ನಿತ್ಯ ಅಂಕಣ-೧೦೭ : ತಾರಾನಾಥ್ ಮೇಸ್ತ, ಶಿರೂರು.
ಕಾಂಞಂಗಾಡಿನ ದೇವರಾಯ ಪೈಗಳು ಶಾಲಾ ಶಿಕ್ಷಕರು. 1914 ರಿಂದ ನಿತ್ಯಾನಂದರ ಭಕ್ತರಾಗಿದ್ದರು. ಇವರನ್ನು ಗುರುದೇವರು ‘ಹೆಡ್ ಮಾಸ್ತರ್’ ಎಂದು ಸಂಭೋದಿಸಿ ಕರೆಯುತ್ತಿದ್ರು. ಪೈ ಮಾಸ್ತರು ಬಹಳ ವರ್ಷಗಳ ಕಾಲದಿಂದ ಗುರುದೇವರ ಸಂಪರ್ಕದಲ್ಲಿದ್ದರು. ಪೈಗಳೆಂದರೆ ಗುರುದೇವರಿಗೆ ಬಹಳ ಪ್ರೀತಿ. ಪೈ ಅವರಿಗೆ “ತಕ್ಷಣ ಗಣೇಶಪುರಿಗೆ ಬರಬೇಕು” ಎಂದು, ಕನಸಿನಲ್ಲಿ ಗುರುದೇವರು ಕಾಣಿಸಿಕೊಂಡು ಸಂದೇಶ ನೀಡಿದ್ದರು. ಅವರು ತಡಮಾಡದೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಗಣೇಶಪುರಿಗೆ ಬಂದು ತಲುಪುತ್ತಾರೆ. ಪೈಗಳು ಗುರುದೇವರು ಇದ್ದಲ್ಲಿಗೆ ದರ್ಶನ ಪಡೆಯಲು ತೆರಳುತ್ತಾರೆ. ದುಃಖಿತಗೊಂಡಿರುವ ಭಕ್ತರ ಸಮಾಧನ ಪಡಿಸುತ್ತಿದ್ದ ಗುರುದೇವರು, ನಡುವೆ ಮಾತು ಬದಲಿಸಿ, “ಹೆಡ್ ಮಾಸ್ತರ್” ಬಂದಿದ್ದಾರೆ ಕರಿಯಿರಿ ಎಂದು ಹೇಳುತ್ತಾರೆ. ಹೊರಗಡೆಯಿಂದ ಒಳಗೆ ಬಂದ ಪೈಗಳನ್ನು ಬಾಬರು ಸುಲಭವಾಗಿ ಗುರುತಿಸುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ಪೈಗಳ ಕಣ್ಣಲ್ಲಿ ನೀರು..! ಗುರುದೇವರ ಕಣ್ಣಲ್ಲಿಯೂ ನೀರು..! ಇದು ಭಕ್ತ ಗುರುದೇವರ ಸೂಕ್ಷ್ಮ ಸಂಬಂಧ ಹೇಗಿರುತ್ತದೆ ಎನ್ನುವುದರ ಸಾಕ್ಷಿ. ಹೀಗೆಯೇ ನಿತ್ಯಾನಂದರು ನೂರಾರು ಸದ್ಭಕ್ತರಿಗೆ ಸ್ವಪ್ನದಲ್ಲಿ ಗೋಚರ ನೀಡಿ ಗಣೇಶಪುರಿಗೆ ಆಹ್ವಾನ ನೀಡಿದ್ದರು. ಇನ್ನೂ ಕೆಲವು ಭಕ್ತರಿಗೆ ವಿವಿಧ ರೀತಿಯಲ್ಲಿ ತನ್ನಲ್ಲಿಗೆ ಬರಹೇಳಿದ್ದರು. ಭಕ್ತರು ಧಾವಿಸಿ ಬರುತಿದ್ದರು.
