ನಾಟ್ಯದಲ್ಲಿ ವೇಷಭೂಷಣಗಳ ಪಾತ್ರ

0
546

 
ಭೂಮಿಕಾ ಅಂಕಣ: ವಿದುಷಿ ಅನುಪಮಾ ರಾಘವೇಂದ್ರ
ವೇಷಭೂಷಣಗಳು ಮಾನವಾಕೃತಿಯ ಸೌಂದರ್ಯವನ್ನು ಎತ್ತಿ ತೋರಿಸುವ ಸಾಧನ. ಬಣ್ಣಲೇಪನ ಹಾಗೂ ವೇಷಭೂಷಣಗಳು ನೃತ್ಯಕ್ಕೆ ಜೀವಂತಿಕೆ ತುಂಬುತ್ತದೆ.
|| ಆಹಾರ್ಯೋ ಹಾರ ಕೇಯೂರ ವೇಷಾದಿಭಿರಲಂಕೃತಿಃ ||
ಔಚಿತ್ಯಪೂರ್ಣ ವೇಷಭೂಷಣ ಹಾಗೂ ಬಣ್ಣಲೇಪನಗಳಿಂದ ಕಲಾವಿದರು ಅಡಿಯಿಂದ ಮುಡಿಯವರೆಗೆ ಸಿಂಗರಿಸಿಕೊಂಡು ಅಭಿನಯವನ್ನು ತೋರಿಸುವುದು ಆಹಾರ್ಯಾಭಿನಯ. ಮಿಕ್ಕ ಅಭಿನಯಗಳಿಂದ ಆಹಾರ್ಯಾಭಿನಯವು ಭಿನ್ನವಾಗಿದ್ದು , ವಿಶೇಷ ಎನಿಸಿಕೊಂಡಿದೆ. ಆಹಾರ್ಯ ನೃತ್ಯದ ಅವಿಭಾಜ್ಯ ಅಂಗ .
|| ಅಲಂಕಾರ ವಸ್ತು ವಿಜ್ಞೇಯೋ ಮಾಲ್ಯಾಭರಣ ವಾಸಸಾಮ್
ನಾನಾ ವಿಧಃ ಸಮಾಯೋಗೋಪ್ಯಂಗೋಪಾಂಗ ವಿಧಿಃ ಸ್ಮೃತಃ ||
bhoomika dance dress
ಹಿಂದಿನ ಕಾಲದಲ್ಲಿ ನರ್ತಕಿಯರು ಸ್ಯಾಟಿನ್ ಪೈಜಾಮವನ್ನು ಧರಿಸಿ ಅದರ ಮೇಲೆ ಮೊಣಕಾಲವರೆಗೆ ರೇಷ್ಮೆಯ ಒಂಭತ್ತು ಗಜದ ಸೀರೆಯನ್ನು ಕಚ್ಚೆಯ ರೀತಿಯಲ್ಲಿ ಉಟ್ಟುಕೊಳ್ಳುತ್ತಿದ್ದರು. ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಉಡುತ್ತಿದ್ದರು. ಅದಕ್ಕೆ ಸರಿ ಹೊಂದುವ ರೇಷ್ಮೆ ರವಿಕೆಯನ್ನು ಧರಿಸುತ್ತಿದ್ದರು. ತಲೆಗೆ ಬೈತಲೆ ಆಭರಣ , ನೆತ್ತಿಯಲ್ಲಿ ಸೂರ್ಯಚಂದ್ರ , ರಾಕುಡಿ ಮತ್ತು ಜಡೆ ಸುತ್ತ ಹೂವು , ಮೊಗ್ಗಿನ ಜಡೆ , ಕೈಗೆ ಬಾಹುಬಂಧಗಳು ವಂಕಿಗಳು , ವಿವಿಧ ರೀತಿಯ ಬಳೆಗಳು , ಓಲೆ, ಝುಮುಕಿ ಮತ್ತು ಕೆನ್ನೆ ಸರಪಳಿ , ಮೂಗಿಗೆ ಮೂಗುತಿ , ಕತ್ತಿಗೆ ವಿವಿಧ ರೀತಿಯ ಬಂಗಾರದ ಸರ , ಹಾರ , ಪದಕಗಳು , ಸೊಂಟಕ್ಕೆ ಓಡ್ಯಾಣ . ಕಾಲಿಗೆ ಗೆಜ್ಜೆ ಧರಿಸುತ್ತಿದ್ದರು. ಈಗಿನ ಕಾಲದ ನರ್ತಕಿಯರ ಉಡುಪು , ಆಭರಣಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಶಾರ್ಙ್ಗದೇವನು ನರ್ತಕಿಯ ವೇಷಭೂಷಣದ ಬಗೆಗೆ ಚರ್ಚಿಸುವುದರಲ್ಲಿ ಮೊತ್ತಮೊದಲಿಗನೆನ್ನಬಹುದು. ಆತ ನರ್ತಕಿಯ ಅಲಂಕರಣವನ್ನು ವಿವರವಾಗಿ ಹೇಳುತ್ತಾನೆ. “ನರ್ತಕಿಯು ಕೂದಲನ್ನು ಬಾಚಿ ಹಿಂದುಗಡೆ ಸಡಿಲವಾದ ತುರಬನ್ನು ಕಟ್ಟಿ ಅದನ್ನು ಹೂವುಗಳಿಂದ ಅಲಂಕರಿಸಬೇಕು, ಇಲ್ಲವೆ ನಟ್ಟಗೆ ಉದ್ದವಾದ ತುರಬನ್ನು ಕಟ್ಟಿ, ಅದನ್ನು ಮುತ್ತುಗಳಿಂದ ಅಲಂಕರಿಸಬೇಕು. ಹಣೆಯನ್ನು ಮುಂಗುರುಳಿನಿಂದ ಅಲಂಕರಿಸಿ ಶ್ರೀಗಂಧ ಹಾಗೂ ಕಸ್ತೂರಿಯಿಂದ ತಿಲಕವನ್ನು ಹಚ್ಚಬೇಕು. ಕಣ್ಣುಗಳನ್ನು ಕಾಡಿಗೆಯಿಂದ ಅಲಂಕರಿಸಿಕೊಂಡು ಕಿವಿಗಳಿಗೆ ಕೊಳವೆಯಾಕಾರದ ಸುಂದರವಾದ ಕರ್ಣಾಭರಣವನ್ನು ಧರಿಸಿಕೊಳ್ಳಬೇಕು. ದಂತಪಂಕ್ತಿಗಳು ಶುಭ್ರವಾಗಿದ್ದು ಕಾಂತಿಯನ್ನು ಪ್ರದರ್ಶಿಸಬೇಕು. ಕಪೋಲಗಳನ್ನು ನವಿರಾದ ಮಕರಿಕಾ ಪತ್ರಗಳಿಂದ ಲೇಪಿಸಿಕೊಳ್ಳಬೇಕು. ದೊಡ್ಡದಾದ ಮುತ್ತಿನಹಾರದಿಂದ ಕುತ್ತಿಗೆಯನ್ನು ಅಲಂಕರಿಸಿಕೊಳ್ಳಬೇಕು. ಉತ್ತಮವಾದ ಮಣಿಗಳಿಂದ ತಯಾರಿಸಿದ ಬಳೆಗಳನ್ನು ಕೈಗಳಿಗೂ, ಕೆಂಪು, ವಜ್ರ, ಹವಳದಂತಹ ಬೆಲೆಬಾಳುವ ರತ್ನಗಳಿಂದ ಕೂಡಿಸಿದ ಉಂಗುರುಗಳನ್ನು ಕೈಬೆರಳುಗಳಿಗೂ ಅಲಂಕರಿಸಬೇಕು. ಶ್ರೀಗಂಧದಿಂದ ಇಡಿಯ ಶರೀರವನ್ನು ಲೇಪಿಸಿಕೊಳ್ಳಬೇಕು. ಬಿಳಿಯ ರೇಷ್ಮೆ ವಸ್ತ್ರದಿಂದ ತಯಾರಿಸಿದ ಉಡುಪನ್ನು ಧರಿಸಿ ಸಣ್ಣದಾದ ಒಳ ಉಡುಪನ್ನು ಧರಿಸಬೇಕು. ಉಡುಪಿಗೆ ಒಪ್ಪುವ ಕುಪ್ಪಸವನ್ನೂ, ಬಿಗಿಯಾಗಿ ಹೊಂದುವ ಕುಚಬಂಧವನ್ನೂ ಧರಿಸಬೇಕು. ದೊಡ್ಡ ಮುತ್ತಿನಿಂದ ಮಾಡಿದ ಮೊಲೆಕಟ್ಟಿನಿಂದ ವಕ್ಷಸ್ಥಳವನ್ನು ಅಲಂಕರಿಸಿಕೊಳ್ಳಬೇಕು.
