ನಾತಿಚರಾಮಿ

0
481

ಹಿಂದಿನ ಸಂಚಿಕೆಯಿಂದ…
ದೃಷ್ಟಿ ಅಂಕಣ: ಸೌಮ್ಯ ಕುಗ್ವೆ

ವಾಗರ್ಥಮಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ| ಜಗತೌ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||
ಜಗತ್ತಿನ ಮಾತಾ-ಪಿತರಾದ ಪಾರ್ವತೀ ಪರಮೇಶ್ವರರನ್ನು ಆದರ್ಶವಾಗಿಟ್ಟುಕೊಂಡ ದಾಂಪತ್ಯ ಜೀವನವು, ಮಾತನಾಡುವ ಪ್ರತಿ ಪದಕ್ಕೆ ಅರ್ಥವು ಹೊಂದಿಕೊಂಡಿರುವಂತೆ ಗಂಡ-ಹೆಂಡತಿಯ ಸಂಬಂಧವೂ ಆದರ್ಶವಾಗಿ ಹೊಂದಿಕೊಂಡಿರಬೇಕಾದ್ದು ಎಂದು ಹೇಳುತ್ತದೆ. ಈ ಶ್ಲೋಕ-ಹಿಂದೂ ಧರ್ಮದಲ್ಲಿ ದಂಪತಿಗಳನ್ನು ದೇವರಿಗೆ ಹೋಲಿಸುವುದಿದೆ. ಲಕ್ಷ್ಮೀ-ನಾರಾಯಣ ಸ್ವರೂಪ, ಪಾರ್ವತೀ ಪರಮೇಶ್ವರರಂತೆ ಎಂದು. ಆದರೆ ಈ ಸ್ವರೂಪವೂ ವಿರೂಪವಾಗಿರುವುದು ಇಂದು ದಾಂಪತ್ಯದಲ್ಲಿನ ಅಪಸ್ವರಗಳಿಂದಾಗಿ ಆದರ್ಶವಾಗಿರಬೇಕಾದ ಸಂಬಂಧಗಳು ಪರಿಸ್ಥಿತಿಯ ಅನಿವಾರ್ಯತೆಗೊಳಪಟ್ಟು ಸುಗಮವಾಗ ಬೇಕಾದ ಬದುಕು ದುರ್ಗಮ ದಾರಿಯನ್ನು ಹಿಡಿದಿದೆ. ಅದಕ್ಕೆ ಹಲವಾರು ಕಾರಣಗಳೂ ದಂಪತಿಗಳ ಬಿರುಕನ್ನು ವಿಚ್ಛೇದನದಲ್ಲಿ ಅಂತ್ಯವಾಗಿಸುತ್ತದೆ.
 
divorce_artic2
ಈ ಶತಮಾನದ ಮಾದರಿ ಹೆಣ್ಣು
ಈ ಶತಮಾನ ಹೆಣ್ಣಿನ ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸುತ್ತದೆ. ವಿದ್ಯೆ ಹಾಗೂ ಉದ್ಯೋಗ ಪ್ರತಿ ಹೆಣ್ಣನ್ನು ಆರ್ಥಿಕ ಸ್ವಾವಲಂಬಿಯಾನ್ನಾಗಿಸುತ್ತದೆ. ಕೆಲವು ದಶಕಗಳ ಮೊದಲು ‘ಮದುವೆ’ಯೇ ಪ್ರಧಾನವಾದ ಸಮಾಜದ ಹೆಣ್ಣಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಗಂಡಿನ ಪ್ರಾಬಲ್ಯ ದೈಹಿಕವಾಗಿಯೂ, ಆರ್ಥಿಕವಾಗಿಯೂ ಹೆಚ್ಚಿದ್ದು, ಹೆಣ್ಣಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಕನಸಾಗಿತ್ತು. ಮನುಸ್ಮೃತಿಯಲ್ಲಿರುವಂತೆ ಹೆಣ್ಣು ಕೌಮಾರ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಗಂಡನ ಆಶ್ರಯದಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದುದೇ ಸರಿ ಎಂಬುದನ್ನು ಸಮಾಜ ಪುರಸ್ಕರಿಸಿತ್ತು.
 