ಚಂದನ್ ನಿತ್ಯಾನಂದರ ಪರಮಭಕ್ತ ಇವರು ಕಾಂಞಂಗಾಡ್ ಆಶ್ರಮದ ಶ್ರಮದಾನಗೈಯುವ ಸೇವಾಕರ್ತ. ಗುರುದೇವರ ಅತೀ ಸಾಮಿಪ್ಯದ ಸಾಂಗತ್ಯ ಪಡೆದವನು. ಇವರು ಕಾಂಞಂಗಾಡಿನಿಂದ ಗುರು ಪೂರ್ಣಿಮೆಗೆಂದು ಗಣೇಶಪುರಿಗೆ ಬಂದಿದ್ದರು. ಚಂದನರು ಗುರುದೇವರ ಶರೀರ ವೇದನೆ ತಿಳಿದು ಊರಿಗೆ ತೆರಳದೆ ಸ್ವಾಮಿಗಳ ಸೇವೆಗೆ ತೊಡಗಿಸಿಕೊಂಡಿದ್ದರು. ಇದೊಂದು ಭಕ್ತನಿಗೆ ಒದಗಿಬಂದಿರುವ ಸುಯೋಗ ಎಂದು ಹೇಳಬಹುದು. 7 ನೇ ತಾರೀಖಿನ ದಿನವೇ ಸ್ವಾಮಿಗಳು ತನ್ನ ಸನಿಹ ಇರುವ ಚಂದನನಲ್ಲಿ “ನೀನು ಬರುವಾಗ ಕಸ್ತೂರಿ ತಂದಿರುವೆಯಾ..?” ಎಂದು ಕೇಳಿದ್ದರು. ಗುರುದೇವರು ಹೇಳಿದ ಮಾತು ಆಲಿಸದ ಚಂದನನ ಎದೆ ಧಸಕ್..! ಎಂದಿತು. ಒಮ್ಮೆಗೆ ಅಳಲಾರಂಭಿಸಿದ. ಭಕ್ತನಾದ ಚಂದನ್ ಅಳುವಿನಲ್ಲಿ ದೊಡ್ಡದಾದ ಸೂಚನೆ ಇತ್ತು. ಗುರುದೇವರು ಕಾಂಞಂಗಾಡ್ ಆಶ್ರಮದಲ್ಲಿ ಇದ್ದ ಸಮಯದಲ್ಲಿ ಚಂದನ್ ಬಳಿಯಲ್ಲಿ “ಯಾವಗಾದರೂ ಇದು (ಸ್ವಾಮೀಜಿ) ನಿನ್ನ ಬಳಿ ‘ಕಸ್ತೂರಿ’ಯನ್ನು ಕೇಳಿದರೆ, ನೀನು ಅದು ನನ್ನ “ಮಹಾಸಮಾಧಿ”ಯ ಸಮಯ ಎಂದು ಭಾವಿಸಿಕೊಳ್ಳಬೇಕು ಎಂದು ಹೇಳಿಟ್ಟಿದ್ದರು. ಅಂದು ದೇವರು ಆಡಿದ ಮಾತು ನೆನಪಾಗಿ ಚಂದನನಲ್ಲಿ ತಡೆಯಾಲಗದ ಅಳು ಹುಟ್ಟಿಸಿತು.
ಅಗಸ್ಟ್ 7 ನಡುರಾತ್ರಿ ಬಾಬಾರು ಮನದಾಳದಲ್ಲಿ ಹೆಪ್ಪುಗಟ್ಟಿದ್ದ ಮಾತುಗಳನ್ನು ಸನಿಹದಲ್ಲಿದ್ದವರಿಗೆ ಕೇಳುವಂತೆ ಹೊರ ಹೊಮ್ಮಿಸುತ್ತಾರೆ. ಪ್ರತಿಯೊಬ್ಬರು ಇಲ್ಲಿಗೆ ಬರುತ್ತಿದ್ದಾರೆ. ಹಣ ಮತ್ತು ಕೇವಲ ಹಣಕ್ಕಾಗಿ, ಹೆಚ್ಚು ಕೊಟ್ಟಷ್ಟು ಇನ್ನೂ ಬೇಕೆಂದು ಅಪೇಕ್ಷೆ ಪಡುತ್ತಾರೆ. ಅವರ ಅತಿಯಾದ ಆಶೆಗೆ ಕೊನೆ ಎಂಬುವುದಿಲ್ಲ. ಅವರು