ನಿತ್ಯಾನಂದರ ಕಾರ್ಯ ಹೇಳಿದಷ್ಟು ಮುಗಿಯದು!

0
8063

ನಿತ್ಯ ಅಂಕಣ-೧೦೨ : ತಾರಾನಾಥ್‌ ಮೇಸ್ತ, ಶಿರೂರು.
ಶಿವರಾಮ ಶೆಟ್ಟಿ ಗುರುದೇವರ ಪರಮಭಕ್ತರು. ಅವರು ಬದುಕು ಕಟ್ಟಿಕೊಳ್ಳಲು ದಕ್ಷಿಣಕನ್ನಡದಿಂದ ಮುಂಬೈಗೆ ತೆರಳಿ, ಅಲ್ಲಿ ಹೊಟೇಲಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿಂದಲೇ ಕೆಲಸದ ಬಿಡುವಿನ ಸಮಯದಲ್ಲಿ ಗಣೇಶಪುರಿಗೆ ಬಂದು ನಿತ್ಯಾನಂದ ಸ್ವಾಮಿಗಳ ದರ್ಶನ ಪಡೆಯುತ್ತಿದ್ದರು ಹೀಗಿರುವಾಗ ಅವರಿಗೆ ಗುರುದೇವರ ಸಾಮಿಪ್ಯದ ಸಂಪರ್ಕ ದೊರೆಯುತ್ತದೆ. 1946 ರಲ್ಲಿ ನಿತ್ಯಾನಂದರು ಶಿವರಾಮ ಶೆಟ್ಟಿ ಅವರಿಗೆ ಅಕ್ರೋಲಿಯಲ್ಲಿ ಹೋಟೆಲ್ ಪ್ರಾರಂಭಿಸವಂತೆ ಮತ್ತೆ ಅಲ್ಲಿಯೇ ನೆಲೆ ನಿಲ್ಲುವಂತೆ ಸಲಹೆ ನೀಡುತ್ತಾರೆ. ಅದನಂತರ ಶಿವರಾಮರು ಗಣೇಶಪುರಿ ವೈಕುಂಠ ಆಶ್ರಮದ ಹೊರಗೆ ಹೊಟೇಲು ತೆರೆಯಲು, ಸ್ವಾಮಿಗಳಲ್ಲಿ ಒಪ್ಪಿಗೆ ಯಾಚಿಸುತ್ತಾರೆ. ಸ್ವಾಮಿಗಳು ಹೊಟೇಲು ತೆರೆಯಲು ಒಪ್ಪಿಗೆ ನೀಡುತ್ತಾರೆ. ಅದರಂತೆ ನಿತ್ಯಾನಂದರ ಅನುಗ್ರಹ ಪಡೆದು 1948 ರಲ್ಲಿ ಹೊಟೇಲು ಪ್ರಾರಂಭಿಸುತ್ತಾರೆ. ವ್ಯಾಪಾರ ವೃದ್ಧಿಯಾದ ಬಳಿಕ ಸಮೀಪದಲ್ಲಿ ದಿನಸಿ ಅಂಗಡಿ ಪ್ರಾರಂಭಿಸುತ್ತಾರೆ. ವ್ಯವಹಾರದ ನಡುವೆಯೂ ಶಿವರಾಮರು ಆಶ್ರಮ ಸೇವೆಯಲ್ಲಿಯೂ ನಿರತರಾಗುತ್ತಿದ್ದರು.