ಚಾರಿ, ಕರಣಾದಿಗಳನ್ನು ಸುಲಭವಾಗಿ ಪ್ರದರ್ಶಿಸಲು ಅನುವಾಗುವಂತೆ ನರ್ತಕಿಯು ಬಿಗಿಯಾದ ಚಲ್ಲಣವನ್ನು ಒಳಗೆ ಧರಿಸಿದ್ದು, ಅದರ ಮೇಲೆ ಸುಂದರವೂ, ಆಕರ್ಷಕವೂ ಆದ ಬಂಗಾರದ ಝರಿ ಹಾಗೂ ರತ್ನಗಳ ಕಸೂತಿಯ ಕುಸುರಿಗಳಿಂದ ಅಲಂಕೃತವಾದ ಹತ್ತಿಯ ಅಥವಾ ರೇಷ್ಮೆಯ ವಸ್ತ್ರದಿಂದ ತಯಾರಿಸಿದ ನಿರಿಗೆಗಳುಳ್ಳ, ಹರಡುವಂತಹ ಸೌಲಭ್ಯವಿರುವ ವಸ್ತ್ರವನ್ನು ವಿನ್ಯಾಸಗೊಳಿಸಬೇಕು. ಇದು ಮಂಡಿಯಿಂದ ಮೇಲು ಭಾಗದಲ್ಲಿದ್ದು ಅರ್ಧೋರುಕವಾಗಿರುವುದು. ಜಾಯಸೇನಾಪತಿಯು ನರ್ತಕಿಗೆ ಈ ತರಹದ ಉಡುಗೆಯನ್ನು ವಿಧಿಸುತ್ತಾನೆ. ಜಾಯಸೇನಾಪತಿಯು ಅಭಿಪ್ರಾಯಿಸುವಂತೆ ರತ್ನಾಕರವರ್ಣಿಯೂ ನರ್ತಕಿಯರಿಗೆ ತಿಲಕದಿಂದ ಆರಂಭಿಸಿ ಅಲಂಕಾರದವರೆಗೆ ಮುತ್ತಿನ ಆಭರಣಗಳನ್ನೇ ಅವರ ಅಲಂಕರಣಕ್ಕೆ ಬಳಸುತ್ತಾನೆ. ವೈವಿಧ್ಯಮಯ ರೇಷ್ಮೆ ವಸ್ತ್ರದ ಕಾಸೆ, ಚಲ್ಲಣಗಳನ್ನು ಹೆಸರಿಸುತ್ತಾನೆ .
ಮುತ್ತಿನ ಬೊಟ್ಟು ಮುತ್ತಿನ ಸರ ತುರುಬಿನ | ಮುತ್ತಿನ ಜಡೆ ಮುತ್ತಿನೋಲೆ |
ತತ್ತ ಮೂಗುತಿಯಿಂದ ಮೊಗಗಳಿದ್ದವು ತಾರೆ | ಮುತ್ತಿದ ಬಹುಚಂದ್ರರಂತೆ ||
ಪಂಪನು ಇಂದ್ರನ ಆನಂದ ನೃತ್ಯ ಪ್ರಸಂಗದಲ್ಲಿ ನರ್ತಕಿಯ ಬಗ್ಗೆ ಈ ರಿತಿಯಾಗಿ ವರ್ಣಿಸುತ್ತಾನೆ.
ತಾಳದ ಲಯಮಂ ನಿಱೆ |
ನೀಳಾಳಕ ಮಾ (ಹಾ)ರದ ಪೊದೞ್ದ ಮುತ್ತೆಂಬಿವು ಮುಮ ||
ಮೇಳಿಸಿ ಕಯ್ಕೊಂಡುವು ಲುಳಿ |
ತಾಳಕಿ ಕಯ್ಕೊಂಡಳೆಂಬುದೊಂದಚ್ಚರಿಯೇ ||
ನೀಲಾಂಜನೆಯು ಮುತ್ತಿನ ಹಾರವನ್ನು ಧರಿಸಿದ್ದಳು. ಕೂದಲು ಮುಂಗುರುಳುಗಳು ಅನುಕೂಲಕರವಾಗಿ ಓಲಾಡುವಂತಹ ಕೇಶಾಲಂಕಾರವನ್ನು ಮಾಡಿಕೊಂಡಿದ್ದಳು. ಅಲ್ಲದೆ ಆಕೆಯ ಉಡುಪಿನಲ್ಲಿ ಓರಣವಾಗಿ ಜೋಡಿಸಿದ ನಿರಿಗೆಯೂ ಇತ್ತೆಂದು ಈ ಪದ್ಯದಿಂದ ತಿಳಿಯುತ್ತದೆ.
