ನಿರ್ವಹಣೆ

0
390

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಇದೊಂದು ಕಥೆ. ಇದು ಕಥೆಯ ಹಾಗೆ ಕಾಣುತ್ತದೆಯಾದರೂ ಇದರ ಮೂಲಕ ತಿಳಿದುಕೊಳ್ಳು ಕಲಿಕೆಯ ಅಂಶವು ಬಹಳ ಮುಖ್ಯವಾಗಿದೆ. ಒಂದೂರಿನಲ್ಲಿ ಮೂರು ಇಲಿಗಳು ಇರುತ್ತದೆ. ಅವು ಆಹಾರವನ್ನು ಹುಡುಕಿಕೊಂಡು ಹೋಗುತ್ತದೆ. ಆಹಾರದ ಹುಡುಗಾಟ ನಡೆಸುತ್ತಾ ಹೋಗುತ್ತಿರುವಾಗ ಅವುಗಳ ಮುಂದೆ ದೊಡ್ಡದೊಂದು ಬೆಣ್ಣೆಯ ರಾಶಿ ಕಾಣಲು ಸಿಗುತ್ತದೆ. ಇದು ಅಂತಿಂತಹ ರಾಶಿಯಾಗಿರುವುದಿಲ್ಲ. ಒಂದು ಬೆಟ್ಟದಷ್ಟು ಎತ್ತರದ ಬೆಣ್ಣೆಯ ರಾಶಿಯಾಗಿರುತ್ತದೆ. ಇಲೀಗಳಿಗೆ ಬಹಳ ಸಂತೋಷವಾಯಿತು. ಅವು ಬೆಣ್ಣೆಯನ್ನು ತಿನ್ನಲು ಶುರು ಮಾಡುತ್ತದೆ.
 
 
 
ಇಲಿಗಳಿಗೆ ಈಗ ಒಂದೇ ಕೆಲಸ. ಬೆಣ್ಣೆ ತಿನ್ನುವುದು, ಅಲ್ಲೇ ಮಲಗುವುದು, ಏಳುವುದು-ತಿನ್ನವುದು-ಮಲಗುವುದು-ಈ ಪ್ರಕ್ರಿಯೆ ಸಾಗುತ್ತಿರುತ್ತದೆ. ಒಂದು ದಿನ ಒಂದು ಇಲಿಗೆ ಒಂದು ಸಂಶಯವು ಬರುತ್ತದೆ. ‘ಬೆಣ್ಣೆ ರಾಶಿಯೇನೋ ದೊಡ್ಡದಿದೆ. ಆದರೆ ಇಂತಹ ದೊಡ್ಡ ಬೆಣ್ಣೆಯ ರಾಶಿ ಕೂಡ ಒಂದಲ್ಲ ಒಂದು ದಿನ ಮುಗಿಯದೆ ಇರಲಾರದು. ಆಮೇಲೆ ಏನು ಮಾಡುವುದು?’-ಈ ಅನುಮಾನ ಬಂದ ತಕ್ಷಣ ಅದು ಮಿಕ್ಕೆರಡು ಇಲಿಗಳಿಗೆ ತನ್ನ ಅನುಮಾನವನ್ನು ಹೇಳುತ್ತದೆ. ಆದರೆ ಉಳಿದೆರಡು ಇಲಿಗಳು ಅದನ್ನು ಲೇವಡಿ ಮಾಡುತ್ತದೆ. “ಇಷ್ಟು ದೊಡ್ಡ ಬೆಣ್ಣೆಯ ರಾಶಿ ಇದೆ. ಇದು ಎಂದಾದರೂ ಮುಗಿಯಲು ಸಾಧ್ಯ. ಉಂಟಾ. ನಿನಗೆ ಬೇರೆ ಕೆಲಸವಿಲ್ಲ. ಸುಮಮ್ನೇ ತಿನ್ನು’ಎನ್ನುತ್ತದೆ. ಇಲಿ ತೆಪ್ಪಾಗುತ್ತದೆ. ಆ ಮೇಲೆ ಒಂದೆರಡು ದಿನಗಳ ಕಳೆದಾಗ ಈ ಇಲಿಗೆ ಮತ್ತೆ ಚಡಪಡಿಕೆ ಶುರುವಾಗುತ್ತದೆ. ಎಂತಹ ದೊಡ್ಡ ಬೆಣ್ಣೆಯ ರಾಶಿಯೂ ಕೂಡ ಒಂದಲ್ಲ ಒಂದು ದಿವಸ ಮುಗಿದು ಹೋಗಬಹುದು ಎಂಬ ವಿಚಾರಕ್ಕೆ ಅದು ಹೆಚ್ಚು ಅಂಟಿಕೊಂಡುಬಿಡುತ್ತದೆ. “ಇವರು ಏನಾದರೂ ಮಾಡಿಕೊಳ್ಳಲಿ, ನಾನಂತೂ ಆಹಾರದ ಬೇರೆ ಮೂಲವನ್ನು ಹುಡುಕಲೇಬೇಕು” ಎಂದುಕೊಂಡ ಅದು ಇನ್ನೊಂದು ಆಹಾರದ ಮೂಲವನ್ನು ಹುಡುಕಿಕೊಂಡು ಹೊರಟು ಹೋಗುತ್ತದೆ. ಉಳಿದೆರಡು ಇಲಿಗಳು ತಿನ್ನುವುದರಲ್ಲಿ ಮಗ್ನವಾಗಿರುತ್ತದೆ.
 
