ನಾಸ್ತಿಕತ್ವ ಮಾಯವಾಗಿಯೇ ಹೋಯಿತು!!!

0
3499

ನಿತ್ಯ ಅಂಕಣ-೭೭ : ತಾರಾನಾಥ್‌ ಮೇಸ್ತ, ಶಿರೂರು.
ಮಂಗಳೂರು ಮೂಲದ ಮಹಿಳೆಯೊರ್ವಳು ನಿತ್ಯಾನಂದ ಸ್ವಾಮಿಗಳ ಭಕ್ತೆಯಾಗಿದ್ದಳು. ಅವಳಿಗೆ ಮುಂಬೈಯಲ್ಲಿ ಇರುವ ವರನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆವಾಗಲೂ ಅವಳಿಗೆ ನಿತ್ಯಾನಂದರ ಮೇಲೆ ಭಕ್ತಿಯು ಅಧಿಕವಾಯಿತು. ಗುರುದೇವರಿರುವ ಗಣೇಶಪುರಿ ಮುಂಬೈಗೆ ಸನಿಹ ಇರುವುದೆಂಬ ಆಕೆಯ ಭಾವನೆ. ಹಿಗಾಗಿ ಗುರುದೇವರ ದರ್ಶನವನ್ನು ಆಗಿಂದಾಗ ಪಡೆಯಬಹುದೆಂಬ ಆಶೆಯು ಅವಳದಾಗಿತ್ತು. ಆದರೆ ಆಕೆಯ ಭಕ್ತಿ, ಆಧ್ಯಾತ್ಮ ಮಾರ್ಗವು ಗಂಡನಿಗೆ ಹಿಡಿಸಲಿಲ್ಲ. ಗಂಡನಲ್ಲಿ ನಾಸ್ತಿಕ ವಿಚಾರಧಾರೆಗಳು ಮನೆ ಮಾಡಿದ್ದವು. ಯೋಗಿ ಸನ್ಯಾಸಿಗಳನ್ನು ಮಹಿಳೆಯ ಗಂಡ ನಂಬುತ್ತಿರಲಿಲ್ಲ. ಹೆಂಡತಿ ಮಾತ್ರ ತನ್ನ ಪತಿ ಬದಲಾಗಲಿ, ನಿತ್ಯಾನಂದರಲ್ಲಿ ಭಕ್ತಿ ಶ್ರದ್ದೆ ಬೆಳೆಯಲಿ ಎಂದು ಪ್ರಾರ್ಥಿಸುತ್ತಿದ್ದಳು. ಆದರೆ ಗಂಡನಲ್ಲಿ ಮಾತ್ರ ನಾಸ್ತಿಕ ವಿಚಾರಧಾರೆಗಳು ದೂರವಾಗಲಿಲ್ಲ. ಹೆಂಡತಿ ಗಣೇಶಪುರಿಗೆ ಹೋಗಿ ಗುರುದೇವರ ದರ್ಶನ ಮಾಡಿ ಬರುವಂತೆ ಗಂಡನಲ್ಲಿ ವಿನಂತಿಸಿದ್ದರೆ, ಆತನು ಮಡಿದಿಯ ಕರೆಯನ್ನು ನಿರಾಕರಿಸುತ್ತಿದ್ದ. ಹೆಂಡತಿಗೆ ಗಂಡನ ವರ್ತನೆಯೇ ಒಂದು ಕೊರಗಾಗಿತ್ತು. ಆದರೆ ಆಕೆಯ ಗಂಡ ಎಲ್ಲಾ ವಿಚಾರಗಳಲ್ಲಿಯೂ ಸಜ್ಜನನಾಗಿದ್ದ. ಆಧ್ಯಾತ್ಮ ವಿಚಾರದಲ್ಲಿ ಮಾತ್ರ ಒಲವಿಲ್ಲದ ವ್ಯಕ್ತಿಯಾಗಿದ್ದ.

