“ನಾನು ಇನ್ನು ಸ್ಥೂಲ ಶರೀರ ಬಿಟ್ಟು ಸೂಕ್ಷ್ಮ ಶರೀರ ಧಾರಣೆ ಮಾಡಲಿದ್ದೇನೆ”

0
17874

ನಿತ್ಯ ಅಂಕಣ-೧೦೬ : ತಾರಾನಾಥ್‌ ಮೇಸ್ತ, ಶಿರೂರು.
ಕೈಲಾಶ ಆಶ್ರಮದಿಂದ ಸ್ಥಳಾಂತರಗೊಂಡು ಬೆಂಗಳೂರು ವಾಲಾ ಧರ್ಮಛತ್ರದ ಮೊದಲನೇ ಮಹಡಿಯಲ್ಲಿ ನಿತ್ಯಾನಂದರು ವಿಶ್ರಮಿಸುತ್ತಿದ್ದರು. ಧರ್ಮಛತ್ರದ ಒಳಗೆ ಭಕ್ತರು ದರ್ಶನ ಪಡೆಯಲು ಪ್ರವೇಶ ನಿರ್ಭಂದಿಸಲಾಯಿತು. ನಿತ್ಯಾನಂದರು ಇಚ್ಚೆಯ ಮೇರೆಗೆ ಅಗತ್ಯ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದರು. ಬಾಬಾರ ಆರೋಗ್ಯದ ಕ್ಷೀಣಿಸಿರುವ ಸುದ್ದಿ ಎಲ್ಲಾ ಕಡೆಗೂ ಶರವೇಗದಲ್ಲಿ ಹಬ್ಬಿತು. ಭಕ್ತರ ಮುಖದಲ್ಲಿ ದುಃಖದ ಛಾಯೆ ಆವರಿಸಿಕೊಂಡಿತು. ಅಗಸ್ಟ್-5 ನೇ ತಾರೀಕು ಶನಿವಾರ ನಿತ್ಯಾನಂದ ಸ್ವಾಮಿಗಳು ಕ್ಷೀಣ ಸ್ವರದಲ್ಲಿ ಹೇಳಿದರು, “ನಾನು ಇನ್ನು ಸ್ಥೂಲ ಶರೀರ ಬಿಟ್ಟು ಸೂಕ್ಷ್ಮ ಶರೀರ ಧಾರಣೆ ಮಾಡಲಿದ್ದೇನೆ. ಸ್ಥೂಲ ಶರೀರ ಸ್ವಲ್ಪ ಕೆಲಸ ಸೂಕ್ಷ್ಮ ಶರೀರ ತುಂಬ ಕೆಲಸ” ಅವರು ನಡು ನಡುವೆ “ಅಮಾಸ್ತಕ್” ಎಂಬ ಶಬ್ದ ಹೇಳುತ್ತಿದ್ದರು. “ರಾಮ-ಕೃಷ್ಣ ಹೋದರು. ಎಲ್ಲರಿಗೂ ಹೋಗಲ್ಲಿಕ್ಕಿದೆ. ದೇಹ ವಿಸರ್ಜನೆ ಮಾಡುವುದು ಎಂದರೆ ಬಟ್ಟೆ ಬದಲಾಯಿಸುವುದು” ಹೀಗೆಂದು ಗುರುದೇವರ ಕ್ಷೀಣಸ್ವರದ ನುಡಿಯಾಗಿತ್ತು.