ನನ್ನಲ್ಲಿಗೆ ಮೊದಲು ಬಂದಾಗ, ಕಾಲ್ನಡಿಗೆಯಲ್ಲಿ ಕೆಲವೊಮ್ಮೆ ಸರಿಯಾಗಿ ಇರಲೂ ಇರದ ಸ್ಥಿತಿಯಲ್ಲಿ ಇದ್ದರು. ಮತ್ತವರಿಗೆ ಸೌಕರ್ಯಗಳು ದೊರೆತಾಗ, ಬಳಿಕ ಸುಖಿಗಳು. ಮತ್ತು ಐಷರಾಮಗಳು ಕೇಳಲ್ಪಟ್ಟವು. ಒಂದು ಕಾರು, ಒಂದು ಬಂಗಲೆ, ಹಾಗೆಯೇ ಮುಂದುವರಿಕೆ. ಮೊದಲಿನ ಪ್ರಾರ್ಥನೆಗಳೆಲ್ಲವು ಅನುಗ್ರಹಿಸಲ್ಪಟ್ಟಾಗ, ಅವರಿಗೆ ತೃಪ್ತಿಯಾಗಬಹುದೆಂದು ಊಹಿಸಿ, ಅವರು ಅದಾದ ಬಳಿಕ ಉತ್ತಮ ಮೌಲ್ಯಗಳನ್ನು ಆರಿಸುವರೆಂದು ತಿಳಿದರೆ, ಪುನಃ ಬೇರೊಂದು ಆಕಾಂಕ್ಷೆಗಳನ್ನು ಇಡಲ್ಪಡುತ್ತದೆ. ಕೊನೆಗಾಣದ ಆಸೆ ಆಕಾಂಕ್ಷೆಗಳ ವಾಹಿನಿಯಂತೆ ಈ ದೇಹವನ್ನು ಇನ್ನೂ ಹೆಚ್ಚುಕಾಲ ಉಳಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ. ಹಾಗಾಗಿಯೇ ನಾಳೆಯೇ ಸಮಾಧಿ. ನಾಗರಿಕ ಸಮಾಜದ ಬಣ್ಣ ಬಣ್ಣದ ಬದುಕು ನಿಜವಾಗಲೂ ಗುರುದೇವರಿಗೆ ಅರ್ಥವಾಗಿತ್ತು.
ಸನಿಹದಲ್ಲಿದ್ದ ಒರ್ವ ಭಕ್ತ ಕಣ್ಣೀರು ತಡೆಯಲಾರದೆ ಸ್ವಾಮಿಗಳ ಬಳಿ ಸಮಾಧಿಯನ್ನು ಮೂಂದೂಡುವಂತೆ ಅಂಗಲಾಚಿ ಬೇಡಿದ್ದನು. ಒಡನೆ ಭಗವಾನರು ಹೇಳಿದರು. ಅದು ಸಾಧ್ಯ..! ನಿಷ್ಕಾಮ ಭಕ್ತಿಯ ಭಾವನೆ, ಪ್ರೇಮಭಾವನೆ ತುಂಬಿದ ಕೆಲವು ಭಕ್ತರು ಮುಂದೆ ಬಂದು ಪ್ರಾರ್ಥಿಸಿದರೆ. ಇಲ್ಲಿ ಭಕ್ತ ಪುಂಡಲಿಕ ಅಂತವರು ಸುತ್ತಲು ಇದ್ದಾರೆಯೇ..? ಅಂತಹ ಒಬ್ಬನಿದ್ದರೆ ಸಾಕು ಸಮಾಧಿಯನ್ನು ರದ್ದುಪಡಿಸಲಾಗುವುದು. ಸನಿಹ ಇದ್ದ ಭಕ್ತನತ್ತ ತನ್ನ ತೋರು ಬೆರಳನ್ನು ತೋರಿಸಿ, ಗುರುದೇವರು ಕೇಳುತ್ತಾರೆ “ನಿನಗೆ ನಿಷ್ಕಾಮ ಭಕ್ತಿ ಇದೆಯಾ..?” ಎಂದು. ಆ ಭಕ್ತ ಕಣ್ಣೀರು ಹಾಕುತ್ತ ಇಲ್ಲವೆಂದು ಹೇಳುತ್ತಾರೆ.
