`ನಾಟ್ಯ ಕಲೆಯ ಕುರಿತ ತಾತ್ಸಾರ ಸಲ್ಲದು'

0
416

ಚಿತ್ರ-ವರದಿ: ಯತಿರಾಜ್ ಬ್ಯಾಲಹಳ್ಳಿ
ಹಲವರು ಪಾಶ್ಚಾತ್ಯ ನೃತ್ಯ ಕಲೆಗೆ ಮಾರುಹೋಗಿದ್ದಾರೆ. ಪಾಶ್ಚಾತ್ಯರು ನಮ್ಮ ನೃತ್ಯಕಲೆ ಕಲಿಯಲು ಆಸಕ್ತರಾಗಿದ್ದರೆ, ನಾವು ಮಾತ್ರ ನಮ್ಮಕಲೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದೇವೆಎಂದುಧಾರಾವಾಡದ `ವಿಶ್ವಾಂಬರಿ ಭರತನಾಟ್ಯ ಮತ್ತು ಸಂಸ್ಕೃತಿ ಸಂಸ್ಥೆ’ಯ ವಿದುಷಿ ಅಂಕಿತಾರಾವ್ ಅಭಿಪ್ರಾಯಪಟ್ಟರು.
 
 
 
ಧರ್ಮಸ್ಥಳದ ಎಸ್ ಡಿ ಎಂ ಪ್ರೌಢಶಾಲಾ ಆವರಣದಲ್ಲಿ ಕಾರ್ತೀಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಿದ್ಧಪಡಿಸಿರುವ ವಸ್ತುಪ್ರದರ್ಶನ ಮಂಟಪದಲ್ಲಿ ಭರತನಾಟ್ಯ-ಕೂಚುಪುಡಿ ನೃತ್ಯವನ್ನು ತಮ್ಮ ತಂಡದೊಂದಿಗೆ ನಡೆಸಿಕೊಟ್ಟ ನಂತರ ಎಸ್ ಡಿ ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.
 
 
ಪುರಾತನ ಕಲೆಯಾದ ಭರತನಾಟ್ಯವನ್ನು ಕಲಿಯುವ ಆಸಕ್ತಿ ಹೆಚ್ಚಬೇಕಿದೆ. ಭರತಮುನಿಯ ನಾಟ್ಯಶಾಸ್ತ್ರದಿಂದ ಇಲ್ಲಿಯವರೆಗೂ ಉಳಿದಿರುವ ಈ ಕಲೆಗೆ ವಿಶಿಷ್ಟ ಪರಂಪರೆಯಿದೆ. ನಾಟ್ಯಶಾಸ್ತ್ರವು ಎಲ್ಲಾ ಪ್ರಕಾರದ ನೃತ್ಯಗಳಿಗೆ ಮೂಲ. ಪಾಶ್ಚಿಮಾತ್ಯ ನೃತ್ಯಕ್ಕೂ ನಮ್ಮ ಸಂಸ್ಕೃತಿಯೇ ಆಧಾರವಾಗಿದೆ.ಆದರೆ, ಇವತ್ತಿನ ಮಕ್ಕಳು ಪಾಶ್ಚಿಮಾತ್ಯ ನೃತ್ಯಕಲೆಯೇ ಶ್ರೇಷ್ಠ ಎಂದು ಭಾವಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ನಾವು ಬೆಳೆಸದೇ ಮತ್ಯಾರು ಬೆಳೆಸಬೇಕು ಎಂದು ಪ್ರಶ್ನಿಸಿದರು.
 
 
 
ಭರತನಾಟ್ಯದ ಮಹತ್ವವನ್ನು ಈಗಿನ ಪೀಳಿಗೆಗ ತಿಳಿಸಿಕೊಡಬೇಕಿದೆ. ನೃತ್ಯದ ಮುನ್ನ ಒಂದಿಷ್ಟು ಮಾಹಿತಿ ನೀಡಬೇಕು. ನೃತ್ಯವೊಂದರ ಪಾತ್ರ, ಭಾವ, ಸಂಚಾರಿ, ನವರಸಗಳ ಕುರಿತು ಒಂದಿಷ್ಟು ತಿಳಿಸಬೇಕು. ಈ ಮೂಲಕ ಜನರಲ್ಲಿ ಆಸಕ್ತಿ ಮೂಡಿಸಬಹುದು ಎಂದರು.
 
