ನಾಯಕತ್ವದ ಸ್ವರೂಪ

0
510

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ನಾಯಕ ಎಂದರೆ ಯಾರು? ಹಣವಂತೆ ನಾಯಕನಾ? ಒಳ್ಳೆಯವನು ನಾಯಕನಾ?-ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಹೋದರೆ ಪ್ರತಿಯೊಂದರಲ್ಲಿಯೂ ‘ಹೌದು’ ಎಂಬ ಉತ್ತರವೂ ‘ಅಲ್ಲ’ ಎಂಬ ಉತ್ತರವೂ ಎರಡೂ ಸಿಗುತ್ತದೆ. ಹಾಗಾದರೆ ನಾಯಕ ಎಂದರೆ ಯಾರು? -ಎಲ್ಲವನ್ನೂ ಒಟ್ಟು ಸೇರಿಸಿ ಹೇಳುವುದಾದರೆ ಅತ್ಯುತ್ತಮ ಅನುಯಾಯಿಯು ಮಾತ್ರ ಅತ್ಯುತ್ತಮ ನಾಯಕ ಆಗಲು ಸಾಧ್ಯ ಎನ್ನುವುದು ಅರ್ಥವಾಗುತ್ತದೆ. ನಾಯಕನೆಂದರೆ ಮುಖಂಡ ಎಂದು ಭಾವಿಸಬಾರದು. ಯಾರನ್ನು ನಾವು ಮುಖಂಡ ಎಂದು ಮಾಡಬೇಕು? ಒಂದು ಸಂಘಟನೆಯ ಅತ್ಯುತ್ತಮ ಸದಸ್ಯನನ್ನು ಮುಖಂಡನೆಂದು ಮಾಡಬೇಕು. ಅವನು ಸಂಘಟನೆಯ ಪ್ರಥಮ ಸದಸ್ಯನಾಗಿರುತ್ತಾನೆ ಅಷ್ಟೇ. ಈ ತಿಳಿಕೆಯು ಯಾವುದೇ ನಾಯಕತ್ವಕ್ಕೆ ಪ್ರಾಥಮಿಕ ಅಗತ್ಯವಾಗಿರುತ್ತದೆ.
 