ನಾಗಚಂದ್ರನು ನರ್ತಿಸುವ ನರ್ತಕಿಯ ವೇಷಭೂಷಣವನ್ನು ಶಾಸ್ತ್ರ ಸಮ್ಮತವಾದ ಅಲಂಕರಣ ವಿಶೇಷದೊಂದಿಗೆ ಈ ರೀತಿಯಾಗಿ ವಿಶದೀಕರಿಸುತ್ತಾನೆ.
ನಯಮಳವಟ್ಟು ತೊಟ್ಟಪಸುರ್ವಟ್ಟೆಯ ಕಂಚುಕ ಮುಟ್ಟನೇತ್ರವ
ಟ್ಟೆಯ ಪೊಸಚಲ್ಲಣಂ ಮುಡಿದ ಮುತ್ತಿನ ದಂಡೆ ತೊಡರ್ಚಿದೊಂದು ದೇ
ಸೆಯ ತೊಡವೊಪ್ಪಮಂ ಪಡೆಯ ಮೂಱೆದ ಬಳ್ಕಿದ ಶಕ್ರಚಾಪಲೇ
ಖೆಯ ತೆಱದಿಂ ತ್ರಿಭಂಗದೊಳದೇನೆಸೆದಿರ್ದಳೊ ಕಾಂತೆ ರಂಗದೊಳ್ ||
ಕವಿ ನರ್ತಕಿಯ ಕೇಶಾಲಂಕಾರ, ಉಡುಪು ಹಾಗೂ ಆಭರಣಗಳನ್ನು ವಿಶೇಷವಾಗಿ ಉಲ್ಲೇಖಿಸುತ್ತಾನೆ. ಆಕೆ ತನ್ನ ಮುಡಿಯನ್ನು ಮುತ್ತಿನ ದಂಡೆಯಿಂದ ಅಲಂಕರಿಸಿಕೊಂಡು, ರೇಷ್ಮೆ ವಸ್ತ್ರದಿಂದ ತಯಾರಿಸಿದ ಹೊಸ ಚಲ್ಲಣವನ್ನು ಧರಿಸಿ, ಅದಕ್ಕೆ ಸೊಗಸಾಗಿ ಒಪ್ಪುವ ಹಸುರು ಬಟ್ಟೆಯ ಕಂಚುಕ (ಕುಪ್ಪಸ)ವನ್ನು ಧರಿಸಿದ್ದಳೆಂದು ಕವಿಯ ವರ್ಣನೆ. ಮೊಳಕಾಲಿನವರೆಗೆ ಬಿಗಿಯಾಗಿ ಇರುವ ಚಲ್ಲಣದಿಂದ ನರ್ತಕಿಗೆ ನೃತ್ಯದಲ್ಲಿ ಪ್ರಯೋಗಿಸುವ ವೈವಿಧ್ಯಮಯ ಚಾರಿ, ಕರಣಾದಿಗಳನ್ನು ಪ್ರದರ್ಶಿಸಲು ಸುಲಭವಾಗುವುದು. ಅಲ್ಲದೆ ಆಕೆಯ ನಿಲುವು, ಭಂಗಿಗಳು ಸ್ಪಷ್ಟವಾಗಿ ಗೋಚರಿಸಲು ಅನುಕೂಲವಾಗುತ್ತದೆ.
ಗೋವಿಂದ ವೈದ್ಯನು ಒಂದು ಪದ್ಯದಲ್ಲಿ ನರ್ತಕಿಯರ ವೇಷಭೂಷಣವನ್ನು ಹೇಳುತ್ತಾನೆ.
ತೊಳಗುವ ನವರತ್ನ ಗಾಸೆಯ ಸರ್ವಾಂಗ
ಕಳವಟ್ಟ ಮಣಿ ಭೂಷಣದ
ಥಳ ಥಳಿಸುವ ಮುದ್ದು ಮೊಗದ ನರ್ತಕಿಯರು
ಘಳಿಲನೆ ನಡೆತಂದರಾಗ
ಭೃಂಗೀಶ್ವರ ರಗಳೆಯಲ್ಲಿ ಹರಿಹರನು ಶಿವನ ಒಡ್ಡೋಲಗದಲ್ಲಿ ನರ್ತಿಸುವ ಭೃಂಗಿಯ ವೇಷಭೂಷಣವನ್ನು ಕುರಿತು ಹೀಗೆ ವರ್ಣಿಸಿದ್ದಾನೆ.
ಭಾಳಂ ತೀವಿದ ಭಸಿತದ ತಿಳಕಂ
ತಾಳಕ್ಕೊಲೆದಾಡುವ ಕೈಚಳಕಂ
ಫಣಿಕುಂಡಲ ಮುತ್ತಿನ ಹಾರಂಗಳ್
ಮಣಿಖಚಿತದ ರತ್ನದ ಮುದ್ರಿಕೆಗಳ್
ಕೆಯ್ಯೂರಂ ಹೊಸ ವಜ್ರದ ಕಂಕಣ
ಒಯ್ಯಾರಂ ಮಿಗೆ ಗೆಜ್ಜೆಯ ಚಲ್ಲಣ
ವೆಸೆಯಲ್ ಸರ್ವಾಂಗದ ಹೊಸ ಭಸಿತಂ
ಮಸಗಲ್ ಕಾಲ್ತೊಡರು ಝಣ ಝಣಿತಂ
ಭೃಂಗಿಯು ತನ್ನ ಮೈಯನ್ನು ಭಸ್ಮದಿಂದ ಅಲಂಕರಿಸಿಕೊಂಡು, ಅದನ್ನೇ ತಿಲಕವನ್ನಾಗಿಯೂ ಬಳಸಿದ್ದನೆಂದು ಕವಿ ಸ್ಪಷ್ಟಪಡಿಸುತ್ತಾನೆ. ಹಣೆಗೆ ಭಸ್ಮ ತಿಲಕವು ಇಲ್ಲಿ ಲಾಂಛನದಂತೆ ಶೋಭೆಯನ್ನು ಕೊಡುತ್ತದೆ. ಭೃಂಗಿಯ ಕವಿಯ ಆಭರಣವು ನಾಗರ ಹಾವಿನ ಆಕಾರದಲ್ಲಿದ್ದು, ಕುತ್ತಿಗೆಗೆ ಮುತ್ತಿನ ಹಾರಗಳನ್ನು ಆತ ಧರಿಸಿದ್ದ. ಕೈಗಳಿಗೆ ವಜ್ರದ ಕಂಕಣ. ಬೆರಳುಗಳಿಗೆ ರತ್ನಖಚಿತ ಉಂಗುರಗಳನ್ನು ಹಾಕಿದ್ದ. ತೋಳಿಗೆ ತೋಳಬಂದಿ ಮತ್ತು ಕಾಲಿಗೆ ಗೆಜ್ಜೆಗಳನ್ನು ಕಟ್ಟಿ ಭೃಂಗಿಯು ಅಲಂಕೃತನಾಗಿದ್ದ, ಆತ ಕಿರುಗೆಜ್ಜೆ ಕೂಡಿಸಿದ್ದ ಚಲ್ಲಣವನ್ನು ಧರಿಸಿದ್ದನೆಂದೂ ಹರಿಹರ ಭೃಂಗೀಶ್ವರನ ವೇಷಭೂಷಣವನ್ನು ವಿವರಿಸುತ್ತಾನೆ.
