ನಿರ್ವಹಣಾ ಸಾಮರ್ಥ್ಯದ ಅಗತ್ಯತೆಗಳು

0
432

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ನಿರ್ವಹಣಾ ಸಾಮರ್ಥ್ಯವು ಕೆಲವು ಅಗತ್ಯತೆಗಳನ್ನು ಅವಲಂಬಿಸಿದೆ. ಅಂತಹ ಅಗತ್ಯತೆಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಯೋಜನೆ:
ನಿರ್ವಹಣೆಯು ಯಶಸ್ವಿಯಾಗಬೇಕಾದರೆ ಯಾವುದೇ ನಿರ್ದಿಷ್ಟ ಕಾರ್ಯದ ಕುರಿತು ಸರಿಯಾದ ಯೋಜನೆ ಇರಬೇಕು. ಆದರೆ ಯೋಜನೆಯೇ ಇಲ್ಲದ ಅನೇಕ ಕಾರ್ಯಗಳು ಸರಕಾರಿ ಮಟ್ಟದಿಂದ ಹಿಡಿದು ಕುಟುಂಬದ ತನಕ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಯೋಜನೆ ರಹಿತವಾದ ಕಾರ್ಯಗಳು ಕಾರ್ಯ ಪ್ರಾರಂಭವಾದ ತಕ್ಷಣದಿಂದ ಅನೇಕ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕಿಕೊಳ್ಳುತ್ತದೆ. ಯಾವುದೇ ಕಾರ್ಯವು ಯಾವ ರೀತಿ ನಡೆಯಬೇಕೆಂದರೆ ಉದ್ದೇಶಿಸಿದ ಕಾರ್ಯವು ಹೇಗೆ ನಡೆಯಬೇಕು ಎಂಬ ಬಗ್ಗೆ ಒಂದು ಯೋಜನೆ ಇರಬೇಕು. ಆ ಕಾರ್ಯವು ಅನುಷ್ಠಾನಕ್ಕೆ ಬಂದಾಗ ಯಾವ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ಯೋಚಿಸಿ ಆ ಸಮಸ್ಯೆಗಳನ್ನು ಹೇಗೆ ನಿವಾರಿಸಬೇಕು ಎನ್ನುವುದಕ್ಕೂ ಒಂದು ಯೋಜೆನ ಇರಬೇಕು.
 
 
2) ನಿರ್ವಹಣಾ ಸೌಲಭ್ಯಗಳು:
ನಿರ್ವಹಣೆಯ ಯಶಸ್ಸು ನಿರ್ವಹಣಾ ಸೌಲಭ್ಯಗಳ ಲಭ್ಯತೆಯನ್ನೂ ಅವಲಂಬಿಸಿರುತ್ತದೆ. ಉದಾಹರಣೆಗೆ ಜೀವ ಶಾಸ್ತ್ರವನ್ನು ಬೋಧಿಸುವ ಶಿಕ್ಷಕರು ಮಾನ ಹೃದಯದ ಚಿತ್ರವನ್ನು ಬರೆದು ಹೃದಯದ ಕಾರ್ಯಗಳನ್ನು ವಿವರಿಸಿದರೆ ಪಾಠದ ನಿರ್ವಹಣೆಯು ಯಶಸ್ವಿಯಾಗುತ್ತದೆ. ವರ್ಣ ಚಿತ್ರವನ್ನು ಬರೆದರೆ ಇನ್ನಷ್ಟು ಯಶಸ್ವಿಯಾಗುತ್ತದೆ. ಆದರೆ ಈ ರೀತಿ ನಿರ್ವಹಣೆಯನ್ನು ಮಾಡಬೇಕಾದರೆ ಬಣ್ಣದ ಚಾಕ್ ಪೀಸ್ ಗಳು ಬೇಕಾಗುತ್ತದೆ. ಹಾಗೆಯೇ ಪ್ರತಿಯೊಂದು ನಿರ್ವಹಣಾ ಸಾಮರ್ಥ್ಯವೂ ಸರಿಯಾಗಿ ನಿರ್ವಹಿಸಲು ಅನುಕೂಲವಾಗುವ ಸಾಧನ ಸಲಕರಣೆಗಳನ್ನು ಬಯಸುತ್ತದೆ.
 
