ನಿತ್ಯಾನಂದ…ರೋಚಕ…ಅನರ್ಘ್ಯ!

0
2784

ನಿತ್ಯ ಅಂಕಣ-೯೯ : ತಾರಾನಾಥ್‌ ಮೇಸ್ತ, ಶಿರೂರು.
ನಿತ್ಯಾನಂದರು ಒಂದು ದಿವ್ಯಶಕ್ತಿ. ಅವರ ಜನ್ಮವು ಹೇಗಾಯಿತೆಂದು ಯಾರಿಗೂ ತಿಳಿದಿಲ್ಲ. ಬಹಳಷ್ಟು ಗುರುಚರಿತೆ ಕೃತಿಗಳಿದ್ದರೂ, ಯಾವ ಕೃತಿಗಳಲ್ಲಿಯೂ ಉಲ್ಲೇಖಿಸಿಲ್ಲ. ಅವಧೂತ ನಿತ್ಯಾನಂದರು ಕಲಿಯುಗದಲ್ಲಿ ಅವತರಿಸಿದ “ಭಗವಾನ್” ಎಂಬುವುದು ಭಕ್ತರ ದೃಢ ನಂಬಿಕೆ. ಭಗವಾನ್ ನಿತ್ಯಾನಂದರ ಅವತಾರ ಪ್ರಕಟವಾಗುವುದು “ದೇವರನಾಡು” ಎಂದು ಬಣ್ಣಿಸಲ್ಪಡುವ ಕೇರಳ ರಾಜ್ಯದ ಕೊಯಲಾಂಡಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ. ವಕೀಲ ಈಶ್ವರ್ ಐಯ್ಯರ್ ಮನೆಯಲ್ಲಿ ಒಕ್ಕಲು ಇದ್ದು ದುಡಿಯುತ್ತಿದ್ದ ಉನ್ನಿಯಮ್ಮ, ಚಾತು ನಾಯರ್ ಕಾರ್ಮಿಕ ದಂಪತಿಗಳಿಗೆ ಮುದ್ದಾದ ಗಂಡು ಶಿಶುವು ಲಭ್ಯವಾಗುತ್ತದೆ. ಲಭ್ಯವಾದ ದಿನಾಂಕ ನವಂಬರ್ 30, 1897 ರಂದು ಎಂದು ಕೆಲವು ಬಾಬಾರ ಚರಿತೆ ಪುಸ್ತಕಗಳಲ್ಲಿ ಉಲ್ಲೇಖ ಇದೆ. ನಂತರ ಮಗು ರಾಮನ್ ಹೆಸರಿನಿಂದ ಕರೆಯಲ್ಪಟ್ಟು, ನಂತರ ಮಗುವಿನ ಸಾಕು ತಂದೆ- ತಾಯಿ ಮೃತರಾದ ಬಳಿಕ, ವಕೀಲ ಈಶ್ವರ್ ಐಯ್ಯರ್ ಮನೆಯಲ್ಲಿ ಬೆಳೆದ ರಾಮನ್ ತನ್ನ ಬಾಲಲೀಲೆಗಳ ತೋರಿಸುತ್ತ ದಿವ್ಯ ಸ್ವರೂಪ ಎಂದು ತೊರ್ಪಡಿಸುತ್ತಾನೆ. ಮುಂದೆ ಬಾಲಕ ರಾಮನು, ಈಶ್ವರ್ ಐಯ್ಯರ್ ಅವರಿಂದ “ನಿತ್ಯಾನಂದ” ಶುಭನಾಮದಿಂದ ಕರೆಯಲ್ಪಡುತ್ತಾನೆ. ಎಂಬುವುದು ಗುರುದೇವರ ಚರಿತೆಯಿಂದ ತಿಳಿದುಬರುತ್ತದೆ.
