ನಿತ್ಯಾನಂದರ ಅನುಗ್ರಹದಿಂದ ಎಲ್ಲವೂ ಸಾಧ್ಯ!

0
562

ನಿತ್ಯ ಅಂಕಣ: ೧೧

ಕರ್ನಾಟಕದ ದಕ್ಷಿಣದ ಕರಾವಳಿಗರು ಹೋಟೆಲು ಉದ್ಯಮ ಕ್ಷೇತ್ರದಲ್ಲಿ ಬಹಳವಾಗಿ ಪ್ರಸಿದ್ಧಿ ಪಡೆದವರು. ಹೊಸ ರುಚಿ ಖಾದ್ಯಗಳನ್ನು ಪರಿಚಯಿಸಿದವರು. ಭಾರತ ದೇಶದಲ್ಲಿ ಮಾತ್ರ ಅಲ್ಲದೇ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಅವಿಭಜಿತ ದಕ್ಷಿಣ ಕನ್ನಡದವರ ಹೋಟೆಲುಗಳಿವೆ. “ಉಡುಪಿ ಮಂಗಳೂರಿಗರು.. ಅವಕಾಶ ಸಿಕ್ಕರೆ, ಚಂದ್ರಲೋಕದಲ್ಲಿ ಬೇಕಾದರೂ ಹೋಟೆಲು ವ್ಯವಹಾರವನ್ನು ನಡೆಸಬಲ್ಲರು..!!” ಹೀಗೆಂದು ಸಾಧನೆಯನ್ನು ಬಣ್ಣಿಸುವ ಮಾತೊಂದು ನಾಗರಿಕ ವಲಯದಲ್ಲಿ ಚಾಲ್ತಿಯಲ್ಲಿದೆ. ಮುಂಬೈಯಲ್ಲಿ ಒಂದು ದಿನ ಕರಾವಳಿಗರು ಹೋಟೆಲು ವ್ಯವಹಾರವನ್ನು ಸ್ಥಗಿತಗೊಳಿಸಿದರೆ, ಜನಜೀವನವೇ ಅಸ್ಥವ್ಯಸ್ಥಗೊಳ್ಳ ಬಹುದಾದ ಸಾದ್ಯತೆಯು ಇದೆಯಂತೆ, ಅಷ್ಟರ ಮಟ್ಟಿಗೆ ಮುಂಬೈಯಲ್ಲಿ ಹೋಟೆಲು ಉದ್ಯಮವನ್ನು ಕರಾವಳಿಗರು ತಮ್ಮದಾಗಿಸಿ ಕೊಂಡಿದ್ದಾರೆ. ಆಹಾರ ಸೇವೆಯನ್ನು ನಾಗರಿಕರಿಗೆ ಪ್ರಾಮಾಣಿಕವಾಗಿ ಒದಗಿಸುತ್ತಿದ್ದಾರೆ.