ಒಂದು ದಿನ ಹೆಂಡತಿ, ಗಂಡನಲ್ಲಿ ಹತ್ತು ರೂಪಾಯಿ ಹಣವನ್ನು ಯಾಚಿಸಿದಳು. ಆಕೆ ಹಣವು ಯಾಕೆ..? ಗಂಡನಿಂದ ಪ್ರಶ್ನೆಯನ್ನು ಎದುರಿಸಿದಳು. ನಿತ್ಯಾನಂದರ ದರ್ಶನ ಪಡೆಯಲು ಗಣೇಶಪುರಿಗೆ ತೆರಳಬೇಕಾಗಿದೆ, ಎಂದು ಹೆಂಡತಿ ವಿಧೇಯಳಾಗಿ ಉತ್ತರಿಸಿದಳು. ಆ ಸಣ್ಣ ವಿಚಾರಕ್ಕಾಗಿಯೆ ಹೆಂಡತಿಯಲ್ಲಿ ಕೊಪಿಸಿಕೊಂಡು ಗಂಡ ಜಗಳವಾಡಿದ. ಉಪಯೋಗವಿಲ್ಲದ ಆರಾಧನೆಗಳನ್ನು ಮಾಡಬಾರದೆಂದು ಆಜ್ಞಾಪಿಸಿದ. ಅಲ್ಲಿ ಹೋಗಿ ಏನು ಸಾಧಿಸಲಿಕ್ಕೆ ಇದೆ..? ಎಂದು ಒರಾಟಾಗಿಯೆ ಹೇಳಿದನಂತೆ. ನಂತರ ಸಿಟ್ಟಿನಿಂದ ಹತ್ತು ರೂಪಾಯಿಯನ್ನು ಹೆಂಡತಿಯಡೆಗೆ ಎಸೆದುಬಿಡುತ್ತಾನೆ. ಹೆಂಡತಿ ಗಂಡನ ಬೈಗುಳ, ಕೋಪ ಎಲ್ಲವನ್ನು ಎದುರಿಸಿಕೊಂಡು ತಾನು ನಂಬಿರುವ ಗುರುದೇವ ನಿತ್ಯಾನಂದರು ಇರುವ ಗಣೇಶಪುರಿಗೆ ತೆರಳುತ್ತಾಳೆ.

ಅವಳು ಗಣೇಶಪುರಿಗೆ ಬಂದಾಗ ಗುರುಗಳು ವೈಕುಂಠಧಾಮ ಆಶ್ರಮದಲ್ಲಿ ಇದ್ದರು. ಗುರುದೇವರು ಮಧ್ಯಾಹ್ನದ ಊಟದ ಸಮಯ ಕಳೆದರೂ ಊಟ ಮಾಡದೆ ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿ ಇದ್ದಂತೆ ಇದ್ದರು. ಅಲ್ಲಿ ಸೇರಿದ್ದ ಭಕ್ತರು ಕೂಡ ಊಟ ಮಾಡದೆ, ಗುರುದೇವರು ಊಟ ಮಾಡುವುದನ್ನು ಕಾಯುತ್ತಿದ್ದರು. ಗುರುದೇವರು ಯಾಕೆ ಊಟ ಮಾಡಲು ತಡ ಮಾಡುತ್ತಿದ್ದಾರೆ, ಎನ್ನುವ ಪ್ರಶ್ನೆ ಅಲ್ಲಿರುವ ಭಕ್ತರಿಗೆ ಕಾಡತೊಡಗಿತು. ಯಾರಿಗೂ ಗುರುದೇವರಲ್ಲಿ ಕಾರಣ ವಿಚಾರಿಸುವ ಧೈರ್ಯವು ಬರಲಿಲ್ಲ. ಅದೇ ಸಮಯ ಅವಸರದಲ್ಲಿ ಬರುವ ಮಹಿಳೆಯ ಪ್ರವೇಶವಾಯಿತು. ಆ ಮಹಿಳೆ ನಿತ್ಯಾನಂದರ ಪರಮಭಕ್ತೆ ಎಂದು ಎಲ್ಲರಿಗೂ ತಿಳಿದಿತ್ತು. ಅಲ್ಲಿದ್ದವರು ಮಹಿಳೆಯಲ್ಲಿ ವಿಚಾರ ತಿಳಿಸಿ, ಗುರುಗಳಡೆಗೆ ವಿಚಾರಿಸಲೆಂದು ಕಳಿಸಿಕೊಡುತ್ತಾರೆ. ಆವಾಗ ನಿತ್ಯಾನಂದರು, “ನಿನಗೆ ಪತಿಯ ಪೀಡನೆಯಿಂದ ಬೇಸರ ಆಗುತ್ತಿದೆಯಾ..? ಅವನು ಸುಧಾರಣೆ ಹೊಂದಲಿಲ್ಲವೇ..? ಹೇದರ ಬೇಡ, ಪ್ರತಿಯೊಬ್ಬರಿಗೂ ದೇವರ ಬಳಿ ಬರುವ ಸಮಯ ಬಂದೊದಗುತ್ತದೆ” ಎಂದರು. ನಿತ್ಯಾನಂದರಿಗೆ ಭಕ್ತೆಯ ಮನೆಯ ಕಲಹಗಳ ವಿಚಾರಗಳು ಆವಾಗಲೇ ತಿಳಿದಾಗಿತ್ತು. ಗುರುದೇವರು ಹೇಳಿರುವ ಸತ್ಯ ವಿಚಾರಗಳ ಆಲಿಸಿದ ಮಹಿಳೆಯು ಅಚ್ಚರಿ ಪಡುತ್ತಾಳೆ. ಆಗ ಆಕೆ ತಾನು ಮನೆಯಿಂದ ಅಡಿಗೆ ಮಾಡಿತಂದಿರುವ ಊಟವನ್ನು ಗುರುದೇವರಿಗೆ ಉಣ್ಣಲು ಬಡಿಸುತ್ತಾಳೆ.

