ಪರೀಕ್ಷೆಯಿಂದ ಅಂತಸತ್ವ ಹೊರಬರುತ್ತದೆ : ರಾಘವೇಶ್ವರಶ್ರೀ

0
365

 
ಬೆಂಗಳೂರು ಪ್ರತಿನಿಧಿ ವರದಿ
ಪೂಜಿಸಬೇಕಾದ್ದನ್ನು ಪೂಜಿಸದಿದ್ದರೆ, ಗೌರವ ಸಲ್ಲಿಸಬೇಕಾದ್ದಲ್ಲಿ ಗೌರವ ಸಲ್ಲಿಸದೇ ಇದ್ದರೆ ಅನರ್ಥ ನಿಶ್ಚಿತ, ಕಾಮಧೇನುವನ್ನು ಅನಾಧರಿಸಿದ ದಿಲೀಪ ಪರಿತಪಿಸುವಂತಾಯಿತು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
 
mata chaturmasya_31
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ “ಗೋಕಥೆ”ಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ನಂದಿನಿ ಧೇನುವಿನ ರಕ್ಷಣೆಗೆ ಸರ್ವಾರ್ಪಣೆಗೆ ಸಿದ್ದವಾಗಿ, ಗೋಭಕ್ತಿ-ಗುರುಭಕ್ತಿ ಮೆರೆದ ಆದರ್ಶ ರಾಜ ದಿಲೀಪನ ಪ್ರಕರಣವನ್ನು ಪ್ರವಚನ, ಗಾಯನ, ರೂಪಕ, ಚಿತ್ರರಚನೆಗಳಿಂದ ಕೂಡಿದ ವಿಶಿಷ್ಟವಾದ ಗೋಕಥಾ ಕಾರ್ಯಕ್ರಮದಲ್ಲಿ ನಿರೂಪಿಸಿದರು.
 
 
ನೋವು ಇಲ್ಲದಿದ್ದರೆ ಜೀವನ ಪೂರ್ಣವಾಗುವುದಿಲ್ಲ, ನೋವು-ನಲಿವು ಸೇರಿದರೆ ಜೀವನ ಪೂರ್ಣವಾಗುತ್ತದೆ. ಹಾಗೆಯೇ, ಸುಖದಿಂದ ಇದ್ದ ಆಯೋಧ್ಯೆಯ ದೊರೆಯ ಜೀವನದಲ್ಲುಮಕ್ಕಳಿಲ್ಲದ ನೋವು ಮನೆಮಾಡಿತು. ದಾರಿಕಾಣದಾದಾಗ ಗುರುವೇ ದಾರಿ ಎಂಬಂತೆ ರಾಜಗುರು ವಸಿಷ್ಠರಲ್ಲಿ ದಿಲೀಪ ತನ್ನನೋವನ್ನು ತೋಡಿಕೊಂಡ. ಸೂರ್ಯವಂಶದ ಭವಿಷ್ಯ ಕತ್ತಲಾಗಲು ಗೋವಿನ ಕುರಿತಾದ ಅನಾಧರವೇ ಕಾರಣ ಎಂದು ಅರಿತ ವಸಿಷ್ಠರು, ನಂದಿನಿ ಧೇನುವಿನ ಸೇವೆಯನ್ನು ಮಾಡಲು ದಿಲೀಪನಿಗೆ ಹೇಳಿದರು.
 
mata chaturmasya_312
ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಯಶಸ್ಸು ಸಾಧ್ಯ, ಅಂತೆಯೇ ದಿಲೀಪನು ಗೋಸೇವೆಯಲ್ಲಿ ತನ್ನನ್ನುಸಂಪೂರ್ಣವಾಗಿ ತೊಡಗಿಸಿಕೊಂಡ. ನಂದಿನೀ ಧೇನುವಿನ ಪ್ರಾಣಕ್ಕೆ ಸಂಚಕಾರ ಎದುರಾದಾಗ, ಹಿಂಜರಿಯದೇ ತನ್ನ ದೇಹಾರ್ಪಣೆಗೆ ಮುಂದಾಗಿ ಗೋಸೇವೆಗೆ ಪರಮಾದರ್ಶವಾದ ಎಂದು ಕಥೆ-ಉಪಕಥೆ, ಗಾಯನಗಳ ಮೂಲಕ ಮನೋಜ್ಞವಾಗಿ ವರ್ಣಿಸಿ, ಪರೀಕ್ಷೆಯಿಂದ ಅಂತಸತ್ವ ಹೊರಬರುತ್ತದೆ ಎಂದು ಶ್ರೀಗಳು ನುಡಿದರು.
 