ಶಿವರಾಮ ಶೆಟ್ಟಿ ಅವರು ಯಾವುದೇ ಫಲಾಪೇಕ್ಷೆ ಬಯಸದೆ ಮಾಡುವ ಪ್ರಮಾಣಿಕವಾದ ಸೇವಾಗುಣ, ಆಶ್ರಮಸೇವೆಯು ಗುರುದೇವರಿಗೆ ಬಲು ಇಷ್ಟವಾಗುತ್ತದೆ. ಮುಂದೆ ಅವರನ್ನು ವೈಕುಂಠ ಆಶ್ರಮದ ವ್ಯವಸ್ಥಾಪಕರ ಹುದ್ದೆ ನಿರ್ವಹಿಸಲು ಗುರುದೇವರು ಜವಾಬ್ದಾರಿ ನೀಡುತ್ತಾರೆ. ದೇಶದ ಎಲ್ಲಾ ಮೂಲೆಗಳಿಂದ ಬರುವ ಭಕ್ತರ ಸ್ವಾಗತಿಸುವುದು. ಊಟ ಉಪಹಾರದ ವ್ಯವಸ್ಥೆ, ತಂಗಲು ವಸತಿ ವ್ಯವಸ್ಥೆ ಎಲ್ಲವನ್ನು ಶಿವರಾಮ ಶೆಟ್ಟಿ ಅವರ ಉಸ್ತುವಾರಿಯಲ್ಲಿ ನಡೆಯುತಿತ್ತು. ಗಣೇಶಪುರಿಯಲ್ಲಿ ನಡೆಯುವ ಮಹಾಶಿವ ರಾತ್ರಿ, ಗೋಕುಲಾಷ್ಠಮಿ, ಗುರುಪೂರ್ಣಿಮೆ ಮೊದಲಾದ ಹಬ್ಬ ಹರಿದಿನಗಳ ಪೂರ್ವ ಸಿದ್ಧತೆಗಳನ್ನು ನಿತ್ಯಾನಂದರು ಶಿವರಾಮರಿಂದಲೇ ಮಾಡಿಸುತ್ತಿದ್ದರು. ಅದಲ್ಲದೆ ಸ್ವಾಮಿಗಳ ಸೇವೆಯು ಶಿವರಾಮರಿಂದಲೇ ನಡೆಯುತಿತ್ತು. ಸ್ವಾಮಿಗಳ ತಲೆಕೂದಲು, ಗಡ್ಡ ತೆಗೆಯುವುದು. ಕೈ ಕಾಲಿನ ಉಗುರು ಕತ್ತರಿಸುವುದು ಮೊದಲಾದ ಕೆಲಸಗಳನ್ನು ಶಿವರಾಮರು ಭಕ್ತಿಭಾವದಿಂದ ನಿರ್ವಹಿಸುತ್ತಿದ್ದರು.
ಹೀಗಿರುವಾಗ ಶಿವರಾಮ ಶೆಟ್ಟರಿಗಿದ್ದ ಆಧ್ಯಾತ್ಮ ಸೆಳೆತವು ಸನ್ಯಾಸ ಜೀವನವನ್ನು ಬಯಸುತ್ತದೆ. ಅವರು ಅಗಸ್ಟ್-15, 1959 ರಲ್ಲಿ ಸನ್ಯಾಸಧೀಕ್ಷೆಯನ್ನು ಪಡೆಯುತ್ತಾರೆ. ಶಿವರಾಮ ಶೆಟ್ಟಿ ಅವರಿಗೆ ನೀಡುವ ಸನ್ಯಾಸ ಧೀಕ್ಷಾ ಸಮಾರಂಭವು ಕೈಲಾಸ ಆಶ್ರಮದಲ್ಲಿ ಗುರುದೇವರು ಹಾಗೂ ಭಕ್ತ ಗಡಣದ ಉಪಸ್ಥಿತಿಯಲ್ಲಿ ನಡೆಯುತ್ತದೆ. ನಿತ್ಯಾನಂದರು ಲಂಗೋಟಿ ನೀಡುವ ಮೂಲಕ ಧೀಕ್ಷೆ ನೀಡುತ್ತಾರೆ. ವಿಧಿ ವಿಧಾನಗಳ ಪೌರೋಹಿತ್ಯವನ್ನು ಸಾಲಿಗ್ರಾಮ ಸ್ವಾಮಿಗಳು ನಡೆಸುತ್ತಾರೆ. ನಿತ್ಯಾನಂದರು ಶಿವರಾಮ ಶೆಟ್ಟಿ ಅವರಿಗೆ “ಕುಟ್ಟಿ ರಾಮ ಸ್ವಾಮಿ” ಎಂದು ನಾಮಕರಣ ಮಾಡುತ್ತಾರೆ. ಮಲೆಯಾಳ ಭಾಷೆಯಲ್ಲಿ ಕುಟ್ಟಿ ಎಂದರೆ ಮಗು ಎಂದರ್ಥ, ನಿತ್ಯಾನಂದ ಸ್ವಾಮಿಗಳ ಬಾಲ್ಯದ ಹೆಸರು ರಾಮನ್ ಎಂದಾಗಿತ್ತು. ಗುರುದೇವರು “ಬಾಲರಾಮ” ಅರ್ಥ ಸೂಚಿಸುವ ಹೆಸರನ್ನು ಅವರಿಗೆ ಅರ್ಥಪೂರ್ಣವಾಗಿ ನೀಡುತ್ತಾರೆ. ಮುಂದೆ ಶಿವರಾಮ ಶೆಟ್ಟಿ ಅವರು ಕುಟ್ಟಿ ರಾಮ ಸ್ವಾಮಿ ಹೆಸರಿನಿಂದ ಪ್ರಸಿದ್ಧಿ ಪಡೆಯುತ್ತಾರೆ.
