ನಾತಿಚರಾಮಿ ಭಾಗ-3

0
1042

 
ಮುಂದುವರಿದ ಭಾಗ
‘ಅತ್ತೆ ಅವ್ವಲ್ಲ, ಸೊಸೆ ಮಗಳಲ್ಲ’
ದೃಷ್ಟಿ ಅಂಕಣ: ಸೌಮ್ಯ ಕುಗ್ವೆ
ಸಂದರ್ಭ 1: ಎರಡು ಹೆಣ್ಣು ಮಕ್ಕಳ ನಂತರ ಜನಿಸಿದ ಪುತ್ರ ಆತ. ತಂದೆ-ತಾಯಿಗೆ ಮಗನ ಮೇಲೆ ವಿಪರೀತ ಪ್ರೀತಿ, ಮಮತೆ. ಆತ ತನ್ನ ಸಹೋದ್ಯೋಗಿಯನ್ನು ಮದುವೆಯಾಗುವನೆಂದು ಹಠ ಹಿಡಿದಾಗ ಮಗನ ಮೆಲಿನ ಪ್ರೀತಿಗೆ ಹಾಗೂ ಆತನ ಹಠಕ್ಕೆ ಅನಿವಾರ್ಯವಾಗಿ ತಮ್ಮ ಒಪ್ಪಿಗೆಯನ್ನಿತ್ತರು. ಅವನ ಮದುವೆಯ ನಂತರ ಕುಟುಂಬದ ಸದಸ್ಯೆಯಾದ ಅವನ ಹೆಂಡತಿ ಮಗನ ಪ್ರೀತಿಯಲ್ಲಿ ಪಾಲು ಪಡೆದದ್ದಾಕ್ಕಾಗಿ ಅತ್ತೆ-ಮಾವರ ಮನಸ್ಸು ಗೆಲ್ಲುವಲ್ಲಿ ಸೋತಳು. ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕಿ ಟೀಕಿಸುವ, ಸಂಬಂಧಿಕರ ಮುಂದೆ ಅವಮಾನಿಸುವ ಅತ್ತೆಯ ಸ್ವಭಾವ ನುಂಗಲಾರದ ಬಿಸಿ ತುಪ್ಪವಾಯಿತು. ಅಷ್ಟು ಸಾಲದೆ ಪ್ರತಿನಿತ್ಯ ಮಾಗನ ಬಳಿ ಸೊಸೆಯ ಬಗ್ಗೆ ದೂರು ಹೇಳುವ ಅತ್ತೆ ಮಗನ ಸಂಸಾರದಲ್ಲಿ ಬಿರುಗಾಳಿಯಾದರು. ಒಂದು ಹಂತದವರೆಗೂ ಸಹಿಸಿ ಹೊಂದಾಣಿಕೆಯ ಪ್ರಯತ್ನ ಮಾಡಿದರೂ ಸರಿಯಾಗದೆ, ಪ್ರತಿನಿತ್ಯ ಅನುಭವಿಸುವ ಮಾನಸಿಕ ಹಿಂಸೆಗೆ ಆಕೆ ವಿಚ್ಛೇದನದ ಮೂಲಕ ಪರಿಹಾರ ಕಂಡುಕೊಂಡಳು.
 
