ಅಂಕಣಗಳು

ನಮ್ಮದಲ್ಲದ ಆಚರಣೆ ಎಷ್ಟು ಸಮಂಜಸ”

ಸಹೃದಯ ಭಾರತೀಯರೆಲ್ಲರಿಗೂ ನಮಸ್ಕಾರಗಳು .ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಭಾರತೀಯ ಸಂಸ್ಕ್ರತಿ ಸಂಸ್ಕಾರ ಧರ್ಮ-ಸಮನ್ವಯತೆ ಒಂದೆಡೆಯಾದರೆ , ಅದೇ ರೀತಿ ಪಾಶ್ಚಾತ್ಯ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡಿರುವ , ಹಾಗೂ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿರುವ ವೇದನೆಯ ಸಂಗತಿ ಮತ್ತೊಂದೆಡೆ.
ಸನಾತನಧರ್ಮ , ಸಂಸ್ಕೃತಿ ಸಂಸ್ಕಾರ , ವೇದ- ವಿಜ್ಞಾನಗಳಿಂದ ಭಾರತ ಇಡೀ ವಿಶ್ವವನ್ನು ತನ್ನೆಡೆ ಸೆಳೆದುಕೊಂಡಿದೆ .ಅತೀಹಿರಿದಾದ ಸಾಂಸ್ಕೃತಿಕ ಆಚರಣೆಗಳು , ತರ್ಕಬದ್ಧವಾದ , ವಿವೇಚನಭರಿತ ಆಲೋಚನೆಗಳು , ನಮ್ಮ ಆಚರಣೆಗಳಿಗೆ ಬೆನ್ನೆಲುಬಾಗಿವೆ.ಹೀಗಿರುವಾಗ ಅರ್ಥಹೀನವಾದ ಪಾಶ್ಚಾತ್ಯಆಚರಣೆಗಳು ನಮ್ಮ ಹಿಂದೂಸ್ತಾನದಲ್ಲಿ , ಸಂಸ್ಕಾರ , ಸಂಸ್ಕೃತಿಯ ತವರು ಭೂಮಿಯಲ್ಲಿ ಎಷ್ಟು ಸಮಂಜಸ ಎನ್ನುವುದನ್ನ ನಮ್ಮ ಯುವಪೀಳಿಗೆ ಚಿಂತನೆ ಮಾಡಬೇಕಾಗಿದೆ.
ಹೆಚ್ಚಾಗಿಯೇ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದರಿಂದ , ಅದು ನಮ್ಮದಲ್ಲದ ಆಚರಣೆ ಎಂಬುದನ್ನು ಪೋಷಕರು ತಿಳಿಸಿಕೊಡಬೇಕಾಗಿರುವುದು ಅನಿವಾರ್ಯ ಹಾಗೂ ಅದು ಅವರ ಕರ್ತವ್ಯ ,ಚಿಕ್ಕಂದಿನಿಂದಲೇ ನಮ್ಮ ಮೌಲ್ಯಗಳನ್ನು ಸಂಸ್ಕೃತಿಯ ಅನನ್ಯತೆಯನ್ನು ತಿಳಿಸಿಕೊಟ್ಟರೆ ಈ ಸ್ತಿತಿಯನ್ನು ಹೆಚ್ಚದಂತೆ ನೋಡಿಕೊಳ್ಳಬಹುದೇನೋ ,ಬದಲಾವಣೆಗೆ ಇನ್ನೂ ಕಾಲವೇನೂ ಮಿಂಚಿಲ್ಲ.
