`ಪರಿಹಾರದ ಮೊತ್ತ ರೈತರ ಖಾತೆಗೆ ನೇರ ಜಮಾ'

0
268

ವಿಧಾನ ಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ ಉತ್ತರದ ಮುಖ್ಯಾಂಶಗಳು ಹೀಗಿವೆ.
ನಾಲು 11 ಬಜೆಟ್ ಮಂಡನೆ ಮಾಡಿದ್ದೇನೆ. ಇದೀಗ 12ನೇ ಬಜೆಟ್ ಮಂಡಿಸುವ ತಯಾರಿ ನಡೆಸಿದ್ದೇನೆ.
ಪರಿಶಿಷ್ಠರಿಗೆ 44,000ಕೋಟಿ ಖರ್ಚು:ಯೋಜನಾ ವೆಚ್ಚದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರಿಗೆ ಹಣ ಖರ್ಚು ಮಾಡುವ ಪದ್ಧತಿ ಹಿಂದಿನ ಯಾವುದೇ ಸರ್ಕಾರದಲ್ಲಿ ಇರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಆ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ಎಸ್‍ಸಿಪಿ, ಎಸ್‍ಟಿಪಿ ಕಾಯಿದೆ ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕ. ಈ ಕ್ರಾಂತಿಕಾರಕ ಕಾಯಿದೆ 2014-2015ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದೆ. ಪರಿಶಿಷ್ಟರಿಗೆ ಆಯಾ ವರ್ಷ ಮೀಸಲಿಡುವ ಹಣ ಬಳಕೆಯಾಗದಿದ್ದರೆ ನಷ್ಟವಾಗದು, ಅದನ್ನು ಮುಂದಿನ ವರ್ಷ ಬಳಸಿಕೊಳ್ಳಲು ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದು ಜನ ಮೆಚ್ಚುಗೆಗೂ ಪಾತ್ರವಾಗಿದೆ.
ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನಸಂಖ್ಯೆ ಶೇ. 24.60ರಷ್ಟಿದೆ. ಯೋಜನಾ ಗಾತ್ರದಲ್ಲಿ ಅವರಿಗೆ ಇಷ್ಟೇ ಪ್ರಮಾಣದಲ್ಲಿ ಅನುದಾನ ಮೀಸಲಿಡಬೇಕು. ಆ ಕೆಲಸವನ್ನು ನಾವು ಮಾಡಿದ್ದೇವೆ. ಇದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಈ ವರ್ಷ 19 ಸಾವಿರದ 543 ಕೋಟಿ ರೂ.ಗಳನ್ನು ನಿಗಧಿ ಮಾಡಲಾಗಿದೆ.
ಪರಿಶಿಷ್ಟರಿಗಾಗಿ ಕಳೆದ ಮೂರು ವರ್ಷದಲ್ಲಿ 60 ಸಾವಿರ ಕೋಟಿ ರೂ. ನಿಗಧಿಯಾಗಿದೆ. ಅದರಲ್ಲಿ 44 ಸಾವಿರ ಕೋಟಿ ರೂ. ಖರ್ಚಾಗಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ವೆಚ್ಚವಾಗಿದ್ದು ಕೇವಲ 16 ಸಾವಿರ ಕೋಟಿ ರೂ. ಮಾತ್ರ.