ಅಗಸ್ಟ್-8, 1961ಮಂಗಳವಾರ ಬೆಳಿಗ್ಗೆ 9 ಗಂಟೆಗೆ ನಿತ್ಯಾನಂದರು ನಿರಂತರವಾಗಿ ಸೇವೆ ಮಾಡಿರುವ ಗೋಪಾಲ ಮಾಮಾ ಅವರನ್ನು ಸನಿಹ ಕರೆಯುತ್ತಾರೆ. ಅವರಲ್ಲಿ ” ಸ್ವಾಮಿ ಆಯಿತು. ಯೋಗಿ ಆಯಿತು. ಮಹಾತ್ಮ, ಪರಮಾತ್ಮ ಎಲ್ಲವೂ ಆಯಿತು. ಈಗ ಸ್ಥಿರ ಸಮಾಧಿ” ಎಂದು ಹೇಳುತ್ತಾರೆ. ಆ ಬಳಿಕ ನಿತ್ಯಾನಂದರು ಸುತ್ತಲಿದ್ದ ಎಲ್ಲಾ ಭಕ್ತರ ಉದ್ದೇಶಿಸಿ “ರಾಮ, ಕೃಷ್ಣ ಎಲ್ಲರಿಗೂ ಶರೀರ ಬೀಡಬೇಕಾಯಿತು. ಶರೀರ ಬಿಡುವುದೆಂದರೆ ಬಟ್ಟೆ ಬರೆ ಬದಲಾಯಿಸುವುದು. ತುಂಬ ಜನ ದರ್ಶನಕ್ಕೆ ಬರುತ್ತಾರೆ. ಎಲ್ಲರಿಗೂ ದರ್ಶನ ಸಿಗಲಿ. ಯಾರ ಮನಸ್ಸೂ ನೋವಾಗಿಸುವುದ ಬೇಡ” ಎಂದು ಹೇಳುತ್ತಾರೆ.
ನಂತರದ ಗುರುದೇವರ ಕ್ಷೀಣಸ್ವರದ ಮಾತು, “ಇನ್ನು ನಾನು ಸಮಾಧಿ ತೆಗೆದುಕೊಳ್ಳುತ್ತೇನೆ. ನಾನು ಸಮಾಧಿಸ್ಥನಾದರೂ ಇಲ್ಲಿಯೇ ಇದ್ದೇನೆ. ಆದುದರಿಂದ ನಿಮಗೆ ಹೇಳುತ್ತಿದ್ದೇನೆ ಏನೆಂದರೆ, ನಿರ್ಮಲ ಮನ ನಿಶ್ಚಲ ಮನ ಮತ್ತು ವಿಶಾಲ ಮನ ಇರಲಿ. ಯಾವನು ಈ ನಿಯಮ ಪಾಲಿಸುತ್ತಾನೋ ನಾನು ಅವರ ಹಿಂದಿನಿಂದ ಇದ್ದೇನೆ”. ನನ್ನ ಸಮಾಧಿ ನಿರ್ಮಾಣ ನಡೆಯಲಿ. ಮತ್ತು ನನ್ನ ಸಮಾಧಿಯ ದರ್ಶನ ಪಡೆಯಲು ಬಂದವರಿಗೆ ಯಾವುದೇ ಉಪಟಳವಾಗದೆ ದರ್ಶನ ಸಿಗುವಂತಾಗಲಿ.
ಅನಂತರ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಗಳು ಶಾಂತವಾದರು. ಅಲ್ಲಿದ್ದ ಭಕ್ತರು ಕಣ್ಣೀರು ಹಾಕುತ್ತ ನಿಂತಿದ್ದರು. ಅಗಸ್ಟ್-8, 1961 ಮಂಗಳವಾರದ ದಿನ ಸರಿ ಸುಮಾರು ಬೆಳಗ್ಗಿನ ಸಮಯ 10- 43 ರ ಶುಭಗಳಿಗೆಯಲ್ಲಿ ಭಕ್ತಉದ್ಧಾರಕ ನಿತ್ಯಾನಂದರು ಬೆಂಗಳೂರು ವಾಲಾ ಧರ್ಮಛತ್ರದ ಮೊದಲ ಮಹಡಿಯ ಸಭಾಂಗಣದಲ್ಲಿ ಮಹಾಸಮಾಧಿ ಪಡೆದರು. ಕಲಿಯುಗದಲ್ಲಿ ದಿವ್ಯಶಕ್ತಿಯಾಗಿ ಅವತರಿಸಿದ ದೇವರು ಅವತಾರ ಸಮಾಪನಗೊಳಿಸಿದರು. ಲಕ್ಷೋಪಲಕ್ಷ ಭಕ್ತರ ಕಣ್ಣುಗಳು ಅವರಿಗರಿಯದೆ ತೇವಗೊಂಡವು. ಭಕ್ತರ ಆಕ್ರಂದನದ ಕೂಗು ನಭೋಮಂಡಲದಡೆಗೆ ಮುಟ್ಟಿತು…