ನಾಯಕತ್ವದ ಸ್ವರೂಪ

0
976

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ನಾಯಕ ಎಂದರೆ ಯಾರು? ಹಣವಂತೆ ನಾಯಕನಾ? ಒಳ್ಳೆಯವನು ನಾಯಕನಾ?-ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಹೋದರೆ ಪ್ರತಿಯೊಂದರಲ್ಲಿಯೂ ‘ಹೌದು’ ಎಂಬ ಉತ್ತರವೂ ‘ಅಲ್ಲ’ ಎಂಬ ಉತ್ತರವೂ ಎರಡೂ ಸಿಗುತ್ತದೆ. ಹಾಗಾದರೆ ನಾಯಕ ಎಂದರೆ ಯಾರು? -ಎಲ್ಲವನ್ನೂ ಒಟ್ಟು ಸೇರಿಸಿ ಹೇಳುವುದಾದರೆ ಅತ್ಯುತ್ತಮ ಅನುಯಾಯಿಯು ಮಾತ್ರ ಅತ್ಯುತ್ತಮ ನಾಯಕ ಆಗಲು ಸಾಧ್ಯ ಎನ್ನುವುದು ಅರ್ಥವಾಗುತ್ತದೆ. ನಾಯಕನೆಂದರೆ ಮುಖಂಡ ಎಂದು ಭಾವಿಸಬಾರದು. ಯಾರನ್ನು ನಾವು ಮುಖಂಡ ಎಂದು ಮಾಡಬೇಕು? ಒಂದು ಸಂಘಟನೆಯ ಅತ್ಯುತ್ತಮ ಸದಸ್ಯನನ್ನು ಮುಖಂಡನೆಂದು ಮಾಡಬೇಕು. ಅವನು ಸಂಘಟನೆಯ ಪ್ರಥಮ ಸದಸ್ಯನಾಗಿರುತ್ತಾನೆ ಅಷ್ಟೇ. ಈ ತಿಳಿಕೆಯು ಯಾವುದೇ ನಾಯಕತ್ವಕ್ಕೆ ಪ್ರಾಥಮಿಕ ಅಗತ್ಯವಾಗಿರುತ್ತದೆ.
ನಾಯಕತ್ವದ ವಿಧಗಳು:
ನಾಯಕತ್ವದಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು ಆರು. ಅವು ಈ ಕೆಳಗಿನಂತಿದೆ:
1) ವಂಶಪಾರಂಪರ್ಯ ನಾಯಕತ್ವ:
ಇಲ್ಲಿ ನಾಯಕತ್ವಕ್ಕೆ ಯಾವುದೇ ಅರ್ಹತೆಯ ಅಗತ್ಯ ಇರುವುದಿಲ್ಲ. ಅವನು/ಳು ಯಾರ ಮಗ/ಳು ಎನ್ನುವುದೇ ನಾಯಕತ್ವಕ್ಕೆ ಅರ್ಹತೆಯಾಗುತ್ತದೆ. ರಾಜ ಪ್ರಭುತ್ವ ವ್ಯವಸ್ಥೆಯಲ್ಲಿ ರಾಜನಾಗುವವನು ವಂಶ ಪಾರಂಪರ್ಯದ ಅರ್ಹತೆಯಿಂದಲೇ ರಾಜನಾಗುತ್ತಿದ್ದ. ಇಂದಿಗೂ ಇದು ಬೇರೆ ರೀತಿಯಲ್ಲಿ ಚಾಲ್ತಿಯಲ್ಲಿದೆ. ಒಂದು ಜಾತಿಯ ಗುಣಲಕ್ಷಣದ ಆಧಾರದಲ್ಲಿ, ಒಂದು ಕುಟುಂಬದ ಹಿರಿಯರ ಗುಣಲಕ್ಷಣಗಳ ಆಧಾರದಲ್ಲಿ ಆ ಸಮುದಾಯ ಕುಟುಂಬಕ್ಕೆ ಸೇರಿದ ವ್ಯಕ್ತಿಯಲ್ಲಿ ನಾಯಕತ್ವವನ್ನು ಗುರುತಿಸಿ ಒಪ್ಪಿಕೊಳ್ಳುವ ಪದ್ಧತಿಗಳೆಲ್ಲವೂ ವಂಶಪಾರಂಪರ್ಯ ನಾಐಕತ್ವವನ್ನೇ ಸೂಚಿಸುತ್ತದೆ.