ಅಗಸ್ಟ್ 6 ನೇ ತಾರೀಖು ಭಾನುವಾರ 1961. ಈ ದಿನ ನಿತ್ಯಾನಂದರು ದೈಹಿಕವಾಗಿ ಯಾತನೆ ಅನುಭವಿಸುತ್ತಿರುವ ರೀತಿಯಲ್ಲಿ ಕಾಣುತ್ತಿದ್ದರು. ‘ಅತ್ತಿಂದ ಇತ್ತ, ಇತ್ತಿಂದ ಅತ್ತ’ ನಿಧಾನಗತಿಯಲ್ಲಿ ತಿರುಗಾಡುತ್ತಿದ್ದರು. ಏನೊಂದು ಮಾತಾಡದೆ ಕೆಲವು ಹೊತ್ತು ಅವರ ಚಲನಕ್ರಿಯೆ ನಡೆಯುತಿತ್ತು. ಅವರು ತಡೆಯಲಾಗದ ಶಾರೀರಿಕ ವೇದನೆ ಅನುಭವಿಸುತ್ತಿದ್ದರೋ ಏನೋ..!!. ಗುರುದೇವರ ಅನಾರೋಗ್ಯದ ಸುದ್ದಿ ತಿಳಿದು ಈ ದಿನ ಮಂಗಳೂರು ಮೂಲದ ಹಲವಾರು ಭಕ್ತರು ಅಗಮಿಸಿದ್ದರು. ಗುರುದೇವರ ಸನಿಹದ ಸೇವಕರು ಬಾಬಾರು ದರ್ಶನ ನೀಡಲು, ಅವರ ದೈಹಿಕ ಸ್ಥಿತಿ ಸ್ಪಂದಿಸುವುದು ಕಷ್ಟವಿದೆ ಎಂದು ಹೇಳಿದ್ದರು. ಮಂಚದಲ್ಲಿ ಮಲಗಿ ವಿಶ್ರಮಿಸುತ್ತಿದ್ದ ನಿತ್ಯಾನಂದ ಬಾಬರು, ದೇಹಾರೋಗ್ಯ ಯಾವುದನ್ನೂ ಲೆಕ್ಕಿಸದೆ ಬಂದಿರುವ ಭಕ್ತರನ್ನು ಸನಿಹ ಕರೆದು ಮಾತನಾಡಿಸಿದ್ದರು. ಗತ ನೆನಪುಗಳನ್ನು ಮೆಲುಕು ಹಾಕಿದ್ದರು. ಆಶೀರ್ವಾದ ನೀಡಿ ಅವರನ್ನೆಲ್ಲ ಆನಂದದಿಂದ ಕಳಿಸಿದ್ದರು. ಈ ಸನ್ನಿವೇಶ ಕಂಡ ಭಕ್ತರು ಭಗವಾನರು ಸ್ವಸ್ಥ ಹೊಂದುತ್ತಿದ್ದಾರೆ. ಖಂಡಿತವಾಗಿ ಅವರು ಮೊದಲಿನಂತೆ ಆಗುವರು ಎಂದು ಭಾವಿಸಿದ್ದರು. ಬಂದಿರುವ ಭಕ್ತರು ಹೋದ ಬಳಿಕ ಗುರುದೇವರು ಮಂಚದಲ್ಲಿ ಮತ್ತೆ ಪವಡಿಸಿದರು.
ಲಕ್ಷ್ಮಣ ಶಾ ಖೋಡೆಯವರು ಹದಗೆಟ್ಟಿರುವ ಭಗವಾನರ ಆರೋಗ್ಯದ ಸ್ಥಿತಿಯನ್ನು ಕಂಡು ಹೇಳುತ್ತಾರೆ. “ಬಾಬಾ ನಿಮ್ಮ ನಿತ್ರಾಣವಾದ ದೇಹವನ್ನು ನೋಡಿ ನನಗೆ ಬಹಳ ನೋವಾಗುತ್ತಿದೆ. ಯಾಕೆ ನಿಮಗೆ ನಿಮ್ಮಲ್ಲಿರುವ ದಿವ್ಯಶಕ್ತಿಯನ್ನು ಬಳಸಿಕೊಂಡು ಈ ಕರುಣಾಜನಕ ಸ್ಥಿತಿಯಿಂದ ಹೊರ ಬರಬಹುದಲ್ಲವೇ..?” ಒಡನೆ ಕರುಣಾಸಿಂಧು ಗುರುದೇವರು, “ಈ ದೇಹ ಕೇವಲ ಧೂಳು ಮತ್ತು ಮಣ್ಣು. ಅದನ್ನು (ದೈವಿಕಶಕ್ತಿ) ಇದಕ್ಕಾಗಿ ಬಳಸಬಾರದು. ಇದು ಕೇವಲ ಭಕ್ತರಿಗಾಗಿ” ಎಂದು ಹೇಳುತ್ತಾರೆ.