 
ನಾಯಕತ್ವದ ವಿಧಗಳು:
ನಾಯಕತ್ವದಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು ಆರು. ಅವು ಈ ಕೆಳಗಿನಂತಿದೆ:
1) ವಂಶಪಾರಂಪರ್ಯ ನಾಯಕತ್ವ:
ಇಲ್ಲಿ ನಾಯಕತ್ವಕ್ಕೆ ಯಾವುದೇ ಅರ್ಹತೆಯ ಅಗತ್ಯ ಇರುವುದಿಲ್ಲ. ಅವನು/ಳು ಯಾರ ಮಗ/ಳು ಎನ್ನುವುದೇ ನಾಯಕತ್ವಕ್ಕೆ ಅರ್ಹತೆಯಾಗುತ್ತದೆ. ರಾಜ ಪ್ರಭುತ್ವ ವ್ಯವಸ್ಥೆಯಲ್ಲಿ ರಾಜನಾಗುವವನು ವಂಶ ಪಾರಂಪರ್ಯದ ಅರ್ಹತೆಯಿಂದಲೇ ರಾಜನಾಗುತ್ತಿದ್ದ. ಇಂದಿಗೂ ಇದು ಬೇರೆ ರೀತಿಯಲ್ಲಿ ಚಾಲ್ತಿಯಲ್ಲಿದೆ. ಒಂದು ಜಾತಿಯ ಗುಣಲಕ್ಷಣದ ಆಧಾರದಲ್ಲಿ, ಒಂದು ಕುಟುಂಬದ ಹಿರಿಯರ ಗುಣಲಕ್ಷಣಗಳ ಆಧಾರದಲ್ಲಿ ಆ ಸಮುದಾಯ ಕುಟುಂಬಕ್ಕೆ ಸೇರಿದ ವ್ಯಕ್ತಿಯಲ್ಲಿ ನಾಯಕತ್ವವನ್ನು ಗುರುತಿಸಿ ಒಪ್ಪಿಕೊಳ್ಳುವ ಪದ್ಧತಿಗಳೆಲ್ಲವೂ ವಂಶಪಾರಂಪರ್ಯ ನಾಐಕತ್ವವನ್ನೇ ಸೂಚಿಸುತ್ತದೆ.
2) ನಿರಂಕುಶ ನಾಯಕತ್ವ:
ನಿರಂಕುಶ ನಾಯಕತ್ವವು ನಿರ್ದೇಶಿತ ನಾಯಕತ್ವವೆಂದೂ ಕರೆಯಲ್ಪಟ್ಟಿದೆ. ಈ ಪದ್ಧತಿಯ ನಾಯಕತ್ವದಲ್ಲಿ ಗುಂಪಿನ ಸದಸ್ಯರು ತಮ್ಮ ನಾಯಕತ್ವದ ಅಧಿಕಾರವೆಲ್ಲವನ್ನೂ ಒಬ್ಬ ವ್ಯಕ್ತಿಗೆ ಶರಣಾಗಿಸಿ ಬಿಟ್ಟಿರುತ್ತಾರೆ. ಸಂಪೂರ್ಣ ಅಧಿಕಾರವು ನಾಯಕ/ಕಿಯಲ್ಲಿ ಕೇಂದ್ರಕೃತವಾಗಿರುತ್ತದೆ. ಆ ನಾಯಕತ್ವದ ನಿರ್ದೇಶನವನ್ನು ಗುಂಪು ಪ್ರಶ್ನಾತೀತವಾಗಿ ಅನುಸರಿಸಬೇಕಾಗುತ್ತದೆ. ಏನಾಗಬೇಕು, ಹೇಗಾಗಬೇಕು ಎಂಬುದನ್ನೇಲ್ಲ ನಾಯಕತ್ವವೇ ನಿರ್ಧರಿಸಿ ನಿರ್ದೇಶಿಸುತ್ತದೆ.
 
3)ಅರಾಜಕತಾ ನಾಯಕತ್ವ:
ಈ ರೀತಿಯ ನಾಯಕತ್ವವನ್ನು ಬೇಜವಾಬ್ದಾರಿಯ ನಾಯಕತ್ವವೆಂದೂ ಕರೆಯುತ್ತಾರೆ. ಗುಂಪಿನ ನಾಯಕತ್ವವು ಗುಂಪಿನ ಆಗುಹೋಗುಗಳ ಬಗ್ಗೆ ಚಿಂತಿಸುವುದೇ ಇಲ್ಲ. ಗುಂಪಿನ ಸದಸ್ಯರು ಅವರವರಿಗೆ ಇಷ್ಟ ಬಂದಂತೆ ವರ್ತಿಸುತ್ತಾರೆ.
 
4)ವರ್ಚಸ್ವೀ ನಾಯಕತ್ವ:
ಇದನ್ನು ಸಾಧನಾ ನಾಯಕತ್ವವೆಂದೂ ಕರೆಯುತ್ತಾರೆ. ಇಲ್ಲಿ ನಾಯಕರನ್ನು ಗುಂಪಿ ನೇರವಾಗಿ ರೂಪಿಸಿರುವುದಿಲ್ಲ. ಗುಂಪಿಗೆ ನಾಯಕನು/ಕಿಯು ಜವಾಬ್ದಾರಿರನೂ/ಳೂ ಆಗಿರುವುದಿಲ್ಲ. ವ್ಯಕ್ತಿಯ ಸ್ವಯಂ ಶಕ್ತಿಯಿಂದ ಮಾಡಿದ ಸಾಧನೆಯಿಂದಾಗಿ ನಾಯಕತ್ವದ ಸ‍್ಥಾನವನ್ನು ಪಡೆಯುತ್ತಾನೆ/ಳೆ.
 