ಕುಟ್ಟಿರಾಮ ಸ್ವಾಮಿಗಳು ಸನ್ಯಾಸ ಆಶ್ರಮದ ಪ್ರಾರಂಭದ ದಿನಗಳನ್ನು ಗಣೇಶಪುರಿಯಲ್ಲಿ ಕಳೆಯುತ್ತಾರೆ. ನಂತರ ಗುರುದೇವರು ನೀಡಿದ ಆಜ್ಞೆಯ ಮೆರೆಗೆ ಕಾಂಞಂಗಾಡ್ ಇಲ್ಲಿಯ ಗುರುವನದಲ್ಲಿ ಸಾಧನೆಯಲ್ಲಿ ನಿರತರಾಗುತ್ತಾರೆ. ನಂತರ ಗುರುದೇವರು ಸಮಾಧಿ ಪಡೆಯುವ ಮೊದಲು ಮತ್ತೆ ಗಣೇಶಪುರಿಗೆ ಬಂದು ನೆಲೆಸುತ್ತಾರೆ. ಕುಟ್ಟಿರಾಮ ಸ್ವಾಮಿಗಳು ಕೊನೆಗೆ ತಮ್ಮ ಹೋಟೆಲನ್ನು ಆಶ್ರಮವಾಗಿ ಪರಿವರ್ತಿಸುತ್ತಾರೆ. ನಂತರ ಬಡಬಗ್ಗರಿಗೆ ಒಂದು ಸಮಯ ಭೋಜನ ಪ್ರಸಾದ ನೀಡುತ್ತಾರೆ. ಅದೇ ಪದ್ಧತಿ ಮುಂದೆ ನಡೆದು ಕೊಂಡು ಹೋಗುತ್ತದೆ. ಕುಟ್ಟಿ ರಾಮ ಸ್ವಾಮಿ ಅವರು ನವಂಬರ್ 25, 1981 ರಲ್ಲಿ ಸಮಾಧಿ ಪಡೆದರು. ಅವರ ಸಮಾಧಿ ಕೈಲಾಸ ಆಶ್ರಮದ ಹಿಂಭಾಗದ ಸಾಲಿಗ್ರಾಮ ಸ್ವಾಮಿಗಳ ಸಮಾಧಿಯ ಬಳಿ ಇದೆ. ಕುಟ್ಟಿ ರಾಮ ಸ್ವಾಮಿಗಳ ಬಳಿ ಒಂದು ದೊಡ್ಡ ಗಾತ್ರದ ಕಪ್ಪು ಬಣ್ಣದ ವೃಷಭ ಇತ್ತು. ಅದನ್ನು ನಂದಿ ಬೈಲ್ ಎಂದು ಕರೆಯಲಾಗುತಿತ್ತು. ಅದು ಗಣೇಶಪುರಿಯಲ್ಲಿ ಭಕ್ತರನ್ನು ಆಕರ್ಷಿಸುತಿತ್ತು. ಭಕ್ತರು ಪರಿಸರದ ಜನರು ನಂದಿಗೆ ಆಹಾರ ನೀಡುತ್ತಿದ್ದರು. ಜನರ ಮಾತುಗಳಿಗೂ ನಂದಿ ಸ್ಪಂದಿಸುತಿತ್ತು. ಒಮ್ಮೆ ನಂದಿ ಬೈಲನ್ನು ಕುಟ್ಟಿ ರಾಮರು ಕೈಲಾಶ ಆಶ್ರಮದೊಳಗೆ ಗುರುದೇವರ ದರ್ಶನಕ್ಕಾಗಿ ತಂದಿದ್ದರು.

LEAVE A REPLY

Please enter your comment!
Please enter your name here