ನಿತ್ಯಾನಂದರ ಜನ್ಮರಹಸ್ಯ ನಿಗೂಢವಾಗಿದೆ!

0
768

ನಿತ್ಯ ಅಂಕಣ-೧೭

ಲೋಕದಲ್ಲಿ ಸಕಲ ಜೀವ ಸಂಕುಲಗಳನ್ನು ಸೃಷ್ಠಿಸುವಾಗ, ಸೃಷ್ಠಿಕರ್ತನಾದ ದೇವರು ಕೆಳವರ್ಗ- ಮೇಲ್ವರ್ಗ ಎಂದು ಖಂಡಿತವಾಗಿ ಸೃಷ್ಠಿಸಿರುವುದಿಲ್ಲ. ಮನುಕುಲದಲ್ಲಿ ಮಾತ್ರ ಅಜ್ಞಾನಿಗಳಿಂದಾಗಿ ಆ ಜಾತಿ ಈ ಜಾತಿ ಎಂಬ ವರ್ಗಿಕರಣವು ನಡೆಯಿತು. ಸಮಾಜದಲ್ಲಿ ಕೆಳವರ್ಗ ಎಂದು ಕರೆಯಿಸಲ್ಪಟ್ಟವರು ನಾಗರಿಕ ಸಮಾಜದಲ್ಲಿ ನರಕಯಾತನೆಯ ಬದುಕು ಸಾಗಿಸ ಬೇಕಾಯಿತು. ಶೋಷಣೆಗೆ ಒಳಪಡ ಬೇಕಾಯಿತು. ದಬ್ಬಾಳಿಕೆ ಎದುರಿಸ ಬೇಕಾಯಿತು. ಇಂತಹ ಸಮಯೋಚಿತ ಸಂದರ್ಭದಲ್ಲಿ ಸಮಾಜಸುದಾರಕ ವಿಶ್ವಸಂತ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜನನವಾಯಿತು. ಅವರು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಭಾವೈಕ್ಯತಾ ಸುಗುಣ ಸಂದೇಶ ಸಾರಿದರು. ಧಾರ್ಮಿಕ ಮಹಾಕ್ರಾಂತಿಯನ್ನು ನಡೆಸಿದರು. ಬ್ರಹ್ಮಶ್ರೀ ಅವರ ಭವ್ಯಕೃಪೆಯಿಂದ ಕೆಳವರ್ಗ ಎಂದು, ತುಳಿತಕ್ಕೆ ಒಳಪಟ್ಟವರು ಕೆಲವರು ಸಮಾಜದ ಮುಖ್ಯವಾಹಿನಿಗೆ ಸೇರಿಕೊಂಡರು. ನಿತ್ಯಾನಂದ ಸ್ವಾಮೀಜಿಗಳ ಕಾಲಘಟ್ಟದಲ್ಲಿಯೂ ಜನಾಂಗೀಯ ಶೋಷಣೆಗಳು ಮೇಲು ಕೀಳೆಂಬ ಭಾವನೆಗಳು ಬಹಳವಾಗಿ ಹಬ್ಬಿದ್ದವು. ಆಗಲೂ ಜಾತಿ ವ್ಯಾಧಿ ಸಂಪೂರ್ಣ ನಿರ್ಮೂಲನೆವಾಗದೆ ಜೀವಂತ ಇದ್ದಿತ್ತು. ನಿತ್ಯಾನಂದರು ತನ್ನಲ್ಲಿ ಬರುವ ಎಲ್ಲಾ ಧರ್ಮದ ಭಕ್ತರನ್ನು ಅನುಗ್ರಹಿಸುತ್ತಿದ್ದರು. ತನ್ನ ಪರಮ ಭಕ್ತರಾದ ಕ್ರಿಶ್ಚನ್ ಧರ್ಮದ ಡೇವಿಡ್, ಮುಸ್ಲಿಂ ಧರ್ಮದ ಕರೀಂ ಫಿರ್ ಸಾಹೇಬ್ ಅವರನ್ನು ಅನುಗ್ರಹಿಸಿದ್ದರು. ನಿತ್ಯಾನಂದರಲ್ಲಿ ಅನುಗ್ರಹ ಪಡೆದವರಲ್ಲಿ ಎಲ್ಲಾ ಜಾತಿಯವರು, ಅನ್ಯ ಧರ್ಮಿಯರು, ಭಕ್ತರು ಸಾವಿರಾರು. ಈ ಅನ್ಯಧರ್ಮದ ಡೇವಿಡ್ ಸ್ವಾಮೀಜಿ, ಕರೀಂ ಫೀರ್ ಸ್ವಾಮೀಜಿ ಇರ್ವರು ಮುಂದೆ ಸಂತರಾಗಿ ಗುರುದೇವರ ಆರಾಧಕರಾಗಿ ನಿತ್ಯಾನಂದರ ಆಶ್ರಮ ಕಟ್ಟಿಸಿಕೊಂಡು ಆಧ್ಯಾತ್ಮ ಜೀವನ ನಡೆಸುತ್ತಾರೆ. ನಿತ್ಯಾನಂದರು ತಾವು ಯಾವ ಜಾತಿಯ ಮಾತೆಯ ಉದರಗರ್ಭದ ಸಂಜಾತ ಎಂಬುವುದು ಭಕ್ತರಿಗೆ ತಿಳಿದು ಬಂದಿಲ್ಲ. ಆ ಬಗ್ಗೆ ದಾಖಲೆಯು ಲಭ್ಯವಾಗಿಲ್ಲ. ನಿತ್ಯಾನಂದರ ಜನ್ಮರಹಸ್ಯ ನಿಗೂಢವಾಗಿದೆ. ಇದೆಲ್ಲವು ದೇವರ ಅವತಾರದ ಲೀಲೆ.