2) ನಿರಂಕುಶ ನಾಯಕತ್ವ:
ನಿರಂಕುಶ ನಾಯಕತ್ವವು ನಿರ್ದೇಶಿತ ನಾಯಕತ್ವವೆಂದೂ ಕರೆಯಲ್ಪಟ್ಟಿದೆ. ಈ ಪದ್ಧತಿಯ ನಾಯಕತ್ವದಲ್ಲಿ ಗುಂಪಿನ ಸದಸ್ಯರು ತಮ್ಮ ನಾಯಕತ್ವದ ಅಧಿಕಾರವೆಲ್ಲವನ್ನೂ ಒಬ್ಬ ವ್ಯಕ್ತಿಗೆ ಶರಣಾಗಿಸಿ ಬಿಟ್ಟಿರುತ್ತಾರೆ. ಸಂಪೂರ್ಣ ಅಧಿಕಾರವು ನಾಯಕ/ಕಿಯಲ್ಲಿ ಕೇಂದ್ರಕೃತವಾಗಿರುತ್ತದೆ. ಆ ನಾಯಕತ್ವದ ನಿರ್ದೇಶನವನ್ನು ಗುಂಪು ಪ್ರಶ್ನಾತೀತವಾಗಿ ಅನುಸರಿಸಬೇಕಾಗುತ್ತದೆ. ಏನಾಗಬೇಕು, ಹೇಗಾಗಬೇಕು ಎಂಬುದನ್ನೇಲ್ಲ ನಾಯಕತ್ವವೇ ನಿರ್ಧರಿಸಿ ನಿರ್ದೇಶಿಸುತ್ತದೆ.
3)ಅರಾಜಕತಾ ನಾಯಕತ್ವ:
ಈ ರೀತಿಯ ನಾಯಕತ್ವವನ್ನು ಬೇಜವಾಬ್ದಾರಿಯ ನಾಯಕತ್ವವೆಂದೂ ಕರೆಯುತ್ತಾರೆ. ಗುಂಪಿನ ನಾಯಕತ್ವವು ಗುಂಪಿನ ಆಗುಹೋಗುಗಳ ಬಗ್ಗೆ ಚಿಂತಿಸುವುದೇ ಇಲ್ಲ. ಗುಂಪಿನ ಸದಸ್ಯರು ಅವರವರಿಗೆ ಇಷ್ಟ ಬಂದಂತೆ ವರ್ತಿಸುತ್ತಾರೆ.
4)ವರ್ಚಸ್ವೀ ನಾಯಕತ್ವ:
ಇದನ್ನು ಸಾಧನಾ ನಾಯಕತ್ವವೆಂದೂ ಕರೆಯುತ್ತಾರೆ. ಇಲ್ಲಿ ನಾಯಕರನ್ನು ಗುಂಪಿ ನೇರವಾಗಿ ರೂಪಿಸಿರುವುದಿಲ್ಲ. ಗುಂಪಿಗೆ ನಾಯಕನು/ಕಿಯು ಜವಾಬ್ದಾರಿರನೂ/ಳೂ ಆಗಿರುವುದಿಲ್ಲ. ವ್ಯಕ್ತಿಯ ಸ್ವಯಂ ಶಕ್ತಿಯಿಂದ ಮಾಡಿದ ಸಾಧನೆಯಿಂದಾಗಿ ನಾಯಕತ್ವದ ಸ‍್ಥಾನವನ್ನು ಪಡೆಯುತ್ತಾನೆ/ಳೆ.