ನಿತ್ಯಾನಂದರು ಸಾಧು ಸಂತರ ತಪೋಭೂಮಿ ಹಿಮಾಲಯ, ಮತ್ತು ಉತ್ತರ ಭಾರತ, ದಕ್ಷಿಣ ಭಾರತದ ಪಾವನ ತೀರ್ಥ ಕ್ಷೇತ್ರಗಳ ಸಾನಿಧ್ಯದೇವರುಗಳ ದರ್ಶನ ಪಡೆಯುತ್ತಾರೆ. ವಿದೇಶಗಳಿಗೂ ಹೋಗುತ್ತಾರೆ. ಸಂಚಾರದಲ್ಲಿದ್ದಾಗ ಮೊಕ್ಕಾಂ ಹೂಡಿದ ಸ್ಥಳಗಳಲ್ಲಿ ಭಕ್ತರನ್ನು ಹರಸುತ್ತಾರೆ. ದುಷ್ಟರನ್ನು ಶಿಕ್ಷಿಸುತ್ತಾರೆ. ಅಜ್ಞಾನಿಗಳಿಗೆ ಸುಜ್ಞಾನ ಭೋಧಿಸುತ್ತಾರೆ. ರೋಗ ರುಜಿನಗಳಿಂದ ಬಳಲುತ್ತಿರುವರ ವ್ಯಾಧಿಗಳನ್ನು ಗುಣಪಡಿಸುತ್ತಾರೆ. ಅತಿಮಾನುಷ ಲೀಲೆಗಳ ತೋರಿಸುತ್ತಾರೆ. ಅಂಹಕಾರಿಗಳ ಅಹಂನ್ನು ದಮನಗೊಳಿಸುತ್ತಾರೆ. ಹಾಗೆಯೇ ನಿತ್ಯಾನಂದರು ವಿಘ್ನ ಸಂತೋಷಿಗಳು ಹಾಗೂ ಕಿಡಿಗೇಡಿಗಳಿಂದ ಉಪಟಳಗಳನ್ನು ಎದುರಿಸುತ್ತಾರೆ. ಹೀಗೆ ಗುರುದೇವರ ಸಂಚಾರ ಮುಂದುವರಿಯುತ್ತದೆ. ಕಾಂಞಂಗಾಡ್ ಇಲ್ಲಿ ಕೆಲವು ವರ್ಷ ನೆಲೆ ನಿಂತು. ಕುಗ್ರಾಮವಾದ ಕಾಂಞಂಗಾಡನ್ನು ಭಕ್ತರ ಶ್ರದ್ಧಾಕೇಂದ್ರವಾಗಿ ಮಾರ್ಪಡಿಸುತ್ತಾರೆ. ಮುರಕಲ್ಲಿನಲ್ಲಿ ಕೊರೆದು 43 ಗುಹೆಗಳ ನಿರ್ಮಿಸುತ್ತಾರೆ.
ಇಲ್ಲಿಂದ ಮುಂದೆ ವಜ್ರೇಶ್ವರಿಯಲ್ಲಿದ್ದ ನಿತ್ಯಾನಂದರು 1936 ರಲ್ಲಿ ಗಣೇಶಪುರಿಗೆ ಆಗಮಿಸುತ್ತಾರೆ. ಆವಾಗ ಸ್ವಾಮಿಗಳು 30- 35 ವರ್ಷಗಳ ಯುವ ಸನ್ಯಾಸಿಗಳಂತೆ ಕಾಣುತ್ತಿದ್ದರು. ಮೊದಲಾಗಿ ಸ್ವಾಮಿಗಳು ಕುಂಡದಲ್ಲಿ ಸ್ನಾನ ಮಾಡಿ ಅಲ್ಲಿರುವ ಭೀಮೇಶ್ವರ ಮಹಾದೇವ ಮಂದಿರದೆಡೆಗೆ ಬರುತ್ತಾರೆ. ಭೀಮೇಶ್ವರ ದೇಗುಲ ಪುರಾಣ ಪ್ರಸಿದ್ಧವಾದ ಒಂದು ದೇವಸ್ಥಾನ. ಪಂಚ ಪಾಂಡವರು ಗಣೇಶಪುರಿಗೆ ಬಂದಾಗ ಭೀಮಸೇನನು ಇಲ್ಲಿ ಒಂದು ಶಿವಲಿಂಗ ಸ್ಥಾಪನೆ ಮಾಡುತ್ತಾನೆ. ಮುಂದೆ ಅಲ್ಲಿ ಮಂದಿರ ಕಟ್ಟಲ್ಪಟ್ಟು, ಭೀಮೇಶ್ವರ ಮಹಾದೇವ ಮಂದಿರ ಎಂದು ಕರೆಯಲ್ಪಡುತ್ತದೆ, ಎಂಬುವುದು ಇಲ್ಲಿಯ ಕ್ಷೇತ್ರಚರಿತೆ. ಈ ದೇವಸ್ಥಾನ ಪ್ರವೇಶ ಪಡೆಯುವಾಗ, ಅಲ್ಲಿಯ ಹಳೆ ಅರ್ಚಕನ ಪತ್ನಿ ಗಂಗೂಬಾಯಿ ಹೆಸರಿನ ಮಹಿಳೆ ನಿತ್ಯಾನಂದರು ಮುಸ್ಲಿ ಧರ್ಮದವರೆಂದು ತಪ್ಪಾಗಿ ತಿಳಿದು ತಡೆಯೊಡ್ಡಿದ ಘಟನೆ ನಡೆಯುತ್ತದೆ. ನಿತ್ಯಾನಂದರು ಆಕ್ಷೇಪ ಎತ್ತದೆ ಹಿಂತುರುಗಿ ಅಲ್ಲಿದ್ದ ಬಾವಿಯ ಬಳಿ ಬಂದು