ಪುಷ್ಪೋದ್ಯಮದಿಂದ ಭಾರೀ ಗಳಿಕೆ

0
492

 
ವಿಶೇಷ ಕೃಷಿ ಲೇಖನ:
ಪುಷ್ಪೋದ್ಯಮ ಬೃಹದಾಕಾರವಾಗಿ ಬೆಳೆಯುತ್ತಿದೆ. ಸಭೆ ಸಮಾರಂಭಗಳಲ್ಲಿ ಹೂ ಅಲಂಕಾರ ಇಲ್ಲದಿದ್ದರೇ ಕಾರ್ಯಕ್ರಮ ಕಳೆ ಕಟ್ಟದು ಎನ್ನುವಷ್ಟು ಮಟ್ಟಿಗೆ ಹೂಗಳಿಗೆ ಬೇಡಿಕೆಯಿದೆ. ಜೆರ್ಬೆರಾ, ಡಚ್‌ ರೋಸ್‌, ಕಾರ್ನಿಷಿಯಾ ಮೊದಲಾದ ಅಲಂಕಾರಿಕ ಹೂವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಇದನ್ನು ಸರಿಯಾಗಿ ಅರಿತವರು ದೊಡ್ಡಬಳ್ಳಾಪುರದ ಕೊಡಿಗೆಹಳ್ಳಿಯ ವೆಂಕಟೇಶ್‌. ತಂಗಿ ಲೀಲಾವತಿ ಚೆನ್ನೇಗೌಡ ಅವರ ಕೋಳೂರಿನ 3.5 ಎಕರೆ ಜಮೀನಿನಲ್ಲಿ ಜೆರ್ಬೆರಾ ಹೂವುಗಳ ಕೃಷಿ ಆರಂಭಿಸಿ, 7 ವರ್ಷಗಳಿಂದ ನಿರಂತರ ಆದಾಯ ಗಳಿಸುತ್ತಿದ್ದಾರೆ.
 
 
ಜೆರ್ಬೆರಾ ಹೂವುಗಳ ಕೃಷಿ ಹೇಗೆ?
ಉಷ್ಣವಲಯ ಮತ್ತು ಸಮಶೀತೋಷ್ಣ ವಾತಾವರಣದಲ್ಲಿ ಜಮೀನಿನ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಿಸಲಾಗಿರುವ ಪಾಲಿಹೌಸ್‌ಗಳಲ್ಲಿ ಜೆರ್ಬೆರಾ ಹೂವುಗಳನ್ನು ಬೆಳೆಯಬಹುದಾಗಿದೆ. ಆದರೆ ಹಿಮದಿಂದ ರಕ್ಷಣೆ ಮಾಡುವುದು ಅಗತ್ಯವಾಗಿದೆ.
ಚೆನ್ನಾಗಿ ಒಣಗಿರುವ, ಉತ್ತಮ ಬೆಳಕು, ತಟಸ್ಥ ಅಥವಾ ಸ್ವಲ್ಪಮಟ್ಟಿಗೆ ಯೂರೀಯ ಮಣ್ಣಿನಲ್ಲಿ (ಪಿ.ಎಚ್‌- 6.5 -8.0) ಬೇರುಗಳು 50-70 ಸೆಂ.ಮೀ ಆಳಕ್ಕೆ ಇಳಿಯುವಂತೆ 2.5ಅಡಿ ಅಗಲ ಹಾಗೂ 1 ಅಡಿ ಎತ್ತರದ ಮಣ್ಣಿನ ದಿಬ್ಬ ನಿರ್ಮಿಸಿ, ನೀರು ನಿಲ್ಲಲು ಆಸ್ಪದವಿಲ್ಲದಂತೆ ನಿರ್ಮಿಸಬೇಕು. ಕೃಷಿ ಪ್ರಾರಂಭಿಸುವ ಮೊದಲು, ಮಣ್ಣಿನ ಸೋಂಕುಗಳೆತ ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು.
 