5)ಪ್ರಜಾಸತ್ತಾತ್ಮಕ ನಾಯಕತ್ವ:
ಪ್ರಜಾಸತ್ತಾತ್ಮಕ ನಾಯಕತ್ವದಲ್ಲಿ ತೀರ್ಮಾನಗಳು ಗುಂಪಿನ ಸದಸ್ಯರ ಸಂವಾದಗಳಿಂದ ಮೂಡು ಬರುತ್ತದೆ. ಈ ಸಂವಾದದಲ್ಲಿ ಮುಖ್ಯಸ್ಥರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಆದರೆ ತಮ್ಮ ವಿಚಾರವನ್ನು ಗುಂಪಿನ ಮೇಲೆ ಹೇರುವುದಿಲ್ಲ. ಗುಂಪು ತೆಗೆದುಕೊಳ್ಳುವ ತೀರ್ಮಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯು ಮುಖ್ಯಸ್ಥರಿಗೆ ಇರುತ್ತದೆ. ಅನುಷ್ಠಾನ ಮಾಡುವ ಜವಾಬ್ದಾರಿ ಇರುವುದರಿಂದ ಮುಖ್ಯಸ್ಥರು ತೀರ್ಮಾನವನ್ನು ಸೂಚಿಸಬಹುದು. ಆದರೆ ಆ ಸೂಚನೆಯನ್ನು ಗುಂಪು ಒಪ್ಪಲೇಬೇಕೆಂದೇನೂ ಇಲ್ಲ. ಅಂತಿಮವಾಗಿ ಗುಂಪು ತೆಗೆದುಕೊಳ್ಳುವ ತೀರ್ಮಾನವನ್ನು ನಾಯಕತ್ವವು ಒಪ್ಪಲೇಬೇಕಾಗುತ್ತದೆ. ತೆಗೆದುಕೊಂಡ ತೀರ್ಮಾನದ ಅನುಷ್ಠಾನದಲ್ಲಿ ಗುಂಪು ಸಕ್ರಿಯವಾಗಿರುತ್ತದೆ. ಸದಸ್ಯರ ಮೇಲೆ ಹೇರಿಕೆಯ ಶಿಸ್ತು ಇರುವುದಿಲ್ಲ. ಆದರೆ ಸದಸ್ಯರು ಸ್ವಯಂ ಶಿಸ್ತನ್ನು ಹೊಂದಿರುತ್ತಾರೆ.
6) ಶಾಸನಾತ್ಮಕ ನಾಯಕತ್ವ:
ಈ ರೀತಿಯ ನಾಯಕತ್ವಕ್ಕೆ ಶಾಸನವು ಕೊಟ್ಟಿರುವ ಅಧಿಕಾರದಿಂದಾಗಿ ನಾಯಕತ್ವದ ಶಕ್ತಿಯು ಬಂದಿರುತ್ತದೆ. ವಾಸ್ತವದಲ್ಲಿ ಅವರು ಏನೂ ಆಗಿರುವುದಿಲ್ಲ. ಸ್ವಯಂ ಸಾಮರ್ಥ್ಯದ ವರ್ಚಸ್ಸಾಗಲಿ, ಗುಂಪಿನ ಒಪ್ಪಿಗೆಯಾಗಲು ಇರುವುದಿಲ್ಲ. ಕೇವಲ ಶಾಸನದ ಅನುಮೋದನೆ ಮಾತ್ರ ಇರುತ್ತದೆ. ನಮ್ಮಲ್ಲಿರುವ ಆಡಳಿತ ಅಧಿಕಾರಿಗಳು ಈ ರೀತಿಯ ನಾಯಕರಾಗಿದ್ದಾರೆ.