ಬೆಳೆ ಪರಿಹಾರ 675ಕೋಟಿ ನಿಗದಿ:
ಕೃಷಿ ಇಲಾಖೆಯಲ್ಲಿ ಒಣ ಭೂಮಿ ಬೇಸಾಯ ಮಾಡುವ ರೈತರ ಅನುಕೂಲಕ್ಕಾಗಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಇದರ ಅನ್ವಯ ಒಂದು ಲಕ್ಷ ಕೃಷಿ ಹೊಂಡಗಳನ್ನು ರಾಜ್ಯಾದ್ಯಂತ ನಿರ್ಮಿಸಲಾಗಿದೆ. ಜೊತೆಗೆ 4,300 ಪಾಲಿ ಹೌಸ್‍ಗಳನ್ನು ಕಟ್ಟಿಕೊಡಲಾಗಿದೆ. ಈ ಯೋಜನೆ ಒಣ ಭೂಮಿ ಬೇಸಾಯ ಮಾಡುವ ರೈತರ ಪಾಲಿಗೆ ವರದಾನವಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ. ಬೆಳೆ ವಿಮೆ ಹಣವನ್ನು ರೈತರಿಗೆ ನೀಡುವಲ್ಲಿ ಆಗುತ್ತಿದ್ದ ಅವ್ಯವಹಾರ ತಪ್ಪಿಸಲು ಯೋಜನೆ ಜಾರಿಗೆ ತಂದಿದೆ. ಇದರಿಂದ ಬೆಳೆ ನಷ್ಟ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪಲಿದೆ. ಇದಕ್ಕಾಗಿ 675 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನಿಗಧಿಪಡಿಸಿದ್ದು, ಕೇಂದ್ರ ಸರ್ಕಾರವೂ ಅದೇ ಪ್ರಮಾಣದ ಅನುದಾನವನ್ನು ರಾಜ್ಯಕ್ಕೆ ಕೊಡುತ್ತದೆ.
ದೇಶದಲ್ಲೇ ಮೊದಲ ಬಾರಿಗೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್‍ಲೈನ್ ಹರಾಜು ಪದ್ಧತಿಯನ್ನು ಜಾರಿಗೆ ತಂದಿದ್ದು ಭಾರಿ ಮೆಚ್ಚುಗೆ ಗಳಿಸಿದೆ. ಕೇಂದ್ರ ಸರ್ಕಾರವೂ ಸಹ ಈ ಪದ್ಧತಿಯನ್ನು ಮಾದರಿಯಾಗಿ ತೆಗೆದುಕೊಂಡಿದೆ. ಕೇಂದ್ರ ಕೃಷಿ ಸಚಿವರ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ರೈತರಿಗೆ ಮೋಸವಾಗುವುದನ್ನು ತಪ್ಪಿಸಲು ಜಾರಿಗೆ ತಂದಿರುವ ಈ ಯೋಜನೆಯನ್ನು ಕೇಂದ್ರವೂ ಮೆಚ್ಚಿಕೊಂಡಿರುವುದು ಶ್ಲಾಘನೀಯ. ಇದೀಗ ದೇಶದ ಎಲ್ಲೆಡೆ ಜಾರಿಗೆ ಬರುತ್ತಿದೆ.
ಇಡೀ ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ರೈತರಿಗೆ ಮೂರು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಬಡ್ಡಿ ವೆಚ್ಚ ಭರಿಸಲು 900 ಕೋಟಿ ರೂ.ಗಳನ್ನು ನಿಗಧಿ ಮಾಡಲಾಗಿದೆ. ಈ ವರೆಗೆ 23.25 ಲಕ್ಷ ರೈತರಿಗೆ 10,500 ಕೋಟಿ ರೂ.ಗಳ ಸಾಲ ಹಂಚಿಕೆಯಾಗಿದೆ. ಹಳ್ಳಿಗಳಿಗೆ ಮಾತ್ರವಲ್ಲದೇ, ನಗರ ಪ್ರದೇಶಗಳಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಬಡ್ಡಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಶೇ.7ರಷ್ಟು ಮಾತ್ರ ಕೇಂದ್ರ ಸರ್ಕಾರ ಶೇ. 3ರಷ್ಟು ಭರಿಸುತ್ತಿದೆ. ಆರೂವರೆ ಲಕ್ಷ ಹೊಸ ರೈತರ ಯೋಜನೆಯ ಲಾಭ ಪಡೆದುಕೊಂಡಿರುವುದು ಸಂತಸ ತಂದಿದೆ.
