'ಪರಿಸರ ಅಧ್ಯಯನ ಶಿಬಿರ'ಕ್ಕೆ ವರ್ಣರಂಜಿತ ತೆರೆ

0
161

 
ಉಡುಪಿ ಪ್ರತಿನಿಧಿ ವರದಿ
ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವತಿಯಿಂದ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ಸೋಮೇಶ್ವರ ವನ್ಯಜೀವಿ ವಲಯಕ್ಕೆ ಸೇರಿದ ಸೀತಾನದಿ ನಿಸರ್ಗಧಾಮದಲ್ಲಿ ‘ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆ’ ಕುರಿತು ಏರ್ಪಡಿಸಲಾಗಿದ್ದ ಎರಡು ದಿನಗಳ ಕಾಲ ಪರಿಸರ ಅಧ್ಯಯನ ಶಿಬಿರಕ್ಕೆ ಮಂಗಳವಾರ ವರ್ಣರಂಜಿತ ತೆರೆಬಿದ್ದಿತು.
 
 
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಯು.ಆರ್.ಮಧ್ಯಸ್ಥ, ಈ ಶಿಬಿರವು ಮಕ್ಕಳಿಗೆ ಸೇರಿದಂತೆ ಶಿಬಿರಾರ್ಥಿಗಳಿಗೆ ಪರಿಸರ ಕಾಳಜಿಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮತ್ತು ಪರಿಸರ ಸಂರಕ್ಷಣೆಯ ಮನೋಭಾವವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
 
 
ನಾವು ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ವಹಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ಭಾರೀ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಶಿಬಿರಾಧಿಕಾರಿಯೂ ಆದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಈ ಶಿಬಿರವು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಪಶ್ಚಿಮಘಟ್ಟ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ನಾವು ವಹಿಸಬೇಕಾದ ವಿಶೇಷ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
 
 
ಪಶ್ಚಿಮಘಟ್ಟದಲ್ಲಿನ ನಿಸರ್ಗದ ಮಧ್ಯೆ ಚಾರಣದ ಮೂಲಕ ನಡೆಸಿದ ಪರಿಸರ ಅಧ್ಯಯನ, ಪಕ್ಷಿ ವೀಕ್ಷಣೆ, ಸಸ್ಯ ಮತ್ತು ಪ್ರಾಣಿ ಸಂಕುಲಗಳ ಕುರಿತು ಪಡೆದ ಮಾಹಿತಿಯಿಂದ ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಹೊಣೆಗಾರಿಕೆ ನೀಡಲು ಸಹಕಾರಿಯಾಗಿದೆ ಎಂದರು.
ಸೋಮೇಶ್ವರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಬಿ. ಸುಬ್ಬಯ್ಯ ನಾಯ್ಕ ಅವರು ಶಿಬಿರಾರ್ಥಿಗಳಿಗೆ ಪ್ರಸಂಸನಾ ಪತ್ರ ವಿತರಿಸಿದರು. ಹೆಬ್ರಿ ವಲಯ ಅರಣ್ಯಾಧಿಕಾರಿ ಜಿ.ಲೋಹಿತ್ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ನಾಗೇಶ್ ಅರಳಕುಪ್ಪೆ, ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಸುಭಾಷ ರೈ, ಪರಿಷತ್ತಿನ ಉಡುಪಿ ಜಿಲ್ಲಾ ಸಮಿತಿಯ ಸಂಯೋಜಕ ದಿನೇಶ್ ಶೆಟ್ಟಿಗಾರ್, ಪರಿಸರ ತಜ್ಞ ಡಾ|| ಬಿ.ಕೆ.ಹರೀಶ್ಕುಮಾರ್, ಹೆಬ್ರಿ ಸ.ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲ ಎಸ್.ದಿವಾಕರ ಮರಕಾಲ ಪಾಲ್ಗೊಂಡಿದ್ದರು.
 
 
ಶಿಬಿರದಲ್ಲಿ ಶಿಬಿರಾರ್ಥಿಗಳಾದ ಎಂ.ಕೆ.ನಾಗರಾಜ, ಉಷಾರಾವ್, ಜಿ.ಬಿ.ಸಂತೋಷ್ ಕುಮಾರ್, ವಿದ್ಯಾರ್ಥಿ ವಿಷ್ಣು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಬೆಂಗಳೂರಿನ ಪರಿಸರ ಶಿಕ್ಷಣ ಮತ್ತು ಸಮುದಾಯ ಕೇಂದ್ರದ ಕಾರ್ಯಕಾರಿ ನಿರ್ದೇಶಕ ಡಾ|| ಬಿ.ಕೆ.ಹರಿಶ್ ಕುಮಾರ್ ಅವರು ‘ನೀರಿನ ಸಂರಕ್ಷಣೆಯ ಮಹತ್ವ’ ಕುರಿತು, ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಸಂಶೋಧಕ ಅಜಯ್ ಗಿರಿ ‘ಪಶ್ಚಿಮಘಟ್ಟ ಪ್ರದೇಶದಲ್ಲಿನ ಕಾಳಿಂಗಸರ್ಪದ ಜೀವನಕ್ರಮ’ ಕುರಿತು ಮಾಹಿತಿ ನೀಡಿದರು.
 
 
ಮುಂಜಾನೆ ವೇಳೆಯಲ್ಲಿ ಕೊಡಗಿನ ಗೋಣಿಕೊಪ್ಪ ಪ್ರೌಢಶಾಲೆಯ ಶಿಕ್ಷಕ ಡಿ.ಕೃಷ್ಣಚೈತನ್ಯ ಅವರು ನೀತಾನದಿ ನಿಸರ್ಗಧಾಮದಲ್ಲಿ ಪಕ್ಷಿ ವೀಕ್ಷಣೆಯೊಂದಿಗೆ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ಸೋಮೇಶ್ವರ ವನ್ಯಜೀವಿ ಉಪ ವಲಯದ ಡಿಆರ್ ಎಫ್ಓ ವೀರಣ್ಣ ಅವರು ನೀತಾನದಿ ನಿಸರ್ಗಧಾಮದಲ್ಲಿ ಚಾರಣ ಕಾರ್ಯಕ್ರಮ ನಡೆಸಿಕೊಟ್ಟರು. ಚಾರಣದುದ್ದಕ್ಕೂ ಕಾಡಿನ ಪರಿಚಯದೊಂದಿಗೆ ಗಿಡ-ಮರಗಳು ಹಾಗೂ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here