ನಾಳೆಯಿಂದ ಗೋಚಾತುರ್ಮಾಸ್ಯ ಆರಂಭ

0
312

ವರದಿ: ಲೇಖಾ
ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ 23ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.19ರಿಂದ ಎರಡು ತಿಂಗಳ ಕಾಲ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.
 
 
ಜುಲೈ 19ರಿಂದ ಸೆಪ್ಟೆಂಬರ್ 16ರ ವರೆಗೆ 60 ದಿನಗಳ ಕಾಲ ಚಾತುರ್ಮಾಸ ನಡೆಯಲಿದ್ದು, 60 ದಿನಗಳ ಕಾಲವೂ ಗೋಸಂರಕ್ಷಣೆ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಆನಂದದಯುಗ ಜನಕವತರಿಸಲಿ ಗೋವಿಂದ!’ ಎಂಬ ಘೊಷವಾಕ್ಯದೊಂದಿಗೆ ಈ ಗೋಚಾತುರ್ಮಾಸ್ಯ ಆಚರಿಸಲ್ಪಡಲಿದ್ದು, ಪ್ರತಿ ದಿನ ಚಾತುರ್ಮಾಸ್ಯ ಸಂದೇಶ ಅನುಗ್ರಹಿಸುವುದಾಗಿ ತಿಳಿಸಿದರು.
 
 
ಕಾರ್ಯಕ್ರಮದಲ್ಲಿ ನಿತ್ಯವೂ ಒಬ್ಬ ಉಪನ್ಯಾಸಕರಿಂದ ಗೋವಿನ ಕುರಿತ ಉಪನ್ಯಾಸ, ಪ್ರತೀ ಭಾನುವಾರ ಗೋವಿನ ಮಹತ್ವ ಕುರಿತ ವಿಶೇಷ ಗೋಷ್ಠಿಗಳು ನಡೆಯಲಿವೆ. ಜತೆಗೆ ನಿತ್ಯವೂ ಗೋಸಂರಕ್ಷಣೆಯಲ್ಲಿ ಸಾಧನೆ ಗೈದ ಓರ್ವರಿಗೆ “ಗೋಸೇವಕ ಪುರಸ್ಕಾರ’ ನೀಡಲಾಗುವುದು.
 
 
ಮಹಾ ಸಂಸ್ಥಾನದಿಂದ ಪ್ರತಿನಿತ್ಯ ಗೋಕಥೆ ಮತ್ತು ಭಾವ ಪೂಜೆಗಳು, ಗೋವಿಗೆ ಸಂಬಂಧಿಸಿದ ಪುಸ್ತಕ, ಸಿ.ಡಿ., ಆಟಿಕೆ ಸಾಮಗ್ರಿಗಳು ಲೋಕಾರ್ಪಣೆಯಾಗಲಿವೆ ಎಂದು ಸ್ವಾಮೀಜಿ ತಿಳಿಸಿದರು.
 
 
ಪ್ರತಿ ಭಾನುವಾರ ಶಾಲೆ ಮಕ್ಕಳಿಗಾಗಿ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಕರಾರ್ಚಿತ ದೇವತಾರ್ಚನೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲ ಸಮರ್ಪಣೆ, ಶ್ರೀಗಳಿಂದ ಮಂತ್ರಾಕ್ಷತೆ ಅನುಗ್ರಹ ಹಾಗೂ ರಾತ್ರಿ ಶ್ರೀಗಳಿಂದ ಸಾಧನಾ ಪಂಚಕ ಪ್ರವಚನಾನುಗ್ರಹ ನಡೆಯಲಿವೆ.
 
 
ಕಳೆದ ವರ್ಷದ ಚಾತುರ್ವಸ್ಯದಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ 60 ಪುಸ್ತಕ ಲೋಕಾರ್ಪಣೆಗೊಂಡಿದ್ದು, ಅದು ಲಿಮ್ಕಾ ದಾಖಲೆಯಾಗಿದೆ.
 
 
ರಾಷ್ಟ್ರದಲ್ಲಿ ಸುಮಾರು 41 ಗೋ ತಳಿಗಳನ್ನು ಗುರುತಿಸಿದ್ದು, ಆ ಪೈಕಿ ನಮ್ಮ ಮಠದಲ್ಲಿ 30 ಗೋ ತಳಿಗಳಿವೆ. 1600ಕ್ಕೂ ಹೆಚ್ಚು ಹಸುಗಳನ್ನು ಮಠದಲ್ಲಿ ಸಾಕಲಾಗಿದೆ. ಒಂದೆರಡು ವರ್ಷದಲ್ಲಿ ಗೋವಿಗಾಗಿಯೇ ಪೂರ್ಣಪ್ರಮಾಣದ ಹೈಟೆಕ್ ಆಸ್ಪತ್ರೆ ಆರಂಭಿಸಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
 
 
ಗೋ ಸಂರಕ್ಷಣೆ ಮನುಷ್ಯರು ಕೊಟ್ಟ ಪ್ರಚೋದನೆಯಲ್ಲ. ‘ಮಹಾನಂದಿ’ ಎಂಬ ಹಸುವೇ ನನ್ನ ಗೋ ಸಂರಕ್ಷಣೆಗೆ ಪ್ರೇರಣೆ. ಅದು ನಮ್ಮಲ್ಲಿ ಹುಚ್ಚಾಗಿ ಬೆಳೆಯಿತು. ನನಗೆ ಅನೇಕ ಸಂಕಷ್ಟಗಳು ಬಂದಿರಬಹುದು. ಆದರೆ, ಜನರ ಸಂಕಷ್ಟಗಳ ಎದುರು ನಮ್ಮ ಸಂಕಷ್ಟಗಳು ಏನೂ ಅಲ್ಲ. ಜನ ಮೈಮರೆತಾಗ ಸಂಕಟಗಳು ಜಾಸ್ತಿಯಾಗುತ್ತವೆ. ನಮ್ಮ ಧ್ಯೇಯೋದ್ದೇಶವೇ ಬೇರೆಯಾದ್ದರಿಂದ ನಮಗೆ ಒದಗಿ ಬಂದ ಕಷ್ಟಗಳನ್ನು ನಾವು ಅಲಕ್ಷ್ಯ ಮಾಡಿದೆವು ಎಂದರು.

LEAVE A REPLY

Please enter your comment!
Please enter your name here