ನಾಯಿಕಾ- ನಾಯಕ ಭಾವ

0
500

 
ಭೂಮಿಕಾ ಅಂಕಣ: ಅನುಪಮಾ ರಾಘವೇಂದ್ರ
ನೃತ್ಯದಲ್ಲಿ ಶೃಂಗಾರಕ್ಕೆ ಪ್ರಧಾನ ಸ್ಥಾನವಿದೆ. ಪ್ರೇಮವೇ ಜೀವನದ ತಿರುಳು . ‘ ಪರಮಾತ್ಮ ಪ್ರೇಮ ಸ್ವರೂಪ , ಪ್ರೇಮವೇ ಪರಮಾತ್ಮ ‘ ಎಂಬುದು ಭಾರತೀಯ ಸಿದ್ಧಾಂತ . ಮಾನವನು ಭಗವಂತನಲ್ಲಿ ಇಟ್ಟಿರುವ ಪ್ರೇಮ ಒಂದು ರೀತಿಯದಾದರೆ ಪ್ರಿಯತಮೆಯು ತನ್ನ ಪ್ರಿಯಕರನಲ್ಲಿ ಇಟ್ಟ ಪ್ರೇಮ ಇನ್ನೊಂದು ತರ . ಆದರೆ ಎರಡರಲ್ಲೂ ಇರುವುದು ಸ್ವಸಮರ್ಪಣೆ. ಕ್ರಮಿಸುವ ದಾರಿ ಬೇರೆ ಬೇರೆ.
 
 
ಶೃಂಗಾರ ಕಾವ್ಯಗಳು ಸಮಾಜದಲ್ಲಿ ಕಂಡು ಬರುವ ಎಲ್ಲಾ ರೀತಿಯ ನಾಯಿಕಾ – ನಾಯಕ ಭಾವಗಳನ್ನು ಕಾಣಬಹುದು. ನಾಯಕನು ‘ವಿನಯಶಾಲಿ, ಪ್ರಾಮಾಣಿಕ, ಮಧುರ, ತ್ಯಾಗಿ, ದಕ್ಷ, ಪ್ರಿಯನಾಗಿ ಮಾತನಾಡುವವ, ಲೋಕಪ್ರಿಯ, ಕುಲೀನ, ಅಚಲ, ತರುಣ, ಬುದ್ಧಿ-ಉತ್ಸಾಹ-ಸ್ಮೃತಿ-ಪ್ರಜ್ಞೆ-ಕಲೆ-ಮರ್ಯಾದೆಗಳಿಂದ ಕೂಡಿದವ, ಶೂರ, ದೃಢ, ಕಾಂತಿವೇತ್ತ, ಕಾಮಾದಿ ಭಾವಗಳಿಲ್ಲದ ನಿರ್ಮಲ ಚಿತ್ತ, ಶಾಸ್ತ್ರವೇತ್ತ, ಧಾರ್ಮಿಕನು’ ಆಗಿರಬೇಕು. ನಾಯಕರಲ್ಲಿ ನಾಲ್ಕು ಭೇದಗಳು.
 
 
 