atte-sose
 
 
ಸಂದರ್ಭ 2: ಶ್ರೀಮಂತ ಕುಟುಂಬದ ಒಬ್ಬಳೇ ಮಗಳಾದ ರೂಪ, ಗುಣದಲ್ಲಿ ಶ್ರೀಮಂತನಾದ, ಹಣದಲ್ಲಿ ಅವಳ ತಂದೆ-ತಾಯಿಯ ಅಂತಸ್ತಿಗೆ ಕಡಿಮೆಯಾದ ಹುಡುಗನನ್ನು ಮದುವೆಯಾದಳು. ಮೊದಲಿನಿಂದಲೂ ಹಠಮಾರಿಯಾದ ಆಕೆಗೆ ಗಂಡನ ಕುಟುಂಬದೊಡನೆ ಹೊಂದಾಣಿಕೆಯಾಗದೆ ಪ್ರತಿನಿತ್ಯ ಗಂಡನಲ್ಲಿ ಜಗಳವಾಡತೊಡಗಿದ್ದಳು. ಅತ್ತೆಯ ಬಿಗಿ ಧೋರಣೆ ಅವಳ ಸ್ವತಂತ್ರ ಸ್ವಭಾವಕ್ಕೆ ವಿರುದ್ಧವಾಗಿತ್ತು. ಪ್ರತಿಸಲ ಜಗಳವಾದಾಗಲೂ ವಿಷಯ ಆಕೆಯ ತಂದೆ-ತಾಯಿಯ ಬಳಿ ತಲುಪಿದಾಗ ಮುದ್ದಿನಿಂದ ಸಾಕಿದ ಮಗಳ ಸಂಕಷ್ಟ ಹೆಚ್ಚೆಂದು ಮಗಳಿಗೆ ವಿಚ್ಛೇದನ ಕೊಟ್ಟು ವಾಪಾಸು ಬರಲು ಭೋಧಿಸಿದರು. ತಂದೆ-ತಾಯಿಯರ ಮಧ್ಯಸ್ಥಿಕೆ ಮಗಳ ಜೀವನಕ್ಕೆ ಮುಳ್ಳಾಯಿತು.
 
 
 
ಸಂದರ್ಭ 3: ಗುಣವಂತೆ ಭಾಗ್ಯಳನ್ನು ಮದುವೆ ಮಡಿಕೊಟ್ಟಿದ್ದು ಅತ್ತೆ-ಮಾವರಿದ್ದ ಕುಟುಂಬಕ್ಕೆ. ಆಕೆಯ ಗಂಡ ದುಶ್ಚಟಗಳ ದಾಸನಾಗಿದ್ದ. ತಿದ್ದಿ ಸರಿಮಾಡಬೇಕಾದ ತಂದೆ-ತಾಯಿ ಆತನ ಚಟಗಳಿಗೆ ಕುಮ್ಮಕ್ಕು ನೀಡಿದರಲ್ಲದೆ, ಗಂಡನನ್ನು ಸರಿಪಡಿಸಲು ಹೊರಟ ಸೊಸೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡತೊಡಗಿದರು. ಮುಂದೆ ಆಕೆ ಮದುವೆಯ ಬಂಧ ತನ್ನ ಜೀವಕ್ಕೆ ಕುತ್ತು ತರಲಿದೆಯೆಂದು ಅರಿತು ತನ್ನ ತವರಿನವರ ಸಹಾಯದಿಂದ ವಿವಾಹ ಬಂಧನದಿಂದ ವಿಚ್ಛೇದನದ ಮೂಲಕ ಬಿಡುಗಡೆ ಪಡೆದಳು.
 
 
ಮೂರು ಸಂದರ್ಭಗಳಲ್ಲಿದೆ ನಮ್ಮ ಸುತ್ತಮುತ್ತಲು ಇರುವ ಕುಟುಂಬ ವ್ಯವಸ್ಥೆಯಲ್ಲಿ ಇನ್ನೂ ಹಲವು ಉದಾಹರಣೆಗಳನ್ನು ಕಾಣಬಹುದು. ಬಹುತೇಕ ಸಂದರ್ಭಗಳು ಕೇವಲ ಗಂಡ-ಹೆಂಡತಿಯ ನಡುವಿನ ಭಿನ್ನಾಭಿಪ್ರಾಯ ಮಾತ್ರವಾಗಿರದೇ ಎರಡೂ ಕುಟುಂಬದ ಸದಸ್ಯರ ಅಸಮಾಧಾನ, ಜಗಳ ಹಾಗೂ ಭಾವನೆಗಳ ವೈಪರೀತ್ಯವೂ ಕಾರಣವಾಗಿರಲೂಬಹುದು.
 