divorce_artic1
 
ಆದರೆ ದಿನೇ ದಿನೇ ಹೆಚ್ಚುತ್ತಿರುವ ಹೆಣ್ಣಿನ ಮೇಲಿನ ದೌರ್ಜಲ್ಯ ಪೋಷಕರನ್ನು ಸ್ತ್ರೀಗೆ ಶಿಕ್ಷಣಾವಕಾಶವನ್ನು ನೀಡುವ, ಉದ್ಯೋಗಾವಕಾಶವನ್ನು ನೀಡುವ ಚಿಂತನೆಯನ್ನು ಹೆಚ್ಚಿಸಿತು. ಅದಕ್ಕೆ ಸರಿಯಾಗಿ ಹೆಣ್ಣುಮಕ್ಕಳು ತಮಗೆ ದೊರೆತ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಶಿಕ್ಷಣ-ಉದ್ಯೋಗ ಕ್ಷೇತ್ರಗಳಲ್ಲಿ ಗಂಡಿಗೆ ಸರಿಸಮವಾಗಿ ನಿಲ್ಲತೊಡಗಿದರು. ಸ್ತ್ರೀಗೆ ದೊರೆತ ಅವಕಾಶ ಪುರುಷ ಪ್ರಾಬಲ್ಯವನ್ನು ಕೊಂಚ ಮಟ್ಟಿಗೆ ತಗ್ಗಿಸಿತು.
 
 
 
ಅವಕಾಶ ವಂಚಿತ ಹೆಣ್ಣು-ಹೆಂಡತಿಯಾಗಿ, ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಇಷ್ಟವಿಲ್ಲದ ಗಂಡನ ಜೊತೆ ಅನಿವಾರ್ಯವಾಗಿ ಬದುಕು ಸಾಗಿಸಬೇಕಾದ ಕಾಲವಿತ್ತು. ಪ್ರತಿಯೊಂದು ವಸ್ತು ತೆಗೆದುಕೊಳ್ಳುವಾಗಿನಿಂದ ಹಿಡಿದು ಮನೆಯಲ್ಲಿನ ಪ್ರತಿ ಕೆಲಸಕ್ಕೂ ಗಂಡನ ನಿರ್ಧಾರವೇ ಅಂತಿಮವಾಗಿತ್ತು. ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೊಳಪಡುತ್ತಿದ್ದ ಸ್ತ್ರೀ ಭದ್ರತೆಯ ಕೊರತೆಯಿಂದಾಗಿ ಎಲ್ಲವನ್ನೂ ಸಹಿಸಿಕೊಂಡು ಬಾಳಬೇಕಾದ ಅನಿವಾರ್ಯತೆ ಇತ್ತು. ತಾನು ಗಂಡನನ್ನು ಬಿಟ್ಟರೆ ತಂದೆ-ತಾಯಿ, ಸಹೋದರರಿಗೆ ಭಾರವಾಗಬಹುದು, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂದು ನುಡಿಯುವ ಕುಹಕೀ ಜನರ ಮಾತು ಅವಳನ್ನು ಅಧೀರತೆ ತಳ್ಳುತ್ತಿತ್ತು.
 
divorce_artic
 
ಹಲವು ವರ್ಷಗಳ ಹಿಂದೆ ಒಂದು ಕುಟುಂಬದ ಯಜಮಾನ ಮಹಾಕುಡುಕ ಹಾಗೇ ಕೋಪಿಷ್ಟವಾಗಿ ಸಂಸಾರವನ್ನೂ ಜವಾಬ್ದಾರಿಯಿಂದ ನಡೆಸದೆ ಹೆಂಡತಿ ಹಾಗೂ ಮಕ್ಕಳ ಮೇಲೆ ಸಾಲದ ಹೊರೆಯನ್ನು ಹೊರಿಸಿದ. ಹೆಂಡತಿಯಾದವಳಿಗೆ ಪ್ರತಿನಿತ್ಯ ಹೊಡೆತ-ಬಡಿತ ಜೊತೆಗೆ ಸಂಸಾರಕ್ಕಾಗಿ ದುಡಿಯುವ ಹೊಣೆಗಾರಿಕೆ. ಶಿಕ್ಷಣವಿಲ್ಲದೆ, ಆರ್ಥಿಕವಾಗಿ ದುರ್ಬಲವಾದ ಹೆತ್ತವರಿಗೆ ಹೊರೆಯಾಗ ಬಯಸದೆ, ಸಮಾಜಕ್ಕೆ ಹೆದರಿ ಹೊಂದಾಣಿಕೆಯ ಮುಖವಾಡ ಧರಿಸಿ, ಎಲ್ಲವನ್ನೂ ಸಹಿಸಿಕೊಂಡ ಅನಿವಾರ್ಯತೆಗೆ ತಲೆಬಗ್ಗಿಸಿ ತಾನು ಹೆತ್ತ ಮಕ್ಕಳಿಗಾಗಿ ಜೀವಿಸತೊಡಗಿದಳು. ಅದೇ ಆಕೆಗೆ ಶಿಕ್ಷಣ-ಉದ್ಯೋಗದ ಭದ್ರತೆ ಇದ್ದಿದ್ದರೆ ಬಲವಂತದ ದಾಂಪತ್ಯಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದಿತ್ತು. ಆದರೆ ಅದೇ ರೀತಿ ಕುಡುಕ-ಸಿಡುಕ ಗಂಡನ ಕಾಟ ತಡೆಯಲಾರದೆ ಆದಷ್ಟು ಗಂಡನನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ಇನ್ನೋರ್ವ ಸ್ತ್ರೀ ಕಡೆಯ ಅವಕಾಶವಾಗಿ ‘ವಿಚ್ಛೇದನ’ ಕೊಟ್ಟು ಕಾನೂನಿನ ನೆರವು ಪಡೆದು ಈಗ ತಮ್ಮ ಮಕ್ಕಳೊಡನೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಆಕೆಯ ಪೋಷಕರಿಗೂ ಹೊರೆಯಾಗದೆ ತಾವು ಪಡೆದ ಶಿಕ್ಷಣದಿಂದ ಒಳ್ಳೆಯ ಉದ್ಯೋಗ ಗಳಿಸಿ ಆರ್ಥಿಕವಾಗಿ ಸಬಲಳಾಗಿದ್ದಾರೆ.
 