ಧೀರೋದಾತ್ತ: ಶೋಕದಿಂದ ದೂರವಿರುವ ಮಾಹಾತ್ಮನೂ, ಅಹಂಕಾರವಿಲ್ಲದವನೂ, ಗಂಭೀರನೂ, ಕ್ಷಮಾಶೀಲನೂ, ದೃಢವ್ರತನೂ ಆದ ನಾಯಕ ಧೀರೋದಾತ್ತ ನಾಯಕ.
ಧೀರಲಲಿತ: ಧೈರ್ಯಶಾಲಿ, ವಿನೋದಪ್ರಿಯ, ಕಲೆಗಳಲ್ಲಿ ಆಸಕ್ತಿಯುಳ್ಳ ಮೃದುಸ್ವಭಾವದವ ಧೀರಲಲಿತ ನಾಯಕ.
ಧೀರಶಾಂತ: ಮನಸ್ಸಿನ ತುಂಬ ಸ್ತಬ್ಧತೆ ಹಾಗೂ ಶಾಂತಿಯಿಂದಿರುವ, ಉಲ್ಲಸಿತ ಮನಸ್ಸಿನ ಸೌಮ್ಯ ಸ್ವಭಾವದನು ಧೀರಶಾಂತ ನಾಯಕ.
ಧೀರೋದ್ಧತ್ತ: ದರ್ಪ ಮಾತ್ಸರ್ಯಗಳಿಂದ ತುಂಬಿರುವವ, ಮಾಯೆ ಮೋಸಗಳಲ್ಲಿ ಕುಶಲ, ಚಂಚಲತೆಯುಳ್ಳ ಅಹಂಕಾರಿ ಧೀರೋದ್ಧತ್ತ ನಾಯಕ.
ಮುಖ್ಯವಾದ ಈ ನಾಲ್ಕು ಭೇದಗಳಲ್ಲದೆ ಹಲವು ಅವಸ್ಥೆಗಳಿಗೆ ಅನುಸಾರವಾಗಿ ಹಲವಾರು ಭೇದಗಳನ್ನೂ ರೂಪಿಸಲಾಗಿದೆ.
ನಾಟ್ಯದ ಆರಂಭ ಕಾಲದಲ್ಲಿ ಭರತನು ತನ್ನ ಮೊದಲ ನೃತ್ಯ ನಾಟಕವನ್ನು ಸಂಯೋಜಿಸುವಾಗ ಲಾವಣ್ಯಮಯ ಕೈಶಿಕಿಯನ್ನುಮಾಡುವವರಿಲ್ಲದೆ ಬ್ರಹ್ಮನನ್ನು ಪ್ರಾರ್ಥಿಸಿದರಂತೆ. ಆಗ ಬ್ರಹ್ಮನು ಅಪ್ಸರೆಯರನ್ನು ಸೃಷ್ಟಿಸಿ, ಅವರು ನಾಯಿಕಾ ಪಾತ್ರಗಳನ್ನು ನಿರ್ವಹಿಸಿದರೆಂದು ಪ್ರತೀತಿ. ಸುಮಾರು ೧೦ – ೧೧ ನೆಯ ಶತಮಾನದವರೆಗೆ ನೃತ್ಯವು ದೇವಸ್ಥಾನಗಳಿಗೆ ಸೀಮಿತಗೊಂಡಿತ್ತು. ನಾಯಿಕೆ ದೇವದಾಸಿಯರಾಗಿದ್ದು ನಾಯಕನಾದ ದೇವರ ಎದುರು ನೃತ್ಯ ಮಾಡುವ ಸರ್ವೋಚ್ಛ ನಾಯಿಕೆಯರೆಂದು ಪರಿಗಣಿಸಲಾಗಿತ್ತು. ಕ್ರಮೇಣ ರಾಜರನ್ನು, ದೇವಾಲಯದ ಪೋಷಕರನ್ನು ಅವಲಂಬಿಸಬೇಕಾಗಿ ಬಂದು ಕಳಂಕಕ್ಕೊಳಗಾಗಬೆಕಾಯಿತು. ಆದರೆ ಇಂದಿಗೂ ಕೂಡ ನಾಯಿಕೆಯಾಗಿ ಪ್ರೇಕ್ಷಕರನ್ನು ಲೌಕಿಕದಿಂದ ಮಹೋನ್ನತ ಮಟ್ಟಕ್ಕೆ ಏರಿಸುವಲ್ಲಿ ನರ್ತಕಿಯರ ಪಾತ್ರ ಜವಾಬ್ದಾರಿಯುತವಾದದ್ದು. ಎಲ್ಲಾ ಸಾಹಿತ್ಯಗಳೂ ದೇವರ ಪ್ರೀತಿಯ ದಟ್ಟ ದೃಢೀಕರಣ ಹೊಂದಿದೆ. ಪ್ರಿಯಕರನಿಗಾಗಿ ನಾಯಿಕೆಯ ಹಂಬಲ, ವಿರಹ ವೇದನೆ, ಪ್ರತಿಸ್ಪರ್ಧಿಯಿಂದಾದ ಅಸೂಯೆ ಎಲ್ಲದರ ಅಂತಿಮ ಪರಿಣಾಮ ದೇವರಿಗೆ ಸಮರ್ಪಿತವಾಗುವ ಸಂಭ್ರಮ. ನಾಟ್ಯಶಾಸ್ತ್ರದಲ್ಲಿ ಎಂಟು ವಿಧದ ನಾಯಿಕೆಯರ ಬಗ್ಗೆ ಹೇಳಿದೆ.
 