 
 
ನಾಯಕತ್ವದ ಗುಣಗಳು:
ನಮ್ಮಲ್ಲಿ ನಾಯಕತ್ವದ ಶಕ್ತಿಯು ಬರಬೇಕಾದರೆ ಕೆಲವೊಂದು ಗುಣಗಳನ್ನು ನಾವು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗುತ್ತದೆ. ಆ ರೀತಿಯ ಗುಣಗಳು ಈ ಕೆಳಗಿನಂತಿದೆ:
ಅನುಯಾಯಿಯ ಅರ್ಹತೆಗಳು:
ಒಬ್ಬ ಒಳ್ಳೆಯ ಅನುಯಾಯಿಯ ಲಕ್ಷಣವೆನೆಂದರೆ ಸಾಮೂಹಿಕ ಅವಶ್ಯಕತೆಗೆ ತಕ್ಕಂತೆ ತಾನು ನಡೆದುಕೊಳ್ಳುವುದು. ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿ ವರ್ತಿಸುವುದು. ತನ್ನ ವೈಯಕ್ತಿಕ ಅಭಿಪ್ರಾಯಕ್ಕೂ ಸಾಮೂಹಿಕ ಅವಶ್ಯಕತೆಗೂ ನಡುವೆ ಇರುವ ಅಂತರವನ್ನು ಎಚ್ಚರಿಕೆಯಿಂದ ಕಂಡುಕೊಂಡು ವೈಯಕ್ತಿಕ ಅಭಿಪ್ರಾಯವನ್ನು ವೈಯಕ್ತಿಕವಾಗಿಯೇ ಇರಿಸಿಕೊಂಡು ಸಾಮೂಹಿಕ ಅವಶ್ಯಕತೆಗೆ ಸ್ಪಂದಿಸುತ್ತಾ ಹೋಗುವುದು.
ಸೌಜನ್ಯಶೀಲತೆ:
ಗುಂಪಿನ ಸದಸ್ಯರೊಂದಿಗೂ, ಗುಂಪಿನ ಹೊರಗಿನವರೊಂದಿಗೂ ವಿನಯ ಮತ್ತು ವಿಶ್ವಾಸದಿಂದ ವರ್ತಿಸುವ ಸೌಜನ್ಯಶೀಲ ನಡವಳಿಕೆಯನ್ನು ರೂಪಿಸಿಕೊಳ್ಳಬೇಕು. ಮನಸು ಎಷ್ಟೇ ಒಳ್ಳೆಯದಿರಬಹುದು; ನಡವಳಿಕೆಯ ಸೌಜನ್ಯಶೀಲವಾಗಿ ಇಲ್ಲವೆ ಇದ್ದರೆ ವ್ಯಕ್ತಿಗೆ ನಾಯಕತ್ವದ ಶಕ್ತಿಯು ಬರುವುದಿಲ್ಲ. ಯಾಕೆಂದರೆ ಮನುಷ್ಯನ ಮನಸು ಅರ್ಥವಾಗುವುದು ಸಾಕಷ್ಟು ಒಡನಾಟವನ್ನು ನಡೆಸಿದ ಬಳಿಕವೇ. ಆದರೆ ಒಳನಾಟವು ಪ್ರಾರಂಭವಾಗುವುದು ವರ್ತನೆಯಲ್ಲಿ ತೋರಿಸುವ ಲಕ್ಷಣಗಳ ಮೂಲಕ. ಆದ್ದರಿಂದ ವರ್ತನೆಯ ಸೌಜನ್ಯಶೀಲವಾಗಿರುವಂತೆ ನೋಡಿಕೊಳ್ಳುವುದು ಮೂಲಭೂತ ಅಗತ್ಯವಾಗಿದೆ.
ದಿಟ್ಟತನ:
ಸೌಜನ್ಯಶೀಲತೆಯೆಂದರೆ ಎಲ್ಲವನ್ನೂ ಒಪ್ಪಿಕೊಳ್ಳುವುದು ಎಂದು ಅರ್ಥವಲ್ಲ. ದಿಟ್ಟವಾಗಿ ನಡೆದುಕೊಳ್ಳುವುದು ಅಗತ್ಯವಿರುತ್ತದೆ. ಕೆಲವೊಮ್ಮೆ ಕಠಿಣವಾಗಿಯೂ ನಡೆದುಕೊಳ್ಳಬೇಕಾಗುತ್ತದೆ. ಆದರೆ ಅದನ್ನು ಪ್ರಕಟಿಸುವ ವಿಧಾನವು ಮಾತ್ರ ಸೌಜನ್ಯಶೀಲವಾಗಿರಬೇಕು. ಆದರೆ ನಿರ್ಧಾರಕ್ಕೆ ಬದ್ಧವಾಗಿಯೇ ಇರುವ ದಿಟ್ಟತನವಿರಬೇಕು.