ನಾವು ರೈತರ ಸಾಲ ಮನ್ನಾ ಮಾಡಬೇಕು ಎಂಬ ಒತ್ತಾಯ ಇದೆ. ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‍ಗಳ ಮೂಲಕ ರೈತರು 42 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ಸಹಕಾರ ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಾಲದ ಮೊತ್ತ 10,500 ಕೋಟಿ ರೂ. ಒಟ್ಟು 56 ಲಕ್ಷ ಮಂದಿ ಸಾಲ ಸೌಲಭ್ಯ ಪಡೆದಿದ್ದಾರೆ. 33 ಲಕ್ಷ ಮಂದಿ ಕೇಂದ್ರ ಸ್ವಾಮ್ಯದ ಬ್ಯಾಂಕ್‍ಗಳಲ್ಲಿ 23 ಲಕ್ಷ ಮಂದಿ ರಾಜ್ಯ ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ನೀವು ಅರ್ಧ ಸಾಲ ಮನ್ನಾ ಮಾಡಿ. ನಾವು ಅರ್ಧ ಮನ್ನಾ ಮಾಡುತ್ತೇವೆ ಎಂದು ಪ್ರಧಾನಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಮನವಿ ಮಾಡಿದ್ದೇನೆ. ಇದರಿಂದ ಎಲ್ಲ ರೈತರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದ್ದೇನೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಪ್ರಧಾನಿಯವರಿಗೆ ಪತ್ರವನ್ನೂ ಬರೆಯುತ್ತೇನೆ.
ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ಗಳ ವರೆಗೆ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದರು. ಆದರೆ ಅದಕ್ಕಾಗಿ 2,300 ಕೋಟಿ ರೂ. ಕೊಟ್ಟಿದ್ದು ನಾವು ಅಧಿಕಾರಕ್ಕೆ ಬಂದ ಮೇಲೆ.
ಬರ ಪರಿಹಾರ – ಕೇಂದ್ರಕ್ಕೆ ಮನವಿ:
139 ತಾಲೂಕುಗಳು ಮುಂಗಾರಿನಲ್ಲಿ 160 ತಾಲೂಕುಗಳು ಹಿಂಗಾರಿನಲ್ಲಿ ಬರಗಾಲಕ್ಕೆ ತುತ್ತಾಗಿವೆ. ಇಂತಹ ಭೀಕರ ಬರಗಾಲ ಹಿಂದೆಂದೂ ರಾಜ್ಯದಲ್ಲಿ ಕಾಣಿಸಿಕೊಂಡಿವೆ. ನನಗೆ ತಿಳಿವಳಿಗೆ ಬಂದ ಬಳಿಕ ಇಂತಹ ಬರಗಾಲ ನೋಡಿರಲಿಲ್ಲ. ಕಬಿನಿ, ಹೇಮಾವತಿ ಮತ್ತು ಕೆಆರ್‍ಎಸ್ ಜಲಾಶಯದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ನೀರು ಯಾವತ್ತೂ ಸಂಗ್ರಹ ಆಗಿರಲಿಲ್ಲ. ಹೀಗಾಗಿಯೇ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲಾಗದು ಎಂದು ನಿರ್ಣಯ ಅಂಗೀಕರಿಸಿದ್ದು.
ಮುಂಗಾರಿನಲ್ಲಿ 17 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಹಿಂಗಾರಿನಲ್ಲಿ 7 ಸಾವಿರ ಕೋಟಿ ರೂ. ಮೊತ್ತದ ನಷ್ಟವಾಗಿದೆ. ಪ್ರವಾಹದಿಂದಲೂ ಕೆಲ ಜಿಲ್ಲೆಗಳಲ್ಲಿ ಮೂರೂವರೆ ಸಾವಿರ ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ. ಒಟ್ಟು 27 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಇಷ್ಟು ಭೀಕರ ಬರಗಾಲ ಕರ್ನಾಟಕದಲ್ಲಿ ಯಾವ ಕಾಲದಿಂದಲೂ ಬಂದಿಲ್ಲ. ಮಳೆ ಕೊರತೆ ಪರಿಣಾಮ ಅಂತರ್ಜಲ ಮಟ್ಟ 1800 ಅಡಿಗಳಿಗೆ ಕುಸಿದಿದೆ.
