ನಾನು ನಿಮ್ಮೊಂದಿಗೆ ಊರಿಗೆ ಬರುವುದಿಲ್ಲ!

0
1113

ನಿತ್ಯ ಅಂಕಣ:೩೭

ವಕೀಲ ಈಶ್ವರ ಐಯ್ಯರ್ ಅವರಿಗೆ ಕಾಶಿಯಾತ್ರೆ ಮಾಡಬೇಕೆಂಬ ಆಶೆಯೊಂದು ಚಿಗುರೊಡೆಯಿತು. ಇದು ಬಹಳ ವರ್ಷಗಳ ಅವರ ಕನಸಾಗಿತ್ತು. ವಯಸ್ಸು ಬೇರೆ ಆಗಿದೆ. ಮುಂದೆ ಖಂಡಿತ ನನ್ನ ದೇಹವು ಉತ್ತರ ಭಾರತದ ವಾತಾವರಣಕ್ಕೆ ಸ್ಪಂದಿಸದು. ಇಗಲೇ ಹೋಗುವುದು ಸೂಕ್ತ ಎಂದು ತಿರ್ಮಾನಿಸಿದರು. ಹಾಗೆಯೇ ಅಲ್ಲಿಂದ ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳ ದರ್ಶನ ಮಾಡಿಬರಲು ಯೋಚಿಸಿದರು. ಅದಕ್ಕೆಂದೆ ಹೋಗಬೇಕಾದ ತೀರ್ಥ ಕ್ಷೇತ್ರಗಳ ಪಟ್ಟಿ ತಯಾರಿಸಿದರು. ರಾಮನಿಗೆ ಆವಾಗ 12 ವರ್ಷಗಳ ಪ್ರಾಯ. ನಾನು ಒಂಟಿಯಾಗಿ ಹೋಗುವುದು ಸರಿಯಲ್ಲ. ರಾಮನನ್ನು ಜೊತೆಯಲ್ಲಿ ಕರೆದು ಕೊಂಡು ಹೋಗಲು ನಿರ್ಧರಿಸಿದರು. ರಾಮನು ಹೋಗಲು ಸಂತೋಷದಿಂದ ಒಪ್ಪಿದನು. ಒಂದು ಶುಭದಿನದಂದು ಈರ್ವರು ಕಾಶಿಯಾತ್ರೆಗೆ ತೆರಳಿದರು. ಮೊದಲು ಅವರು ಪ್ರಯಾಗ ತಲುಪಿದರು. ತ್ರಿವೇಣಿ ಸಂಗಮದಲ್ಲಿ ಈರ್ವರು ಪವಿತ್ರ ತೀರ್ಥ ಸ್ನಾನ ಮಾಡಿದರು.