ಪ್ರಜಾಸತ್ತಾತ್ಮಕ ಧೋರಣೆಗಳು:
ಏನನ್ನೇ ಮಾಡುವುದಿದ್ದರೂ ಯಾರು ನಮ್ಮ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೋ ಅವರಿಗೆ ಮನವರಿಕೆ ಮಾಡಿಕೊಟ್ಟು ಅವರ ಅನುಮತಿಯನ್ನು ಪಡೆದ ನಂತರವೇ ಮಾಡಬೇಕು ಈ ಧೋರಣೆ ಇಲ್ಲದೆ ನಾಯಕತ್ವಕ್ಕೆ ಅದೆಷ್ಟೇ ದಕ್ಷತೆ ಇದ್ದರೂ ಸದಸ್ಯರ ವಿಶ್ವಾಸವನ್ನು ಪಡೆಯಲು ಅದಕ್ಕೆ ಸಾಧ್ಯವಾಗುವುದಿಲ್ಲ.
ಪ್ರಮಾಣಿಕತೆ:
ಸದಸ್ಯರು ನಾಯಕತ್ವದ ಮೇಲೆ ತೋರಿಸುವ ವಿಶ್ವಾಸವು ನಾಯಕತ್ವದ ಪ್ರಜಾಸತ್ತಾತ್ಮಕ ಧೋರಣೆಗೆ ಮಾತ್ರ ಸೀಮಿತವಾಗಿಲ್ಲ. ನಾಯಕತ್ವದ ಪ್ರಾಮಾಣಿಕತೆಯನ್ನು ಅವಲಂಬಿಸಿದೆ. ನಾಯಕತ್ವವು ಪ್ರಾಮಾಣಿಕವಾಗಿದ್ದರೆ ಸದಸ್ಯರು ನಾಯಕತ್ವವನ್ನು ನಂಬುತ್ತಾರೆ. ನಾಯಕತ್ವವು ತನ್ನ ಪ್ರಾಮಾಣಿಕತೆಯನ್ನು ಸದಸ್ಯರಿಗೆ ಮನವರಿಗೆ ಮಾಡಿಕೊಡಲು ಸಾಧ್ಯವಾದರೆ ನಾಯಕತ್ವದ ಸಣ್ಣಪುಟ್ಟ ಎಡವಟ್ಟುಗಳನ್ನು ಸದಸ್ಯರು ಸಹಿಸಿಕೊಳ್ಳಬಲ್ಲರು.
ವಸ್ತು ನಿಷ್ಠತೆ:
ಸದಸ್ಯರಲ್ಲಿ ವ್ಯತ್ಯಾಸಗಳು ಇರುತ್ತದೆ. ಕೆಲವು ಸದಸ್ಯರು ನಾಯಕತ್ವಕ್ಕೆ ಹತ್ತಿರದವರಾಗಿರುತ್ತಾರೆ. ಇನ್ನು ಕೆಲವು ಸದಸ್ಯರು ನಾಯಕತ್ವಕ್ಕೆ ದೂರದವರಾಗಿರುತ್ತಾರೆ. ಸ್ವಾಭಾವಿಕವಾಗಿ ವೈಯಕ್ತಿಕ ಆಸಕ್ತಿಗಳು, ವೈಯಕ್ತಿಕ ಸಂಬಂಧಗಳು, ಪರಸ್ಪರ ಕೊಡುಕೊಳ್ಳುವಿಕೆಗಳು ಇಂತಹ ವ್ಯತ್ಯಾಸಗಳಿಗೆ ಕಾರಣವಾಗಿರುತ್ತದೆ. ಆದರೆ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ತೆಗೆದುಕೊಂಡ ತೀರ್ಮಾನವನ್ನು ಅನುಷ್ಠಾನಗೊಳಿಸುವಾಗ ಈ ಯಾವ ಸಂಗತಿಗಳೂ ಪ್ರಭಾವವನ್ನು ಬೀರಬಾರದು ಎಂಬ ಎಚ್ಚರವು ನಾಯಕತ್ವಕ್ಕೆ ಇರಬೇಕು.