ಬರ ಪರಿಹಾರಕ್ಕೆ 470 ಕೋಟಿ ರೂ.ಗಳನ್ನು ಎನ್‍ಡಿಆರ್‍ಎಫ್ ನಿಯಮ ಪ್ರಕಾರ ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅದೇ ಕುಡಿಯುವ ನೀರಿಗೆ 800 ಕೋಟಿ ರೂ. ಮೇವಿಗೆ ಇನ್‍ಪುಟ್ ಸಬ್ಸಿಡಿಯಾಗಿ 1782 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಳಲಾಗಿತ್ತು. ಆದರೆ 450 ಕೋಟಿ ರೂ. ಕೇಂದ್ರದಿಂದ ಬಂದಿದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೇನೆ. ಹಿಂಗಾರಿನಲ್ಲಿ 3,310 ಕೋಟಿ ರೂ. ನಷ್ಟವಾಗಿರುವುದನ್ನು ಅವರ ಗಮನಕ್ಕೆ ತಂದು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಈ ಕುರಿತು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ.
6ಮೆಡಿಕಲ್ ಕಾಲೇಜು, 900ಸೀಟು ಹೆಚ್ಚಳ:
ರಾಜ್ಯದ ಆರು ಜಿಲ್ಲೆಗಳಲ್ಲಿ ನಮ್ಮ ಸರ್ಕಾರ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಮೆಡಿಕಲ್ ಸೀಟಿಗೆ ಅರ್ಜಿ ಹಾಕಿದ್ದೆ. ಆದರೆ ಸಿಗಲಿಲ್ಲ. ನಾನು ವೈದ್ಯ ಆಗಬೇಕು ಎಂಬುದು ನಮ್ಮ ತಂದೆಯ ಬಯಕೆಯಾಗಿತ್ತು. ಆದರೆ ಸೀಟು ಸಿಗಲಿಲ್ಲ. ಈ ಕಾರಣಕ್ಕಾಗಿಯೇ ಆರು ಮೆಡಿಕಲ್ ಕಾಲೇಜುಗಳನ್ನು ತೆರೆಯುವ ಕ್ರಮ ಕೈಗೊಂಡಿದ್ದು, ಇದರಿಂದ ಪ್ರತಿ ವರ್ಷ 900 ಸೀಟುಗಳು ಹೆಚ್ಚಾಗುತ್ತಿವೆ. ಇದು ನಮ್ಮ ಸರ್ಕಾರದ ಸಾಧನೆ ಅಲ್ಲವೇ ?
ಕ್ಲೀನ್ ಸಿಟಿ ಹೆಗ್ಗಳಿಕೆ:
ಕಳೆದ ಮೂರು ವರ್ಷ ಒಂಬತ್ತು ತಿಂಗಳಲ್ಲಿ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಇಡೀ ವಿಶ್ವದಲ್ಲೇ ಬೆಂಗಳೂರು ಡೈನಮಿಕ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶ್ವ ಹಣಕಾಸು ವೇದಿಕೆ ಈ ಬಿರುದು ನೀಡಿದೆ. ಅದನ್ನು ನಾವಾಗಲಿ, ಕೇಂದ್ರ ಸರ್ಕಾರವಾಗಲಿ ಹೇಳಿದ್ದಲ್ಲ. ಜೊತೆಗೆ ಮೈಸೂರು ನಗರಕ್ಕೆ ಕ್ಲೀನ್ ಸಿಟಿ ಎಂಬ ಪ್ರಶಸ್ತಿ ಎರಡು ಬಾರಿ ಸಿಕ್ಕಿದೆ. ಸ್ವಚ್ಛ ಭಾರತ್ ಯೋಜನೆಗೆ ಚಾಲನೆ ನೀಡಿದವರು ಪ್ರಧಾನಿ ನರೇಂದ್ರ ಮೋದಿ. ಆದರೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಒಂದು ನಗರಕ್ಕೂ ಈ ಪ್ರಶಸ್ತಿ ಬಂದಿಲ್ಲ. ಯೋಜನೆ ಪ್ರಗತಿ ಕಂಡಿರುವುದು ಕಾಂಗ್ರೆಸ್ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಮಾತ್ರ. ಇದು ಸತ್ಯ ಅಲ್ಲವೇ ? ಜೀವವಿಲ್ಲದ ಸರ್ಕಾರದಿಂದ ಇಂತಹ ಸಾಧನೆ ಸಾಧ್ಯವೇ ?
