ನಿತ್ಯ ಅಂಕಣ: ೬೩- ತಾರಾನಾಥ್ ಮೇಸ್ತ,ಶಿರೂರು.
‘ಸಿದ್ಧ ಸಮಾಜ’ದ ಸ್ಥಾಪಕರಾದ ಪರಮಪೂಜ್ಯ ಸ್ವಾಮಿ ಶಿವಾನಂದ ಪರಮಹಂಸರು ಮಂಗಳೂರಿಗೆ ಚಿತ್ತೈಸಿದ್ದರು. ಸ್ವಾಮಿಗಳ ಭಕ್ತರು ಸೇರಿಕೊಂಡು, ಅವರಿಗೆ ಗೌರವ ಸಮರ್ಪಣೆ ಮಾಡುವ ಸಮಾರಂಭ ಆಯೋಜಿಸಿದ್ದರು. ಅಲ್ಲಿ ನಿತ್ಯಾನಂದರ ಭಕ್ತರು ಹಲವು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಎರಡು ಅವಧೂತ ಗುರುಗಳ ಭಕ್ತರ ನಡುವೆ ಚರ್ಚೆಗಳು ನಡೆಯುತ್ತವೆ. ಸಿದ್ಧ ಸಮಾಜದ ಭಕ್ತರು, ನಿತ್ಯಾನಂದರು ನಮ್ಮ ಶಿವಾನಂದ ಗುರುಗಳ ಶಿಷ್ಯರಾಗಿದ್ದಾರೆ. ಹಾಗಾಗಿ ಶಿವಾನಂದ ಪರಮಹಂಸರೇ ಶ್ರೇಷ್ಠರು ಎಂಬ ವಾದವು ಅವರಿಂದ ಕೇಳಿಬರುತ್ತದೆ. ನಿತ್ಯಾನಂದ ಸ್ವಾಮಿಗಳ ಭಕ್ತರು ಈ ವಾದವನ್ನು ಒಪ್ಪದೆ, ವಿರೋಧ ವ್ಯಕ್ತಪಡಿಸುತ್ತಾರೆ.
ಶಿವಾನಂದ ಸ್ವಾಮಿಗಳ ಭಕ್ತರ ಬಣದಲ್ಲಿ ಓರ್ವ ಯುವ ವಕೀಲನಿದ್ದ. ಆತನಿಗೆ ವಾದವನ್ನು ಮಂಡಿಸಬೇಕೆಂಬ ಹಠ. ಅವನು ನಿತ್ಯಾನಂದರನ್ನು ಪರೀಕ್ಷಿಸುವ ಮಟ್ಟಿಗೆ ಯೋಚಿಸುತ್ತಾನೆ. ಆತ ತನ್ನ ಕಾಲುಗಳಿಗೆ ವಸ್ತ್ರದಿಂದ ಬ್ಯಾಂಡೇಜು ಸುತ್ತಿಸಿಕೊಂಡು ನಿತ್ಯಾನಂದರ ಬಳಿಗೆ ಬರುತ್ತಾನೆ. ಸ್ವಾಮೀಜಿ, ನನ್ನ ಕಾಲಿಗೆ ಯಾರಿಂದಲೂ ಗುಣಪಡಿಸಲಾಗದ ಗಾಯ ಇದೆ. ಅದನ್ನು ತಾವು ಗುಣಪಡಿಸ ಬೇಕು. ನಿಮ್ಮ ಪವಾಡಗಳ ಶಕ್ತಿಯನ್ನು ನಂಬಿಕೊಂಡು ಬಂದಿದ್ದೇನೆ ಎಂದು ಹೇಳುತ್ತಾನೆ. ಆವಾಗಲೇ ನಿತ್ಯಾನಂದರಿಗೆ ಆ ವ್ಯಕ್ತಿಯ ಕಪಟ ನಾಟಕದ ನಟನೆ ತಿಳಿದು ಬಂದಿರುತ್ತದೆ.



ನಿತ್ಯಾನಂದರು, “ಇದನ್ನು ಪರಿಹರಿಸಲು ಸಾಧ್ಯ ಇಲ್ಲ, ನಿನಗಾದ ಗಾಯವು ಗುಣವಾಗುದಿಲ್ಲ” ಎಂದು ಹೇಳುತ್ತಾರೆ. ನೀನು ಇಲ್ಲಿಂದ ಹೋಗಬಹುದೆಂದು ಆಜ್ಞಾಪಿಸುತ್ತಾರೆ. ಆವಾಗ ಆ ವ್ಯಕ್ತಿಯು ನಿತ್ಯಾನಂದರು ಯೋಗಿಗಳಲ್ಲ ಎಂದು ನಿರ್ಧರಿಸುತ್ತಾನೆ. ಮನೆಗೆ ಬಂದ ವ್ಯಕ್ತಿ ಗುರುದೇವರಿಗೆ ಪರೀಕ್ಷಿಸಲೆಂದು ನಟನೆಗಾಗಿ ಕಾಲಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚುತ್ತಾನೆ. ತನ್ನ ಆರೋಗ್ಯವಂತ ಕಾಲುಗಳ ಸ್ಥಿತಿ ಕಂಡು ಆತನಿಗೆ ಆಘಾತವಾಗುತ್ತದೆ. ಆತನ ಕಾಲಲ್ಲಿ ಗಾಯವಾಗಿರುತ್ತದೆ. ನಂಜು ಸೋರುತ್ತಿರುವ ಹಸಿ ಹುಣ್ಣು ಅವನ ಕಾಲಿಗೆ ಆಗಿರುತ್ತದೆ, ಗುರುದೇವರ ಪರೀಕ್ಷಿಸಲು ಹೋದವನು ತಾನು ಪರೀಕ್ಷೆ ಎದುರಿಸ ಬೇಕಾದ ಪರಿಸ್ಥಿತಿ ಅವನದಾಗುತ್ತದೆ.