ಸ್ವಾಧೀನಪತಿಕಾ (ಸ್ವಾಧೀನ ಭರ್ತೃಕಾ): ತನಗೆ ಅಧೀನನಾದ ಪತಿಯ ಆಜ್ಞಾನುವರ್ತಿಯಾಗಿರುವ ಉಲ್ಲಾಸಭರಿತ ನಾಯಿಕೆ.
ವಾಸಕಸಜ್ಜಾ: ಪತಿ , ಪ್ರಿಯಕರ ಬರುವ ಸಮಯದಲ್ಲಿ ಸಂತೋಷದಿಂದ ಅಲಂಕರಿಸಿಕೊಂಡು ಸಿದ್ಧಳಾಗಿರುವವಳು.
ವಿರಹೋತ್ಕಂಠಿತಾ: ಪತಿ ನಿರ್ದೋಷಿಯಾಗಿದ್ದರೂ ಬರಲು ತಡ ಮಾಡಿದರೆ ಸಂಶಯದಿಂದ ಮನದಲ್ಲಿ ಚಿಂತಿಸುವವಳು.
ವಿಪ್ರಲಬ್ಧ: ಹೇಳಿದ ಸಮಯಕ್ಕೆ ಪ್ರಿಯಕರ ಬರದಿದ್ದಲ್ಲಿ ಅವಮಾನಿತೆಯಾಗಿ ದುಃಖಪಡುವವಳು.
ಖಂಡಿತಾ: ತನ್ನ ಪ್ರಿಯ ಬೇರೊಬ್ಬಳ ಸಹವಾಸ ಹೊಂದಿರುವುದನ್ನು ತಿಳಿದು ಅಸೂಯೆಯಿಂದ ಕಲುಷಿತ ಮನಸ್ಸಿನಿಂದ ಪ್ರಿಯಕರನನ್ನು ದೂಷಿಸಿ ತಿರಸ್ಕರಿಸುವವಳು.
 
ಕಲಹಾಂತರಿಕಾ: ಅಪರಾಧಿಯಾದ ಪ್ರಿಯಕರನನ್ನು ದೂಷಿಸಿ ಅನಂತರ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವವಳು.
ಪ್ರೋಷಿತಪ್ರಿಯಾ ( ಪ್ರೋಷಿತಭರ್ತೃಕಾ) : ಕಾರ್ಯವಶದಿಂದ ದೂರದಲ್ಲಿರುವ ಪ್ರಿಯಕರನ ನೆನಪಿನಲ್ಲೇ ಸದಾಕಾಲ ಇರುವವಳು.
ಅಭಿಸಾರಿಕಾ: ಪ್ರೇಮಬಾಧಿತಳಾಗಿ ಪ್ರಿಯಕರನನ್ನು ಅರಸುತ್ತಾ ಹೋಗುವವಳು.
ಎಲ್ಲಾ ನಾಯಿಕೆಯರ ಅವಸ್ಥೆಗಳನ್ನು ಉತ್ತಮ, ಮಧ್ಯಮ, ಅಧಮ ಎಂದು ವರ್ಗೀಕರಿಸಿ ಅದಕ್ಕೆ ಅನುಸಾರವಾಗಿ ಹಲವಾರು ವಿಧದ ನಾಯಿಕೆಯರನ್ನು ವರ್ಣಿಸಲಾಗಿದೆ.
 
ನಾಯಿಕಾ–ನಾಯಕ ಭಾವವು ಭಾರತೀಯ ನೃತ್ಯದ ಪ್ರಮುಖ ಕಲ್ಪನೆ. ನಾಯಕನು ದೇವರಾಗಿದ್ದು ಜೀವಾತ್ಮನೆಂಬ ನಾಯಿಕೆಯು ದೇವರೊಂದಿಗೆ ಸಂಯೋಗ ಹೊಂದಲು ಹಂಬಲಿಸುತ್ತಾಳೆ. ಸಾಹಿತ್ಯವು ಸಂದರ್ಭಕ್ಕೆ ಅನುಗುಣವಾಗಿ ಮಾನವ ನೆಲೆಯಲ್ಲಿದ್ದರೂ ಅಮೂರ್ತವನ್ನು ಮೂರ್ತವಾಗಿಸುವ ಅದ್ಭುತವಾದ ಅಧ್ಯಾತ್ಮಿಕ ನೆಲೆಯಲ್ಲಿ ರೂಪುಗೊಳ್ಳುತ್ತದೆ. ಲೌಕಿಕವಾದ ವಿಷಯಗಳನ್ನು ಪಾರಮಾರ್ಥೆದೆಡೆಗೆ ಒಯ್ಯುವ ಸಾಮರ್ಥ್ಯವಿರುವುದು ಕಲೆಗೆ ಮಾತ್ರ. ಕಲಾವಿದರು ಈ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದು ಅವರ ನಟನಾ ಸಾಮರ್ಥ್ಯದ ಮೇಲೆ ನಿರ್ಧಾರವಾಗುವುದು.
ಅನುಪಮಾ ರಾಘವೇಂದ್ರ
[email protected]

LEAVE A REPLY

Please enter your comment!
Please enter your name here