ನೋಡುತ್ತಿದ್ದಂತೆಯೇ ಸಂಗೀತ ಸಾಧನಗಳು ಛಿದ್ರಗೊಂಡವು!

0
2981

ನಿತ್ಯ ಅಂಕಣ:೭೩-ತಾರಾನಾಥ್‌ ಮೇಸ್ತ,ಶಿರೂರು
ನಿತ್ಯಾನಂದರ ನಡವಳಿಕೆಗಳು ಕೆಲವೊಮ್ಮೆ ಹುಚ್ಚರಂತೆ ಇರುತ್ತಿದ್ದವು. ಭಕ್ತರಿಗೆ ಕೆಲವೊಮ್ಮೆ ತಮಾಷೆಯಾಗಿ ಅಣುಕಾಗಿ ಕಾಣುತ್ತಿದ್ದವು. ಸ್ವಾಮಿಗಳು ಹೀಗೆ ಯಾಕೆ ವರ್ತಿಸುತ್ತಿದ್ದಾರೆ..? ಏನಾಗಿದೆ ಅವರಿಗೆ..? ಏಂದೆಲ್ಲಾ ಪ್ರಶ್ನೆಗಳು ಭಕ್ತರಲ್ಲಿ ಮೂಡುತ್ತಿದ್ದವು. ಭಕ್ತರು ನಿತ್ಯಾನಂದರಿಂದ ಉತ್ತರ ಪಡೆಯಲು ಧೈರ್ಯ ಸಾಲದೆ ಚಿಂತೆಗೊಳಾಗಿ ಸುಮ್ಮನಾಗಿರುತ್ತಿದ್ದರು.

ರಘುನಾಥ ಶೆಣೈ ಎನ್ನುವ ಭಕ್ತ ಯಾವತ್ತೂ ಕಾಂಞಂಗಾಡ್ ಆಶ್ರಮಕ್ಕೆ ಬರುತ್ತಿದ್ದ. ಆತ ಇಂಪು ಸ್ವರ ಹೊಂದಿರುವ ಗಾಯಕನಾಗಿದ್ದ. ಆಶ್ರಮದಲ್ಲಿ ಭಜಕರೊಂದಿಗೆ ದಾಸವರೇಣ್ಯರ ಭಜನೆಗಳನ್ನು ಭಜಿಸುತ್ತಿದ್ದ. ಭಜನೆ ಹಾಡುವಾಗ ತಾಳದ ಸದ್ದಿಗೆ, ಹಾರ್ಮೋನಿಯಂ ಮತ್ತು ತಬಲ ಹಿನ್ನೆಲೆ ವಾದನಗಳಿಂದ ಹೊರಡುವ ನಾದವು ಸೇರಿದರೆ ಸಂಕಿರ್ತನೆಯು ಪರಮಾನಂದ. ಹಾಗಾಗಿ ಭಕ್ತ ರಘುನಾಥ ಶೆಣೈ ಅವರು ಹೊಸದಾದ ಹಾರ್ಮೋನಿಯಂ ಹಾಗೂ ತಬಲವನ್ನು ಕಾಣಿಕೆಯಾಗಿ ನಿತ್ಯಾನಂದರಿಗೆ ಸಮರ್ಪಿಸುತ್ತಾರೆ. ಭಕ್ತನು ನೀಡಿದ ಎರಡು ಸಂಗೀತ ಪರಿಕರಗಳನ್ನು ನಿತ್ಯಾನಂದರು ಸ್ವೀಕರಿಸುತ್ತಾರೆ. ಆ ಸಂದರ್ಭ ರಘುನಾಥರು ಬಹಳವಾಗಿ ಸಂತೋಷ ಅನುಭವಿಸುತ್ತಾರೆ. ಆದರೆ ರಘುನಾಥರು ಸಂತೋಷ ಅನುಭವಿಸಿದ್ದು ಕ್ಷಣಹೊತ್ತು ಮಾತ್ರ…!