 
 
ನಮ್ಮ ಸುತ್ತಮುತ್ತಲಿನ ಸಮಾಜವನ್ನು ಗಮನಿಸಿದರೆ ಇಂತಹ ಎಷ್ಟೋ ಉದಾಹಣೆಗಳು ದೊರಕಬಹುದು. ಕೆಲವರು ಅನಿವಾರ್ಯವಾಗಿ ಬದುಕನ್ನು ಒಪ್ಪಿಕೊಂಡಿದ್ದರೆ, ಮತ್ತೆ ಕೆಲವರು ಅನಿವಾರ್ಯ ಬದುಕನ್ನು ಸಾಧ್ಯವಾದಷ್ಟು ಎದುರಿಸುತ್ತಿದ್ದಾರೆ. ಎಲ್ಲದಕ್ಕೂ ಅಥವಾ ಎಲ್ಲಾ ಸಮಸ್ಯೆಗಳಿಗೂ ವಿಚ್ಛೇದನವೊಂದೇ ಪರಿಹಾರವಲ್ಲದಿದ್ದರೂ ದಾಂಪತ್ಯದಲ್ಲಿ ಉಂಟಾದ ಸರಿಪಡಿಸಲಾಗದ ಬಿರುಕಿಗೆ ವಿಚ್ಛೇದನ ಒಂದು ಉಪಶಮನಕಾರಿಯಾಗಬಹುದು.
 
 
 
ಕೌಟುಂಬಿಕವಾಗಿ ಸ್ತ್ರೀ ಅಥವಾ ಪುರುಷ, ಇಬ್ಬರೂ ಎದುರಿಸುವ ಮಾತುಕತೆ ಅಥವಾ ಆಪ್ತ ಸಂವಾದದ ಮೂಲಕವೂ ಪರಿಹರಿಸಲಾಗದು ಎಂಬಂತಹ ಸಮಸ್ಯೆಗಳಿಗೆ ವಿಚ್ಛೇದನವೊಂದೇ ಪರಿಹಾರವಾಗಿದೆ. ಪುರುಷ ಪ್ರಾಬಲ್ಯವನ್ನು ಕುಗ್ಗಿಸಿದ ಸ್ತ್ರೀ ಶಿಕ್ಷಣ, ಉದ್ಯೋಗ ಪ್ರಗತಿ ಹೊಂದಾಣಿಕೆಗೂ ಮುಗಿಯದ ಸಮಸ್ಯೆಗೆ ವಿಚ್ಛೇದನವನ್ನು ಪರಿಹಾರ ಮಾರ್ಗವಾಗಿ ನೀಡಿತ್ತು. ಆರ್ಥಿಕವಾಗಿ ಪರವಲಂಬಿಯಾಗದೇ ಬದುಕುವ ಸಾಮರ್ಥ್ಯ ಗಳಿಸಿದ ಸ್ತ್ರೀ ಕುಟುಂಬದೊಳಗಿನ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ಬಲವಂತದ ಜೀವನದಿಂದ ಹೊರ ಬರುವೆಡೆ ಯೋಚಿಸತೊಡಗಿದಳು. ‘ವಿಚ್ಛೇದನ’ ದೌರ್ಜನ್ಯದ ಬದುಕನ್ನು ಎದುರಿಸುವ ಅಸ್ತ್ರವಾಯಿತ್ತು.
ಮುಂದುವರಿದಿದೆ…
ಸೌಮ್ಯ ಕುಗ್ವೆ

LEAVE A REPLY

Please enter your comment!
Please enter your name here