ಸುರಕ್ಷಿತ ನಗರ:
ಬೆಂಗಳೂರು ಸುರಕ್ಷಿತವಲ್ಲದ ನಗರ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಆದರೆ, 2011ರಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿ ನೋಡಿದರೆ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಬೆಂಗಳೂರು ಸುರಕ್ಷಿತವಲ್ಲದ ನಗರ ಎಂದು ಅವರು ಹೇಗೆ ಹೇಳುತ್ತಾರೆ. ಇಷ್ಟಕ್ಕೂ ಬೆಂಗಳೂರು ಸುರಕ್ಷಿತವಲ್ಲದ ನಗರ ಆಗಿದ್ದು ವಿರೋಧ ಪಕ್ಷದವರ ಕಾಲದಲ್ಲೇ.
ಪೊಲೀಸ್ ಇಲಾಖೆಯಲ್ಲೂ ನಮ್ಮ ಸರ್ಕಾರ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. 2014-2015ರಲ್ಲಿ 360 ಪಿಎಸ್‍ಐ, 7666 ಪೇದೆಗಳನ್ನು ನೇಮಕ ಮಾಡಿದ್ದೇವೆ. 2015-2016ರಲ್ಲಿ 215 ಪಿಎಸ್‍ಐ ಮತ್ತು 6389 ಪೇದೆಗಳು ನೇಮಕಗೊಂಡಿದ್ದಾರೆ. ಈ ವರೆಗೆ 579 ಪಿಎಸ್‍ಐ ಮತ್ತು 14033 ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಈ ವರ್ಷ 711 ಪಿಎಸ್‍ಐ ಮತ್ತು 8424 ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದು ದಾಖಲೆ. ಜೊತೆಗೆ ಮುಂದಿನ ವರ್ಷಗಳಲ್ಲಿ ಕೈಗೊಳ್ಳುವ ನೇಮಕ ಪ್ರಕ್ರಿಯೆಗೂ ಅನುಮತಿ ನೀಡಲಾಗಿದೆ. ಅದರಂತೆ 333 ಪಿಎಸ್‍ಐ, 4445 ಪೇದೆಗಳು ಸೇರಿದಂತೆ ಒಟ್ಟು 8605 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿದೆ.
ಪೊಲೀಸರಿಗೆ ಎಷ್ಟೋ ವರ್ಷಗಳಿಂದ ಬಡ್ತಿ ನೀಡಿರಲಿಲ್ಲ. 20-25 ವರ್ಷಗಳಿಂದ ಪೇದೆಗಳು ಅದೇ ಹುದ್ದೆಯಲ್ಲಿ ಕೊಳೆಯುತ್ತಿದ್ದರು. ನಮ್ಮ ಸರ್ಕಾರ ಏಕ ಕಾಲದಲ್ಲಿ 11 ಸಾವಿರ ಮಂದಿಗೆ ಬಡ್ತಿ ನೀಡಿದೆ. ಜೊತೆಗೆ ನೂರು ರೂ. ಇದ್ದ ಭತ್ಯೆಯನ್ನು 2,100 ರೂ.ಗಳಿಗೆ ಏರಿಕೆ ಮಾಡಿದೆ. ಪೊಲೀಸರ ವೇತನ ತಾರತಮ್ಯವನ್ನು ಮುಂದೆ ರಚನೆಯಾಗುವ ವೇತನ ಸಮಿತಿ ನೀಡುವ ವರದಿ ಬಳಿಕ ಸರಿ ಮಾಡಲಾಗುವುದು.
ಪೊಲಿಸ್ ಕ್ಯಾಂಟೀನ್:
ಪೊಲೀಸ್ ಸಿಬ್ಬಂದಿಯ ಅನುಕೂಲಕ್ಕಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಅಲ್ಲಿ ಪಡಿತರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಪೊಲೀಸರ ಮಕ್ಕಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಶಾಲೆ ತೆರೆಯಲಾಗಿದೆ. ಬೆಂಗಳೂರಿನಲ್ಲಿ ಪೊಲೀಸರಿಗಾಗಿ ಅತಿಥಿಗೃಹ ನಿರ್ಮಿಸಿರುವುದು ಮತ್ತೊಂದು ವಿಶೇಷ.
ಬಂಡವಾಳ ಹೂಡಿಕೆ ನಂ.1:
ಬಂಡವಾಳ ಹೂಡಿಕೆಯಲ್ಲೂ ರಾಜ್ಯ ನಂಬರ್ ಒನ್ ಸ್ಥಾನ ಗಳಿಸಿದೆ. ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಪ್ರವಾಸಿ ಭಾರತೀಯ ದಿವಸ್ ಮತ್ತು ಮೇಕ್ ಇನ್ ಇಂಡಿಯಾ-ಕರ್ನಾಟಕ ಸಮಾವೇಶಗಳ ಮೂಲಕ ಉದ್ಯಮಿಗಳನ್ನು ಸೆಳೆಯುವ ಪ್ರಯತ್ನವಾಗುತ್ತಿದೆ. ಈ ವರೆಗೆ 1 ಲಕ್ಷ 49 ಸಾವಿರ ಕೋಟಿ ರೂ. ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ರಾಜ್ಯ ಎಂದು ಕೇಂದ್ರವೇ ಹೇಳಿದೆ. ಹೂಡಿಕೆಗೆ ಅನುಕೂಲವಾಗುವ ವಾತಾವರಣ, ನೀತಿ ಇಲ್ಲದಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು. ನಮ್ಮ ರಾಜ್ಯ ಕೈಗಾರಿಕೆ ಸ್ನೇಹಿ. ಅದಕ್ಕೇ ನಂಬರ್ ಒನ್ ಆಗಿದೆ.
6 ಲಕ್ಷ ವಸತಿ ಗುರಿ:
ಪ್ರತಿ ವರ್ಷ ಮೂರು ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಈ ವರೆಗೆ 10.50 ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಎರಡು ವರ್ಷದಲ್ಲಿ ಆರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇದೆ. ಇದಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಶಿಕ್ಷಕರು, ವೈದ್ಯರ ನೇಮಕಾತಿ:
ಶಿಕ್ಷಕರ ನೇಮಕದಲ್ಲೂ ನಮ್ಮ ಸಾಧನೆ ಮೆಚ್ಚುವಂಥದ್ದು. 7,900 ಪ್ರಾಥಮಿಕ ಶಾಲೆ ಶಿಕ್ಷಕರು, 1,700 ಪಿಯುಸಿ ಉಪನ್ಯಾಸಕರು ಸೇರಿದಂತೆ 9,600 ಮಂದಿಯನ್ನು ನೇಮಕ ಮಾಡಿದ್ದೇವೆ.
ಅದೇ ರೀತಿ ಆರೋಗ್ಯ ಇಲಾಖೆಗೆ 597 ತಜ್ಞ ವೈದ್ಯರು, 157 ಎಂಬಿಬಿಎಸ್ ವೈದ್ಯರು, 6373 ದಂತ ವೈದ್ಯರು ಮತ್ತು 7517 ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಶಿಕ್ಷಕರು ಮತ್ತು ವೈದ್ಯರ ನೇಮಕವೇ ಆಗಿರಲಿಲ್ಲ. ಎಲ್ಲ ಇಲಾಖೆಗಳಲ್ಲೂ ನಾವು ಅದನ್ನು ಮಾಡಿ ತೋರಿಸಿದ್ದೇವೆ.
