ನಿತ್ಯಾನಂದರು ಸರ್ವಜ್ಞರು..!

0
1305

ನಿತ್ಯ ಅಂಕಣ:೬೦ – ತಾರಾನಾಥ್‌ ಮೇಸ್ತ ಶಿರೂರು.
ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಗಳು ಭವರೋಗ ವೈದ್ಯರು, ತ್ರಿಕಾಲ ಜ್ಞಾನಿಗಳು, ಕಾಲಜ್ಞಾನಿಗಳು, ಅವರ ಮಹಾ ಮಹಿಮೆಗಳು, ತರ್ಕಕ್ಕೆ ನಿಲುಕದ ಲೀಲಾವಿನೋದಗಳು ಆಗಿದ್ದವು. ಪವಾಡಗಳು ಜನತಾ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದವು. ಜೀವಿತದ ಕಾಲದಲ್ಲಿ ಒಮ್ಮೆಯಾದರೂ ಭಗವಾನ್ ನಿತ್ಯಾನಂದ ಮಹಾಸ್ವಾಮಿಗಳ ದರ್ಶನ ಪಡೆಯ ಬೇಕೆಂಬ, ಆಶೆ ಹೊತ್ತುಕೊಂಡು ದಿನಕ್ಕೆ ನೂರಾರು ಭಕ್ತರು ಅವರಿದ್ದಲ್ಲಿಗೆ ಬರುತ್ತಿದ್ದರು. ರೋಗ ರುಜಿನಗಳಿಗೆ ಮದ್ದು ಪಡೆಯಲು, ಎದುರಾದ ಸಮಸ್ಯೆಗಳಿಗೆ ಸಾಂತ್ವನ, ಮಾರ್ಗದರ್ಶನ ಪಡೆಯಲು, ಹೀಗೆ ನೂರಾರು ಕಾರಣಗಳನ್ನು ಹೊತ್ತುಕೊಂಡು, ಬರುವರ ಸಂಖ್ಯೆ ಬಹಳ ಇತ್ತು. ಕರ್ನಾಟಕ, ಮಹಾರಾಷ್ಟ್ರ, ಹಾಗೂ ಕೇರಳ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಕಾಂಞಂಗಾಡಿಗೆ ಬರುತ್ತಿದ್ದರು. ಬಂದಿರುವ ಭಕ್ತರು ಸಜ್ಜನರಾಗಿದ್ದರೆ, ಅವರಿಗೆಲ್ಲಾ ಗುರುದೇವರ ಪ್ರೇಮದ ಸಾಂಗತ್ಯ, ಕೃಪೆಯು ದೊರೆಯುತಿತ್ತು. ದುರ್ಜನರಿಗೆ ನಿಷ್ಠುರವಾಗಿ ವರ್ತಿಸುತ್ತಿದ್ದರು. ಜೀವನ ಪಾಠ ಬೋಧಿಸುತ್ತಿದ್ದರು. ತಮ್ಮ ಬಳಿಗೆ ಬರುವವರ ವ್ಯಕ್ತಿ ಪರಿಚಯ, ಪೂರ್ವಾಪರ ಚರಿತೆಗಳು ಮೊದಲೇ ಅವರಿಗೆ ಗೊತ್ತಿರುತ್ತಿದ್ದವು. ದೂರದಿಂದಲೇ ಬರುವ ವ್ಯಕ್ತಿಗಳ ಕಂಡು, ಅವರ ಪರಿಚಯವನ್ನು ಸನಿಹದಲ್ಲಿ ಇದ್ದವರಿಗೆ ಹೇಳುತ್ತಿದ್ದರು. ಆತ ಜೀವನದಲ್ಲಿ ಮಾಡಿರುವ ಒಳಿತು ಕೆಡುಕುಗಳನ್ನು ಬಿಚ್ಚಿಡುತ್ತಿದ್ದರು.

