ಪಿಲಿಕುಳದಲ್ಲಿ ವಿಶ್ವ ಪರಿಸರ ದಿನಾಚರಣೆ

0
395

 
ನಮ್ಮ ಪ್ರತಿನಿಧಿ ವರದಿ
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂ.7 ರಂದು ‘ವಿಶ್ವ ಪರಿಸರ ದಿನಾಚರಣೆ’ಯನ್ನು ಆಚರಿಸಲಾಯಿತು. ಡಾ| ಕೆ. ಟಿ. ಹನುಮಂತಪ್ಪ ಐ.ಎಫ್.ಎಸ್. ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಇವರು ಉದ್ಘಾಟಕರಾಗಿ ಹಾಗೂ ಜಯಪ್ರಕಾಶ ನಾಯಕ್ ಹಿರಿಯ ವೈಜ್ಞಾನಿಕ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಮತ್ತು ಡಾ. ಪಿ. ಎಸ್. ಮಚಾದೊ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
 
mnglr-pilikula1
 
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರತಿನಿಧಿಗಳಾಗಿ ಭಾಗವಹಿಸಿದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಕರು, ಅತಿಥಿಗಳು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಡುವುದರ ಮೂಲಕ ಉದ್ಘಾಟಿಸಲಾಯಿತು.
 
mnglr-pilikula2
 
ಉದ್ಘಾಟಕರಾದ ಡಾ| ಕೆ. ಟಿ. ಹನುಮಂತಪ್ಪ ಮಾತನಾಡುತ್ತಾ ಪರಿಸರದಲ್ಲಿ ಮಾನವನ ಮಿತಿಮೀರಿದ ಹಸ್ತಕ್ಷೇಪ ಹಾಗೂ ನಾಗರಿಕತೆಯ ಚಟುವಟಿಕೆಗಳಿಂದ ಹಸಿರು ಮನೆ ಪರಿಣಾಮದಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದ ಅನಪೇಕ್ಷಿತ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿದ್ದು ಎಲ್ಲರೂ ಸೇರಿ ಭೂಮಿಯ ವಾತಾವರಣದ ಉಷ್ಣತೆಯನ್ನು ತಗ್ಗಿಸುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಾಗಿದೆ. ‘ವಿಶ್ವ ಪರಿಸರ ದಿನಾಚರಣೆಯ’ ಈ ಸಂದರ್ಭದಲ್ಲಿ ನಾವೆಲ್ಲರೂ ಇಂತಹ ಪಣ ತೆಗೆದುಕೊಳ್ಳಬೇಕು ಹಾಗೂ ಹಸುರೀಕರಣದ ಕಾರ್ಯಕ್ರಮಗಳನ್ನು ಎಲ್ಲೆಡೆ ಹಮ್ಮಿಕೊಳ್ಳಬೇಕು ಹಾಗಾದರೆ ಮಾತ್ರ ಸಹನೀಯ ಜೀವನವನ್ನು ಮುಂದಿನ ಜನಾಂಗ ನಡೆಸಬಹುದೆಂದರು. ಅರಣ್ಯ ಇಲಾಖೆ ಈ ವರ್ಷ ಈ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ಕರೆಯಿತ್ತರು.
 
 
 
ಜಯಪ್ರಕಾಶ ನಾಯಕ್ ಮಾತನಾಡುತ್ತಾ ಪರಿಸರ ದಿನೇ ದಿನೇ ಹದಗೆಡುತ್ತಿದ್ದು ಅದನ್ನು ಉಳಿಸಲು ನಾವೆಲ್ಲರೂ ಒಟ್ಟುಗೂಡಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಂಡು ಇಲ್ಲಿ ದೊರೆತ ಮಾಹಿತಿಗಳನ್ನು ನೆರೆಹೊರೆಯವರಲ್ಲಿ, ಇತರ ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳಬೇಕೆಂದು ಹೇಳಿದರು. ಡಾ. ಪಿ. ಎಸ್. ಮಚಾದೊರವರು ಪಿಲಿಕುಳವು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಸರ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿದೆ. ಇವುಗಳಿಗೆ ಅರ್ಥ ಬರಬೇಕಾದರೆ ಅವುಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
 
 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ವಹಿಸಿದ್ದರು. ಡಾ. ಎಚ್. ಎಸ್. ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಜಗನ್ನಾಥ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಮರಾಟಿ ವಂದಿಸಿದರು.
 
 
ದಿನವಿಡೀ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ಹಾಗೂ ಪಿಲಿಕುಳದ ವಿವಿಧ ವಿಭಾಗಗಳಿಗೆ ಭೇಟಿ ಮತ್ತು ವಿವರಣೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರು ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here