“ನಿನ್ನಲ್ಲಿ 1336 ರೂಪಾಯಿ ಮತ್ತು 13 ಅಣೆಗಳಿವೆ”

0
1969

ನಿತ್ಯ ಅಂಕಣ-೯೫ : ತಾರಾನಾಥ್‌ ಮೇಸ್ತ, ಶಿರೂರು.
ಪಾವನಪವಿತ್ರ ಕ್ಷೇತ್ರ “ವಜ್ರೇಶ್ವರಿ” ಇಲ್ಲಿಗೆ ಅಂದಾಜು 1933 ರ ಸುಮಾರಿಗೆ ನಿತ್ಯಾನಂದ ಸ್ವಾಮಿಗಳ ಆಗಮನವಾಗುತ್ತದೆ. ಇಲ್ಲಿಯೇ ಅವರು ಹಲವು ಸಮಯ ಮೊಕ್ಕಾಂನಲ್ಲಿ ಇರುತ್ತಾರೆ. ಇಲ್ಲಿಂದ ಪುನಃ ಅವರು ಅಕ್ರೋಲಿಗೆ ತೆರಳುತ್ತಾರೆ. ‘ಅಕ್ರೋಲಿ’ ಶ್ರೀರಾಮಚಂದ್ರ ವನವಾಸದಲ್ಲಿದ್ದಾಗ ಈ ಭಾಗದಲ್ಲಿ ಕೆಲವು ದಿನ ಕಳೆದಿದ್ದರು. ಇಲ್ಲಿಯ ತ್ರಿಭುವನೇಶ್ವರ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ಊರಿನಲ್ಲಿ ಶ್ರೀರಾಮ ದೇವರಿಗೆ, ದೈಹಿಕ ವ್ಯಾಧಿ ಬಾಧಿತ ವೃದ್ಧ ಬ್ರಾಹ್ಮಣನ ಭೇಟಿಯಾಗುತ್ತದೆ. ಅಸಹಾಯಕ ಬ್ರಾಹ್ಮಣನ ಮೇಲೆ ರಾಮದೇವರು ಕೃಪೆ ತೋರುತ್ತಾರೆ. ಅಲ್ಲಿಯ ಸೂರ್ಯಕುಂಡದಲ್ಲಿ ತೀರ್ಥಸ್ನಾನ ಮಾಡಲು ಸಲಹೆ ನೀಡುತ್ತಾರೆ. ಆ ಬಳಿಕ ರಾಮದೇವರ ಅನುಗ್ರಹದಿಂದ ವೃದ್ಧ ಬ್ರಾಹ್ಮಣನು ರೋಗದಿಂದ ಮುಕ್ತನಾಗುತ್ತಾನೆ. ಎಂಬ ಪೌರಾಣಿಕ ಕಥೆ ಇದೆ.
ಇಂತಹ ಪುರಾಣ ಪ್ರಸಿದ್ಧ ಕ್ಷೇತ್ರವು ಭಗವಾನ್ ನಿತ್ಯಾನಂದರ ಪಾದಸ್ಪರ್ಶ ಪಡೆಯುತ್ತದೆ. ಅಲ್ಲಿರುವ ರಾಮೇಶ್ವರ ಮಂದಿರದ ಸನಿಹ ಇರುವ ಮರದಡಿಯಲ್ಲಿ ಬಾಬಾರು ವಾಸ್ತವ್ಯ ಹೂಡಿದ್ದರು. ಸೂರ್ಯಕುಂಡದಲ್ಲಿ ಅವರ ಸ್ನಾನ ಮಾಡಿಕೊಂಡಿದ್ದರು. ಆ ಸಮಯ ಅಕ್ರೋಲಿ ಒಂದು ಭಯಾನಕ ಪ್ರದೇಶವಾಗಿತ್ತು. ದಟ್ಟವಾದ ಕಾನನ ಪ್ರದೇಶ. ಹುಲಿ, ಚಿರತೆ ಮೊದಲಾದ ಉಗ್ರ ಪ್ರಾಣಿ ಸಂಕುಲಗಳ ಸಂಚಾರ ಇದ್ದಿತು. ವಿಷಜಂತು ಉರಗಾದಿಗಳು ತಿರುಗಾಡಿಕೊಂಡಿದ್ದವು. ವಜ್ರೇಶ್ವರಿಯಿಂದ ಅಕ್ರೋಲಿಗೆ ನಡೆದಾಡಲು ಕಾಲುದಾರಿಯ ವ್ಯವಸ್ಥೆ ಮಾತ್ರ ಇತ್ತು. ಕತ್ತಲಾದಂತೆ ಕಳ್ಳ ಕಾಕರ ಸುಲಿಗೆ ನಡೆಯುವ ಭಯವು ಇತ್ತು. ದಾರಿಯ ಉದ್ದಕ್ಕೂ ಪೊದೆ ಗಿಡ ಗಂಟಿ ಮುಳ್ಳುಗಳಿದ್ದವು. ಇಂತಹ ಪ್ರದೇಶದಲ್ಲಿ ಆದಿವಾಸಿಗಳು ಬದುಕು ಸಾಗಿಸುತ್ತಿದ್ದರು. ಇಂತಹ ಎರಡು ಪವಿತ್ರ ಕ್ಷೇತ್ರಗಳ ಅಭಿವೃದ್ಧಿ ಪಡಿಸಲು ಭಗವಾನ್ ನಿತ್ಯಾನಂದರು ಸಂಕಲ್ಪಿಸುತ್ತಾರೆ. ಮುಂದೆ ಬಾಬಾರಿಂದ ಕುಗ್ರಾಮದ ಚಿತ್ರಣವು ಬದಲಾಗುತ್ತದೆ.