ಅಭಿವೃದ್ದಿಯ ಪಥದತ್ತ:
ರಾಜ್ಯಾದ್ಯಂತ 10 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದಾಗಿ ನಮ್ಮ ಸರ್ಕಾರ ಹೇಳಿತ್ತು. ಈ ವರೆಗೆ 8,500 ಘಟಕಗಳು ಕಾರ್ಯಾರಂಭ ಮಾಡಿವೆ. ಮಾರ್ಚ್ ಅಂತ್ಯದ ವೇಳೆಗೆ ಒಂದು ಸಾವಿರ ಘಟಕಗಳು ಆರಂಭವಾಗಲಿವೆ.
ರಾಜ್ಯದಲ್ಲಿ ಉಂಟಾಗಿರುವ ಬರಗಾಲವನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಮೇವಿಗೆ ನಮ್ಮಲ್ಲಿ ಸಮಸ್ಯೆ ಇದೆ. ಜೊತೆಗೆ ಜನ ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಅನ್ನಭಾಗ್ಯ ಯೋಜನೆ ಪರಿಣಾಮ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಹೆಣ್ಣು ಮಕ್ಕಳಿಗೆ ಎರಡು ರೂ. ಪ್ರೋತ್ಸಾಹ ಧನ, ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲು, ಬಿಸಿಯೂಟ ನೀಡುತ್ತಿರುವುದರಿಂದ ಶಾಲೆಗಳಲ್ಲಿ ಹಾಜರಾಗಿ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಪೌಷ್ಠಿಕಾಂಶದ ಕೊರತೆಯಿಂದ ನರಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದು ಬೆಳವಣಿಗೆಯ ಸೂಚನೆ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಪ್ರಯತ್ನವಾಗಿದೆ.
ವಿದ್ಯಾಸಿರಿ ಯೋಜನೆ:
ಶಿಕ್ಷಣ ಹಕ್ಕು ಕಾಯಿದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ 4.50 ಲಕ್ಷ ಮಕ್ಕಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವಂತೆ ಆಗಿದೆ. ಅವರ ಶುಲ್ಕವನ್ನು ನಾವೇ ಭರಿಸುತ್ತಿದ್ದೇವೆ. ಈ ಹಿಂದೆ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕೆ ನಾನಾ ಸಮಸ್ಯೆಗಳು ಕಾರಣ. ಹಣಕಾಸು ಕೊರತೆಯೂ ಅದರಲ್ಲಿ ಒಂದಾಗಿತ್ತು. ಈ ಕಷ್ಟವನ್ನು ನಾನೂ ಅನುಭವಿಸಿದ್ದೆ.
ಆ ಅನುಭವದ ಆಧಾರದ ಮೇಲೆ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದ್ದು. ಆ ಯೋಜನೆ ಅನ್ವಯ ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ತಲಾ 1,500 ರೂ. ನೀಡಲಾಗುತ್ತಿದೆ. ಒಂದು ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ವಿದ್ಯಾಸಿರಿ ಯೋಜನೆಯಿಂದ ಬಡವರ ಮಕ್ಕಳ ಉನ್ನತ ಶಿಕ್ಷಣ ಅಭ್ಯಾಸಕ್ಕೆ ಅನುಕೂಲವಾಗಿದೆ.