 
3)ನಿರ್ವಹಣೆಯ ಅವಧಿ:
ಯಶಸ್ವಿ ನಿರ್ವಹಣೆಯು ನಿರ್ವಹಣೆಗೆ ಲಭವಿರುವ ಅವಧಿಯನ್ನು ಅವಲಂಬಿಸಿರುತ್ತದೆ. ಆ ಅವಧಿಯು ಉದ್ದೇಶಿಸಿದ ನಿರ್ವಹಣೆಯನ್ನು ಮಾಡಿ ಮುಗಿಸಲಾರದಷ್ಟು ಅಲ್ಪ ಅವಧಿಯೂ ಆಗಿರಬಾರದು. ನಿರ್ವಹಣೆಯ ಆಲೋಚನೆಯನ್ನು ಮುಂದೂಡುವಷ್ಟು ದೀರ್ಘಾವಧಿಯೂ ಆಗಿರಬಾರದು. ಉದಾಹರಣೆಗೆ ಶಿಕ್ಷಕರು ಒಂದು ಪಾಠವನ್ನು ಬೋಧಿಸಿದ ನಂತರ ನೋಟ್ಸ್ ಬರೆದುಕೊಂಡು ಬರೆಯಲು ಸೂಚಿಸುತ್ತಾರೆ. ನಾಳೆ ಬೆಳಗ್ಗೆಯೇ ನೋಟ್ಸ್ ಸಿದ್ಧವಾಗಬೇಕೆಂದರೆ ಸಮಯ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಇನ್ನಿತರ ನೋಟ್ಸ್ ಗಳನ್ನು ಸಿದ್ಧಪಡಿಸುವ ಕೆಲಸ ಇರುತ್ತದೆ. ಅಧ್ಯಯನ ಮಾಡುವ ಕೆಲಸವಿರುತ್ತದೆ. ವೈಯಕ್ತಿಕ ಕೆಲಸ ಕಾರ್ಯಗಳಿರುತ್ತದೆ. ಆಗ ಅವರ ನಿರ್ವಹಣೆಯಲ್ಲಿ ಅನೇಕ ದೋಷಗಳು ತಾನೇ ತಾನಾಗಿ ಕಂಡುಬರುತ್ತದೆ. ಒಂದೇ ನೋಟ್ಸ್ ನ್ನು ಮಾಡಿದರೆ ಸಾಕು ಎನ್ನುವ ಸಂದರ್ಭದಲ್ಲಿ ಕೂಡ ಸಂಜೆಯಿಂದ ಬೆಳಗಿನ ನಡುವಿನ ಅವಧಿಯಲ್ಲು ಸರಿಯಾಗಿ ನೋಟ್ಸ್ ಸಿದ್ಧಪಡಿಸುವುದು ಕಷ್ಟವಾಗುತ್ತದೆ. ಇದರ ಬದಲಿಗೆ ಮುಗಿಸಿದ ಪಾಠದ ನೋಟ್ಸ್ ನ್ನು 2 ತಿಂಗಳ ನಂತರ ಮಾಡಿಕೊಡಿ ಎಂದರೆ ಏನಾದೀತು? ವಿದ್ಯಾರ್ಥಿಗಳು ಇನ್ನೂ ಎರಡು ತಿಂಗಳು ಇದೆಯಲ್ಲ ಎಂದು ಆಲಾಸಿಗಳಾಗುತ್ತಾರೆ. ನಾಲ್ಕೈದು ದಿವಸ ಕಳೆದಾಗ ಆ ಕೆಲಸವನ್ನು ಮರೆತು ಬಿಡುತ್ತಾರೆ. ನಂತರ ಅದು ನೆನಪಾಗುವುದು ಕೊನೆಯ ಸಂದರ್ಭದಲ್ಲೆ. ಆಗಲೂ ನಿರ್ವಹಣಾ ದೋಷಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿರ್ವಹಣೆಗೆ ನಿಗದಿ ಮಾಡಿಕೊಳ್ಳದ ಅವಧಿಯು ತೀರಾ ಕರಿಮೆಯೂ ಆಗಬಾರದು. ತೀರಾ ಜಾಸ್ತಿಯೂ ಆಗಬಾರದು.
 