ಚಿತ್ರ ಕೃಪೆ: ಅಂತರ್ಜಾಲ

1935 ರ ನಂತರದ ದಿನಗಳಲ್ಲಿ ಮುಂಬೈಯಲ್ಲಿ ಹೋಟೆಲು ಉದ್ಯಮ ನಡೆಸುವ ಬಹುತೇಕ ಉದ್ಯಮಿಗಳು ಯಶಸ್ವಿಯಾಗುವಲ್ಲಿ ಭಗವಾನ್ ನಿತ್ಯಾನಂದ ಬಾಬಾರ ಅನುಗ್ರಹವು ಕಾರಣವಾಗಿದೆ ಎಂದು, ಮಾಲಿಕರು ತಮ್ಮ ಉದ್ಯಮ ಯಶಸ್ಸಿನ ಗುಟ್ಟನ್ನು ಹೇಳಿಕೊಳ್ಳುವುದು ಇದೆ. ಹೊಟೇಲು ಉದ್ಯಮದಲ್ಲಿ ನಷ್ಟ ಹೊಂದಿದಾಗ ಹೋಟಿಲಿಗರು ನಿತ್ಯಾನಂದರಲ್ಲಿ ಅಳಲನ್ನು ಹೇಳಿಕೊಂಡು, ಅವರಿಂದ ಮಾರ್ಗದರ್ಶನ, ಹಾಗೂ ಹೊಸ ಹೋಟೆಲು ಪ್ರಾರಂಭಿಸುವಾಗ ಆರ್ಶಿವಾದ ಪಡೆದು ಉದ್ಯಮದಲ್ಲಿ ಯಶಸ್ವಿಯ ಹಾದಿ ಪಡೆದವರು ನೂರಾರು ಮಂದಿ ಮಾಲಿಕರು ಇದ್ದಾರೆ. ಮುಂಬೈಯಲ್ಲಿ ಯಾವುದೇ ಹೋಟೆಲಿನ ನಗದು ಕೌಂಟರಿನ ಗೊಡೆಯ ಮೇಲೆ ಕಣ್ಣಾಡಿಸಿದಾಗ, ನಮಗೆ ನಿತ್ಯಾನಂದ ಬಾಬಾರ ಫೋಟ ಕಾಣಲು ಸಿಗುತ್ತದೆ. ಅದರ ಮುಂದೆ ದೀಪ ಬೆಳಗುತ್ತಲೇ ಇರುತ್ತದೆ. ಕೇವಲ ಹೋಟೆಲಿಗರು ಮಾತ್ರ ಅಲ್ಲ ಬೇರೆ ಬೇರೆ ರೀತಿಯ ವ್ಯವಹಾರ ನಡೆಸುವವರು, ತಮ್ಮ ವ್ಯವಹಾರದಲ್ಲಿ ನಷ್ಟ ಅನುಭವಿಸಿದಾಗ ನಿತ್ಯಾನಂದರ ಬಳಿ ಸಲಹೆ ಕೇಳಲು ಬರುತ್ತಿದ್ದರು. ಗುರುಗಳಿಂದ ಅನುಗ್ರಹ ಪಡೆದು ಪುಳಕಿತರು ಆಗಿದ್ದಾರೆ.

1947 ರಲ್ಲಿ ರಾಜ್ಯದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒರ್ವರಾದ ಬೆಂಗಳೂರಿನ ಲಕ್ಷ್ಮಣ್ ಖೋಡೆ ಅವರು ಪ್ರಾರಂಭದಲ್ಲಿ ತಮ್ಮ ವ್ಯವಹಾರದಲ್ಲಿ ನಷ್ಟ ಅನುಭವಿಸಿದರು. ಅವರ ಆತ್ಮಿಯ ಮಿತ್ರರೊರ್ವರು ನಿತ್ಯಾನಂದ ಸ್ವಾಮೀಜಿಗಳ ಪರಮಭಕ್ತರಾಗಿದ್ದರು. ಅವರು ನೀಡಿದ ಸಲಹೆ ಮೆರೆಗೆ ಲಕ್ಷ್ಮಣ್ ಖೋಡೆ ಅವರು ಗಣೇಶಪುರಿಯಲ್ಲಿ ಭಗವಾನ್ ನಿತ್ಯಾನಂದರ ದರ್ಶನ ಪಡೆಯುತ್ತಾರೆ. ತಮ್ಮ ವ್ಯವಹಾರ ನಷ್ಟದ ಕುರಿತಾಗಿ ಅವರಲ್ಲಿ ಹೇಳಿಕೊಳ್ಳುತ್ತಾರೆ. ಗುರುದೇವರು ಸೂಕ್ತ ಸಲಹೆಗಳನ್ನು ನೀಡಿ ಲಕ್ಷ್ಮಣ್ ಖೋಡೆ ಅವರಿಗೆ ಆರ್ಶಿವದಿಸಿ ಕಳಿಸುತ್ತಾರೆ. ಕೆಲವು ದಿನಗಳಲ್ಲಿ ಖೋಡೆ ಸಾಹೇಬರಿಗೆ ಭಾರತ ಸರಕಾರದಿಂದ ಸೇನೆಗೆ ಬೇಕಾದ ಮದ್ಯ ಒದಗಿಸಿಲು ಒಪ್ಪಿಗೆ ದೊರೆಯುತ್ತದೆ. ಅದರ ಬಳಿಕ ಅವರ ಆರ್ಥಿಕ ಸ್ಥಿತಿಯು ಚೇತರಿಸಿ ಕೊಳ್ಳುತ್ತದೆ. ಹೀಗಿರುವಾಗಲೇ ಅವರ ಮೇಲಿದ್ದ ಆದಾಯ ಕರದ ಖಟ್ಲೆಯೊಂದು ಅವರನ್ನು ಚಿಂತೆಗಿಡು ಮಾಡುತ್ತದೆ. ಪುನಃ ಅವರು ಗುರುದೇವರಲ್ಲಿ ಅಳಲನ್ನು ಹೇಳಿಕೊಳ್ಳುತ್ತಾರೆ. “ಚಿಂತಿಸ ಬೇಡ…! ಮೇಲಾಧಿಕರಿಗಳಿಗೆ ಅರ್ಜಿ ಸಲ್ಲಿಸು, ಒಂದು ಲಕ್ಷದವರೆಗೆ ಕರ ಕಟ್ಟಲು ಬರಬಹುದು, ಗುರುದೇವರು ಖೋಡೆ ಅವರಿಗೆ ಹೇಳುತ್ತಾರೆ.