ಲಕ್ಷಾಂತರ ಸಾಧು-ಸಂತರು , ಜ್ಞಾನಿಗಳು ,ವೇದಾಂತಿಗಳು ,ನೂರಾರು ಹೋರಾಟಗಾರರು , ಸಮಾಜ ಸುಧಾರಕರು ತಮ್ಮ ಜೀವನವನ್ನೇ ಭರತ ಭೂಮಿಗಾಗಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಉಳಿವಿಗಾಗಿ ಮುಡಿಪಾಗಿಟ್ಟು ಅದರ ಹಿರಿಮೆಯನ್ನು , ಅನನ್ಯತೆಯನ್ನು ವಿಶ್ವಕ್ಕೇಸಾರಿದ್ದಾರೆ .ಆಧ್ಯಾತ್ಮ , ತತ್ವಜ್ಞಾನ , ಸಿದ್ಧಾಂತಗಳ ಸವಿರುಚಿಯನ್ನ ಪ್ರಪಂಚಕ್ಕೆ ಉಣಬಡಿಸಿದ್ದಾರೆ.
ಪ್ರಪಂಚವೇ ಹಿಂದೂಸ್ತಾನವನ್ನು ಹೊಗಳುತ್ತಿರುವಾಗ , ಇಲ್ಲಿನ ಜ್ಞಾನಸಾರ ಆಸ್ವಾದಿಸಲು ಸಿದ್ದರಾಗುತ್ತಿರುವಾಗ ನಮ್ಮವರು ನಮ್ಮದಲ್ಲದ ಆಚರಣೆಗಳಲ್ಲಿ ಮಗ್ನರಾಗಿದ್ದಾರೆ.
ಡಿಸೆಂಬರ್ 31ರ ಅಂತಿಮ ಕ್ಷಣಗಳನ್ನು ಬಹಳವೇ ಕಾತುರದಿಂದ ಕಾದು , 12 ಬಡಿದ ಕೂಡಲೇ ತರಾತುರಿಯಿಂದ ಕುಡಿದು , ಕುಣಿದು , ಕುಪ್ಪಳಿಸಿ , ಹಾರಡಿ , ಚೀರಾಡಿ , ತೂರಾಡಿಕೊಂಡು ಸಂಭ್ರಮಿಸುವ ಪರಿ ,ಆಹಾ ಹೊಸವರ್ಷ ಎಂಬ ಪದದ ಅರ್ಥವನ್ನೇ ನೇಣಿಗೇರಿಸಿದಂತೆ ನಡೆದುಕೊಳ್ಳುವ ರೀತಿ , ಇದನ್ನು ಯಾವ ಸೀಮೆಯ ಆಚರಣೆ ಎನ್ನಬೇಕು ಸ್ವಾಮಿ .ಹುಚ್ಚಪ್ಪಗಳಿರಾ , ಹೊಸತು ಎಂಬುದು ಒಂದು ರಾತ್ರಿಯಲ್ಲಿ ಆಗುವ ಬದಲಾವಣೆಯೇ , ಅಥವಾ ಕ್ಯಾಲೆಂಡರಿನ ಬದಲಾವಣೆಯಿಂದಾಗುವುದೇ , ಬದಲಾವಣೆ ಯಾಗಬೇಕಿರುವುದು ನಮ್ಮಲ್ಲಿ , ನಮಗೆ ಉಸಿರು ನೀಡಿ ಬಸಿರಿಗೆ ಅನ್ನವೀಯುತ್ತಿರಿವ ಪ್ರಕೃತಿ ಮಾತೆಯಲ್ಲಿನ ಬದಲಾವಣೆಯೇ ,ಆ ಸೌಂದರ್ಯವೇ ನಿಜವಾದ ಹೊಸತನ , ಆ ಸಂಭ್ರಮವೇ ನೂತನತೆಯ ಆರಂಭ.
ಇಡೀ ಪ್ರಕೃತಿಯೇ ಹಸಿರ ಸೀರೆಯುಟ್ಟಂತೆ ಕಂಗೊಳಿಸುವ ಆ ಮನೋಹರತೆ ನಿಜವಾದ ಬದಲಾವಣೆ ,ಅದು ವರ್ಣನಾತೀತ .