 
 
ಹಲವು ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿರುವಅವರು ಈಗಿನ ಪೀಳಿಗೆಯ ಬಗ್ಗೆ ಹೀಗೆ ಹೇಳುತ್ತಾರೆ; “ಇಂದಿನ ಮಕ್ಕಳ ಮನಸ್ಸಿನ ಮೇಲೆ ಒತ್ತಡಗಳಿವೆ. ‘ಕಡಿಮೆ ಅವಧಿಯಲ್ಲಿ ಕಲಿಯಬೇಕು. ಬೇಗನೆ ವೇದಿಕೆಯೇರಿ ಪ್ರದರ್ಶನ ನೀಡಬೇಕು. ಜನಮನ್ನಣೆ ಗಳಿಸಬೇಕು’ ಎಂಬ ಮನಸ್ಥಿತಿ ಸೃಷ್ಟಿಸಲಾಗುತ್ತಿದೆ. ಆದರೆ, ಎಲ್ಲವನ್ನೂ ಒಂದೇ ವೇಳೆಯಲ್ಲಿ ಕಲಿಯಲು ಸಾಧ್ಯವಿಲ್ಲ. ಒಂದನೇ ತರಗತಿ ಕಲಿತು ಒಮ್ಮೆಲೇ ಹತ್ತನೇ ತರಗತಿಗೆ ಹೋಗಲು ಸಾಧ್ಯವಿಲ್ಲ. ಒಂದೊಂದೇ ಮೆಟ್ಟಿಲನ್ನು ಏರಬೇಕು. ಈಗ ಒಂದನೇ ತರಗತಿಯಿಂದ ಒಮ್ಮೆಲೆ ಹತ್ತನೇ ತರಗತಿಗೆ ಏರಬೇಕು ಎನ್ನುವ ಆಸಕ್ತಿಯನ್ನು ಹೊಂದಿದ್ದಾರೆ. ಮನ್ನಣೆಗೆ ಹಾತೊರೆಯುವುದು ಎದ್ದುಕಾಣುತ್ತಿದೆ. ಕಷ್ಟಪಡದೆ ಯಾವುದೂ ದೊರಕದು ಎಂಬುದು ಮಕ್ಕಳಿಗೆ ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
 
 
 
“ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಅವಕಾಶ ಕಲ್ಪಿಸಿದ್ದು ಸಂತಸ ತಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಏಕವ್ಯಕ್ತಿ ನೃತ್ಯಕ್ಕೆ ಅವಕಾಶ ನೀಡಿದ್ದರು. ಈಗ ಹತ್ತು ಮಂದಿಯನ್ನೊಳಗೊಂಡ ನಮ್ಮತಂಡಕ್ಕೆ ಅವಕಾಶ ನೀಡಿದ್ದಾರೆ. ಮಂಜುನಾಥ ಸ್ವಾಮಿಯೆಂದರೆ ನಾಟ್ಯದ ಅಧಿದೇವತೆಯಾದ ನಟರಾಜನೇ ಆಗಿರುವುದರಿಂದ ಇಲ್ಲಿ ಅವಕಾಶ ಮಾಡಿಕೊಟ್ಟಿದಕ್ಕೆ ಕೃತಜ್ಞತೆಯನ್ನು ಅರ್ಪಿಸುವೆ” ಎಂದರು.
 
 
ಕಾರ್ಯಕ್ರಮದಲ್ಲಿ ಅರ್ಧನಾರೀಶ್ವರ, ಓಂ ಶಿವ ಶಂಭು, ಮಹಿಷಾಮರ್ದಿನಿ, ಕೃಷ್ಣ ಮತ್ತು ಕಂಸನ ಕಥೆ, ತರಂಗ, ತಿಲ್ಲಾನ, ಹಾಗೂ ಕನ್ನಡ ಸಂಸ್ಕೃತಿಯನ್ನು ಸಾರುವ ಹೇಮಕೂಟದ ಮೇಲೆ ಹಾಡುಗಳ ಯಾನದೊಂದಿಗೆ ವಿಶ್ವಾಂಬರಿ ತಂಡ ನೃತ್ಯ ಪ್ರದರ್ಶಿಸಿತು.

LEAVE A REPLY

Please enter your comment!
Please enter your name here