ನರೇಗಾ 262ಕೋಟಿ ಮೀಸಲು:
ನಾನು ಅಹಿಂದ ಪರ ಎಂಬ ಟೀಕೆ ಆಗಾಗ ಕೇಳಿ ಬರುತ್ತದೆ. ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತಿತರ ಯೋಜನೆಗಳ ಫಲಾನುಭವಿಗಳು ಕೇವಲ ಅಹಿಂದ ವರ್ಗದವರೇ ? ಎಲ್ಲ ವರ್ಗದ ಬಡವರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರ ಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ಜಾರಿಗೆ ತಂದಿರುವ ಸರ್ಕಾರ ನಮ್ಮದು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಆರು ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ನಮಗೆ ಕೊಟ್ಟಿತ್ತು. ಆದರೆ ಅದಕ್ಕೂ ಹೆಚ್ಚಿನ ಮಾನವ ದಿನಗಳನ್ನು ನಾವು ಸೃಷ್ಟಿ ಮಾಡಿದ್ದೇವೆ. ಇದಕ್ಕಾಗಿಯೇ ಕೇಂದ್ ಸರ್ಕಾರ ಹತ್ತು ಕೋಟಿ ಮಾನವ ದಿನಗಳ ಗುರಿ ಕೊಟ್ಟಿದೆ. ಇದಕ್ಕಾಗಿ ಕೇಂದ್ರದಿಂದ 2,100 ಕೋಟಿ ರೂ.ಗಳ ಅನುದಾನ ಬಂದಿದೆ. ನಾವು 262 ಕೋಟಿ ಮೀಸಲಿಟ್ಟಿದ್ದೇವೆ. ಕೇಂದ್ರದ ಅನುದಾನ ಬರುವಲ್ಲಿ ವಿಳಂಬವಾದರೂ ಮುಂಗಡವಾಗಿ 1165 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೆಲಸ ನಿಲ್ಲಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಕೂಲಿ ಕಾರ್ಮಿಕರಿಗೆ ಆಯಾ ವಾರದಲ್ಲಿ ವೇತನ ನೀಡಲು, ಮೂರು ದಿನದಲ್ಲಿ ಡಿಜಿಟಲ್ ಸಹಿ ಮಾಡಲು ಸೂಚಿಸಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ:
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ 1144 ಕೋಟಿ ರೂ. ನೀಡಿದ್ದು, ಆ ಪೈಕಿ 800 ಕೋಟಿ ರೂ. ಖರ್ಚಾಗಿದೆ. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಡಿಸಿ ಮತ್ತು ಸಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಲೋಪವಾದರೆ ನೀವೇ ಹೊಣೆ ಎಂದು ಎಚ್ಚರಿಸಿದೆ. ಜೊತೆಗೆ ಖಾಸಗಿ ಕೊಳವೆಬಾವಿಗಳನ್ನು ಸ್ವಾಧೀನಪಡಿಸಿಕೊಳ್ಳಲೂ ಅವರಿಗೆ ಆದೇಶ ನೀಡಲಾಗಿದೆ. ಮೇವು ಬೆಳೆಯುವ ರೈತರಿಗೆ ಕಿಟ್‍ಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ.
ಕೆರೆ ಸಂಜೀವಿನಿ ಯೋಜನೆಯಲ್ಲಿ 931 ಕೆರೆಗಳ ಹೂಳು ತೆಗೆದು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 50 ಕೋಟಿ ರೂ. ನಿಗಧಿಯಾಗಿದೆ. ಗೋಶಾಲೆ, ಮೇವು ಬ್ಯಾಂಕ್‍ಗಳನ್ನು ಅಗತ್ಯ ಇರುವ ಕಡೆಗಳಲ್ಲಿ ತೆರೆಯಲಾಗುತ್ತಿದೆ. ಈ ವರೆಗೆ 1,300 ಕೆರೆಗಳನ್ನು ತುಂಬಿಸಲಾಗಿದೆ. ಹನಿ ನೀರಾವರಿ ಯೋಜನೆ ಫಲಾನುಭವಿಗಳಿಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲೂ ನೀರಿನ ತೊಟ್ಟಿಗಳ ನಿರ್ಮಾಣ ಆಗುತ್ತಿದೆ. ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ, ಮೇವು ಬ್ಯಾಂಕ್ ತೆರೆಯ ಬೇಕೆಂಬ ಬೇಡಿಕೆ ಇದೆ.
ನದಿ ನೀರಿನ ಮೂಲ ಇಲ್ಲದ ಪ್ರದೇಶಗಳ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಜೊತೆಗೆ 116 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲಾಗಿದೆ.

LEAVE A REPLY

Please enter your comment!
Please enter your name here