ನಿತ್ಯಾನಂದರು ವಜ್ರೇಶ್ವರಿ ಮತ್ತು ಅಕ್ರೋಲಿ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿ ನಡೆಸುವ ಉಸ್ತುವಾರಿಯನ್ನು ನೋಡಿಕೊಳ್ಳಲು, ನಂಬಿಕೆಯ ಭಕ್ತನಾದ ಶ್ರೀಹರಿಭಾವ ತಾಂಬೆ ಅವರಿಗೆ ವಹಿಸಿದ್ದರು. ಅದಕ್ಕೆಂದೆ ಸ್ವಾಮಿಗಳು 31 ಸಾವಿರ ಹಣವನ್ನು ಅವರಲ್ಲಿ ನೀಡಿಟ್ಟಿದ್ದರು. ಆ ಹಣ ಬಳಸಿಕೊಂಡು ಶ್ರೀಹರಿಭಾವ ತಾಂಬೆ ಅವರು ಗುರುದೇವರ ನಿರ್ದೇಶನದಂತೆ ತಾವು ಖುದ್ದಾಗಿ ನಿಂತು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಆದರೆ ಅಷ್ಟೊಂದು ಕೆಲಸ ಕಾರ್ಯಗಳು ಪ್ರಮಾಣಿಕವಾಗಿ ನಡೆಸಿದರೂ, ಅವರ ಮೇಲೆ ಮತ್ಸರದ ಜನರು, ಬಾಬಾರು ನೀಡಿದ ಹಣವನ್ನು ಹರಿಭಾವು ಅವರು ದುರುಪಯೋಗ ಮಾಡಿದ್ದಾರೆ ಎಂದು ಅಪಾದಿಸಿ, ಗುಸು ಗುಸು ಸುದ್ದಿ ಹಬ್ಬಿಸುತ್ತಾರೆ.
ಹರಿಭಾವು ಜನರ ಇಲ್ಲಸಲ್ಲದ ಅರೋಪಗಳಿಗೆ ಮನನೊಂದು ಸತ್ಯಾಂಶ ಹೊರಗಿಡಲು ಲೆಕ್ಕ ಪತ್ರದ ದಾಖಲೆಗಳನ್ನು ತೆಗೆದುಕೊಂಡು ಬಾಬಾರಿರುವ ವೈಕುಂಠ ಆಶ್ರಮಕ್ಕೆ ತೆರಳುತ್ತಾರೆ. ಭಕ್ತ ಹರಿಭಾವುನ್ನು ಕಂಡು ಸ್ವಾಮಿಗಳು, “ನಿನ್ನಲ್ಲಿ 1336 ರೂಪಾಯಿ ಮತ್ತು 13 ಅಣೆಗಳಿವೆ” ಎಂದು ಹೇಳುತ್ತಾರೆ. ಸ್ವಾಮಿಗಳ ನುಡಿ ಕೇಳಿ ಹರಿಭಾವ ತಾಂಬೆ ಅವರು ಒಮ್ಮೆಗೆ ಅಚ್ಚರಿಗೆ ಒಳಗಾಗುತ್ತಾರೆ. ಅಷ್ಟೇ ಹಣವನ್ನು ಅವರು ಗುರುದೇವರಿಗೆ ಒಪ್ಪಿಸಲು ತಂದಿದ್ದರು. ಆದರೆ ಹಣವನ್ನು ಮಾತ್ರ ಗುರುದೇವರು ಸ್ವೀಕರಿಸುವುದಿಲ್ಲ. ತ್ರಿಕಾಲಜ್ಞಾನಿ ಗುರುದೇವರಿಗೆ, ಹರಿಭಾವ ಓರ್ವ ಸೇವಾ ಮನೋಭಾವದ ಭಕ್ತ ಸಂಪೂರ್ಣ ವಿಶ್ವಾಸಪೂರ್ಣ ಸಜ್ಜನ ವ್ಯಕ್ತಿ ಎಂದು ತಿಳಿದಿರುತ್ತದೆ. ಆತ ಗುರುದೇವರ ಪ್ರೀತಿಗೆ ಒಳಗಾದ ಭಕ್ತನಾಗಿದ್ದನು!

LEAVE A REPLY

Please enter your comment!
Please enter your name here