 
 
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆ ಬೇರೆ ಸೂರಿನಡಿ ವಾಸಿಸುವ ಸಂದರ್ಭದಲ್ಲಿ ಹೊಂದಾಣಿಕೆ ಅನಿವಾರ್ಯವಾಗಿರುತ್ತದೆ. ಮದುವೆಯಾಗಿ ಮತ್ತೊಂದು ಕುಟುಂಬಕ್ಕೆ ಸೇರ್ಪಡೆಯಾದ ಹೆಂಡತಿಯು ಗಂಡ ಹಾಗೂ ಆತನ ತಂದೆ, ತಾಯಿ ಕುಟುಂಬದ ಇತರ ಸದಸ್ಯರೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಅದೇ ರೀತಿ ಮದುವೆಯಾದ ಗಂಡು ಸಹ ತನ್ನ ಪತ್ನಿಯ ಕುಟುಂಬದವರೊಡನೆ ಹಾರ್ದಿಕ ಸಂಬಂಧ ಬೆಳೆಸಿ ಉಳಿಸಿಕೊಂಡು ಹೋಗುವ ಅನಿವಾರ್ಯತೆಯೂ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಉಂಟಾಗುವ ವಿಚ್ಛೇದನದಲ್ಲಿ ಕುಟುಂಬದವರ ಪಾತ್ರ ಬಹುಮುಖ್ಯವೆನಿಸುತ್ತದೆ. ಬಹುತೇಕ ಮನೆಗಳಲ್ಲಿ ಅತ್ತೆ-ಸೊಸೆಯ ಜಗಳವೇ ದೊಡ್ಡದಾಗಿ ಗಂಡ-ಹೆಂಡತಿಯ ಸಂಬಂಧ ಮುರಿಯುವಲ್ಲಿಯವರೆಗೂ ಹೋಗುತ್ತದೆ. ಮಗನ ಬಗ್ಗೆ ಪೊಸೆಸ್ಸಿವ್ ಆದ ತಾಯಿ ಮಗನ ಪ್ರೀತಿಯಲ್ಲಿ ಪಾಲು ಪಡೆದ ಹೆಣ್ಣನ್ನು ಸಹಜವಾಗಿ ತಿರಸ್ಕರಿಸುತ್ತಾ ಹೋಗುತ್ತಾಳೆ. ಅತ್ತೆಯ ಮನೋಭಾವಕ್ಕೆ ಕಾರಣ ಅರಿಯದ ಸೊಸೆ ಒಂದು ಹಂತದವರೆಗೂ ಸಹಿಸಿಕೊಂಡು ಮತ್ತೆ ತಾನೂ ಎದುರು ವಾದಿಸಿ ಜಗಳಕ್ಕೆ ಕಾರಣವಾಗುತ್ತಾಳೆ.
 
 
 
ಮುದ್ದಿನ ಮಗಳಾಗಿ ಒಂದು ಕುಟುಂಬದ ಭಾಗವಾಗಿದ್ದ ಹೆಣ್ಣು ಮದುವೆಯಾದೊಡನೆ ಮತ್ತೊಂದು ಕುಟುಂಬದ ಸದಸ್ಯೆಯಾಗಿ ಮನೆಯ ರೀತಿ-ನೀತಿಗಳಿಗೆ, ಜನರಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೊಳಪಡುತ್ತಾಳೆ. ಅಂತಹ ಸಂದರ್ಭದಲ್ಲಿ ಆಕೆಗೆ ಗಂಡ ಮಾತ್ರ ತನ್ನವನಾಗಿದ್ದ, ಉಳಿದ ಕುಟುಂಬದ ಸದಸ್ಯರ ಬ್ಗಗೆ ತಿಳಿದುಕೊಳ್ಳಲು ಗಂಡನನ್ನೇ ಆಶ್ರಯಿಸಿರುತ್ತಾಳೆ. ಮನೆಯ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಆ ಮನೆಯ ಸ್ತ್ರೀಯ ಮಾರ್ಗದರ್ಶನ ಬಯಸುತ್ತಾಳೆ.
 
 
 
ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿ ಅತ್ತೆಯಾದವಳು ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲಿ ಮನೆಯಲ್ಲಿ ಸಾಮರಸ್ಯ ಉಳಿಯುತ್ತದೆ. ಇಲ್ಲದಿದ್ದರೆ ಅಸಮಾಧಾನಿತ ಅತ್ತೆಯ ಪಾರುಪತ್ಯ ಹಾಗೂ ತಿಳುವಳಿಕೆ ಇಲ್ಲದೆ, ಕುಟುಂಬದ ಹೊಸ ಸದಸ್ಯೆಯಾದ ಸೊಸೆಯ ನಡುವಿನ ಭಿನ್ನಾಭಿಪ್ರಾಯ, ಜಗಳಗಳು ಕಾರಣವಾಗಿ ಗಂಡ-ಹೆಂಡತಿಯ ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತದೆ.
 
