ರಾಜ್ಯವಾರ್ತೆ

ಪುರಸಭೆಯ ಪರಿಸರ ಅಭಿಯಂತರರು ಜವನೆರ್ ಬೆದ್ರವನ್ನು ಹೊಗಳಿದ್ಯಾಕೆ…?

ಮೂಡಬಿದಿರೆ: ನಮ್ಮ ಕೆಲಸವನ್ನು ಹಗರು ಮಾಡುವ ಕಾರ್ಯವನ್ನು ಜವನೆರ್ ಬೆದ್ರ ಸಂಘಟನೆ ಮಾಡಿದೆ. ಜನಜಾಗೃತಿ ಮೂಡಿಸುವ ಮೂಲಕ ಪರಿಸರ ಸ್ವಚ್ಛತೆಯ ಕಾರ್ಯವನ್ನು ಪರಿಣಾಮಕಾರಿಯಾಗಿ ಈ ಸಂಘಟನೆ ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ನಾವು ಅಭಿನಂದನೆ ಸೂಚಿಸುತ್ತೇವೆ. ಈ ಮಾತನ್ನು ಸ್ವತಃ ಮೂಡಬಿದಿರೆ ಪುರಸಭೆಯ ಪರಿಸರ ಅಭಿಯಂತರರಾದ ಶಿಲ್ಪಾ ಹೇಳಿದರು.

ಕ್ಲೀನ್ ಅಪ್ ಮೂಡಬಿದಿರೆಯ 50ನೇ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಬಳಸುವ ಬದಲು ಬಟ್ಟೆಯ ಚೀಲಗಳನ್ನು ಕೊಂಡೊಯ್ಯಿರಿ, ಅನವಶ್ಯಕ ತ್ಯಾಜ್ಯ ಉತ್ಪತ್ತಿಯಾಗದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಿ ಎಂದು ಹಿತನುಡಿದರು. ಪುರಸಭೆಯ ವತಿಯಿಂದ ಉಚಿತ ಬಟ್ಟೆ ಚೀಲಗಳನ್ನು ಈ ಸಂದರ್ಭ ವಿತರಿಸಿದರು.

ಯುವಶಕ್ತಿ ಈ ದೇಶದ ದೊಡ್ಡ ಆಸ್ತಿ. ಯುವಶಕ್ತಿ ಸಮಾಜಮುಖೀ ಚಿಂತನೆಗಳಿಂದ ಕಾರ್ಯೋನ್ಮುಖರಾದರೆ ಯಾವೊಂದು ಕೆಲಸವೂ ಅಸಾಧ್ಯವೆಂದಿಲ್ಲ. ಇದಕ್ಕೆ ಸಾಕ್ಷಿ ಕ್ಲೀನ್ ಅಪ್ ಮೂಡಬಿದಿರೆಯೆಂಬ ಮಹಾ ಸಂಗಮ. ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಈ ಮಹತ್ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೀಗಂದವರು ಮೂಡಬಿದಿರೆ ಸಮೀಪದ ಕರಿಂಜೆಯ ಶ್ರೀ ಶಕ್ತಿಪೀಠದ ಮುಕ್ತಾನಂದ ಸ್ವಾಮೀಜಿ.

ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಆಶ್ರಯದಲ್ಲಿ ನಡೆದ 50ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಮಹಾಸಂಗಮದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಸ್ವಚ್ಛಭಾರತವಾಗಿದೆ. ಇದನ್ನು ವಸ್ತುಶಃ ಅನುಷ್ಠಾನಗೊಳಿಸುವ ಮಹತ್ಕಾರ್ಯವನ್ನು ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಸಂಘಟನೆ ಮಾಡುತ್ತಿದೆ. ಯಾವೊಂದು ಆಕಾಂಕ್ಷೆಯೂ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಈ ಸಂಘಟನೆ ಮೂಡಬಿದಿರೆಯ ಸ್ವಚ್ಛತೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಕೇವಲ ಸ್ವಚ್ಛತೆಗಷ್ಟೇ ಮಹತ್ವ ನೀಡದೆ ಸಮಾಜಮುಖೀ ಕಾರ್ಯಕ್ರಮದಲ್ಲಿಯೂ ಈ ಸಂಘಟನೆ ಮುಂದಿದ್ದು, ಅಶಕ್ತರಿಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದವರು ಹೇಳಿದರು.
ಉದ್ಘಾಟನೆ: ಮೂಡಬಿದಿರೆಯ ಕೈಕಂಬ ಕೆ.ಇ.ಬಿ ಜಂಕ್ಷನ್ ಪರಿಸರದಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹಾಗೂ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಬಾವುಟ ತೋರುವ ಮೂಲಕ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದರು. ಮೂಡಬಿದಿರೆಯಲ್ಲಿ ಮಾದರೀ ಕಾರ್ಯಮಾಡುವ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಜವನೆರ್ ಬೆದ್ರ ಸಂಘಟನೆಯ ಕಾರ್ಯ ಶ್ಲಾಘನಾರ್ಹ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಭಿಪ್ರಾಯಿಸಿದರು.
ಉತ್ತಮ ಕಾರ್ಯಮಾಡುವವರನ್ನು ಪ್ರೋತ್ಸಾಹಿಸುವ ಬೆಂಬಲಿಸುವ ಮನೋಭಾವ ಇರುವುದು ಅತೀ ಮುಖ್ಯ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಮೂಡಬಿದಿರೆ ರೋಟರಿಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಶುಭ ಹಾರೈಸಿದರು.

ಹಿರಿಯ ವಕೀಲ ಶಾಂತಿಪ್ರಸಾದ್ ,ಮೂಡಬಿದಿರೆ ಪುರಸಭೆಯ ಪರಿಸರ ಅಭಿಯಂತರರಾದ ಶಿಲ್ಪಾ, ವಿವಿಧ ಸಂಘಟನೆಗಳ ಪ್ರಮುಖರು ಮೂಡಬಿದಿರೆ ಪರಿಸರದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೂಡಬಿದಿರೆಯ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ಸಮಾಜ ಮಂದಿರ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಜವನೆರ್ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಮುಖ ಬೀದಿಯಲ್ಲಿ ಲೋಡ್ ಲೋಡ್ ಕಸ!: ಮೂಡಬಿದಿರೆಯ ಪ್ರಮುಖ ಬೀದಿಗಳಲ್ಲಿ ಕಸ ಸಂಗ್ರಹಿಸುವ ಮೂಲಕ ವಿವಿಧ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು ಜವನೆರ್ ಬೆದ್ರ ಸಂಘಟನೆಯ ಕ್ಲೀನ್ ಅಪ್ ಮೂಡಬಿದಿರೆ 50ರ ಸಂಭ್ರಮಕ್ಕೆ ಸಾಥ್ ನೀಡಿದರು. ಲೋಡ್ ಲೋಡ್ ಕಸ,ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಪರಿಸರದ ಜನತೆಯಲ್ಲಿ ಸ್ವಚ್ಛತೆಯ ಕುರಿತಾದ ಜಾಗೃತಿ ಮೂಡಿಸಿದರು.
ಸವತ್ರ ಶ್ಲಾಘನೆ: ಜವನೆರ್ ಬೆದ್ರ ಸಂಘಟನೆಯ 50ನೇ ಕಾರ್ಯಕ್ರಮಕ್ಕೆ ಸರ್ವತ್ರ ಶ್ಲಾಘನೆ ವ್ಯಕ್ತವಾಯಿತು. ಸುಮಾರು 500ಕ್ಕೂ ಅಧಿಕ ಮಂದಿ ಸ್ವಚ್ಛತೆಯಲ್ಲಿ ಪಾಲ್ಗೊಂಡು ಮೂಡಬಿದಿರೆಯನ್ನು ಸ್ವಚ್ಛ ಸುಂದರ ನಗರವನ್ನಾಗಿ ರೂಪಿಸುವ ಪಣತೊಟ್ಟರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here