ಮಗನ ಕಾಲಿಗಾದ ಗಂಭೀರ ಗಾಯವನ್ನು ನೋಡಿದ ತಂದೆ, ಶಿವಾನಂದ ಸ್ವಾಮಿಗಳ ಬಳಿಗೆ ಮಗನನ್ನು ಕರೆದುಕೊಂಡು ಹೋಗುತ್ತಾರೆ. ಸ್ವಾಮಿಗಳು ಭಕ್ತನ ಕಾಲಿನ ಗಾಯವನ್ನು ಕಂಡು, ಬಹಳ ಕೋಪಗೊಂಡವರಂತೆ, ನಿಜವಾಗಿಯೂ ಹೀಗಾಯಿತೇ..? ನಾನು ನಿತ್ಯಾನಂದರನ್ನು ಭೇಟಿಮಾಡಿ ಆತನಿಗೊಂದು ತಕ್ಕ ಪಾಠ ಕಲಿಸುತ್ತೇನೆ. ನಾನು ಯಾರೆಂಬ ರಹಸ್ಯ..! ತಿಳಿಸುತ್ತೇನೆ. ಆತ ಕೇವಲ ಶೂನ್ಯ..! ಹೀಗೆಂದು ನುಡಿಯುತ್ತಾರೆ. ಅಲ್ಲಿ ಶಿವಾನಂದ ಸ್ವಾಮಿಗಳ ಮಾತುಗಳನ್ನು ಆಲಿಸಿದ ನಿತ್ಯಾನಂದರ ಭಕ್ತೆಯೊರ್ವಳು ಭಯಪಡುತ್ತಾಳೆ. ತನ್ನ ಗುರುದೇವರಿಗೆ ಅಪಾಯ ಎದುರಾಗಿದೆ ಎಂದು ತಿಳಿದು, ಆಕೆ ಎಲ್ಲಾ ವಿಷಯಗಳನ್ನು ಗುಟ್ಟಾಗಿ ನಿತ್ಯಾನಂದರಿಗೆ ಮುಟ್ಟಿಸುತ್ತಾಳೆ. ತಕ್ಷಣವೇ ಗುರುದೇವರು ಭಕ್ತೆಗೆ ಪ್ರತಿಕ್ರಿಯೆ ನೀಡುತ್ತಾರೆ. “ಅವನು ಹಾಗೆ ಹೇಳಿದನೇ..? ಹಾಗಾದರೆ ನಾನು, ನನ್ನನ್ನು ಸೊನ್ನೆ ಮಾಡುವುದನ್ನು ನೋಡಬೇಕು. ನೇರವಾಗಿ ಅವರ ಬಳಿಗೆ ಹೋಗೋಣ” ಎಂದು ಗುರುದೇವರು ಶಿವಾನಂದ ಸ್ವಾಮಿಗಳ ಬಳಿಗೆ ತೆರಳುತ್ತಾರೆ.
ಶಿವಾನಂದ ಸ್ವಾಮಿಗಳು ಭಗವಾನ್ ನಿತ್ಯಾನಂದ ಸ್ವಾಮಿಗಳು ತನ್ನಡೆಗೆ ಬರುವುದನ್ನು ಕಂಡು, ಹಸನ್ಮುಖದಿಂದ ಸ್ವಾಗತಿಸಿ ಬರಮಾಡಿಕೊಂಡರು. ತನ್ನ ತೊಡೆಯ ಮೇಲೆ ನಿತ್ಯಾನಂದರನ್ನು ಮಗುವಿನಂತೆ ಕುಳ್ಳಿರಿಸಿ ಫೋಟೋ ಕ್ಲಿಕ್ಕಿಸಿಕೊಂಡರು. ಆ ಚಿತ್ರವು ಎರಡು ಮಹಾನ್ ಅವಧೂತರು ದಿವ್ಯಾನಂದದಲ್ಲಿ ಒಂದಾಗಿ ಇರುವುದನ್ನು ಸೂಚಿಸುತ್ತದೆ. ಈರ್ವರು ಅವಧೂತರಲ್ಲಿ ಶ್ರೇಷ್ಠರು ಯಾರು..? ತರ್ಕಿಸುತ್ತಿದ್ದ ಭಕ್ತರು ಗುರುದೇವರುಗಳಲ್ಲಿ ಬೇಧ ಇಲ್ಲ ಎನ್ನುವ ದಿವ್ಯ ಸಂದೇಶವನ್ನು ಪಡೆದು, ಕಲ್ಲು ಸಕ್ಕರೆ ಚಪ್ಪರಿಸಿದ ಸಂತೋಷವನ್ನು ಅನುಭವಿಸುತ್ತಾರೆ.