ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ

0
379

 
ಉಡುಪಿ ಪ್ರತಿನಿಧಿ ವರದಿ
ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆ. ಪಿ. ಎಸ್. ಸಿ. ಆಹ್ವಾನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಅಬಿವಿನ್ಯಾಸ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
 
 
ಕಾಲ ಕಾಲಕ್ಕೆ ರೈಲ್ವೇ, ಬ್ಯಾಂಕುಗಳು ಹಾಗೂ ವಿವಿಧ ಸರಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದ್ದರೂ ಸಹ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಮಾಹಿತಿಯ ಕೊರತೆಯಿಂದ ಅವಕಾಶಗಳು ಕೈತಪ್ಪಿ ಹೋಗುತ್ತಿವೆ. ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗವು ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕಾಲೇಜಿನ ಉದ್ಯೋಗ ಮಾಹಿತಿ ಸಮಿತಿಯ ವತಿಯಿಂದ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 
 
ಸಮಿತಿಯ ಸಂಚಾಲಕರಾದ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ರಾವ್ ಕೆ. ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ರೂಪುರೇಷೆಯನ್ನು ವಿವರಿಸಿ ಆತ್ಮವಿಶ್ವಾಸವನ್ನು ತುಂಬಿದರು. ಸಂಪನ್ಮೂಲ ವ್ಯಕ್ತಿಯಾಗಿ ಗ್ರಂಥಪಾಲಕರಾದ ಪ್ರೇಮಾ ಇವರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷಾ ಮಾದರಿ, ಅಂಕ ನೀಡುವ ಕ್ರಮ, ಮೀಸಲಾತಿ ಮುಂತಾದವುಗಳ ಬಗ್ಗೆ ವಿವರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಮುಖ್ಯತೆಯನ್ನು ತಿಳಿ ಹೇಳಿದರು.
 
 
ಈ ಮೊದಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಇತಿಹಾಸ ಸಹ ಪ್ರಾಧ್ಯಾಪಕರಾದ ವಿ. ಎನ್. ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು ನೂರಕ್ಕೂ ಹೆಚ್ಚಿನ ಪರೀಕ್ಷಾ ಆಕಾಂಕ್ಷಿಗಳು ಭಾಗವಹಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here