ನಿಮ್ಮಂತೆಯೇ ಯೋಚಿಸಿದರೂ , ಪಾನಮತ್ತರಾಗಿ , ಕುಣಿದು ಕುಪ್ಪಳಿಸಿ , ತೂರಾಡುವುದೇ ಹೊಸವರ್ಷವೆಂದರೆ ದಿನ ಕುಡಿಯುವ ಕುಡುಕನಿಗೆ ಪ್ರತಿನಿತ್ಯವೂ ಹೊಸವರ್ಷವೇ .
ಹೊಸವರ್ಷವೆಂದರೆ 31ರ ಕೊನೆ ಅಥವಾ 1 ರ ಶುರುವಲ್ಲ ಇದೊಂದು ಅರ್ಥವಿಲ್ಲದ ಆಚರಣೆ .ಆದರೆ ನಮ್ಮ ಸಂಸ್ಕೃತಿಯಲ್ಲಿ ಆಚರಿಸುವ ಯುಗಾದಿಯ ಸಮಯವೇ ನಿಜವಾದ ಹೊಸತನಕೆ ಆದಿ , ಹಳೆಯದೆಲ್ಲವ ತೊರೆದು , ಹೊಸತನವ ಮೈಗೂಡಿಸಿಕೊಂಡು ಪೃಕೃತಿಯಿಡೀ ಹಸಿರಿನಿಂದ ಮೈದಳೆದು , ಇಡೀ ಜೀವ ಸಂಕುಲಕ್ಕೇ ಹೊಸ ಸಂಚಲನವನ್ನು ತುಂಬುವ ಪರಿ ಅದ್ಭುತ .ನೋಡುವ ಕಣ್ಣುಗಳಿಗೆ ಆನಂದದ ಭೋಜನ , ಅದು ನಿಜವಾದ ಬದಲಾವಣೆಯ ಪರ್ವಕಾಲ , ಇದರ ಆಚರಣೆಯೇ ನಿಜವಾದ ಹೊಸವರ್ಷದ ಆಚರಣೆ .
ಅರ್ಥಹೀನವಾದ ಪಾಶ್ಚಾತ್ಯ ಆಚರಣೆ ಭಾರತೀಯರಿಗೇಕೆ , ನಮ್ಮ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದ ಅದೆಷ್ಟೋ ಅನನ್ಯ , ಅದ್ಭುತ , ಮಹಾನ್ ಚೇತನಗಳ ಶ್ರಮ ,ಆಸೆ , ಹಾಗೂ ದೂರದೃಷ್ಟಿಯಿಂದ ಅವರು ಇಂದಿನವರಿಗಾಗಿ ಕಟ್ಟಿಕೊಟ್ಟ ಉತ್ತಮ ಸಂಸ್ಕೃತಿಗೆ ನೀರೆರಚದಿರಿ.
ನಮ್ಮ ಸಂಸ್ಕೃತಿಯ ಆಚರಣೆಯಲ್ಲೇ ನಮ್ಮ ತನವಿದೆ , ಮಹಾಸೊಬಗಿದೆ , ನವ ವೈಶಿಷ್ಟ್ಯವಿದೆ. “ಧರ್ಮೋ ರಕ್ಷತಿ ರಕ್ಷಿತಃ ” ಅರ್ಥಾತ್ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ , ಸಂಸ್ಕೃತಿಯ ಉಳಿವಿನಲ್ಲೇ ನಮ್ಮ ಉಳಿವಿದೆ , ನಮ್ಮ ತನವಿದೆ ಹಾಗೂ ನಮ್ಮ ಗೆಲುವಿದೆ.