ಚಿತ್ರ ಕೃಪೆ: ಅಂತರ್ಜಾಲ

ಒಮ್ಮೆ ನಿತ್ಯಾನಂದರು ಉದ್ಯಾವರ ಸಮೀಪದ ಬಲಾಯಿಪಾದೆ ಎಂಬ ಪರಿಸರದಲ್ಲಿ ಕಂಡುಬರುತ್ತಾರೆ. ಆ ಪ್ರದೇಶವು ಕೊರಗ ಜನಾಂಗದವರು ಮತ್ತು ದಲಿತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಾಗಿದ್ದವು. ಅವರೆಲ್ಲರು ಅಲ್ಲಿ ಹುಲ್ಲಿನ ಮನೆ ಮತ್ತು ತೆಂಗಿನ ಗರಿಗಳಿಂದ ಹಣೆದು ಮಾಡಿದ ಮಡಲಿನ ಮನೆಯಲ್ಲಿ ವಾಸಿಸುತ್ತಿದ್ದರು. ಅವರೆಲ್ಲರ ಬದುಕು ಬಲು ಕಷ್ಟಕರವಾಗಿತ್ತು. ಅವರೆಲ್ಲರೂ ಜನಾಂಗಿಯ ಶೋಷಣೆಗೆ ಒಳಪಟ್ಟು ಮಾನವ ಸಂಬಂಧಗಳಿಂದ ಬಲು ದೂರವೇ ಉಳಿದಿದ್ದರು. ಅವರು ಮುಗ್ದ ಮನಸ್ಸಿನವರಾಗಿ ಸಜ್ಜನರಾಗಿ ಬದುಕುಸಾಗಿಸುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಅಲ್ಲಿಯ ಒಂದು ಕೊರಗರ ಮನೆಗೆ ನಿತ್ಯಾನಂದರು ಹೋಗುತ್ತಾರೆ. ಅಂಗಳದಲ್ಲಿ ಬೆತ್ತಲಾಗಿ ಓಡಾಡುತ್ತಿರುವ ಹತ್ತಾರು ಮಕ್ಕಳಿಗೆ ಆಟ ಆಡಿಸುತ್ತಾರೆ. ನಂತರ ನಿತ್ಯಾನಂದರು ಮನೆಯವರಲ್ಲಿ ಊಟ ಕೇಳುತ್ತಾರೆ. ಮನೆಯವರಿಗೆ ದಿಕ್ಕು ತೋಚದಾಗುತ್ತದೆ. ಬಂದ ಕೌಪಿನಧಾರಿಯ ಪರಿಚಯವು ಅವರಿಗಿರುವುದಿಲ್ಲ. ಮನೆ ಬಾಗಿಲಿಗೆ ಬಂದವರು ಗುರುದೇವರೆಂಬುವುದು ಅವರಿಗೆ ತಿಳಿದು ಬರುವುದಿಲ್ಲ. ಕೆಳವರ್ಗದವರಿಗೆ ದೇವಾಲಯದೊಳಗೆ ಪ್ರವೇಶ ಪಡೆಯಲು ಅವಕಾಶ ಇಲ್ಲದ ಸಮಯ ಅದು. ದೇವರೇ ಇವರ ಮನೆ ಬಾಗಿಲಿಗೆ ಬಂದರೆಂದರೇ..! ನಿಜವಾಗಲು ಅವರು ಭಾಗ್ಯವಂತರು ಎನ್ನಬೇಕು.