ಬಾಹುಬಲಿ ಎಂಬ ಕವಿಯು ನರ್ತಕಿಗೆ ನರ್ತಿಸಲು ಅಗತ್ಯವಿರುವ ಪೂರ್ಣಪ್ರಮಾಣದ ವೇಷಭೂಷಣವನ್ನು ಈ ರೀತಿಯಾಗಿ ವಿವರಿಸುತ್ತಾನೆ.
ಪಸುರು ವಟ್ಟೆಯ ಕಾಲುಗುಪ್ಪಸರತ್ನಕೀ | ಲಿಸಿದ ಪೊಂಬರಹದ ಕಾಸೆ
ತ್ರಿಸರ ವಿರಾಜಿತ ಮುತ್ತಿನ ಮೊಲೆಕ | ಟ್ಟೆಸುದುದಂದಾ ನರ್ತಕಿಗೆ ||
ನವರತ್ನಮಯಮಪ್ಪ ಕಂಠವಿಭೂಷಣ | ರವಿಯ ಮುದ್ರಿಕೆ ಸೂಡಂಗ
ರವೆಯದ ಕಡಗ ಕಂಕಣ ಮಣಿಕಾಂಚಿಕ | ಳ ವಳಂಗದೊಳೊಪ್ಪಿದುವು ||
ನರ್ತಕಿಯು ಧರಿಸಿದ ಚಲ್ಲಣವನ್ನು ಕವಿ ಕಾಲುಕುಪ್ಪಸವೆಂದು ಹೇಳಿದ್ದಾನೆ. ಬಾಹುಬಲಿಯ ಕಾಲದ ಹೊತ್ತಿಗಾಗಲೇ ಅರ್ಧೋರುಕವಾಗಿದ್ದ ಚಲ್ಲಣವು ಪಾದಗಳವರೆಗೆ ವಿಸ್ತೃತಗೊಂಡಿರಬೇಕು. ನರ್ತಕಿ ಚಲ್ಲಣವನ್ನು ಧರಿಸಿ ಅದಕ್ಕೆ ರತ್ನದಿಂದ, ಬಂಗಾರದ ಜರಿಯ ಕಾಸೆಯನ್ನು ಜೋಡಿಸಿ ಧರಿಸಿದ್ದಳು. ಚಲ್ಲಣ ಮತ್ತು ಕಾಸೆಯ ಉಡುಗೆ ನರ್ತಕಿಗೆ ಅತ್ಯಂತ ಅನುಕೂಲಕರವಾದುದು. ಇಂತಹ ಉಡುಗೆ ಈಗಲೂ ಭರತನಾಟ್ಯ, ಕೂಚಿಪುಡಿ, ಒಡ್ಡಿಸ್ಸಿಯಂತಹ ನೃತ್ಯಶೈಲಿಗಳಲ್ಲಿ ಬಳಕೆಯಲ್ಲಿದೆ.
ಭರತನಾಟ್ಯದ ಉಡುಪಿನಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿದವರಲ್ಲಿ ರುಕ್ಮಿಣೀದೇವಿ ಅರುಂಡೇಲ್ ಹಾಗೂ ರಾಮ್ ಗೋಪಾಲ್ ಮೊದಲಿಗರು. ಪೈಜಾಮದ ಮಾದರಿಯಲ್ಲಿರುವ ರೇಷ್ಮೆಸೀರೆಯ ಉಡುಪಿಗೆ ಮಧ್ಯದಲ್ಲಿ ಬೀಸಣಿಕೆಯ ರೂಪದಲ್ಲಿ ಬಿಚ್ಚಿಕೊಳ್ಳುವ ಹೊಲಿದ ಬಟ್ಟೆ ಇರುತ್ತದೆ. ಕಾಲುಗಳಲ್ಲಿ ಸುರುಳಿ ಹಾಕಿದಂತಿರುವ ಈ ಪೈಜಾಮದ ಮಾದರಿಯ ಉಡುಪಿಗೆ ಸೊಂಟದ ಹಿಂಭಾಗದಲ್ಲಿ ಅಗಲವಾಗಿರುವ ನಡುಪಟ್ಟಿ ಇರುತ್ತದೆ . ಶರೀರದ ಮೇಲ್ಭಾಗವನ್ನು ಕುಪ್ಪಸ ಹಾಗೂ ಅಂದವಾಗಿ ಹೊಲಿದ ಸೆರಗಿನಿಂದ ಅಲಂಕರಿಸಿಕೊಳ್ಳುತ್ತಾರೆ. ಇಂತಹ ಉಡುಪುಗಳಲ್ಲಿಯೂ ಹಲವಾರು ಮಾದರಿಗಳು ಬಂದಿವೆ. ಸೀರೆ ರೀತಿಯ ಉಡುಪು, ಲಂಗದ ಮಾದರಿ ಅಲ್ಲದೆ ಈ ಎಲ್ಲಾ ಮಾದರಿಗಳಲ್ಲಿ ಬೇರೆ ಬೇರೆ ರೀತಿಯ ನೆರಿಗೆಗಳ ಉಡುಪು ಇತ್ಯಾದಿ.
ಕಲಾವಿದರ ಉಡುಗೆ ಹಾಗೂ ಆಭರಣಗಳು ಅತಿಶಯವಾಗಿಯೂ ಇರಬಾರದು , ಕಡಿಮೆಯಾಗಿಯೂ ಇರಬಾರದು. ವೇಷಭೂಷಣದ ಕ್ರಾಂತಿ ಈ ಆಧುನಿಕ ಯುಗದಲ್ಲಿ ಎಷ್ಟೇ ಮುಂದುವರೆದಿದ್ದರೂ, ಶಾಸ್ತ್ರೀಯ ಭರತನಾಟ್ಯ, ಒಡಿಸ್ಸಿ, ಕೂಚಿಪುಡಿಯಂತಹ ನೃತ್ಯಶೈಲಿಗಳಲ್ಲಿ ಕೆಲವು ಅನುಕೂಲಕರವಾದ ಸಣ್ಣ ಸಣ್ಣ ಮಾರ್ಪಾಟುಗಳೊಂದಿಗೆ ಕಾವ್ಯಗಳು ಹಾಗೂ ಶಿಲ್ಪಗಳು ವ್ಯಕ್ತಪಡಿಸುವ ವೇಷಭೂಷಣಗಳನ್ನೇ ನರ್ತಕ, ನರ್ತಕಿಯರು ಇಂದಿಗೂ ಧರಿಸುವ ಪರಿಪಾಠವನ್ನು ಹೊಂದಿದ್ದಾರೆ. ನೃತ್ಯ ನಾಟಕಗಳಲ್ಲಿ ಪಾತ್ರಕ್ಕೆ ತಕ್ಕಂತಹ ವೇಷಭೂಷಣ ಹಾಗೂ ಆಭರಣಗಳನ್ನು ತೊಡಬೇಕು. ಆಹಾರ್ಯದಿಂದ ಪಾತ್ರಕ್ಕೆ ಜೀವಂತಿಕೆ ಬಂದು ಪ್ರದರ್ಶನ ಇನ್ನಷ್ಟು ಕಳೆಗಟ್ಟುವುದು. ಪಾತ್ರದ ತೀವ್ರತೆ , ಪ್ರಭಾವ ಅರಿವಾಗುವುದು ಸೂಕ್ತ ವೇಷಭೂಷಣದಿಂದ . ಆದರೆ ನೃತ್ಯ ಪ್ರದರ್ಶನಗಳಲ್ಲಿ ಬಳಸುವ ವೇಷಭೂಷಣಕ್ಕೆ ಆ ಕಟ್ಟುಪಾಡು ಇಲ್ಲ. ಆದರೆ ಒಂದು ಶಿಸ್ತಿನ ಚೌಕಟ್ಟು ಇದೆ.
ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ನೃತ್ಯಪ್ರಕಾರಗಳ ವೇಷಭೂಷಣ ಮೂಲಸ್ವರೂಪ ಒಂದೇ ಇದ್ದರೂ ತನ್ನದೇ ಆದ ವೇಷಭೂಷಣದ ಮಾದರಿ ಇದೆ.
ಮೋಹಿನಿ ಆಟ್ಟಂ : ಬಹಳ ಸರಳವಾದ ವೇಷಭೂಷಣ . ರವಿಕೆ ತೊಟ್ಟು , ಜೆರಿ ಇರುವ ಬಿಳಿ ಸೀರೆಯನ್ನು ನೆರಿಗೆ ಹಾಕಿ ಉಡುತ್ತಾರೆ. ಅರ್ಧಮೊಳ ಇಳಿತವುಳ್ಳ ಮೇಲು ನೆರಿಗೆಯೂ , ಹಿಮ್ಮಡಿಯ ಮೇಲ್ಭಾಗದವರೆಗೆ ಬರುವ ಕೆಳ ನೆರಿಗೆಯೂ ಇರುತ್ತದೆ. ಸೊಂಟಕ್ಕೆ ಒಂದು ಡಾಬು , ಕೈ ಹಾಗೂ ಕುತ್ತಿಗೆಗೆ ಕೇರಳ ಶೈಲಿಯ ಸಾಧಾರಣ ಒಡವೆಗಳನ್ನು ಧರಿಸುತ್ತಾರೆ. ಕೂದಲನ್ನು ತಲೆಯ ಒಂದು ಪಕ್ಕಕ್ಕೆ ಗಂಟು ಹಾಕಿ ಅದರ ಸುತ್ತ ಹೂವಿನ ದಂಡೆಯನ್ನು ಮುಡಿಯುತ್ತಾರೆ.
ಕೂಚಿಪುಡಿ : ಹಿಂದಿನ ಕಾಲದಲ್ಲಿ ಸೀರೆ ಹಾಗೂ ರವಿಕೆ ತೊಟ್ಟು ನರ್ತಿಸುತ್ತಿದ್ದರು . ಈಗ ಹೊಲಿದ ಪೈಜಾಮದ ರೀತಿಯ ಕಚ್ಚೆಯಂತಹ ಉಡುಪುಗಳನ್ನು ಬಳಸುತ್ತಾರೆ. ಆಭರಣಗಳು ಭರತನಾಟ್ಯದಂತೆಯೇ ಇದ್ದರೂ ಜಡೆಗೆ ಬಹಳ ಪ್ರಾಶಸ್ತ್ಯ. ನೃತ್ಯನಾಟಕಗಳಲ್ಲಿ ಪಾತ್ರಕ್ಕೆ ತಕ್ಕ ವೇಷಭೂಷಣಗಳು ಇರುತ್ತವೆ.
ಕಥಕ್ : ಇದರ ವೇಷಭೂಷಣಗಳು ಭಾರತೀಯ ಹಾಗೂ ಪರ್ಶಿಯಾ ಸಂಸ್ಕೃತಿಗಳ ಪ್ರಭಾವವನ್ನು ಹೊಂದಿದೆ. ಗಂಡಸರು ಚೂಡಿದಾರ್ ಪೈಜಾಮವನ್ನು ಧರಿಸಿ ಅದರ ಮೇಲೆ ಪೇಶ್ವಾಸ್ಸನ್ನು ಧರಿಸುತ್ತಾರೆ. ಹೆಂಗಸರು ಉದ್ದಕ್ಕೆ ನೆರಿಗೆಗಳಿಂದ ಕೂಡಿದ ಲಂಗಗಳನ್ನು ಧರಿಸಿ ಬಿಗಿಯಾದ ಸುರ್ ವಾಲ್ ಮತ್ತು ದುಪ್ಪಟವನ್ನು ತಲೆಯ ಮೇಲೂ , ಸೆರಗಿನಂತೆ ಎದೆಯ ಮೇಲೂ ಧರಿಸುತ್ತಾರೆ. ಕಾಲುಗಳಿಗೆ ಗೆಜ್ಜೆಗಳ ಸರಮಾಲೆಯನ್ನು ಧರಿಸುತ್ತಾರೆ.
ಮಣಿಪುರಿ : ರಂಗುರಂಗಿನ ದೊಡ್ಡದಾದ ಲಂಗ. ಅದರ ಮೇಲೆ ತೆಳುವಾದ ಒಂದು ಚಿಕ್ಕ ಲಂಗ ಇರುತ್ತದೆ. ಈ ಎರಡು ಲಂಗಗಳಲ್ಲಿಯೂ ಚಿಕ್ಕ ಚಿಕ್ಕ ಗೋಲಾಕಾರದ ಕನ್ನಡಿಗಳು ಅಲಂಕಾರಿಕವಾಗಿ ನೇಯಲ್ಪಟ್ಟಿರುತ್ತವೆ. ಮೇಲೆ ಹಸಿರು ಬಣ್ಣದ ಮಕಮಲ್ಲಿನ ಬಿಗಿಯಾದ ಚೋಲಿ ಇರುತ್ತದೆ. ಇದೂ ಸಹ ಕಸೂತಿಯಿಂದ ಕೂಡಿರುತ್ತದೆ. ಬಂಗಾರ , ಬೆಳ್ಳಿಯಿಂದ ಕೂಡಿದ ಪಟ್ಟಿ , ಕೊರಳಿನ ಸರ , ಕೈಗಳ ಬಳೆ ಹಾಗೂ ಇತರ ಒಡವೆಗಳ ಜೊತೆ ತಲೆಗೆ ತೆಳ್ಳಗಿನ ಮುಸುಕು ಹಾಗೂ ಶಂಖಾಕಾರದ ತಲೆ ಅಲಂಕಾರವೂ ಹಾಕಿಕೊಳ್ಳುತ್ತಾರೆ.