ಧೈಯಗಳ ಬಗ್ಗೆ ನಂಬಿಕೆ:
ಕೆಲವು ಸಂದರ್ಭಗಳಲ್ಲಿ ನಾಯಕರುಗಳಿಗೆ ತಾವು ಯಾವುದಕ್ಕಾಗಿ ನಿಯುಕ್ತರಾಗಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ. ಅರಿವಿದ್ದರೂ ಅದರ ಬಗ್ಗೆ ನಂಬಿಕೆ ಇರುವುದಿಲ್ಲ. ನಾಯಕತ್ವಕ್ಕೆ ಸಂಘಟನೆಯ ಧ್ಯೇಯದ ಬಗ್ಗೆ ನಂಬಿಕೆ ಇಲ್ಲದಿದ್ದರೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಸಂಘಟನೆಗೂ ಧೈಯ ಇರುತ್ತದೆ. ಜೀವನಕ್ಕೂ ಧ್ಯೇಯ ಇರುತ್ತದೆ. ಜೀವನದ ಧ್ಯೇಯಗಳ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಲಾರದವನು ಸಂಘಟನೆಯ ಧ್ಯೇಯಗಳ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಧ್ಯೇಯಗಳ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು.
ಸಾಹಸೀ ಮನೋಭಾವ:
ನಾಯಕನಲ್ಲಿ ಅಗತ್ಯ ಬಂದಾಗ ರಿಸ್ಕ್ ತೆಗೆದುಕೊಳ್ಳಬೇಕಾದ ಸಿದ್ಧತೆಗಳು ಇರಬೇಕಾಗುತ್ತದೆ. ಸಾಹಸೀ ಮನೋಭಾವ ಇಲ್ಲದವರು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಅದಕ್ಕೊಂದು ಸಾಮಾಜಿಕ ಆಯಾಮವೂ ಇದೆ. ಆಂತರಂಗಿಕ ಆಯಾಮವೂ ಇದೆ. ಜನಬೆಂಬಲ, ತಕ್ಕಮಟ್ಟಿನ ಆರ್ಥಿಕ ಸುಸ್ಥಿರತೆ, ಕೌಟುಂಬಿಕ ಸಾಮರಸ್ಯ ಮುಂತಾದ ಅಂಶಗಳು ಹಿತಕಾರಿಯಾಗಿದ್ದರೆ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವು ಜಾಸ್ತಿ ಇರುತ್ತದೆ. ಇದಕ್ಕಿಂತ ಮುಖ್ಯವಾದದ್ದು ಆಂತರಂಗಿಕ ಸ್ಥಿತಿ. ರಿಸ್ಕ್ ತೆಗೆದುಕೊಳ್ಳಬೇಕಾದರೆ ಸೂಕ್ತ ಮಾನಸಿಕ ದೃಢತೆಯೂ ಅದಕ್ಕಿರಬೇಕಾಗುತ್ತದೆ.
ಆತ್ಮವಿಶ್ವಾನ:
ಆತ್ಮವಿಶ್ವಾಸವು ಆಂತರಂಗಿಕವಾದ ನಂಬಿಕೆಯಾಗಿದೆ. ಎಲ್ಲಕ್ಕಿಂತ ದೊಡ್ಡ ನಂಬಿಕೆ ಎಂದರೆ ನಮ್ಮನ್ನು ನಾವು ನಂಬುವುದು. ನಮ್ಮ ನಡವಳಿಕೆಗಳು, ನಮ್ಮ ಆಲೋಚನೆಗಳು, ನಮ್ಮ ಜೊತೆಗಾರರು-ಈ ಎಲ್ಲ ಅಂಶಗಳೂ ನಮ್ಮ ಬಗ್ಗೆ ನಮಗೆ ನಂಬಿಕೆಯನ್ನು ಹುಟ್ಟಿಸುತ್ತದೆ. ನಮ್ಮ ಸಣ್ಣಸಣ್ಣ ಯಶಸ್ಸುಗಳನ್ನು ಅರ್ಥ ಮಾಡಿಕೊಂಡರೆ ನಾಉ ಏನೂ ಮಾಡಲಾರೆವು ಎಂಬ ಕೀಳರಿಮೆಯು ಹೊರಟು ಹೋಗುತ್ತದೆ. ಆಗ ಆತ್ಮವಿಶ್ವಾಸವು ಮೂಡಿಬರುತ್ತದೆ. ಆತ್ಮವಿಶ್ವಾಸವು ನಾಯಕತ್ವದ ಮೂಲಭೂತ ಅಗತ್ಯವಾಗಿದೆ.