ಮನೆಯವರು ಊಟ ಬಡಿಸಲು ತಡವರಿಸಿದಾಗ… ನಿತ್ಯಾನಂದರು ಬಿಸಿ ಮಾಡಿ ಇಟ್ಟಿದ್ದಿರಲ್ಲ ತಂಗಳು…! ಅದನ್ನೇ ಬಡಿಸಿ, ಎಂದು ಹೇಳುತ್ತಾರಂತೆ. ಆ ಮನೆಯ ಮಹಿಳೆ, ಊಟ ಬಡಿಸಲು ಬಾಳೆಗಿಡದ ಎಲೆಯನ್ನು ಕತ್ತಿಯಿಂದ ಕತ್ತರಿಸಲು ಹೋದಾಗ, ಬಾಳೆಯ ಎಲೆಯಲ್ಲಿ ಬೇಡ..! ನೀವು ಮನೆಯಲ್ಲಿ ಉಣ್ಣುವ ಬಟ್ಟಲಲ್ಲಿ ಊಟ ಬಡಿಸುವಂತೆ ನಿತ್ಯಾನಂದರು ಆಜ್ಞಾಪಿಸುತ್ತಾರಂತೆ. ಅವರು ಬಡಿಸಿದ ಊಟವನ್ನು ನಿತ್ಯಾನಂದರು ಪ್ರೀತಿಯಿಂದ ಉಣ್ಣುತ್ತಾರೆ. ತೆಂಗಿನ ಗೆರಟೆಯಲ್ಲಿ ನೀರು ಪಡೆದು ಕುಡಿಯುತ್ತಾರೆ. ಕೊನೆಗೆ ನಿತ್ಯಾನಂದರು ತನ್ನ ಲಂಗೋಟಿಯಿಂದ ಹಣ ತೆಗೆದು ಮಕ್ಕಳಿಗೆಲ್ಲ ತಿಂಡಿ, ಬಟ್ಟೆ ತಂದುಕೊಡುವಂತೆ ಹೇಳಿ ಮಹಿಳೆಗೆ ಕೊಡುತ್ತಾರೆ. ಅಂದು ಕೆಳವರ್ಗದವರಿಗೆ ಕುಡಿಯಲು ನೀರನ್ನು ತೆಂಗಿನ ಚಿಪ್ಪಿನಲ್ಲಿ ನೀಡಲಾಗುತಿತ್ತು. ಹೊಟೇಲುಗಳಲ್ಲಿಯೂ ಗೆರಟೆಯೇ ಅವರಿಗೆ ಪಾನೀಯ ನೀಡುವ ಗ್ಲಾಸು ಆಗಿತ್ತು. ನಿತ್ಯಾನಂದ ಗುರುದೇವರು ಕೆಳವರ್ಗದವರ ಮನೆಯಲ್ಲಿ ಉಂಡು ಚಿಪ್ಪಿಯಲ್ಲಿ ನೀರು ಕುಡಿದರು. ದೇವರಿಗೆ ಜಾತಿ ಅಂದರೆ, ಅದು ಏನೆಂದು ಗೊತ್ತಿಲ್ಲ. ಗುರುದೇವರು ತಮ್ಮ ಸಂಚಾರದ ಹಾದಿಯಲ್ಲಿ ಎಲ್ಲರೂ ಸಮಾನರು ಎಂಬ ಮಾನವ ಧರ್ಮವನ್ನು ಬಿತ್ತರಿಸುತ್ತಿದ್ದರು. ಆ ಕೊರಗರ ಮನೆಯವರು ಬಳ್ಳಿಗಳಿಂದ ಬುಟ್ಟಿ ಹಣೆಯುವ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಗೊಬ್ಬರ ತುಂಬುವ ಬುಟ್ಟಿ ತರಲು ಹೋದ ರೈತರೊಬ್ಬರಿಗೆ ನಿತ್ಯಾನಂದರ ಲೀಲೆಯು ಪ್ರತಕ್ಷವಾಗಿ ಕಂಡು ಬರುತ್ತದೆಯಂತೆ. ಗುರುದೇವರ ಈ ಲೀಲಾಮೃತವು ರೈತನಿಂದಲೇ ಮೌಖಿಕವಾಗಿ ಪ್ರಚಲಿತಗೊಂಡಿರಬೇಕು. ಈ ಘಟನೆ 1935 ರ ಸಮಯದಲ್ಲಿ ನಡೆದಿರಬಹುದು. ಆ ಸಮಯದಲ್ಲಿ ನಿತ್ಯಾನಂದ ಸ್ವಾಮಿಗಳು ಉಡುಪಿಯಲ್ಲಿ ಸಂಚಾರದಲ್ಲಿ ಇದ್ದರು.

ತಾರಾನಾಥ್‌ ಮೇಸ್ತ, ಶಿರೂರು.

Advertisement

LEAVE A REPLY

Please enter your comment!
Please enter your name here