 
 
ನಂತರ ಜೆರ್ಬೆರಾ ಗಿಡಗಳನ್ನು ನಾಟಿ ಮಾಡಿ, ಕೊಟ್ಟಿಗೆ ಗೊಬ್ಬರ ಒಣಗಿಸಿ ಜರಡಿ ಹಿಡಿದು ಹಾಕಬೇಕು. ನಂತರ ಗಿಡವನ್ನು ನಾಟಿ ಮಾಡಿ, ಗಿಡಗಳ ಸಂರಕ್ಷಣೆಯನ್ನು 3 ತಿಂಗಳ ಕಾಲ ಮಾಡಿದ ನಂತರ ಹೂ ಬಿಡಲು ಆರಂಭಿಸುತ್ತದೆ. ಒಂದು ತಿಂಗಳಿಗೆ ಒಂದು ಗಿಡದಲ್ಲಿ 6 ಹೂಗಳು ಬರುತ್ತವೆ. ಕಾಲಕಾಲಕ್ಕೆ ಔಷಧಿ ಸಿಂಪಡನೆ, ಕಾಂಪೋಸ್ಟ್‌ ಗೊಬ್ಬರ ಹಾಗೂ ನೀರು ಹಾಕುವುದು ಮುಖ್ಯವಾಗಿದೆ. ನೀರು ಅತಿ ಹೆಚ್ಚಾಗಿ ಗಿಡದ ಬಳಿ ನಿಲ್ಲದಂತೆ ಮಾಡಬೇಕು. ಉಷ್ಣಾಂಶ ಹೆಚ್ಚಾಗಿದ್ದಾಗ ತುಂತುರು ಹನಿಯ ಮೂಲಕ ನೀರನ್ನು ಹಾಯಿಸಬೇಕಾಗುತ್ತದೆ. ಗಿಡದ ಆಯುಷ್ಯ 4ರಿಂದ 5 ವರ್ಷಗಳಾಗಿದ್ದು, ಇದು ಗಿಡವನ್ನು ನಾವು ಆರೈಕೆ ಮಾಡುವ ಮೇಲೂ ಅವಲಂಬಿತವಾಗಿರುತ್ತದೆ.
 
 
 
ಇನ್ನು ವೆಂಕಟೇಶ್‌ ಅವರ ಜೆರ್ಬೆರಾ ಕೃಷಿ ವಿಚಾರಕ್ಕೆ ಬಂದರೆ ವೆಂಕಟೇಶ್‌ 3.5 ಎಕರೆ ಜಮೀನಿನಲ್ಲಿ ಕೆಂಪು, ಬಿಳಿ, ಹಳದಿ,ಆರೇಂಜ್‌,ಪಿಂಕ್‌,ರಾಣಿ ಸೇರಿದಂತೆ 7 ಬಣ್ಣಗಳ ಹೂಗಳನ್ನು ಬೆಳೆಯುತ್ತಿದ್ದಾರೆ. 24 ಇಂಚು ಉದ್ದದ ಹೂ ರೆಂಬೆಯೊಂದಿಗೆ 4 ರಿಂದ 10 ಇಂಚು ವ್ಯಾಸದ ಹೂವುಗಳನ್ನು ಬೆಳೆಯಲಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕಾ ಯೋಜನೆಯಡಿ 58 ಲಕ್ಷ ರೂ ಹಾಗೂ ರಾಜ್ಯದ ತೋಟಗಾರಿಕೆ ಇಲಾಖೆಯಿಂದ 37 ಲಕ್ಷ ರೂ ಸಾಲ ಪಡೆದು, ಇದರಲ್ಲಿ ಪಾಲಿಹೌಸ್‌, ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡು ಹೂಗಳನ್ನು ಸಾಗಿಸಲು ಸಾಗಾಣಿಕೆ ವಾಹನ ಖರೀದಿಸಿದ್ದಾರೆ. ದಿನಕ್ಕೆ 800ರಿಂದ 1000 ಹೂಗಳ ತನಕ ಇಳುವರಿ ಬರುತ್ತದೆ. ಹತ್ತಾರು ತೋಟದ ಕಾರ್ಮಿಕರೊಂದಿಗೆ ಮನೆ ಮಂದಿಯೂ ಸೇರಿ ಹೂಗಳ ಆರೈಕೆ, ಪ್ಯಾಕಿಂಗ್‌ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 10 ಹೂಗಳು ಒಂದು ಕಟ್ಟಿಗೆ ಸರಿಸುಮಾರು 50ರೂ. ಎಂದಿಟ್ಟು ಕೊಂಡರೂ ದಿನಕ್ಕೆ ಐದು ಸಾವಿರ ಆದಾಯ. ವರ್ಷದ ನಾಲ್ಕು ತಿಂಗಳಲ್ಲಿ ಇದರ ಬೆಲೆ ಗಗನಕ್ಕೆ ಅಂದರೆ 110ರೂ.ಪಾಯಿಗೂ ಹೆಚ್ಚಾಗುತ್ತದೆ. ಆಗ ಇದರ ಎರಡು ಪಟ್ಟು ಆದಾಯ. ವೆಂಕಟೇಶ್‌ ವಿದ್ಯುತ್‌ ಕೈ ಕೊಟ್ಟರೆ ಪರ್ಯಾಯ ಮಾರ್ಗ ಹುಡುಕಿದ್ದಾರೆ. ಅದುವೇ ಜನರೇಟರ್‌. ಇವರು ಹೂ ಕೃಷಿಯೊಂದಿಗೆ ರಾಗಿ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
 