ಕಣನ್ನೂರು ಇಲ್ಲಿಯ ನಿವಾಸಿ ಶ್ರೀ ಪಿ.ವಿ. ರವೀಂದ್ರನ್ ಇವರು ಗುರುದೇವರ ಪರಮಭಕ್ತರು. ಇವರು ಜುಲೈ-2, 1985 ‘ಗುರು ಪೂರ್ಣಿಮೆ’ ಶುಭದಿನದಂದು ನಿತ್ಯಾನಂದ ಸ್ವಾಮಿಗಳ ಚರಿತೆಯನ್ನು ಮಳಯಾಳ ಭಾಷೆಯಲ್ಲಿ ಬರೆದು, ಸದ್ಗುರುಗಳ ಚರಣಾವಿಂದಗಳಿಗೆ ಸಮರ್ಪಿಸಿದವರು. ಆ ಬಳಿಕ ಭಕ್ತಕೋಟಿಗೆ ಲೀಲಾಮೃತದ ಅಕ್ಷರ ಸರಸ್ವತಿ ಪ್ರಸಾದವನ್ನು ಹಂಚಿದವರು. ಇವರಿಗೆ ಕೆ.ಗುರುಕ್ಕಲ್ ಎನ್ನುವ ಆತ್ಮಿಯ ಮಿತ್ರನೊಬ್ಬ ಇದ್ದ. ಒಂದು ದಿನ ಗುರುಕ್ಕಲ್ ಗುರುದೇವರ ದರ್ಶನ ಪಡೆಯಲೆಂದು ಒರ್ವ ಸಂಗಡಿಗನನ್ನು ಕರೆದುಕೊಂಡು ಕಾಂಞಂಗಾಡಿನ ಆಶ್ರಮದಡೆಗೆ ಹೋಗಿದ್ದರು. ನಿತ್ಯಾನಂದರು ದೂರದಿಂದಲೇ ಗುರುಕ್ಕಲ್ ಜತೆ ಇರುವ ಜೊತೆಗಾರನನ್ನು ಕಂಡು, ಒಮ್ಮೆಗೆ ಸಿಟ್ಟಾಗಿ ಬೊಬ್ಬೆ ಹೊಡೆದರು. ದುಷ್ಟ..! ಪಾಪಿ..! ನನ್ನ ಹತ್ತಿರ ಬರಬೇಡ, ತೊಲಗು ಹೋಗು..! ಎಂದು ಹೇಳಿದರು. ಗುರುದೇವರ ಆಕ್ರೋಶದ ನುಡಿಗಳು ಕೇಳಿದರೂ, ಆತ ಸ್ವಾಮೀಜಿಗಳ ಸನಿಹ ಹೋಗದಿರಲು ಹಿಂದೇಟು ಹಾಕಲಿಲ್ಲ. ಧೈರ್ಯತಾಳಿ ಸ್ವಾಮಿಗಳ ಮುಂದೆ ಹೋಗಲಾರಂಭಿಸಿದ. ಇದನ್ನು ಗಮನಿಸಿದ ನಿತ್ಯಾನಂದರು ತನ್ನ ಸನಿಹ ಇದ್ದ ಕಲ್ಲೊಂದನ್ನು ಅವನಡೆಗೆ ಎಸೆದು ಬಿಟ್ಟರು. ಆವಾಗ ಆತ ಹೆದರಿ ಹಿಂದೆ ಸರಿದ. ಸ್ವಾಮಿಗಳ ಆಕ್ರೋಶ ಕಂಡು, ಗುರುಕ್ಕಲ್ ಹಾಗೂ ನೋಡುಗರು ಅಚ್ಚರಿ ಪಟ್ಟರು. ಆದರೆ ಆತನಿಂದ ಏನೋ ಒಂದು ಮಹಾ ಪ್ರಮಾದ ನಡೆದಿರಬಹುದೆಂದು ಅರ್ಥಮಾಡಿಕೊಂಡರು.

ಭಕ್ತರೆಲ್ಲರು ಮೌನವಾಗಿರುವುದನ್ನು ಕಂಡು, ಗುರುದೇವರು, “ಆತ ತನ್ನ ಹೆಂಡತಿ ಮಕ್ಕಳೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದ. ವಿನಾಕಾರಣ ಜಗಳ ಮಾಡುತ್ತಿದ್ದ. ಅವನ ಅನುಚಿತ ವರ್ತನೆಯಿಂದ ಮನೆ ಮಂದಿ ನೊಂದು ಹೋಗಿದ್ದರು. ಅಂತವರು ತನ್ನ ಬಳಿಗೆ ಬರುವುದು ಬೇಡ. ನನ್ನ ಸಾಂಗತ್ಯದಲ್ಲಿ ಇರುವವರು ಸಜ್ಜನರು. ಅವರ ಸತ್ಸಂಗದ ಪಾವಿತ್ಯವು ಹಾಳಾಗಬಹುದು” ಹಾಗಾಗಿ ಅವನನ್ನು ಅಟ್ಟಿಸಿದೆ ಎಂದರು. ಸ್ವಾಮೀಜಿಯ ಆಕ್ರೋಶದ ವರ್ತನೆಯ ಕಾರಣವನ್ನು ಅರಿತ ಗುರುಕ್ಕಲ್ ತನ್ನ ಸಂಗಡಿಗನಿಗೆ ಮರುದಿನ ಯಥಾರೂಪದಲ್ಲಿ ಸ್ವಾಮಿಜಿಯ ಮಾತುಗಳನ್ನು ತಿಳಿಸುತ್ತಾನೆ. ಜೊತೆಗೆ ತಾನು ಬುದ್ದಿ ಮಾತುಗಳನ್ನು ಹೇಳುತ್ತಾನೆ. ಅಲ್ಲಿಂದ ಆತನಿಗೆ ತಿಳುವಳಿಕೆ ಬರುತ್ತದೆ. ಸಂಸಾರಿಕ ಜೀವನದಲ್ಲಿ ತನ್ನಿಂದಾಗುವ ತಪ್ಪುಗಳನ್ನು ನೆನದು ಪಶ್ಚತಾಪ ಪಡುತ್ತಾನೆ. ನಂತರ ತನ್ನ ವರ್ತನೆಗಳನ್ನು ಸರಿಪಡಿಸಿಕೊಂಡು ಸಭ್ಯ ಗ್ರಹಸ್ಥನಾಗಿ ಸಂಸಾರ ರಥ ಸಾಗಿಸಲಾರಂಭಿಸಿದ. ಶ್ರೀ ನಿತ್ಯಾನಂದರ ಸಾಂಗತ್ಯ ಬೆಳೆಸಿಕೊಂಡು, ಅವರಿಂದ ಅನುಗ್ರಹ ಪಡೆಯುತ್ತಾನೆ. ಹೀಗೆ ಹಲವಾರು ದುರ್ಜನರನ್ನು ತಿದ್ದಿ ಸಜ್ಜನರಾಗಿಸಿದ ಕಥನಗಳು ಗುರುದೇವರ ಮಹಿಮೆಗಳಲ್ಲಿವೆ. ನಿತ್ಯಾನಂದರು ಸಕಲರ ಮನಸ್ಸನ್ನು ತಿಳಿದಿದ್ದರು. ಹಾಗಾಗಿ ನಿತ್ಯಾನಂದರು ಸರ್ವಜ್ಞರು.

LEAVE A REPLY

Please enter your comment!
Please enter your name here