ಒಂದು ಭಕ್ತೆಯ ಪ್ರೀತಿಯ ತುತ್ತಿಗಾಗಿ ಭಗವಾನ್ ನಿತ್ಯಾನಂದರು, ಊಟ ಮಾಡದೆ ಕಾಯುತ್ತಿದ್ದರು. ಭಕ್ತೆ ಬೇಯಿಸಿದ ಆಹಾರವನ್ನು ಉಂಡು ನಿತ್ಯಾನಂದರು ಆನಂದವನ್ನು ಅನುಭವಿಸುತ್ತಾರೆ. ಹಾಗೆಯೇ ಭಕ್ತೆಯನ್ನು ಅನುಗ್ರಹಿಸಿ ಕಳುಹಿಸುತ್ತಾರೆ. ನಿತ್ಯಾನಂದರು ಹೇಳಿದಂತೆ, ನಂತರದ ದಿನಗಳಲ್ಲಿ ಆಕೆಯ ಗಂಡನಲ್ಲಿಯ ನಾಸ್ತಿಕ ಭಾವನೆಗಳು ದೂರವಾಗುತ್ತದೆ. ಆಧ್ಯಾತ್ಮದ ಸೆಳತಕ್ಕೆ ಅವರು ಒಳಗಾಗುತ್ತಾರೆ. ನಿತ್ಯಾನಂದರ ಭಕ್ತರಾಗುತ್ತಾರೆ. ತಮ್ಮ ಮನೆಗೆ “ಸದ್ಗುರು ಬಂಧು” ಶುಭನಾಮ ಇಟ್ಟು ಗುರುದೇವರ ಸ್ಮರಿಸುತ್ತಾರೆ. ಒಮ್ಮೆ ಅವರ ಮನೆಯಲ್ಲಿಯೇ ಗುರುದೇವರ ಚಿತ್ರಗಳ ಸೆರೆಹಿಡಿದಿರುವ ಖ್ಯಾತ ಛಾಯಗ್ರಾಹಕ ಶ್ರೀ ಎಂ.ಡಿ ಸುವರ್ಣರು ಚಿತ್ರ ಪ್ರದರ್ಶನ ಆಯೋಜಿಸುತ್ತಾರೆ. ಅಂದು ಬಹಳಷ್ಟು ಭಕ್ತರು ಗುರುದೇವರ ಚಿತ್ರ ದರ್ಶನ ಪಡೆಯುತ್ತಾರೆ.

LEAVE A REPLY

Please enter your comment!
Please enter your name here