ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ

0
243

 
ವರದಿ/ಚಿತ್ರ: ಗುರು ಚರಣ್
ಕರಾವಳಿಯಲ್ಲಿಯೇ ಕುಡಿಯಲು ನೀರಿಲ್ಲವೆಂದಾದರೆ ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
 
ಶನಿವಾರ ರಾತ್ರಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರೊಂದಿಗೆ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮಾತುಕತೆ ನಡೆಸಿದ ಅವರು, ಕರಾವಳಿಯನ್ನು ಬರಡುಗೊಳಿಸುವ, ಬೇರೆಯವರಿಗೂ ಅನುಕೂಲವಾಗದ ಈ ಯೋಜನೆ ವಿರುದ್ಧ ಹೋರಾಟಕ್ಕೆ ಸ್ಥಳೀಯ ಸಂಸದ ನಳಿನ್ ಕುಮಾರ್ ಇದ್ದಾರೆ, ಅಲ್ಲದೆ ನಾನೂ ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
 
 
ಕೇಂದ್ರ ಸರ್ಕಾರ ಯೋಜನೆಯ ಮುಂದಿನ ಹಂತಗಳಿಗೆ ಮಂಜೂರಾತಿ ನೀಡದಂತೆ ತಡೆಯಬೇಕು ಎಂಬ ಹೋರಾಟಗಾರರ ಬೇಡಿಕೆಗೆ ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.
 
 
ಈ ಸಂದರ್ಭ ನೀರಾವರಿ ತಜ್ಞ ಎನ್ಐಟಿಕೆ ನಿವೃತ್ತ ಪ್ರೊಫೆಸರ್ ಎಸ್.ಜಿ.ಮಯ್ಯ ಎತ್ತಿನಹೊಳೆ ಯೋಜನೆಯಲ್ಲಿನ ತಪ್ಪು ಲೆಕ್ಕಾಚಾರಗಳನ್ನು ವಿವರಿಸಿ, 24 ಟಿಎಂಸಿ ನೀರು ಲಭ್ಯವಾಗುವುದು ಸಾಧ್ಯವಿಲ್ಲ, ಅಲ್ಲದೆ ಈ ಯೋಜನೆ ಕಾರ್ಯಗತಗೊಂಡರೆ ಪಶ್ಚಿಮ ಘಟ್ಟ ಮೇಲೆ ಆಗಬಹುದಾದ ದುಷ್ಪರಿಣಾಮದ ಬಗ್ಗೆ ಚಿತ್ರಣ ನೀಡಿದರು.
 
 
ಎಂ.ಜಿ.ಹೆಗ್ಡೆ ಮತ್ತು ರಾಮಚಂದ್ರ ಬೈಕಂಪಾಡಿ ಯೋಜನೆಯಲ್ಲಿರುವ ದೋಷಗಳ ಬಗ್ಗೆ ವಿವರಣೆ ನೀಡಿದರು.
ಸಂಸದ ನಳಿನ್ ಉಪಸ್ಥಿತಿಯಲ್ಲಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ರಾಜೀವ್ ಅಂಚನ್, ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಸಿರಾಜ್ ಅಡ್ಕರೆ, ರಹೀಂ ಮುಂತಾದವರಿದ್ದರು.

LEAVE A REPLY

Please enter your comment!
Please enter your name here