ಹರಿದು ಹಂಚಿ ಹೋಗಿದ್ದ ಸನಾತನ ಧರ್ಮವನ್ನು , ಸಂಸ್ಕೃತಿಯನ್ನು , ಸಂಸ್ಕಾರವನ್ನು ಶ್ರೀ ಆದಿಶಂಕರರು 3 ಬಾರಿ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಒಂದಿಗೂಡಿಸಿದರು . ಅದ್ವೈತ ಸಿದ್ದಾತವನ್ನು ಹಿಡಿದು ದೇಶವನ್ನಾವರಿಸಿದ್ದ ಮತಾಂತರಗಳನ್ನು ಖಂಡಿಸಿ ಅವರನ್ನು ವಾದಗಳಿಂದ ಪರಾಜಿತಗೊಳಿಸಿ ಅಖಂಡ ಭಾರದದ ಉಳಿವಿಗೆ ಶ್ರಮಿಸಿದರು. ಕಾರಣಜನ್ಮಿ ಮಹಾನುಭಾವ ಶ್ರೀ ಶಂಕರರು ಅಂದು ಆ ಸತ್ಕಾರ್ಯವನ್ನು ಮಾಡಿರದಿದ್ದರೆ ಇಂದು ನಮ್ಮ ಧರ್ಮ , ವೇದ , ದೇಶದ ರೂಪುರೇಷೆಯೇ ಇರುತ್ತಿರಲಿಲ್ಲ .ಹಾಗೆಯೇ ಮಧ್ವಾಚಾರ್ಯರು , ರಾಮಾನುಜರು ,ರಾಮಕೃಷ್ಣಪರಾಮಹಂಸರು, ವಿವೇಕಾನಂದರು , ರಮಣಮಹಶ್ರೀಗಳು ಇನ್ನು ಹಲವಾರು ಮಹಾತ್ಮರ ಕೊಡುಗೆಗಳನ್ನು ಮರೆತಿರಾ ಭಾರತೀಯರೇ ?
ಬೇಡ ನಮ್ಮದಲ್ಲದ , ಅರ್ಥವಿಲ್ಲದ ಯಾವ ಆಚರಣೆಗಳೂ ನಮಗೇಕೆ , ಹೆಮ್ಮೆಯ ಭಾರತೀಯರಾಗಿಯೇ ನಮ್ಮ ಸಂಸ್ಮೃತಿಯನ್ನು ಸಂಸ್ಕಾರವಂತರಾಗಿ ಆಚರಿಸುತ್ತಾ ಜಗತ್ತಿಗೆ ಮಾದರಿಗಾಗಿ ಬದುಕೋಣ.ಸತ್ಯವಿಲ್ಲದ , ಕಾರಣವಿಲ್ಲದ ಹಾಗೂ ತತ್ವವಿಲ್ಲದ , ನಮ್ಮತನವಿಲ್ಲದ , ನಿಶೆಯಲ್ಲಿ ಆಚರಿಸುವ , ಮತ್ತುತರಿಸುವ , ಮನವನ್ನು ದುರ್ಬಲಗೊಳಿಸಲು ಉತ್ತೇಜಿಸುವ ಆಚರಣೆಗಳು ನಮಗೆ ಬೇಡವೇ ಬೇಡ .ಜಾಗೃತರಾಗಿ ನಮ್ಮ ತನವನ್ನು ಉಳಿಸಿಕೊಳ್ಳಿ , ಪಾಶ್ಚಾತ್ಯಮೋಹ ಬೇಡ , ಅದನ್ನು ದೂರತಳ್ಳಿ . “ನಭೂತೋ ನಭವಿಷ್ಯತಿ'” ಎಂಬಂತಿರುವ ಅದ್ಭುತ ಅನನ್ಯ ,ಅನಂತವಾದ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ , ಆಚರಿಸಿ , ಸಂಭ್ರಮಿಸಿ ಈ ಮೂಲಕ ಅವುಗಳನ್ನು ಜೀವಂತವಾಗಿರಿಸಿ ಮುಂದಿನಪೀಳಿಗೆಗೂ ತಲುಪಿಸಿ .
ಜೈ ಭಾರತಾಂಬೆ.
ನಿತಿನ್ ರಾಮಚಂದ್ರ ಭಾರದ್ವಾಜ.

Comment here