 
 
ಮತ್ತೆ ಕೆಲವು ದಿನಗಳು ಕಳೆದಾಗ ಉಳಿದೆರಡು ಇಲಿಗಳಲ್ಲಿ ಒಂದಕ್ಕೆ ಅನುಮಾನ ಶುರುವಾಗುತ್ತದೆ. “ಮೊದಲನೆಯ ಇಲಿ ಹೇಳಿದ್ದು ತಪ್ಪಲ್ಲ. ಇಂತಹ ದೊಡ್ಡ ಬೆಣ್ಣೆಯ ರಾಶಿಯೂ ಕೂಡ ಯಾವತ್ತಾದರೊಂದು ದಿವಸ ಮುಗಿದು ಹೋಗಲು ಸಾಧ್ಯವಿದೆ.” ಎಂದು ಅದಕ್ಕೆ ಅನಿಸುತ್ತದೆ. ಅದು ತನ್ನ ಅನುಮಾನವನ್ನು ಪಕ್ಕದಲ್ಲಿರುವ ಇಲಿಗೆ ಹೇಳುತ್ತದೆ. ಆಗ ಇದನ್ನು ಕೇಳಿಸಿಕೊಂಡ ಇಲಿಯು, ‘ನಿನ್ನದೂ ಅದೇ ಸಮಸ್ಯೆಯಾ. ನೀವುಗಳು ಏನಾದರೂ ಮಾಡಿಕೊಳ್ಳಿ. ಆದರೆ ನನಗಂತೂ ಖಾತ್ರಿ ಇದೆ, ಇಷ್ಟು ದೊಡ್ಡ ಬೆಣ್ಣೆಯ ರಾಶಿಯಂತೂ ಮುಗಿದು ಹೋಗಲು ಸಾಧ್ಯವೇ ಇಲ್ಲ” ಎನ್ನುತ್ತದೆ. ಒಂದೆರಡು ದಿನಗಳ ನಂತರ, ಅನುಮಾನಕ್ಕೆ ಒಳಗಾದ ಇಲಿಯು ತನ್ನ ಅನುಮಾನಕ್ಕೆ ಹೆಚ್ಚು ಅಂಟಿಕೊಳ್ಳುತ್ತದೆ. ಪ್ರತಿದಿನ ಬೆಳಗ್ಗೆ ಬೆಣ್ಣೆಯನ್ನು ತಿಂದು ಮಲಗುವ ಬದಲಿಗೆ ಪರ್ಯಾಯ ಆಹಾರ ಎಲ್ಲಿಯಾದರೂ ಇದೆಯೇ ಎಂದು ಹುಡುಕಲು ಹೋಗುತ್ತದೆ. ರಾತ್ರಿ ಹಿಂದಿರುಗಿ ಬೆಣ್ಣೆಯನ್ನು ತಿಂದು ಮಲಗುವ ಪದ್ಧತಿಯನ್ನು ಪ್ರಾರಂಭಿಸುತ್ತದೆ. ಮೂರನೆಯ ಇಲಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಗುವ ಬೆಣ್ಣೆಯನ್ನು ತಿಂದು ಅಲ್ಲೇ ಮಲಗುತ್ತದೆ.
 
 
 
ಈ ಮೂರು ಇಲಿಗಳಲ್ಲಿ ಯಾವ ಇಲಿಯ ನಿರ್ಧಾರ ಸರಿಯಾಗಿದೆಯೆಂದು ಅನಿಸುತ್ತದೆ? ತೀರ್ಮಾನವು ಈ ಕಥೆಯನ್ನು ಓದಿದವರಿಗೆ ಬಿಟ್ಟದ್ದು. ತೀರ್ಮಾನವು ಅವರವರ ಗುಣಸ್ವಭಾವವನ್ನು ಸೂಚಿಸುತ್ತದೆ. ಇದಕ್ಕೆ ಇಂಥಾದ್ದೇ ಸರಿಯಾದ ಉತ್ತರ ಎನ್ನುವುದು ಇಲ್ಲ. ಯಾಕೆಂದರೆ ಮೂರು ಸ್ವಭಾವಗಳೂ ಒಬ್ಬನೇ ವ್ಯಕ್ತಿಯಲ್ಲಿ ಇರುತ್ತದೆ. ಆದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವು ನಿರ್ವಹಣಾ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.
 
 
 
ಮುಂದುವರಿಯುವುದು..
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here