ನಿತ್ಯೋತ್ಸವ ಕವಿ ನಿಸಾರ್‌ ನಿಧನ

0
949

ಬೆಂಗಳೂರು: ಪ್ರತಿಯೊಬ್ಬ ಕನ್ನಡಿಗರ ಮನಗೆದ್ದ ‘ಜೋಗದ ಸಿರಿ ಬೆಳಕಿನಲ್ಲಿ ಹಾಡಿನ ಕತೃ ಕರುನಾಡಿನಾದ್ಯಂತ ‘ನಿತ್ಯೋತ್ಸವ’ ಕವಿ ಎಂದೇ ಪ್ರಸಿದ್ಧಿ ಪಡೆದ ಕೆ.ಎಸ್. ನಿಸಾರ್ ಅಹಮದ್ ಅವರು ಇಂದು ನಿಧನಹೊಂದಿದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಅವರನ್ನು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಮೃತಪಟ್ಟಿದ್ದಾರೆ . ತನ್ಮೂಲಕ ಕನ್ನಡ ಸಾರಸ್ವತ ಲೋಕ ಬರಡಾದಂತಾಗಿದೆ.ಹಿರಿಯ ಸಾಹಿತಿಯ ಅಗಲುವಿಕೆ ಕರುನಾಡಿಗೆ ತುಂಬಲಾರದ ನಷ್ಟ ಉಂಟಾಗುವಂತಾಗಿದೆ.
ನಿಸಾರ್ ಅಹಮದ್ ಅವರು 1936ರ ಫೆಬ್ರವರಿ 5ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕೆ.ಎಸ್. ಹೈದರ್ ಮತ್ತು ತಾಯಿ ಷಾನ್ ವಾಜ್ ಬೇಗಂ. ಭೂವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದ ನಿಸಾರ್ ಅವರು ಬೆಂಗಳೂರು, ಶಿವಮೊಗ್ಗ, ಗುಲ್ಬರ್ಗಾ ಸೇರಿದಂತೆ ನಾಡಿನ ಹಲವು ಕಡೆಗಳಲ್ಲಿ ಪ್ರಾದ್ಯಾಪಕಾರಾಗಿ ಸೇವೆಯನ್ನು ಸಲ್ಲಿಸಿದ್ದರು. ನಿಸಾರ್‌ ಅವರ ಲೇಖನಿಯಿಂದ ಅದ್ಭುತ ಸಾಹಿತ್ಯ ಸಿರಿ ಹೊರಹೊಮ್ಮುತ್ತಿತ್ತು. ತನ್ನ ಜೀವಿತಾವಧಿಯುದ್ದಕ್ಕೂ ಅನೇಕಾನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ:

2003ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊಫೆಸರ್ ನಿಸಾರ್ ಅಹಮದ್ ಸಮರ್ಥವಾಗಿ ಸಮ್ಮೇಳನ ಮುನ್ನಡೆಸಿದ್ದರು . ಕೇಂದ್ರ ಸರಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಗೌರವಕ್ಕೂ ಭಾಜನರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಸೋವಿಯತ್ ನೆಹರೂ ಪುರಸ್ಕಾರ, ಕರ್ನಾಟಕ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳು ನಿಸಾರ್‌ ಅವರನ್ನು ಅರಸಿ ಬಂದಿವೆ.

ಎಂ.ಸಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ಎಲ್. ಗುಂಡಪ್ಪ ಮೊದಲಾದ ಗುರುಗಳ ಪ್ರಭಾವಕ್ಕೊಳಗಾಗಿದ್ದ ನಿಸಾರ್ ತದನಂತರದಲ್ಲಿ ಸಾಹಿತ್ಯ ಕೃಷಿಗೆ ತೊಡಗಿದ್ದರು.
ನಿಸಾರ್ ಅಹಮ್ಮದ್ ಅವರು ಕರ್ನಾಟಕದ ಜನಸಾಮಾನ್ಯರಿಗೂ ಪರಿಚಿತರಾದದ್ದು ‘ನಿತ್ಯೋತ್ಸವ’ ಕವನ ಸಂಕಲನದ ಮೂಲಕ. ಅದರಲ್ಲಿನ ಜನಪ್ರಿಯ ಗೀತೆಯಾದ ‘ಜೋಗದ ಸಿರಿ ಬೆಳಕಿನಲ್ಲಿ… ಕವನದ ಮೂಲಕ. ಈ ಕವನ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ ಎಂದರೆ ತಪ್ಪಲ್ಲ.

ಮನಸು ಗಾಂಧಿ ಬಜಾರು, ನೆನದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಸಮಗ್ರ ಕವಿತೆಗಳು, ನವೋಲ್ಲಾಸ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು ಇವೆಲ್ಲ ನಿಸಾರ್‌ ಅವರ ಪ್ರಮುಖ ಕವನ ಸಂಕಲನಗಳು.

Advertisement

ಸಂತಾಪ : ನಿತ್ಯೋತ್ಸವ ಕವಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿಗಳು, ಕಲಾವಿದರು, ಗಾಯಕರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here