ಪಟ್ಟುಹಿಡಿದು ಬಿಡುಗಡೆ ಸಾಧಿಸಿದ ಡಿವೈಎಫ್ಐ 

0
287

ವರದಿ: ಮುನೀರ್ ಕಾಟೀಪಳ್ಳ
500, 1000 ಮುಖಬೆಲೆಯ ನೋಟು ನಿಷೇಧ ಕ್ರಮದಿಂದ ಕಾಳದಂಧೆಕೋರರು, ಕಪ್ಪು ಹಣದ ಖದೀಮರು ಸಿಕ್ಕಿಬೀಳಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ ಅನಾಣ್ಯೀಕರಣದ ದಿನದಿಂದ ಈವರೆಗೆ ಜನಸಾಮಾನ್ಯರು ಬಲಿಯಾಗುತ್ತಿರುವ ವರದಿಗಳು ಮಾತ್ರವೇ ಕೇಳಿಬರುತ್ತಿವೆ. ದಿನಬಳಕೆಯ ವಸ್ತುವಿನಿಂದ ಹಿಡಿದು ಮದುವೆ, ಮುಂಜಿ, ಜೀವರಕ್ಷಕ ಔಷಧಿಯವರಗೆ ಅನಿವಾರ್ಯ ವಸ್ತುಗಳನ್ನು ಖರೀದಿಸಲಾಗದೆ ಜನತೆ ಪರಿತಪಿಸುತ್ತಿದ್ದಾರೆ. ಈ ಗಾಯದ ಮೇಲೆ ಬರೆ ಎಳೆದಂತೆ ಆರೋಗ್ಯವನ್ನು ದಂಧೆಯನ್ನಾಗಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಸಹ ಹಳೆಯ ನೋಟು, ಚೆಕ್ ಗಳನ್ನು ಸ್ವೀಕರಿಸದೆ ರೋಗಿಗಳ ಕುಟುಂಬಗಳಿಗೆ ಚಿತ್ರಹಿಂಸೆ ನೀಡುತ್ತಿವೆ.
 
 
ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿಯೂ ಇಂತಹ ಸ್ಥಿತಿ ಇದ್ದು, ಕುಲಾಸೋ ಆಸ್ಪತ್ರೆಯಲ್ಲಿ ಹೊಸ ನೋಟು ನೀಡದ ಕಾರಣ ರೋಗಿಗಳನ್ನು ಡಿಸ್ಚಾರ್ಜ್ ಮಾಡದೆ ಅಕ್ರಮ ಬಂಧನದಲ್ಲಿಡಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ dyfi ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯ ಈ ಧೋರಣೆಯಿಂದ ಹದಿನೈದಕ್ಕೂ ಹೆಚ್ಚು ಅಸಹಾಯಕ ರೋಗಿಗಳು ಬವಣೆ ಪಡುತ್ತಿದ್ದುದು ಕಂಡುಬಂತು. ವೈದ್ಯರು ಡಿಸ್ಚಾರ್ಜ್ ಮಾಡಲು ಹೇಳಿದ್ದರೂ ಹೊಸನೋಟು ಇಲ್ಲದ ಕಾರಣ ಕಳೆದ ಮೂರು ದಿವಸಗಳಿಂದ ಅವರನ್ನು ಬಿಡುಗಡೆಗೊಳಿಸದೆ ಅನಧಿಕೃತ ಬಂಧನದಲ್ಲಿಡಲಾಗಿತ್ತು. ಈ ಕುರಿತು ಆಸ್ಪತ್ರೆ ಆಡಳಿತ, ಆರೋಗ್ಯಾಧಿಕಾರಿ, ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಿದರೂ ಆಡಳಿತ ಮಂಡಳಿ ತೀರಾ ಅಮಾನವೀಯವಾಗಿ ನಡೆದು ಕೊಂಡಿತು.
 
ಆದರೆ ಪಟ್ಟುಬಿಡದ dyfi ಕಾರ್ಯಕರ್ತರು ಸ್ಥಳದಲ್ಲಿಯೇ ತೀವ್ರ ಪ್ರತಿಭಟನೆ ನಡೆಸಿ, ಚಿಕಿತ್ಸೆ ಮುಗಿದ ರೋಗಿಗಳನ್ನು ಸ್ವತಃ ಬಿಡುಗಡೆಗೊಳಿಸುವ ಕಾರ್ಯಾಚರಣೆಗಿಳಿಯಿತು. ಈ ಪ್ರತಿರೋಧದಿಂದ ಮೆತ್ತಗಾದ ಆಸ್ಪತ್ರೆಯ ಆಡಳಿತ ಮಂಡಳಿ ಕೊನೆಗೂ ಚೆಕ್ ಮೂಲಕ ಬಿಲ್ ಪಾವತಿಯನ್ನು ಪಡೆಯಲು ಒಪ್ಪಿಕೊಂಡಿತು.

LEAVE A REPLY

Please enter your comment!
Please enter your name here