ರಘುನಾಥರ ಎದುರಿನಲ್ಲಿಯೇ ನಿತ್ಯಾನಂದರು, ಎರಡು ಸಂಗೀತ ಸಾಧನಗಳನ್ನು ನೆಲಕ್ಕೆ ಎಸೆದು ಛಿದ್ರಗೊಳಿಸುತ್ತಾರೆ..!. ಎಲ್ಲಾ ತುಂಡುಗಳನ್ನು ಒಟ್ಟುಗೂಡಿಸಿ ಆಯಕಟ್ಟಿನ ಸ್ಥಳದಲ್ಲಿ ರಾಶಿ ಹಾಕುತ್ತಾರೆ. ನಂತರ ರಾಶಿಗೆ ಬೆಂಕಿ ಇಟ್ಟು ನಾಶಗೊಳಿಸುತ್ತಾರೆ. ಹೊಗೆ ನಿಂತು ತಣ್ಣಾಗದ ಬಳಿಕ ಸಂಗೀತ ಪರಿಕರಗಳಿಂದ ಉತ್ಪತ್ತಿಯಾದ ಬೂದಿಯನ್ನು ಒಟ್ಟುಗೂಡಿಸುತ್ತಾರೆ. ಅದನ್ನು ಬಟ್ಟೆಯಲ್ಲಿ ಕಟ್ಟಿ ಆಶ್ರಮದ ಮೂಲೆಯಲ್ಲಿ ತೂಗಿಸಿಡುತ್ತಾರೆ. ಗುರುದೇವರ ವರ್ತನೆ ಕಂಡು ರಘುನಾಥರು ಗಾಬರಿಗೊಂಡು ದುಃಖಿತರಾಗುತ್ತಾರೆ. ತಾನು ನೀಡಿರುವ ಸಂಗೀತ ಪರಿಕರಗಳು ಗುರುದೇವರಿಗೆ ಇಷ್ಟವಾಗದೆ ಹೋಯಿತೇ..? ಏನಾದರು ನನ್ನಿಂದ ಪ್ರಮಾದ ನಡೆದಿದೆಯೇ..? ಹಾಗಾಗಿ ಅವರು ಕೋಪ ತೋರಿದರೆ..? ಎಂದೆಲ್ಲಾ ಯೋಚಿಸುತ್ತ ಮೌನವಾಗಿ ರಘುನಾಥರು ಸ್ವಾಮಿಗಳ ಸಿಟ್ಟಿನ ಪರಿಯನ್ನು ಕಂಡರು. ರಘುನಾಥನ ಕಂಡು ಗುರುದೇವರು, “ಏನು ನಿನಗೆ ಗಾಬರಿಯಾಯಿತೇ..?” ಹೆದರಬೇಡ, ನಿನ್ನ ಕಾಣಿಕೆಯ ಉಪಯೋಗವು ಮುಂದೆ ಬಹುಜನರಿಗೆ ಆಗುತ್ತದೆ, ಎಂದು ಹೇಳಿ ಸಮಾಧಾನ ಪಡಿಸಿದರು.

ಈ ಘಟನೆ ನಡೆದ ಬಳಿಕ ಕಾಂಞಂಗಾಡಿನ ಪರಿಸರದಲ್ಲಿ ಕಾಲರಾ ವ್ಯಾಧಿಯು ವ್ಯಾಪಿಸಿರುತ್ತದೆ. ವ್ಯಾಧಿ ಬಾಧಿತರು, ಜನರು ನಿತ್ಯಾನಂದರ ಬಳಿಗೆ ಪರಿಹಾರ ಪಡೆಯಲು ಬರಲಾರಂಭಿಸಿದರು. ಬಂದವರಿಗೆ ನಿತ್ಯಾನಂದರು ಸಂಗೀತ ಸಾಧನಗಳಿಂದ ತಯಾರಿಸಿದ ವಿಭೂತಿಯನ್ನು ಮದ್ದಾಗಿ ನೀಡಿದರು. ಆ ವಿಭೂತಿ ಪ್ರಸಾದ ಗುರುದೇವರಿಂದ ಸ್ವೀಕರಿಸಿದ ಜನರು ರೋಗ ಬಾಧೆಯಿಂದ ಪಾರಾದರು. ಕೊನೆಗೆ ರಘುನಾಥರು ಭವರೋಗ ವೈದ್ಯ ಗುರುದೇವರು ಸಂಗೀತ ಪರಿಕರಗಳ ಬೂದಿಯನ್ನು ಔಷಧಿಯಾಗಿಸಿದ್ದನ್ನು ಕಂಡು ವಿಸ್ಮಿತರಾದರು. ಗುರುದೇವರ ಲೀಲೆಯಂತೆ, ಕಾಲರ ಕಾಯಿಲೆಗೆ ಮದ್ದನ್ನು ಶಿರಡಿ ಸಾಯಿಬಾಬಾರು ಪ್ರಯೋಗಿಸಿದ್ದರು. ಅಕ್ಕಿಯ ಹುಡಿಯನ್ನು ಶಿರಡಿ ಬಾಬಾರು ಊರಿನ ಗಡಿ ಭಾಗದಲ್ಲಿ ಚೆಲ್ಲಿ ರೋಗ ಹರಡದಂತೆ ತಡೆಯೊಡ್ಡಿದ್ದರು. ಈ ಸಾಯಿನಾಥರ ಲೀಲೆಯು ಅವರ ಚರಿತೆಯಲ್ಲಿ ಉಲ್ಲೇಖಗೊಂಡಿದೆ. ಇಂತಹ ಅಸಾಮಾನ್ಯವಾದ ಲೀಲೆಗಳು ವ್ಯಕ್ತಗೊಳಿಸಲು ಸಿದ್ಧ ಯೋಗಿಗಳಿಂದ ಮಾತ್ರವೇ ಸಾಧ್ಯ ಎನ್ನಬಹುದು.

LEAVE A REPLY

Please enter your comment!
Please enter your name here