ಕುಳಿತುಕೊಳ್ಳುತ್ತಾರೆ. ವಜ್ರೇಶ್ವರಿಯ ಭಕ್ತನೊರ್ವ ಸಂಜೆಯಾದರೂ ಬಾಬಾರು ವಾಪಾಸು ಬಾರದಿರುವುದರಿಂದ, ಚಿಂತಿತನಾಗಿ ಹುಡುಕುತ್ತ ಗಣೇಶಪುರಿಗೆ ಬರುತ್ತಾನೆ. ಬಾಬಾರು ಬಾವಿಯ ಬಳಿ ಕುಳಿತಿರುವುದನ್ನು ಗಮನಿಸುತ್ತಾನೆ. ಅಲ್ಲಿ ಬಾಬಾರಿಗೆ ದೇವಸ್ಥಾನ ಪ್ರವೇಶಕ್ಕೆ ತಡೆಯೊಡ್ಡಿರುವ ವಿಚಾರವು ತಿಳಿದುಬರುತ್ತದೆ. ಆ ಭಕ್ತನು ಗಂಗೂಬಾಯಿಗೆ ಬಾಬಾರು ಯಾರೆಂದು ಪರಿಚಯಿಸುತ್ತಾನೆ. ಕೊನೆಗೆ ಆಕೆಗೆ ತನ್ನಿಂದ ತಿಳಿಯದೆ ಆಗಿರುವ ಪ್ರಮಾದಕ್ಕೆ ಬಾಬಾರಲ್ಲಿ ಕ್ಷಮೆಯಾಚಿಸುತ್ತಾಳೆ. ನಂತರು ಬಾಬಾರು ಗಣೇಶಪುರಿಯಲ್ಲಿ ಉಳಿಯುವ ಇಚ್ಚೆ ವ್ಯಕ್ತಪಡಿಸುತ್ತಾರೆ. ಆವಾಗ ಕೆಲವು ದಿನಗಳಲ್ಲಿ ಗಂಗೂಬಾಯಿ ಬಾಬಾರಿಗೆ ನೆಲೆ ನಿಲ್ಲಲು ದೇವಸ್ಥಾನದ ಸನಿಹದಲ್ಲಿ ಸಣ್ಣದಾದ ಕುಟೀರ ನಿರ್ಮಿಸಿಕೊಡುತ್ತಾಳೆ.
ಗಂಗೂಬಾಯಿಗೆ ಕೆಲವು ಸಮಯಗಳ ಹಿಂದೆ ಸಂಚಾರಿ ಸಾಧುವೊರ್ವ ಹೇಳಿದ ಮಾತು ನೆನಪಾಗುತ್ತದೆ. ಭೀಮೇಶ್ವರ ಮಹಾದೇವ ಮಂದಿರದ ಹಿಂದುಗಡೆ, ಒಂದು ಆಲ-ಅಶ್ವಥ ಒಂದೇ ಕಡೆ ಇರುವ ಅಶ್ವಥ ವೃಕ್ಷವು ಇದ್ದಿತು. ಅದರಡಿಯಲ್ಲಿ ಉತ್ತರ ಭಾರತದ ಮೂಲದ ಸಾಧು ಕೆಲವು ದಿನಗಳು ಕಳೆದು ಹೋರಟು ಹೋಗಿದ್ದನು. ಒಂದು ದಿನ ಸಾಧು ಗಂಗೂಬಾಯಿಲ್ಲಿ ಹೀಗೆ ಹೇಳಿದ್ದನು. “ಕೆಲವು ದಿವಸಗಳಲ್ಲಿ ಸಾಕ್ಷತ್ ಪರಮೇಶ್ವರನ ಅವತಾರವಾಗಿರುವ ಮಹಾಪುರಷ ಇಲ್ಲಿಗೆ ಆಗಮಿಸಲಿದ್ದಾನೆ. ಅವನು ಇಲ್ಲಿಯೇ ಇರುತ್ತಾನೆ. ನೀವು ಅವನ ಸೇವೆ ಮಾಡಿರಿ” ಎಂದು. ಅಂದು ಸಂಚಾರಿ ಸಾಧು ಗಂಗೂಬಾಯಿಯಲ್ಲಿ ಹೇಳಿದ ಮಾತು ನಿಜವಾಗುತ್ತದೆ. ಹಿಂದಿನ ಸಾಧು ತೆರಳಿದ ಕೆಲವು ಸಮಯದ ಬಳಿಕ ಅವಧೂತ ನಿತ್ಯಾನಂದರ ಪಾದಸ್ಪರ್ಶವನ್ನು ನಾಲ್ಕು ದಿಕ್ಕುಗಳಲ್ಲಿ ಪರ್ವತಗಳಿಂದ ಸುತ್ತಲ್ಪಟ್ಟಿರುವ, ಪಾವನಪವಿತ್ರ ತಾನ್ಸಾನದಿಯ ದಂಡೆಯ ಮೇಲಿರುವ, ವಸಿಷ್ಠಮುನಿಯ ಯಜ್ಞಭೂಮಿಯಾದ “ಗಣೇಶಪುರಿ” ಪಡೆಯುತ್ತದೆ. ಮುಂದೆ ನಿತ್ಯಾನಂದರ ಪರಮಭಕ್ತೆಯಾಗಿ ಗಂಗೂಬಾಯಿ ಗುರುದೇವರ ಸೇವೆ ಮಾಡುತ್ತ ಅನುಗ್ರಹಿತಳಾಗುತ್ತಾಳೆ.

LEAVE A REPLY

Please enter your comment!
Please enter your name here