ಮುಂದೆ ಗುರುದೇವರ ವಾಣಿಯಂತೆ ನಡೆದು ಹೋಗುತ್ತದೆ. ಖೋಡೆ ಅವರ ಸಮಸ್ಯೆ ಪರಿಹಾರ ಪಡೆಯುತ್ತದೆ. ಮುಂದೆ ಖೋಡೆ ಅವರ ವ್ಯಾಪಾರವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ತನ್ನ ವೃತಿ ಬದುಕಿನ ಯಶಸ್ಸು ಕಾಣಲು ನಿತ್ಯಾನಂದ ಸ್ವಾಮೀಗಳ ಕೃಪೆ ಮುಖ್ಯ ಕಾರಣವೆಂದು ಉದ್ಯಮಿ ಲಕ್ಷ್ಮಣ್ ಖೋಡೆ ಅವರಿಗೆ ಅರಿವಿಗೆ ಬರುತ್ತದೆ. ಮುಂದೆ ಅವರು ಶ್ರೀಕ್ಷೇತ್ರ ಗಣೇಶಪುರಿಗೆ ಬರುವ ಭಕ್ತರ ಅನುಕೂಲತೆಗಾಗಿ “ಬೆಂಗಳೂರು ವಾಲ” ಹೆಸರಿನ ವಸತಿ ಸಂಕೀರ್ಣ ಒಂದನ್ನು ನಿರ್ಮಿಸಿ ಗುರು ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಈ ಒಂದು ಗುರುಲೀಲೆಯನ್ನು ನಿತ್ಯಾನಂದ ಬಾಬಾರ ಭಕ್ತರಾಗಿರುವ ರಮೇಶ್ ನಾಡಕರ್ಣಿ ಅವರು ತಾವು ಬರೆದಿರುವ “ಕರುಣಾಳು ಬೆಳಕು- ಭಗವಾನ್ ನಿತ್ಯಾನಂದ” ಸುಜ್ಞಾನದ ಗ್ರಂಥದಲ್ಲಿ ಉಲ್ಲೇಖಿಸಿರಿವುದು ಕಾಣಲು ಸಿಗುತ್ತದೆ. ಹೀಗೆ ಸಾವಿರಾರು ಬಡವರನ್ನು ಸಜ್ಜನರನ್ನು ನಿತ್ಯಾನಂದ ಬಾಬರು ಅನುಗ್ರಹಿಸಿದ್ದಾರೆ.

Advertisement

ತಾರಾನಾಥ್‌ ಮೇಸ್ತ ಶಿರೂರು

LEAVE A REPLY

Please enter your comment!
Please enter your name here