ಒಡಿಸ್ಸಿ : ನರ್ತಕಿಯರು ಒಂಬತ್ತು ಗಜದ ಸೀರೆಯನ್ನು ಕಚ್ಚೆಯ ಮಾದರಿಯಲ್ಲಿ ಸೊಂಟದಿಂದ ಪಾದದವರೆಗೆ ಉಟ್ಟು ಸೀರೆಯ ಸೆರಗನ್ನು ನೆರಿಗೆ ಹಿಡಿದು ಎಡಭಾಗದ ಸೊಂಟದ ಹತ್ತಿರ ಸಿಕ್ಕಿಸಿ ಅದಕ್ಕೆ ಹೊಂದುವ ಹರಳುಗಳಿಂದ ಅಲಂಕೃತವಾದ ರವಿಕೆಯನ್ನು ತೊಡುತ್ತಾರೆ. ಅಲಂಕಾರಿಕ ನಡುಪಟ್ಟಿ , ಪದಕ , ತೋಳುಬಂಧಿ , ಕಂಕಣ ನೂಪುರಗಳು , ಕೂದಲನ್ನು ಎತ್ತಿ ಹಿಂಬದಿಗೆ ಗಂಟುಕಟ್ಟಿ ಗಂಟಿನ ಮೇಲೆ ಅರ್ಧ ಚಂದ್ರಾಕಾರದ ಆಭರಣವನ್ನು , ಕಕರ ಹಾಗೂ ರಾಕೋಡ್ ಧರಿಸುತ್ತಾರೆ. ಬೈತಲೆ ಆಭರಣ ಇದ್ದು ಬೈತಲೆಯ ಮೇಲೆ ಕೊಕರ್ ಇಡುತ್ತಾರೆ. ಕಿವಿಯ ಕೆಳಭಾಗದಲ್ಲಿ ಕೊಂಕರ್ , ಮೇಲ್ಭಾಗದಲ್ಲಿ ನಾಗಸಾನಿ ಹಾಗೂ ಬಕುಲ ಕಲಿಕಾವನ್ನು ಕುಂಡಲ ಹಾಗೂ ಬೀರತಾಲಿಯನ್ನು ಧರಿಸುತ್ತಾರೆ. ಖಪಸಾರಿಕಾ ಎಂಬ ವಿಶೇಷವಾದ ಕಂಠೀಹಾರ ಧರಿಸುತ್ತಾರೆ .
ಚಾವ್ ನೃತ್ಯದ ವೇಷಭೂಷಣ ನಮ್ಮ ನಾಡಿನ ಭೂತಕೋಲದ ವೇಷಭೂಷಣ ಹೋಲುತ್ತದೆ. ಯಕ್ಷಗಾನ ವೇಷವನ್ನೂ ಇದು ಸ್ವಲ್ಪಮಟ್ಟಿಗೆ ಹೋಲುತ್ತದೆ.
ಕಥಕ್ಕಳಿ : ಕಥಕ್ಕಳಿಯಲ್ಲಿ ಉದ್ದವಾದ ಬಿಳಿಯ ಲಂಗ ಧರಿಸುತ್ತಾರೆ. ಅನೇಕ ಮಣಿಗಳ ಸರವನ್ನು , ಭುಜಕೀರ್ತಿಗಳನ್ನು , ಎದೆಗೆ ಅಲಂಕೃತ ಕವಚಗಳನ್ನು , ಪಾತ್ರೋಚಿತ ಕಿರೀಟಗಳನ್ನು ವಿವಿಧ ರೀತಿಯ ಕೇಶಾಲಂಕಾರಗಳೊಂದಿಗೆ ಧರಿಸುತ್ತಾರೆ. ಯಕ್ಷಗಾನ ಮತ್ತು ಕಥಕಳಿಗಳ ನಡುವೆ ಉಡುಗೆ ತೊಡುಗೆಗಳಲ್ಲಿ ಸಾಕಷ್ಟು ಸಾಮ್ಯವಿರುವುದು ಕಂಡುಬರುತ್ತದೆ.
ಯಕ್ಷಗಾನ ದ ಆಹಾರ್ಯವು ಸೌಂದರ್ಯದ ನೆಲೆಯಿಂದ ವೈವಿಧ್ಯತೆಯ ಕಡೆಗೆ ಹೆಚ್ಚು ಲಕ್ಷ್ಯವಹಿಸಿದೆ. ಯಕ್ಷಗಾನದ ಆಕರ್ಷಣೆಯೇ ಅದರ ವೇಷಭೂಷಣ. ಬೇರೆ ಯಾವ ರಂಗಭೂಮಿಯಲ್ಲೂ ಕಾಣದ ವೈಭವ ಇದರಲ್ಲಿದೆ. ಯಕ್ಷಗಾನ ಬಯಲಾಟಕ್ಕೆ ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಹಾಗೂ ಜನಪದ ಕಥೆಗಳಿಂದ ವಸ್ತುಗಳನ್ನು ಆರಿಸಿಕೊಂಡಿರುವುದರಿಂದ, ಅವುಗಳಲ್ಲಿ ಬರುವ ವಿವಿಧ ಪಾತ್ರಗಳ ಘನತೆ, ಗೌರವಗಳಿಗೆ ತಕ್ಕ ಹಾಗೆ ಉಡುಗೆ ತೊಡುಗೆಗಳನ್ನು ರೂಪಿಸಲಾಗಿದೆ. ಯಕ್ಷಗಾನ ವಿಶ್ವದ ಅತ್ಯಂತ ಆಕರ್ಷಕ ಕಲೆ ಎನಿಸಿಕೊಳ್ಳಲು ಹೊಸ ವಿಶ್ವವನ್ನು ನಿರ್ಮಿಸುವ ವೇಷಭೂಷಣ, ಕಿರೀಟ ಮತ್ತು ಮುಖವರ್ಣಿಕೆಗಳು ಕಾರಣವಾಗಿವೆ. ವಿಭಿನ್ನ ಕಾಲಘಟ್ಟಗಳಲ್ಲಿ ಬೆಳೆಯುತ್ತಾ ಬಂದಾಗಲೆಲ್ಲ ಯಕ್ಷಗಾನದ ಆಹಾರ್ಯವು ಬದಲಾವಣೆ ಕಂಡಿದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಇದ್ದ ವೇಷಪರಿಕರಗಳಿಗೂ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ವೇಷವಿಧಾನಗಳಿಗೂ ಇರಬಹುದಾದ ಅಂತರವೇ ಬಹಳಷ್ಟಿದೆ ಎಂದು ಅನೇಕ ವಿದ್ವಾಂಸರು ದಾಖಲಿಸಿದ್ದಾರೆ. ಯಕ್ಷಗಾನದಲ್ಲಿ ಬಳಕೆಯಲ್ಲಿರುವ ವಿವಿಧ ಆಭರಣಗಳಲ್ಲಿ ಬಗೆ ಬಗೆಯ ಕಿರೀಟಗಳು, ಮುಂದಲೆ, ಕೇದಗೆ, ಚೆಂಡಿನದಂಡೆ, ಕರ್ಣಪತ್ರ, ಭುಜಕೀರ್ತಿ, ಭುಜದಂಬೆ, ತೋಳಬಂದಿ, ಕೈಕಟ್ಟು, ಎದೆಹಾರ, ಸೊಂಟಪಟ್ಟಿ, ಕಾಂಚೀಧಾಮ, ಗೆಜ್ಜೆ ಇತ್ಯಾದಿ ಅನೇಕ ಪರಿಕರಗಳಿವೆ. ಸ್ತ್ರೀ ವೇಷಗಳ ಬಗ್ಗೆ ಪ್ರಭಾಕರ ಜೋಷಿಯವರು ಹೀಗೆ ದಾಖಲಿಸಿದ್ದಾರೆ: ‘ಹಿಂದೆ ಸ್ತ್ರೀ ವೇಷಗಳೆಲ್ಲವೂ ಕಚ್ಚೆ ಉಡುತ್ತಿದ್ದವು. ಹಣೆಗೆ ಅಡ್ಡನಾಮ ಅಥವಾ ಉದ್ದನಾಮ ವಿರುತ್ತಿತ್ತು. ಉರುಟು ಬೊಟ್ಟು ಇಡುವ ಪದ್ಧತಿ ಬಂದುದು ಪ್ರಾಯಃ 1920ರಿಂದ ಈಚೆಗೆ. ಕಾಲಿಗೆ ಗೆಜ್ಜೆ, ಪಾಡಗ, ಸೊಂಟಕ್ಕೆ ಡಾಬು, ಉಡಿಗೆಜ್ಜೆ, ಕೈಗೆ ಕೈಕಟ್ಟು, ತೋಳ್ಕಟ್ಟು, ಕೊರಳಿಗೆ ಹವಳಸರ, ತ್ರಿಸರ, ಮೋಹನ ಮಾಲೆ, ಅಡ್ಡಿಗೆ, ಪದಕಮಾಲೆ, ಪಂಚಮಾಲೆ ,ಗಂಟಲಿನ ಕಂಠಿಮಣಿಯನ್ನು ಮುಚ್ಚಲು ಚಿಂತಾಕು ಎಂಬ ಪಟ್ಟಿ. ಮೂಗಿಗೆ ನತ್ತುಬುಲಾಕು ಅಥವಾ ಉದ್ದದ ಮೂಗುತಿ, ಕಿವಿಗೆ ಗಿಳಿಯೋಲೆ, ಕೊಪ್ಪುಪ, ಬುಗುಡಿ, ಸರಪಳಿ, ಬೆಂಡೋಲೆಗಳನ್ನು ಅಥವಾ ಕಿವಿಯನ್ನು ಮುಚ್ಚುವ ಓಲೆಕುಚ್ಚು ಎಂಬ ಕರ್ಣಪಾತ್ರ, ಹಣೆಗೆ ಮುಂದಲೆ ಪಟ್ಟಿ, ಬೈತಲೆ ಸರ, ಮುಡಿಗೆ ಅಡ್ಡ ಕೇದಗೆ, ತಿರುಪಿನ ಹೂವು, ಚೂಡಾಮಣಿ ಅಥವಾ ಬಂಗಾರ ಇವು ಸಾಂಪ್ರದಾಯಿಕ ಸ್ತ್ರೀವೇಷದ ಆಭರಣಗಳು.
ವೇಷಗಳ ಮುಖವರ್ಣಿಕೆ, ವೇಷಕ್ಕೊಪ್ಪುವ ಉಡುಗೆಗಳ ಬಣ್ಣ ಹಾಗೂ ಕಿರೀಟ ಯಕ್ಷಗಾನದ ವೈಶಿಷ್ಟ್ಯ. ವೇಷಗಳನ್ನು ಬಣ್ಣದ ವೇಷ, ಕಿರೀಟದ ವೇಷ, ಪುಂಡುವೇಷ, ಮುಂಡಾಸಿನ ವೇಷ, ಕಟ್ಟುವೇಷ, ಸ್ತ್ರೀವೇಷ, ಋಷಿಮುನಿಗಳು, ಹಾಸ್ಯವೇಷ ಮತ್ತು ವಿಶಿಷ್ಟ ವೇಷಗಳೆಂದು ವಿಭಾಗಿಸಿದ್ದಾರೆ. ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ಯಕ್ಷಗಾನದಲ್ಲಿ ಬಣ್ಣಗಾರಿಕೆ ಹಾಗೂ ವೇಷಭೂಷಣಗಳಿರುತ್ತವೆ. ಬಣ್ಣಗಾರಿಕೆ ಹಾಗೂ ವೇಷಭೂಷಣಗಳಲ್ಲಿ ಹೊಂದಾಣಿಕೆ ಅಗತ್ಯ. ದೇವ , ಮಾನವ , ದಾನವಾದಿ ಪಾತ್ರಗಳನ್ನು ರಂಗಸ್ಥಳದಲ್ಲಿ ಚಿತ್ರಿಸಲು ಅವುಗಳ ಗುಣ ಸ್ವಭಾವಗಳನ್ನು ಕಲ್ಪಿಸಿಕೊಂಡ ಸೃಜನಶೀಲ ಮನಸ್ಸು ಮೂರ್ತರೂಪವನ್ನು ನೀಡಿರಬೇಕು . ಬೆಳಕಿನ ಸಂಯೋಜನೆಗೆ ಹೊಂದಿಕೊಂಡು ಯಕ್ಷಗಾನದ ವೇಷಭೂಷಣಗಳು ಬದಲಾಗುತ್ತಾ ಬಂದಿವೆ. ಯಕ್ಷಗಾನ ಬಣ್ಣಗಾರಿಕೆಯ ಬಣ್ಣಗಳಿಗೆ ಮತ್ತು ಧರಿಸುವ ವೇಷಭೂಷಣಗಳ ಬಣ್ಣಗಳಿಗೆ ಸೂತ್ರಬದ್ಧ ಸಾಂಗತ್ಯವಿದೆ. ದಗಲೆ ಅಥವಾ ಅಂಗಿಗಳ ಬಣ್ಣಗಳು ವೇಷಗಳ ಗುಣಧರ್ಮವನ್ನು ಸೂಚಿಸುವುದುಂಟು. ಹಸಿರು ದಗಲೆ ಸಾತ್ವಿಕ ಅಥವಾ ಶೃಂಗಾರ ವೇಷಗಳಿಗೆ, ಕೆಂಪು ದಗಲೆ ರಾಜಸ ಸ್ವಭಾವದ ವೀರ ಪಾತ್ರಗಳಿಗೆ, ಕಪ್ಪು ದಗಲೆ ತಾಮಸ ಸ್ವಭಾವದ ವೇಷಗಳಿಗೆ ಬಳಕೆಯಾಗುತ್ತದೆ. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಬೃಹದಾಕಾರದ ಕೇಸರಿ ತಟ್ಟಿ ಎಂಬ ಕಿರೀಟವು ಪಾತ್ರಕ್ಕೆ ಸೌಂದರ್ಯವನ್ನು ಗಾಂಭೀರ್ಯವನ್ನು ಹಾಗೂ ಗಾತ್ರ ಪ್ರಾಮಾಣ್ಯವನ್ನು ಒದಗಿಸುತ್ತದೆ. ಜೊತೆಗೆ ರಾಕ್ಷಸ ಸ್ವರೂಪಿ ಎಂಬುದನ್ನು ಶ್ರುತಪಡಿಸುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ . ಬಣ್ಣದ ವೇಷವು ಧರಿಸುವ ಕೇಶಾವರಿ ತಟ್ಟಿ ಹಾಗೂ ಬಾಲುಮುಂಡು ಎನ್ನುವ ಕೆಲವು ವಿಷಯ ಬಿಟ್ಟರೆ ತೆಂಕಿನ ಹಾಗೂ ಬಡಗಿನ ವೇಷಭೂಷಣಗಳಲ್ಲಿ ಸಾಮ್ಯತೆಯೂ ಇವೆ . ಕೆಲವೊಂದು ಸಂದರ್ಭಗಳಲ್ಲಿ ರಸಾಸ್ವಾದನೆಗೆ ಆಹಾರ್ಯವೇ ಅಡ್ಡಿಯಾಗಬಹುದು. ಹಾಗಾಗಿಯೇ ಯಕ್ಷಗಾನದಲ್ಲೂ ವರ್ಗಾನುಸಾರಿಯಾದ ಆಹಾರ್ಯ ವಿಧಾನವಿರುತ್ತದೆ. ವೇಷಧಾರಣೆಯ ಮೂಲಕವೇ ಆಳು, ಅರಸ, ದಾಸಿ, ರಾಣಿ, ಮಂತ್ರಿ ಇತ್ಯಾದಿಗಳಲ್ಲೂ ಭೇದವನ್ನು ಉಳಿಸಿಕೊಳ್ಳಲಾಗಿದೆ.
ಯಕ್ಷಗಾನದ ವೇಷಭೂಷಣವು ಪಾತ್ರದ ಒಟ್ಟು ವ್ಯಕ್ತಿತ್ವ ವನ್ನು ಪ್ರತಿಪಾದಿಸುತ್ತಾ ಆ ಪಾತ್ರವು ಸಾಂದರ್ಭಿಕವಾಗಿ ಪ್ರಕಟಪಡಿಸುವ ಸ್ವಭಾವ ಸಾಧ್ಯತೆಗಳ ಕಡೆಗೆ ಪೂರಕವಾಗಿಯೇ ಅರ್ಥವತ್ತಾಗುತ್ತದೆ. ಯಕ್ಷಗಾನದಲ್ಲಿರುವ ಅಗಾಧವಾದ ವೇಷವಿಧಾನದಲ್ಲಿ ಮನಸೆಳೆಯಬಲ್ಲ ಕಲಾತ್ಮಕ ಸೌಂದರ್ಯವಿದೆ. ಸೃಜನಶೀಲ ಮನೋಧರ್ಮಕ್ಕೆ, ಪ್ರತಿಭಾ ಕೌಶಲ್ಯಕ್ಕೆ ಪ್ರಚೋದನೆ ನೀಡಬಲ್ಲ ಸಾಮರ್ಥ್ಯವಿದೆ. ಕಲ್ಪನೆಗೆ ಪೂರಕವಾಗುವ ಅಲೌಕಿಕ ಆದರ್ಶವಿದೆ. ಸಮಕಾಲೀನ ಜೀವನ ವಿಧಾನಕ್ಕೆ ಪೂರಕವಾಗುವ ವಿನ್ಯಾಸವಿದೆ. ಅಲೌಕಿಕವಾದ ಕಾಲ್ಪನಿಕ ಲೋಕದ ವೈಭವೀಕರಣವಿದೆ. ಭಕ್ತಿಯ ನೆಲೆಯನ್ನು ಮೂರ್ತಗೊಳಿಸುವ ಸಂಕೇತಗಳಿವೆ. ಖಾಸಗಿ ವ್ಯಕ್ತಿತ್ವವನ್ನು ಮರೆಮಾಚುವ ಅಂದರೆ ಕಲಾವಿದ ಆ ಪಾತ್ರವಾಗಿ ಪರಿವರ್ತನೆ ಹೊದುವ ಸಾಮರ್ಥ್ಯವಿದೆ. ಸಂಸ್ಕೃತಿಯ ಪೋಷಣೆ ಮತ್ತು ಶ್ರೇಣೀಕರಣ ವ್ಯವಸ್ಥೆಯ ಪಾಲನೆ ಇದೆ. ಭಯ, ಭಕ್ತಿ ಹಾಗೂ ಮನರಂಜನೆಯನ್ನು ನೀಡಬಲ್ಲ ಅಲೌಕಿಕ ಚಿತ್ರಣವಿದೆ. ಬಣ್ಣ, ಬೆಳಕುಗಳ ಅಪೂರ್ವ ಹೊಂದಾಣಿಕೆಯ ತಾಂತ್ರಿಕ ವಿವರಗಳ ಸೂಕ್ಷ್ಮಗಳಿವೆ. ಸಮಕಾಲೀನ ಮೌಲ್ಯಗಳ ಭಾಗವಾಗಿಯೇ ಸಂದೇಶಗಳ ಸಂವಹನವನ್ನು ಮಾಡುತ್ತವೆ. ಎಲ್ಲಾ ಕಲೆಗಳ ವೇಷಭೂಷಣಗಳೂ ಈ ಲಕ್ಷಣಗಳನ್ನು ಪ್ರತಿಪಾದಿಸುತ್ತವೆ. ನಿರ್ದಿಷ್ಟ ಕಲಾಮಾಧ್ಯಮವೊಂದರ ಗುರುತು ಅದರ ವೇಷಭೂಷಣವೇ ಅಲ್ಲವೇ………
ಅನುಪಮಾ ರಾಘವೇಂದ್ರ
[email protected]

LEAVE A REPLY

Please enter your comment!
Please enter your name here