'ನಮ್ಮ ಕ್ಯಾಂಪಸ್'ಗಾಗಿ ಎಸ್ ಡಿ ಎಂ ಪಿಜಿ ಕೇಂದ್ರದಲ್ಲಿ ಚಿತ್ರೀಕರಣ

0
529

ವರದಿ: ಮಿಥುನ್ ಮೊಗೇರ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ವಿದ್ಯಾರ್ಥಿಗಳ ನಗು, ಚಪ್ಪಾಳೆ ಹಾಗೂ ಪ್ರತಿಭಾನಾವರಣದ ಸದ್ದು. ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳದ್ದೇ ಸಾಂಸ್ಕೃತಿಕ ಕಲರವ. ಕನ್ನಡದ ಮೊದಲ ಮಾಹಿತಿ ಮತ್ತು ಮನೋರಂಜನಾ ವಾಹಿನಿ ‘ಸರಳ ಜೀವನ’ದ ‘ನಮ್ಮ ಕ್ಯಾಂಪಸ್’ ಕಾರ್ಯಕ್ರಮವು ಅಂಥದ್ದೊಂದು ಅಪೂರ್ವ ಅವಕಾಶದ ವೇದಿಕೆಯಾಗಿತ್ತು.
 
 
‘ನಮ್ ಕ್ಯಾಂಪಸ್’ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯ ಮನೋರಂಜನಾ ಕಾರ್ಯಕ್ರಮವಾಗಿದೆ. ವಾಹಿನಿಯ ಪ್ರತಿನಿಧಿಗಳ ತಂಡವು ಕೇಂದ್ರಕ್ಕೆ ಭೇಟಿ ನೀಡಿ ಈ ಕಾರ್ಯಕ್ರಮಕ್ಕಾಗಿ ವಿವಿಧ ಪ್ರತಿಭೆಗಳ ಪ್ರತಿಭಾವ್ಯಕ್ತಿಯನ್ನು ಚಿತ್ರೀಕರಿಸಿಕೊಂಡಿತು. ಚರ್ಚೆ, ಹಾಡು, ನೃತ್ಯ, ಅನುಕರಣೆ ಮತ್ತು ಸಿನಿಮಾ ಡೈಲಾಗ್ಗಳ ಅಭಿವ್ಯಕ್ತಿಯ ಮೂಲಕ ವಿವಿದ್ಯಾರ್ಥಿಗಳು ಗಮನ ಸೆಳೆದರು. ಮನೋರಂಜನಾ ಮಾಧ್ಯಮದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಬಹುದಾದ ಸಾಮಥ್ರ್ಯ ಸಾಬೀತುಪಡಿಸಿದರು.
 
 
ಕಂಬಳದ ಕುರಿತು ನಡೆದ ಚರ್ಚೆಯ ವೇಳೆ ವಿದ್ಯಾರ್ಥಿಗಳು ಪರವಾದ ಧ್ವನಿ ಎತ್ತಿದರು. ‘ಕಂಬಳ ಉಳಿಯಲಿ’ ಎಂಬ ಸಂದೇಶ ಸಾರಿದರು. ‘ಯಾವ ಮೋಹನ ಮುರಳಿ ಕರೆಯಿತು’ಮತ್ತು ‘ಮೂಡಲ ಮನೆ’ಯ ಗೀತೆಗಳು ಕಿವಿಗೆ ಇಂಪೆನಿಸಿದವು. ‘ಡೋಲನಾ’ ಹಾಗು ‘ಕೃಷ್ಣ’ನ ಹಾಡಿಗೆ ಹೆಜ್ಜೆ ಹಾಕಿದರು. ಅಧ್ಯಾಪಕರ ಭೋಧನಾ ಶೈಲಿಯ ಅನುಕರಣೆ ಎಲ್ಲರ ಮೆಚ್ಚುಗೆ ಪಡೆಯಿತು. ಪ್ರಖ್ಯಾತ ಸಿನಿಮಾ ‘ಭಕ್ತ ಪ್ರಹ್ಲಾದ’ದ ಡೈಲಾಗ್ ಮನಸೂರೆಗೊಂಡರೆ ಕಾಲೇಜು ಜೀವನದ ಕವನ ಸಾಲುಗಳು ಪ್ರಶಂಸೆಗೆ ಪಾತ್ರವಾದವು. ಕ್ರೈಂ ಸ್ಟೋರಿಯ ನಿರೂಪಣಾ ಶೈಲಿ ನೆರೆದವರನ್ನು ಬೆರಗುಗೊಳಿಸಿತು.
 
 
ಕಾರ್ಯಕ್ರಮದ ನಿರೂಪಕ ಅಜಿತ್ ‘ಎಸ್ಡಿಎಂ ಗೆಜೆಟ್’ನೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ವಿದ್ಯಾರ್ಥಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಖುಷಿ ಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
 
 
ಉಳಿದೆಲ್ಲ ಕಾಲೇಜುಗಳಿಗಿಂತ ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ವಿಶೇಷವಾಗಿತ್ತು ಎಂದವರು ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಕೋಟೆ. ಮಹೇಶ್ ಸಿ.ಎನ್, ವೆಂಕಟೇಶ್, ನಿಂಗರಾಜು, ಪ್ರಶಾಂತ್, ಮಹೇಶ್, ಅನಿಲ್, ವಿಜಯ್ ಚಿತ್ರೀಕರಣದ ಹೊಣೆ ನಿರ್ವಹಿಸಿದರು. ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗಡೆ ಉತ್ತಮ ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.

LEAVE A REPLY

Please enter your comment!
Please enter your name here