ಅಗಸ್ಟ್ 7 ನೇ ತಾರೀಖು, 1961 ರಂದು ಬೆಳಿಗ್ಗೆ, ಹೋಟೆಲು ಮಾಲಿಕ ನಿತ್ಯಾನಂದ ಸ್ವಾಮಿಗಳ ಪರಮಭಕ್ತರಾದ ಭಾಸ್ಕರ ಶೆಟ್ಟಿ ಎನ್ನುವರು, ಆಶ್ರಮದಲ್ಲಿ “ಓಂ ನಮೋ ಭಗವತೇ ನಿತ್ಯಾನಂದಾಯ” ಗುರುದೇವರ ನಾಮಸ್ಮರಣೆ ಮಾಡುತ್ತ ಭಕ್ತರೊಂದಿಗೆ ಸೇರಿಕೊಂಡು ಸಾಮೂಹಿಕವಾಗಿ ಭಜಿಸುತ್ತಿದ್ದರು. ಗುರುದೇವರಿಗೆ ದ್ವಾದಶ ಅಕ್ಷರದ ಏಕವಾಕ್ಯದ ದಿವ್ಯ ಮಂತ್ರವು ಸ್ವಷ್ಟವಾಗಿ ಕೇಳಲ್ಪಟ್ಟಿತು. ಸ್ವಾಮಿಗಳು ಸೇವಕನೊಬ್ಬನ ಸನಿಹ ಕರೆದು, ಭಜಕರಲ್ಲಿ “ಗುರುರಾಜ್ ಮಹಾರಾಜ್ ಗುರು ಜೈ ಜೈ ಪರಬ್ರಹ್ಮ” ಹಾಡವಂತೆ ಹೇಳಿ ಕಳಿಸುತ್ತಾರೆ. ಸುದ್ಗುರುವಿನ ಆಜ್ಞೆಯಂತೆ ಭಜಕರು ಜಯಕಾರ ಪದವನ್ನು ಸುಶ್ರಾವ್ಯವಾಗಿ ಹಾಡಿದರು. ಸುದ್ಗುರು ನಿತ್ಯಾನಂದರು “ಯಾರಾದರೂ ಸೂರ್ಯನನ್ನು ನೋಡಲು ಅಪೇಕ್ಷಿಸಿದ್ದರೆ, ಇಂದೇ ನೋಡಿ, ಯಾಕೆಂದರೆ ನಾಳೆ ಅವರಿಂದ ನೋಡಲು ಸಾಧ್ಯವಾಗದು” ಎಂಬ ಒಗಟಾದ ಮಾತನ್ನು ತನ್ನನ್ನು ಸುತ್ತುವರಿದಿರುವ ಭಕ್ತರಿಗೆ ಕೇಳುವಂತೆ ಹೇಳಿದರು. ಇದು ಗುರುದೇವರು ಅಗಸ್ಟ್ ಏಳರಂದೇ ಹೇಳಿದ ಮಾತು. ಮಹಾಸಮಾಧಿ ಪಡೆಯುವ ದಿನವನ್ನು ಮುಂಚಿತವಾಗಿ ಭಕ್ತರಿಗೆ ಹೇಳಿದ್ದರು.
(ಮುಂದುವರಿಯುವುದು…)

LEAVE A REPLY

Please enter your comment!
Please enter your name here