ನ್ಯಾಯಬೆಲೆ ಅಂಗಡಿ ಲೈಸನ್ಸ್ ಅಮಾನತು

0
526

ಬೆಂಗಳೂರು ಪ್ರತಿನಿಧಿ ವರದಿ
ಸಮಪ೯ಕ ಪಡಿತರ ವಿತರಣೆ ಮಾಡದ ನ್ಯಾಯಬೆಲೆ ಅಂಗಡಿ ವಿರುದ್ಧ ಬಿಪಿಎಲ್ ಕಾಡು೯ದಾರ ಮಹಿಳೆಯೊಬ್ಬರು ನೇರವಾಗಿ ಆಹಾರ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದ ಪರಿಣಾಮ ನ್ಯಾಯ ಬೆಲೆ ಅಂಗಡಿಯ ಪರವಾನಿಗೆಯನ್ನೇ ಅಮಾನತು ಮಾಡಲಾಗಿದೆ.
 
 
 
ಘಟನೆ ನಡೆದದ್ದು ಹೇಗೆ ?
ಮಂಗಳೂರಿನ ಶಕ್ತಿನಗರದಲ್ಲಿರುವ ನಾಗೂರಿ ವ್ಯವಸಾಯ ಸಹಕಾರಿ ಸಂಘದ ಪರವಾನಿಗೆ ಅಮಾನತು ಮಾಡಲಾಗಿದೆ. ಇಲ್ಲಿನ ಬಿಪಿಎಲ್ ಕಾಡ್೯ ಮಹಿಳೆಯೊಬ್ಬರು ಮಾ.23ರಂದು ಪಡಿತರ ಸಾಮಾಗ್ರಿ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬಂದಿದ್ದರು‌. ಆದರೆ ಈ ತಿಂಗಳ ಅಕ್ಕಿ ಮುಗಿದಿದೆ ಎಂದು ತಿಳಿಸಿದ ಅಂಗಡಿಯವರು, ಮುಂದಿನ ತಿಂಗಳು ಬರುವಂತೆ ಸೂಚಿಸಿದ್ದಾರೆ. ಇದೇ ರೀತಿಯೇ ಹಲವು ಬಿಪಿಎಲ್ ಕಾಡು೯ದಾರರಿಗೂ ತಿಳಿಸಿದ್ದರು.
 
 
 
ಮಾಸಾಂತ್ಯದವರೆಗೂ ಪಡಿತರ ನೀಡಬೇಕೆಂದು ಸರಕಾರದ ಆದೇಶವಿದ್ದರೂ, ಅಗತ್ಯವಾದ ಅಕ್ಕಿ 22ನೇ ತಾರೀಕಿಗೇ ಖಾಲಿಯಾಗಿರುವ ‌ಬಗ್ಗೆ ಮಹಿಳೆ ಪ್ರಶ್ನಿಸಿದಾಗಲೂ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಸರಿಯಾಗಿ ಉತ್ತರಿಸಲಿಲ್ಲ. ಈ ಹಿಂದೆಯೂ ಇದೇ ರೀತಿ ವತಿ೯ಸುತ್ತಿದ್ದರು.
 
 
 
ಇದರಿಂದ ಅಸಮಾಧಾನಗೊಂಡ ಮಹಿಳೆ ಮನೆಗೆ ಬಂದು ನೇರವಾಗಿ ಆಹಾರ ಸಚಿವ ಯು.ಟಿ. ಖಾದರ್ ಅವರ‌ ಮೊಬೈಲ್ ಗೆ ಕರೆ ಮಾಡಿ ತನಗೆ ಹಾಗೂ ಇತರ ಬಡ ಕುಟುಂಬದವರಿಗೆ ನ್ಯಾಯಬೆಲೆ ಅಂಗಡಿಯು ಸಮಪ೯ಕ ಪಡಿತರ ನೀಡದಿರುವ ಬಗ್ಗೆ ದೂರು ನೀಡಿದ್ದಾರೆ.
 
 
 
ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಚಿವ ಖಾದರ್, ಈ ಬಗ್ಗೆ ಕೂಡಲೇ ತನಿಖೆ ಮಾಡುವಂತೆ ದ.ಕ. ಆಹಾರ ಇಲಾಖೆ ಉಪನಿದೇ೯ಶಕ ಜಯಪ್ಪ ಅವರಿಗೆ ಸೂಚಿಸಿದ್ದರು. ಶಕ್ತಿನಗರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಆಹಾರ ಇಲಾಖೆ ನಿರೀಕ್ಷಕರು, ಅಲ್ಲಿದ್ದ ಇತರ ಕಾಡು೯ದಾರರನ್ನು ವಿಚಾರಿಸಿದಾಗಲೂ, ಪಡಿತರ ಅಕ್ಕಿ ನೀಡದಿರುವುದು ತಿಳಿದು ಬಂತು.
 
 
 
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಉಪನಿದೇ೯ಶಕರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಪಡಿತರ ನೀಡದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಈ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಪಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here