ವ್ಯಕ್ತಿ ಗೌರವದ ಅರಿವು:
ಮನುಷ್ಯರು ಮನುಷ್ಯರನ್ನು ಗೌರವಿಸಬೇಕೆಂದು ತತ್ವಜ್ಞಾನವು ಹೇಳುತ್ತದೆ. ಆದರೆ ಮನುಷ್ಯ ಮನುಷ್ಯರನ್ನು ಗೌರವಿಸಲು ಜಾತಿ, ಮತ, ಪಂಥ, ಲಿಂಗ, ವರ್ಗ, ಸ್ಥಾನ ಮುಂತಾದ ಮಾನದಂಡಗಳು ಅಡ್ಡ ಬಂದು ದಟ್ಟವಾದ ಮೇಲು-ಕೀಳುಗಳ ತಾರತಮ್ಯವು ರೂಪುಗೊಂಡಿರುವುದು ವಾಸ್ತವದ ಸ್ಥಿತಿಯಾಗಿದೆ. ಈ ತಾರತಮ್ಯದ ಮನೋಭಾವವು ನಾಯಕತ್ವದ ಶಕ್ತಿಯನ್ನು ಕುಗ್ಗಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ವ್ಯಕ್ತಿ ಘನತೆಯಿಂದ ನಡೆಸಿಕೊಳ್ಳುವ ವ್ಯಕ್ತಿಗೌರವದ ನಡವಳಿಕೆಯನ್ನು ಹೊಂದುವುದು ನಾಯಕತ್ವದ ಲಕ್ಷಣವಾಗಿದೆ.
ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ:
ನಾವು ತೆಗೆದುಕೊಳ್ಳುವ ನಿರ್ಧಾರಗಳು ಹೇಗಿರಬೇಕು? ಈ ಪ್ರಶ್ನೆಗೆ ಹಲವಾರು ರೀತಿಯಲ್ಲಿ ಉತ್ತರಿಸಬಹುದು. ಒಳ್ಳೆಯ ನಿರ್ಧಾರವಾಗಿರಬೇಕು, ಒಳ್ಳೆಯ ಪರಿಣಾಮವನ್ನು ಉಂಟುಮಾಡಬೇಕು, ಹಿತಾನುಭವವನ್ನು ಉಂಟು ಮಾಡಬೇಕು ಎಂದೆಲ್ಲ ಉತ್ತರಿಸಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯ ಪರಿಣಾಮವನ್ನು ಉಂಟುಮಾಡುವ ಶಕ್ತಿಯು ನಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಇರಬೇಕು.
ದೂರದೃಷ್ಟಿ:
ದೂರದೃಷ್ಟಿಯ ಚಿಂತನೆಯು ನಾಯಕತ್ವಕ್ಕೆ ಇರಬೇಕಾದ ಅತ್ಯಂತ ಪ್ರಮುಖ ಲಕ್ಷಣವಾಗಿದೆ. ಒಂದು ವಿಚಾರದ ಬಗ್ಗೆ ಯೋಚಿಸುವ ಮತ್ತು ಚಿಂತಿಸುವ ಸಾಮರ್ಥ್ಯ ಇರಬೇಕು. ಆ ಚಿಂತನೆಯು ದೂರಗಾಮಿ ಪರಿಣಾಮಗಳನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿರಬೇಕು. ತನ್ನ ಗುಂಪಿನ ದೂರಗಾಮಿ ಹಿತದ ಬಗ್ಗೆ ಯೋಚಿಸಿ, ತೀರ್ಮಾನಿಸಿ ತೀರ್ಮಾನಕ್ಕೆ ಸಹಮತವನ್ನು ಪಡೆಯುವ ಪ್ರವೃತ್ತಿ ಹೊಂದಿರಬೇಕು.