ತ್ರಿವೇಣಿ ಸಂಗಮ ಸ್ನಾನಘಟ್ಟದ ದಡದಲ್ಲಿ ಈಶ್ವರ ಐಯ್ಯರರು ಪದ್ಮಾಸನ ಭಂಗಿಯಲ್ಲಿ ಕುಳಿತು, ಏಕಾಗ್ರತೆಯಿಂದ ಸೂರ್ಯ ನಾರಾಯಣ ದೇವರ ಮಂತ್ರ ಪಠಿಸುತ್ತಿದ್ದರು. ಈಶ್ವರ ಐಯ್ಯರರು ಅನುಷ್ಠಾನಗಳ ಸಮಾಪನ ಮಾಡಿದಾಗ, ತನ್ನ ಬಳಿಯಲ್ಲಿ ಕುಳಿತುಕೊಂಡಿದ್ದ ರಾಮನು ಇಲ್ಲವಾಗಿದ್ದು ಗಾಭರಿಗೊಳಿಸಿತು. ಪರಿಚಯ ಇಲ್ಲದ ಊರಲ್ಲಿ ರಾಮ ಏಲ್ಲಿಗೆ ಹೋದ ಎಂದು ಐಯ್ಯರರು ಚಿಂತಿಸುತ್ತಿರುವಾಗ, ಕಡಲಂತೆ ಭೊರ್ಗೆರೆಯುವ ನದಿಯ ಮಧ್ಯದಲ್ಲಿ ರಾಮನು ಈಜುತ್ತಿರುವುದು ಕಂಡುಬಂದಿತು. ಮರುದಿನ ಅವರಿರ್ವರು ವಾರಾಣಸಿಗೆ ತಲುಪುತ್ತಾರೆ. ಹನುಮಘಾಟ್ ಬಳಿ ವಸತಿ ಮಾಡುತ್ತಾರೆ. ಅಲ್ಲಿ ಅವರು ಮಣಿಕರ್ಣಿಕಾ ಪವಿತ್ರನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಅಲ್ಲಿದ್ದಾಗ ರಾಮ ಮಾತ್ರ ಯಾಕೋ ಈಶ್ವರ್ ಐಯ್ಯರ್ ಅವರಿಂದ ಬೇರ್ಪಡುತ್ತಿದ್ದ. ಏಕಾಂಗಿಯಾಗಿ ಅಲ್ಲಿಯ ಹರಿಶ್ಚಂದ್ರ ಘಾಟ್ ಸ್ಥಳದಲ್ಲಿ ಸಮಯ ಕಳೆಯುತ್ತಿದ್ದ. ಮತ್ತೆ ಈಶ್ವರ್ ಐಯ್ಯರ್ ಅವರಿಗೆ ರಾಮನ ಹುಡುಕಾಡುವ ಪ್ರಸಂಗಗಳು ಬರುತ್ತಿದ್ದವು. ಕಾಶಿ ವಿಶ್ವನಾಥನ ದರ್ಶನ ಪಡೆದ ಬಳಿಕ, ಅವರು ಗಯಾದ ವಿಷ್ಣು ದೇವರ ದರ್ಶನ ಮಾಡುತ್ತಾರೆ. ಅಲ್ಲಿಂದ ಅವರು ಅಕ್ಷಯಾವತಿ ತೆರಳಿ ಪುನಃ ವಾರಾಣಸಿಗೆ ಹಿಂತಿರುಗುತ್ತಾರೆ. ಪುನಃ ಹರಿಶ್ಚಂದ್ರ ರುದ್ರಭೂಮಿಯಲ್ಲಿ ರಾಮ ಆತ್ಮಾನಂದದ ಅನುಷ್ಠಾನಗಳಲ್ಲಿ ತಲ್ಲಿನನಾಗುತ್ತಾನೆ.