 
ಗೋವಿಗಾದ ಅಪಮಾನದಿಂದ ಸೂರ್ಯವಂಶದ ಭವಿಷ್ಯ ಕತ್ತಲಾಗುವ ಭೀತಿಯಲ್ಲಿತ್ತು, ಎಲ್ಲಿ ತಪ್ಪಗಿರುತ್ತದೆಯೋ, ಅಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂಬಂತೆ ಗೋಸೇವೆಯಿಂದ ಸೂರ್ಯವಂಶ ಬೆಳೆಯಿತು. ತಪ್ಪಿಗೆ ಪ್ರಾಯಶ್ಚಿತ್ತ ಪರಿಹಾರ. ಆದರೇ ತಪ್ಪನ್ನೇ ಮಾಡದಿರುವುದು ಜಾಣತನ. ಹಾಗಾಗಿ ನಾವು ಗೋವಿಗೆ ಅನಾಧರವನ್ನು ತೋರದೇ ಗೋವನ್ನು ಸಲಹೋಣ ಎಂದು ಶ್ರೀಗಳು ಕರೆನೀಡಿದರು.
 
 
ಕಥೆಯ ನಿರೂಪಣೆಯ ಜೊತೆಜೊತೆಗೆ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಹೆಗಡೆ ಮನಮೋಹಕವಾಗಿ ಚಿತ್ರಿಸಿದರು, ಶ್ರೀಪಾದ್ ಭಟ್, ಕುಮಾರಿ ದೀಪಿಕಾ ಹಾಗೂ ತಂಡದ ಗಾಯನ ಕಥೆಯ ಅಂದವನ್ನು ಹೆಚ್ಚಿಸಿತು, ನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು.
ಗೋಕಥೆಯ ನಂತರ, ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
 
 
ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಗೋನಮನ ಧ್ವನಿಮುದ್ರಿಕೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ತುಂಬಿದ ಸಭೆ ಗೋಕಥೆಯನ್ನು ಕಣ್ಣುತುಂಬಿಕೊಂಡಿತು. ಶ್ರೀ ಆರ್ ವಿ ಶಾಸ್ತ್ರೀ, ಕೆನರಾ ಬ್ಯಾಂಕ್ ಮಾಜಿ ಅಧ್ಯಕ್ಷರು, ಶ್ರೀ ನಾರಾಯಣ ರೆಡ್ಡಿ, ಸಾವಯವ ಕೃಷಿ ತಜ್ಞರು, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಚೆನ್ನೈ ವಲಯದ ಪರವಾಗಿ ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕರಾದ ಭೀಮ ಭಟ್ ಸರ್ವಸೇವೆಯನ್ನು ಸಮರ್ಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
 