 
 
ಮಾದರಿ ಮಳೆ ನೀರಿನ ಸಂಗ್ರಹಣೆ
ನೀರಿನ ಬವಣೆಯಿರುವ ದೊಡ್ಡಬಳ್ಳಾಪುರದ ಕಸಬಾ ಹೋಬಳಿ ಪ್ರದೇಶದಲ್ಲಿ 1000 ಅಡಿ ಕೊರೆದರೂ ನೀರು ಸಿಗುವುದು ಕಷ್ಟ. ಇದಕ್ಕಾಗಿ ವೆಂಕಟೇಶ್‌ ಅವರು ತೋಟದಲ್ಲಿ ಮಳೆ ನೀರಿನ ಸಂಗ್ರಹಣೆ ಮಾಡಿಕೊಂಡು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಮಳೆ ನೀರು ಸಂಗ್ರಹಣೆಗಾಗಿ 30*25 ಅಡಿ ವಿಸ್ತೀರ್ಣದಲ್ಲಿ 18 ಅಡಿ ಆಳದ ಸಾಮರ್ಥ್ಯದ ಬೃಹತ್‌ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ನೀರಿನ ಶುದ್ದೀಕರಣಕ್ಕೆ ಫಿಲ್ಟರ್‌ ಸಹ ಅಳವಡಿಸಲಾಗಿದೆ. 3.5 ಎಕರೆ ಪ್ರದೇಶಕ್ಕು ಪಾಲಿಹೌಸ್‌ ನಿರ್ಮಿಸಲಾಗಿದ್ದು, ಇದರ ಮೇಲೆ ಬೀಳುವ ಮಳೆ ನೀರನ್ನು ಒಂದು ಕಡೆ ಬಂದು ಸಂಗ್ರಹವಾಗುವಂತೆ ಮಾಡಲಾಗಿದೆ.
 
 
 