ಈಶ್ವರ ಐಯ್ಯರ್ ಅವರಲ್ಲಿ “ನಾನು ನಿಮ್ಮೊಂದಿಗೆ ಊರಿಗೆ ಬರುವುದಿಲ್ಲ”. ನಾನು ಹಿಮಾಲಯದ ಕಡೆಗೆ ಹೋಗಲು ನಿರ್ಧರಿಸಿದ್ದೆನೆ. ತಮ್ಮಿಂದ ನಾನು ಬೇರ್ಪಡಬೇಕಾಗಿದೆ. ಮತ್ತೊಂದು ದಿನ ಶುಭ ಸಮಯ ಒದಗಿ ಬರುತ್ತದೆ, ಆವಾಗ ನಾವಿಬ್ಬರು ಪುನಃ ಒಂದುಗೂಡುವ” ಎಂದು ರಾಮನು ಹೇಳುತ್ತಾನೆ. ರಾಮನ ಮಾತು ಕೇಳಿ, ವೃದ್ದ ಈಶ್ವರ್ ಐಯ್ಯರ್ ಅವರಿಗೆ ಒಮ್ಮೆಗೆ ಆಘಾತಗೊಂಡ ಅನುಭವ ಆಯಿತು. ಎಂತಹ ಆಚಾತುರ್ಯ ನನ್ನಿಂದ ನಡೆಯಿತು..! ರಾಮನನ್ನು ಕರೆದು ತೀರ್ಥ ಯಾತ್ರೆಗೆ ಕರೆದುಕೊಂಡು ಬಾರದಿತ್ತು..! ನನ್ನಿಂದ ತಪ್ಪು ನಡೆಯಿತು. ಏನು ಮಾಡುವುದು, ಪ್ರೀತಿಯ ಸೆಳೆತ ಬಿಡಲಿಲ್ಲ. ಇಲ್ಲಿಯ ಆಧ್ಯಾತ್ಮಿಕ ವಾತಾವರಣ ಅವನನ್ನು ಮರಳಿ ಊರಿಗೆ ಹೋಗಲು ಬಿಡುವುದಿಲ್ಲ. ಅವನ ಸಾಧನೆಗೆ ಇಲ್ಲಿಯ ಪವಿತ್ರ ಸ್ಥಳಗಳೇ ತಪೋಭೂಮಿ. ಹೀಗೆಲ್ಲಾ ಮನದೊಳಗೆ ಚರ್ಚಿಸುತ್ತ ಐಯ್ಯರ್ ಅವರು ರಾಮನ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸುತ್ತಾರೆ. ತನ್ನ ಮನೆಯ ಸದಸ್ಯನಾಗಿ ಬೆಳೆದ ರಾಮನನ್ನು ಬಿಟ್ಟು ಹೋಗಲು ಹೃದಯಾಂತರಳದಲ್ಲಿ ಅಡಗಿರುವ ಪ್ರೀತಿ ಐಯ್ಯರ ಅವರನ್ನು ಬಿಡುವುದಿಲ್ಲ. ಈಶ್ವರ ಐಯ್ಯರ್ ಅವರು ಒತ್ತಾಯ ಪಡಿಸುತ್ತಾರೆ, ಮನವೊಲಿಸುತ್ತಾರೆ. ರಾಮ.. ನಾವು ಮರಳಿ ಊರಿಗೆ ಸೇರೋಣ. ಹಿಮಾಲಯದತ್ತ ನೀನು ಹೋಗಲು ಬಹಳ ಸಣ್ಣವ. ಅದು ಭಯಾನಕ ಪ್ರದೇಶ. ಎಂದು ಐಯ್ಯರರು ಕಣ್ಣೀರು ಹಾಕುತ್ತ ಹೇಳುತ್ತಾರೆ. ಆದರೆ ರಾಮನ ನಿರ್ಧಾರ ಬದಲಾಗುವುದಿಲ್ಲ. ಐಯ್ಯರರು ಕಾಶಿಯಾತ್ರೆ ಮುಗಿಸಿ ಕೇರಳದತ್ತ ದುಃಖಿತರಾಗಿ ಪ್ರಯಾಣ ಬೆಳೆಸುತ್ತಾರೆ. ರಾಮನ ಚಿಂತೆ ಪ್ರಯಾಣದ ದಾರಿ ಉದ್ದಕ್ಕೂ ಕಾಡುತ್ತದೆ. ‘ರಾಮ ಏಲ್ಲಿಗೆ ಹೋದ..?’ ‘ಯಾಕೆ ಬಿಟ್ಟು ಬಂದೀರಿ..?’ ಎಂದೆಲ್ಲಾ ಊರಲ್ಲಿ ಮನೆ ಮಂದಿ ಅಲ್ಲದೆ ಊರ ಜನರು ಕೇಳಿಯೇ ಕೇಳುತ್ತಾರೆ. ಅವರಿಗೆಲ್ಲಾ ಸಮಾಧಾನ ಪಡಿಸಲು, ತಾನು ಏನೆಂದು ಉತ್ತರ ನೀಡಲಿ..! ಎಂದು ಪ್ರಯಾಣದ ಹಾದಿಯಲ್ಲಿ ಉತ್ತರ ಹುಡುಕ ಬೇಕಾದ ಪರಿಸ್ಥಿತಿ ಈಶ್ವರ ಐಯ್ಯರದಾಗುತ್ತದೆ.

ತಾರಾನಾಥ್‌ ಮೇಸ್ತ, ಶಿರೂರು.

Advertisement

LEAVE A REPLY

Please enter your comment!
Please enter your name here