ಪತ್ನಿಯ ಶವವನ್ನು ಹೊತ್ತು ಸಾಗಿದ ಪತಿ

0
167

ರಾಷ್ಟ್ರೀಯ ಪ್ರತಿನಿಧಿ ವರದಿ
ಒಡಿಶಾದಲ್ಲಿ ಹೃದಯ ವಿದ್ರಾಹಕ ಘಟನೆಯೊಂದು ನಡೆದಿದೆ. ಇದರಿಂದ ಒಡಿಶಾ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಸಾಗಿದ ಘಟನೆ ಒಡಿಶಾ ಕಲಹಂಡಿಯಲ್ಲಿ ನಡೆದಿದೆ.
 
ಕ್ಷಯ ರೋಗದಿಂದ ಬಳಲಿ, ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿ ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿದ್ದ ಪತಿಯೊಬ್ಬ ಅಂತಿಮವಾಗಿ ಒಂದು ಬಟ್ಟೆಯಲ್ಲಿ ತನ್ನ ಪತ್ನಿಯ ಶವವನ್ನು ಸುತ್ತಿಕೊಂಡು ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಮಾರ್ಗ ಮಧ್ಯೆ ಇದನ್ನು ಗಮನಿಸಿದ ಸ್ಥಳೀಯ ಮಾಧ್ಯಮಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
 
 
 
ವ್ಯಕ್ತಿಯ ಊರು ಸರ್ಕಾರಿ ಆಸ್ಪತ್ರೆಯಿಂದ ಸುಮಾರು 60 ಕಿ.ಮೀ ದೂರದಲ್ಲಿದ್ದು, ಪತ್ನಿಯ ಶವವನ್ನು 10 ಕಿ.ಮೀ ಹೊತ್ತುಕೊಂಡೇ ಪತಿ ಸಾಗಿದ್ದಾನೆ. ಜತೆಗೆ ಈತನ 12 ವರ್ಷದ ಮಗಳು ಸಾಥ್ ನೀಡಿದ್ದಾಳೆ.
 
 
ಬಡವರಿಗೆ ಪ್ರಯೋಜನವಾಗಲಿ ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರ ಮಹಾ ಪ್ರಯಾಣ ಎಂಬ ಯೋಜನೆ ಆರಂಭಿಸಿದ್ದು, ಬಡ ಕುಟುಂಬಸ್ಥರು ಈ ಯೋಜನೆ ಮೂಲಕ ಉಚಿತವಾಗಿ ಶವಗಳನ್ನು ರವಾನಿಸಬಹುದಾಗಿದೆ. ಆದರೆ ಈ ವಿಚಾರ ತಿಳಿದಿದ್ದೂ, ಬಡವರ ವಿಚಾರದಲ್ಲಿ ಕಲಹಂಡಿ ಸರ್ಕಾರಿ ಆಸ್ಪತ್ರೆ ನಡೆದುಕೊಂಡ ಪರಿ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here