5)ಪ್ರಜಾಸತ್ತಾತ್ಮಕ ನಾಯಕತ್ವ:
ಪ್ರಜಾಸತ್ತಾತ್ಮಕ ನಾಯಕತ್ವದಲ್ಲಿ ತೀರ್ಮಾನಗಳು ಗುಂಪಿನ ಸದಸ್ಯರ ಸಂವಾದಗಳಿಂದ ಮೂಡು ಬರುತ್ತದೆ. ಈ ಸಂವಾದದಲ್ಲಿ ಮುಖ್ಯಸ್ಥರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಆದರೆ ತಮ್ಮ ವಿಚಾರವನ್ನು ಗುಂಪಿನ ಮೇಲೆ ಹೇರುವುದಿಲ್ಲ. ಗುಂಪು ತೆಗೆದುಕೊಳ್ಳುವ ತೀರ್ಮಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯು ಮುಖ್ಯಸ್ಥರಿಗೆ ಇರುತ್ತದೆ. ಅನುಷ್ಠಾನ ಮಾಡುವ ಜವಾಬ್ದಾರಿ ಇರುವುದರಿಂದ ಮುಖ್ಯಸ್ಥರು ತೀರ್ಮಾನವನ್ನು ಸೂಚಿಸಬಹುದು. ಆದರೆ ಆ ಸೂಚನೆಯನ್ನು ಗುಂಪು ಒಪ್ಪಲೇಬೇಕೆಂದೇನೂ ಇಲ್ಲ. ಅಂತಿಮವಾಗಿ ಗುಂಪು ತೆಗೆದುಕೊಳ್ಳುವ ತೀರ್ಮಾನವನ್ನು ನಾಯಕತ್ವವು ಒಪ್ಪಲೇಬೇಕಾಗುತ್ತದೆ. ತೆಗೆದುಕೊಂಡ ತೀರ್ಮಾನದ ಅನುಷ್ಠಾನದಲ್ಲಿ ಗುಂಪು ಸಕ್ರಿಯವಾಗಿರುತ್ತದೆ. ಸದಸ್ಯರ ಮೇಲೆ ಹೇರಿಕೆಯ ಶಿಸ್ತು ಇರುವುದಿಲ್ಲ. ಆದರೆ ಸದಸ್ಯರು ಸ್ವಯಂ ಶಿಸ್ತನ್ನು ಹೊಂದಿರುತ್ತಾರೆ.
 
6) ಶಾಸನಾತ್ಮಕ ನಾಯಕತ್ವ:
ಈ ರೀತಿಯ ನಾಯಕತ್ವಕ್ಕೆ ಶಾಸನವು ಕೊಟ್ಟಿರುವ ಅಧಿಕಾರದಿಂದಾಗಿ ನಾಯಕತ್ವದ ಶಕ್ತಿಯು ಬಂದಿರುತ್ತದೆ. ವಾಸ್ತವದಲ್ಲಿ ಅವರು ಏನೂ ಆಗಿರುವುದಿಲ್ಲ. ಸ್ವಯಂ ಸಾಮರ್ಥ್ಯದ ವರ್ಚಸ್ಸಾಗಲಿ, ಗುಂಪಿನ ಒಪ್ಪಿಗೆಯಾಗಲು ಇರುವುದಿಲ್ಲ. ಕೇವಲ ಶಾಸನದ ಅನುಮೋದನೆ ಮಾತ್ರ ಇರುತ್ತದೆ. ನಮ್ಮಲ್ಲಿರುವ ಆಡಳಿತ ಅಧಿಕಾರಿಗಳು ಈ ರೀತಿಯ ನಾಯಕರಾಗಿದ್ದಾರೆ.
 
ಮುಂದುವರಿಯುವುದು
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here