 
4) ನಿರ್ವಹಣೆಯ ಪರಿಸರ:
ಯಾವುದೇ ಕಾರ್ಯದ ಯಶಸ್ವಿ ನಿರ್ವಹಣೆಯು ನಿರ್ವಹಣಾ ಪರಿಸರವನ್ನು ಅವಲಂಬಿಸಿರುತ್ತದೆ. ನಿರ್ವಹಣ ಪರಿಸರವು ಅನುಕೂಲಕಾರಿಯಾಗಿದ್ದರೆ ನಿರ್ವಹಣೆಯಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸಬಹುದು. ನಿರ್ವಹಣೆಯ ಪರಿಸರವು ಪ್ರತಿಕೂಲಕರವಾಗಿದ್ದರೆ ಸಾಕಷ್ಟು ನಿರ್ವಹಣಾ ಸಿದ‍್ದತೆಯನ್ನು ನಡೆಸಲು ಅವಕಾಶ ಇರಬೇಕಾಗುತ್ತದೆ. ಅಲ್ಲದೆ ಸಾಕಷ್ಟು ನಿರ್ವಹಣಾ ಸಾಧನಗಳು ಇರಬೇಕಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿಕೊಳ್ಳುವಾಗ ಪ್ರವೇಶ ಪರೀಕ್ಷೆಯನ್ನು ನಡೆಸಿ ಶೇ.60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನೇ ತೆಗೆದುಕೊಂಡರೆ ಶಾಲಾ ಫಲಿತಾಂಶವು ಶೇ.100 ಬರುವಂತೆ ಬೋಧಿಸುವುದು ಬಹು ಸುಲಭ. ಆದರೆ ಏಳನೆಯ ತರಗತಿಯಲ್ಲಿ 15 ಅಂಕವನ್ನು ಪಡೆದ ವಿದ್ಯಾರ್ಥಿಗೆ ಅಂಕವನ್ನು ಕೊಟ್ಟು ಉತ್ತೀರ್ಣಗೊಳಿಸಿದ ವಿದ್ಯಾರ್ಥಿಯನ್ನು ಸೇರ್ಪಡೆಗೊಳಿಸಿಕೊಂಡ ಪ್ರೌಢ ಶಾಲೆಯಲ್ಲಿ ಶಾಲಾ ಫಲಿತಾಂಶವು ಎಸ್ ಎಸ್ ಎಲ್ ಸಿಯಲ್ಲಿ ಶೇ.ನೂರು ಬರುವಂತೆ ಬೋಧಿಸುವುದು ಬಹಳ ಕಷ್ಟ. ಆಗ ಇದಕ್ಕೆ ಸಾಕಷ್ಟು ಬೋಧನಾ ಸಲಕರಣೆ, ಸಮಯ, ವಿಶೇಷ ಕೌಶಲಗಳೆಲ್ಲ ಬೇಕಾಗುತ್ತದೆ. ಅವು ಲಭ್ಯವಾಗದಿದ್ದರೆ ನಿರ್ವಹಣೆಯು ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಪರಿಸರದ ಅಂಶಗಳು ಬಹಳ ಮುಖ್ಯವಾಗಿದೆ.
ಮುಂದುವರಿಯುವುದು
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here