಉಪನ್ಯಾಸ ನೀಡುವರು.
ಖ್ಯಾತ ಸಿನಿ ತಾರೆ ಕು. ಶೋಭನಾ ಮತ್ತು ತಂಡದ ಕಲಾವಿದರಿಂದ ಗೀತ ಗೋವಿಂದ ನೃತ್ಯ ಪ್ರದರ್ಶನವಿದೆ.
ರಾಜ್ಯಮಟ್ಟದ ವಸ್ತು ಪ್ರದರ್ಶನ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಪ್ರೌಢಶಾಲಾ ವಠಾರದಲ್ಲಿ ಇದೇ 24ರಿಂದ 29ರ ವರೆಗೆ ರಾಜ್ಯಮಟ್ಟದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಇದೇ 24ರಂದು ಗುರುವಾರ ಸಂಜೆ 5ಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಸ್ತು ಪ್ರದರ್ಶನ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಪ್ರತಿ ದಿನ ಬೆಳಿಗ್ಯೆ 9 ರಿಂದ ರಾತ್ರಿ 9 ರ ವರೆಗೆ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ಇವೆ.
29 ರಂದು ಮಂಗಳವಾರ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನಗೊಳ್ಳುತ್ತದೆ.

LEAVE A REPLY

Please enter your comment!
Please enter your name here