ಇದರಲ್ಲಿ ಪೂರ್ಣ ಸಂಗ್ರಹಣೆ ಆಗುವ ನೀರು 30 ದಿನಗಳ ಕಾಲ ಬಳಕೆ ಮಾಡುತ್ತೇವೆ. ಮಳೆ ಇಲ್ಲದಾಗ ಮಾತ್ರ ಕೊಳವೆಬಾವಿಯಲ್ಲಿನ ನೀರು ಉಪಯೋಗಿಸಲಾಗುತ್ತದೆ. ಪಾಲಿಹೌಸ್‌ಗಳಲ್ಲಿ ಬೆಳೆಯಲಾಗುವ ಹೂವುಗಳಿಗೆ ಪ್ರತಿ ದಿನ ಅರ್ಧ ಗಂಟೆಗಳ ಕಾಲ ಡ್ರಿಪ್‌ ಪೈಪುಗಳ ಮೂಲಕ ನೀರು ಹಾಯಿಸಲಾಗುತ್ತದೆ. ಇದಲ್ಲದೆ ಕೊಳವೆ ಬಾವಿಗಳಿಂದ ನೀರು ಮೇಲೆತ್ತಿ ಬಳಕೆ ಮಾಡಲು ವಿದ್ಯುತ್‌ ಹೆಚ್ಚು ಬೇಕು. ಆದರೆ ಮಳೆ ನೀರನ್ನು ತೊಟ್ಟಿಯಿಂದ ಮೇಲೆತ್ತಿ ಹಾಯಿಸಲು ಕಡಿಮೆ ವಿದ್ಯುತ್‌ ಸಾಕಾಗುತ್ತದೆ. ಹೀಗಾಗಿ ಮಳೆ ನೀರನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಇದರೊಂದಿಗೆ ಹೂಗಳು ಬಾಡಿ ಹೋಗದೆ ಎರಡು ದಿನಗಳ ಕಾಲ ಆಕರ್ಷಕವಾಗಿರುತ್ತವೆ ಎನ್ನುತ್ತಾರೆ ವೆಂಕಟೇಶ್‌.
 
 
ಮಾರುಕಟ್ಟೆ ವ್ಯವಸ್ಥೆಯ ಕೊರತೆ
ಇಂದಿನ ಕೃಷಿ ಸವಾಲುಗಳನ್ನು ಎದುರಿಸಲು ತಂತ್ರಜಾnನದ ಬಳಕೆಯೊಂದಿಗೆ ಕೃಷಿಯೇನೋ ಮಾಡಿದ್ದಾಯಿತು. ಆದರೆ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಕೊರತೆಯಿದೆ. ಬೆಳೆದ ಹೂಗಳನ್ನು ವಾರಕ್ಕೆ ಕನಿಷ್ಟ ನಾಲ್ಕು ಬಾರಿಯಾದರೂ ಅಥವಾ ಪ್ರತಿನಿತ್ಯ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಗೆ ತಗೆದುಕೊಂಡು ಹೋಗಬೇಕು. ಅದೂ ರಾತ್ರಿ 2 ಗಂಟೆಯ ಅವೇಳೆಯಲ್ಲಿ. ಹೂಗಳ ಮಾರಾಟ ಮಾಡಿ ಬೆಳಗ್ಗೆ ವಾಪಾಸು ಬಂದು ಬೇರೆ ಕೆಲಸಗಳತ್ತ ತೊಡಗಿಕೊಳ್ಳಬೇಕು.
 
 
 
ಹೂವುಗಳನ್ನು ಜೋಪಾನ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಇದರೊಂದಿಗೆ ಬೇರೆ ಕಡೆಯಿಂದ ಆಮದಾಗುವ ಹೂವುಗಳಿಂದಾಗಿ ಸ್ಥಳೀಯ ಮಾರಾಟಗಾರರಿಗೆ ನಷ್ಟವಾಗುತ್ತಿದೆ. ಇತ್ತೀಚೆಗೆ ಮದುವೆ ಸಮಾರಂಭಗಳಲ್ಲಿ ಪ್ಲಾಷ್ಟಿಕ್‌ ಹೂಗಳನ್ನು ಬಳಸುತ್ತಿರುವುದು ಸಹ ನಮ್ಮ ವ್ಯಾಪಾರಕ್ಕೆ ಕೊಂಚ ಹೊಡೆತವೇ. ಆದ್ದರಿಂದ ಸರ್ಕಾರ ಅಲಂಕಾರಿಕ ಪುಷ್ಪಗಳ ಖರೀದಿಗೆ ಮಾರುಕಟ್ಟೆ ತೆರೆದು ನೇರವಾಗಿ ಖರೀದಿಸುವ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ವೆಂಕಟೇಶ್‌.
ಡಿ. ಶ್ರೀಕಾಂತ
ಕೃಪೆ: Sustainable Agriculture/Farming India ಸುಸ್ಥಿರ ಕೃಷಿ ಭಾರತ

LEAVE A REPLY

Please enter your comment!
Please enter your name here