 
 
ಕುಟುಂಬದೊಳಗಿನ ಜಗಳ ಯಾವುದೇ ಕಾರಣಕ್ಕಾದರು ಮದುವೆ ಬಂಧವನ್ನು ಸಡಿಲಗೊಳಿಸುತ್ತಾ ಹೋಗುತ್ತದೆ. ಅತ್ತೆಯನ್ನು ದೂರುವ ಸೊಸೆ, ಸೊಸೆಯನ್ನು ದೂರುವ ತಾಯಿ, ಯಾವುದೇ ನಿರ್ಧಾರಕ್ಕೂ ಬರಲಾಗದೆ, ಸರಿಯಾಗಿ ಯಾರ ತಪ್ಪೆಂದು ತೀರ್ಮಾನಿಸಲಾಗದೆ, ತಮ್ಮಗಳ ‘ಜನರೇಶನ್ ಗ್ಯಾಪ್’ ಅನ್ನು ತುಂಬಿಸುವ ದಾರಿ ಕಾಣದ ಮಗ ಅನಿವಾರ್ಯವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುವ ಹಂತಕ್ಕೆ ತಲುಪಿರುತ್ತಾನೆ. ಮನೆ ಮುರಿಯಬೇಕು. ಇಲ್ಲಿ ವಿವಾಹ ಮುರಿಯಬೇಕಾದ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿಚ್ಛೇದನ ಪರಿಹಾರ ಮಾರ್ಗವಾಗಿ ತೋರುತ್ತದೆ.
ಹಲವು ಸಲ ಎರಡೂ ಕಡೆಯ ಪೋಷಕರಿಂದ ಗಂಡ-ಹೆಂಡತಿಯ ಸಾಮರಸ್ಯಕ್ಕೆ ಧಕ್ಕೆಯುಂಟಾಗುವುದರಿಂದಲೂ ವಿಚ್ಛೇದನ ಮೊರೆ ಹೋಗುತ್ತಾರೆ. ಸಣ್ಣಪುಟ್ಟ ಜಗಳಗಳುಂಟಾದಾಗ ಗಂಡನ ಅಪ್ಪ-ಅಮ್ಮ ಹಾಗೂ ಕುಟುಂಬದ ಇತರ ಸದಸ್ಯರ ದೂರು ಇದಕ್ಕೆಲ್ಲಾ ಕಾರಣ. ಆತನ ಹೆಂಡತಿ ಎಂದಾದರೆ, ಹೆಂಡತಿಯ ಅಪ್ಪ-ಅಮ್ಮ ಕುಟುಂಬದವರ ದೂರು ಗಂಡ ಹಾಗೂ ಆತನ ಮನೆಯವರಾಗಿರುತ್ತಾರೆ. ಈ ದೋಷಾರೋಪಣೆ ಪಟ್ಟಿ ಉದ್ದವಾಗುತ್ತಾ ಹೋದ ಹಾಗೆ ಗಂಡ-ಹೆಂಡತಿಯ ಸಂಬಂದ ಹಳಸಿ ಹೋಗಿರುತ್ತದೆ. ಇಬ್ಬರಲ್ಲೇ ಬಗೆಹರಿಯ ಬೇಕಾದ ಎಷ್ಟೋ ಜಗಳಗಳು ಉಂಡು ಮಲಗುವ ತನಕ ಮಾತ್ರ ಆಗಿರದೇ ಮುಂದುವರದು ಇತರರ ಹಸ್ತಕ್ಷೇಪದೊಡನೆ ಹೆಚ್ಚಾಗಿ ವಿಚ್ಛೇದನ ಮಾರ್ಗ ಹಿಡಿಯುತ್ತದೆ.
 
ನಿರೀಕ್ಷಿಸಿ ಮುಂದಿನ ಭಾಗದಲ್ಲಿ…
ಸೌಮ್ಯ ಕುಗ್ವೆ
[email protected]

LEAVE A REPLY

Please enter your comment!
Please enter your name here