ಲೋಕದೊಳಿತಿಗೆ ವೇದ ಪಾರಾಯಣ
ಸನಾತನ ಆರ್ಯ ವೈದಿಕ ಪರಂಪರೆಯ ಅಡಿಪಾಯವೆಂದರೆ ವೇದಗಳೇ ಆಗಿವೆ. ಭಾರತ ದೇಶಕ್ಕೆ ಇಂದು ಪ್ರಪಂಚದಾದ್ಯಂತ ಗೌರವ ದೊರಕುತ್ತಿದೆಯೆಂದರೆ ಅದಕ್ಕೆ ಮೂಲ ಕಾರಣ ಭಾರತದ ಆತ್ಮವಾಗಿರುವ ವೇದಗಳೇ ಆಗಿವೆ. ವೇದಗಳು ಪ್ರಪಂಚದಲ್ಲಿರುವ ಎಲ್ಲಾ ಜನರಿಗೂ ಮಂಗಲವನ್ನು ಬಯಸುತ್ತದೆ. ವೇದಗಳಿಗೆ ಶೋಧಕತ್ವ ಹಾಗೂ ಪಾವಕತ್ವ ಎಂಬ ಎರಡು ಶಕ್ತಿಗಳಿವೆ. ವೇದದ ರಕ್ಷಣೆಯೆಂದರೆ ಅಧ್ಯಯನ ಅಧ್ಯಾಪನಗಳಿಂದ ಮಾತ್ರ ಸಾಧ್ಯ. ಆದ್ದರಿಂದ ವೇದಾಧ್ಯಯನ ಮಾಡಿದವರಿಗೆ ಸಮಾಜ ಪಾರಾಯಣಕ್ಕೆ ಅವಕಾಶವನ್ನೊದಗಿಸಿಕೊಟ್ಟಾಗ ಮಾತ್ರ ವೇದದ ರಕ್ಷಣೆ ಸಾಧ್ಯ. ಇದರ ರಕ್ಷಣೆ ಸಮಾಜದ ಹೊಣೆಗಾರಿಕೆಯೂ ಹೌದು. ಹಿಂದೆ ರಾಜಾಶ್ರಯವಿದ್ದ ಸಂದರ್ಭದಲ್ಲಿ ಮಹಾರಾಜರು ವೇದದ ರಕ್ಷಣೆಗಾಗಿ ನಾನಾ ಯೊಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಬರಬರುತ್ತಾ ಅದು ಕಡಿಮೆಯಾಗುತ್ತಾ ಬಂದಿದೆ. ಆಗ ಮಠಗಳು ಇದರ ಹೊಣೆಗಾರಿಕೆಯನ್ನು ಹೊತ್ತುಕೊಂಡು ರಕ್ಷಣೆಗೆ ಮುಂದಾದವು. ಯಾರು ಚೆನ್ನಾಗಿ ಅಧ್ಯಯನ ಮಾಡಿರುತ್ತಾರೋ ಅವರನ್ನು ಗುರುತಿಸಿ ಗೌರವಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾರಂಭಿಸಿದರು. ಪ್ರಕೃತದಲ್ಲಿ ರಾಮಚಂದ್ರಾಪುರ ಮಠಾಧೀಶರಾದ ಪೂಜ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಗೋಚಾತುರ್ಮಾಸ್ಯದ ಸಂದರ್ಭದಲ್ಲಿ ಕರ್ನಾಟದ ಮೂರ್ಧನ್ಯ ವೇದ ವಿದ್ವಾಂಸರನ್ನು ಆಹ್ವಾನಿಸಿ ಲೋಕದೊಳಿತಿಗಾಗಿ ವೇದಪಾರಾಯಣ ಸಪ್ತಾಹವನ್ನು ಆಯೋಜಿಸಿದ್ದಾರೆ. ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ಅಧ್ಯಕ್ಷತೆಯಲ್ಲಿ ಸಮಸ್ತ ಕನ್ನಡಿಗರ ಕ್ಷೇಮಕ್ಕಾಗಿ ಆಯೋಜಿಸಿದ ಈ ಕಾರ್ಯಕ್ರಮ 31.07.2016 ರಂದು ಮುಕ್ತಾಯಗೊಂಡಿತು. ಒಟ್ಟಾರೆ ಸುಮಾರು 8 ಜನ ಘನಪಾಠಿಗಳು ಹಾಗೂ ಸುಮಾರು 50 ಜನ ವೈದಿಕರು ಭಾಗವಹಿಸಿದ್ದಾರೆ.
 
 
 
ಇಂದಿನ ಕಾರ್ಯಕ್ರಮ (01.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.00 : ವೈದಿಕ ಸಮಾವೇಶ
ಗೋಸಂದೇಶ : ಗೋಬ್ರಾಹ್ಮಣ ಹಿತಾಯ ಚ – ವಿದ್ವಾನ್ ಸೂರ್ಯನಾರಾಯಣ ಭಟ್ಟ, ಹಿತ್ಲಳ್ಳಿ ಲೋಕಾರ್ಪಣೆ : ಸಾಮವೇದ ಮಂತ್ರ – ಧ್ವನಿಮುದ್ರಿಕೆ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ವೇ. ಮೂ. ಲಕ್ಷ್ಮೀನಾರಾಯಣ ಭಟ್ಟ ಹಾಳದಕಟ್ಟಾ
ಸುವರ್ಣಾಂಗುಲೀಯಕ ಮತ್ತು ಶ್ರುತಿ ಸಾಗರ ಬಿರುದು ಪ್ರದಾನ : ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ
ಭಟ್ಟ ಘನಪಾಠಿಗಳು
ಸಂತ ಸಂದೇಶ : ಪರಮಪೂಜ್ಯ ಸ್ವಾಮಿ ಚಂದ್ರೇಶಾನಂದ ಜೀ, ಸಾಧನ ಮಠ (ರಾಮಕೃಷ್ಣ ವಿವೇಕಾನಂದ ಸಾಧನ
ಕೇಂದ್ರದ ಅಂಗಸಂಸ್ಥೆ), ಸಾಧನಧಾಮ, ಕೆ.ಅರ್. ಪುರಂ, ಬೆಂಗಳೂರು
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: ೫.೦೦ : ಕಲಾರಾಮ – ಪಿಟೀಲು ವಾದನ : ರೋಹಿಣಿ ಭಟ್ – ತಬಲಾ : ವಿದ್ವಾನ್ ಅನಂತ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

LEAVE A REPLY

Please enter your comment!
Please enter your name here