ವಿವಾದ ಪರಿಹಾರ:
ಯಾವುದೇ ಒಂದು ವ್ಯವಸ್ಥೆಯಲ್ಲಿ ವಿವಾದಗಳು ಉದ್ಭವಿಸುವುದು ಸಹಜ. ಅಂತಹ ವಿವಾದಗಳನ್ನು ಪರಿಹರಿಸಲು ಬೇರೆ ಬೇರೆ ಸಂಘಟನೆಗಳಲ್ಲಿ ಬೇರೆ ಬೇರೆ ರೀತಿಯ ವ್ಯವಸ್ಥೆಗಳೂ ಇರುತ್ತದೆ. ಬೃಹತ್ ಉದ್ದಿಮೆಗಳಲ್ಲಿ ವಿವಾದ ಪರಿಹಾರ ಸಮಿತಿಗಳು ಇರುತ್ತದೆ. ಆದರೆ ಸಾಮಾನ್ಯ ಜೀವನದಲ್ಲಿ ಈ ರೀತಿಯ ವ್ಯವಸ್ಥೆಗಳಿರುವುದಿಲ್ಲ. ಮುಖ್ಯಸ್ಥರೆಂದು ಯಾರು ಗುರುತಿಸಲ್ಪಡುತ್ತಾರೆಯೋ ಅವರು ವಿವಾದವನ್ನು ಪರಿಹರಿಸಬೇಕಾಗುತ್ತದೆ. ವಿವಾದವನ್ನು ಪರಿಹರಿಸುವ ಸಾಮರ್ಥ್ಯ ಇದ್ದರೇನೆ ಅವರು ಮುಖ್ಯಸ್ಥರಾಗಲು ಅರ್ಹರಾಗುತ್ತಾರೆ.
ಸಂಯಮ:
ನಾಯಕತ್ವಕ್ಕೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸಂಯಮವಿರಬೇಕು. ಬೈಗುಳಗಳನ್ನು ಕೇಳಿಸಿಕೊಳ್ಳುವ ಸಹನೆ ಇರಬೇಕು. ನಾಯಕನಿಗೆ ಮೌನವೇ ಹೆಚ್ಚು ಭೂಷಣ. ಆದರೆ ಉಳಿದವರೆಲ್ಲರೂ ಆಡುವ ಮಾತುಗಳನ್ನು ಕೇಳಿಸಿಕೊಳ್ಳಿವ ಸಾಮರ್ಥ್ಯವಿರಬೇಕು. ಒಳ್ಳೆಯ ಕೇಲುಗನಾಗುವುದು ನಾಯಕತವದ ಪ್ರಧಾನ ಲಕ್ಷಗಳಲ್ಲಿ ಒಂದಾಗಿದೆ.
ನಾಯಕತ್ವದ ಬಗ್ಗೆ ತಿಳಿದುಕೊಳ್ಳುವುದರಿಂದ ನಾಯಕತ್ವವು ಬರುವುದು ಕಷ್ಟ. ಬದಲು ತಿಳಿದುಕೊಂಡಿದ್ದನ್ನು ಅನ್ವಯಿಸಿ ಅಳವರಿಸಿಕೊಳ್ಳುವ ಸಾಮರ್ಥ್ಯದಿಂದ ನಾಯಕತ್ವದ ಸಾಮರ್ಥ್ಯ ಬರುತ್ತದೆ. ಎಲ್ಲವನ್ನೂ ಅವಲೋಕನ ಮಾಡಿ ಅರ್ಥ ಮಾಡಿಕೊಂಡು ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಯೋಚಿಸಿ ಪ್ರತಿಕ್ರಿಯಿಸುವ ಕ್ರಮದಿಂದ ನಾಯಕತ್ವವು ಬರುತ್ತದೆ.
 
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here