ನಮಾಮಿ ಗಂಗೆ ಯೋಜನೆಗೆ ಇಂದು ಚಾಲನೆ

0
362

ವರದಿ:ಲೇಖಾ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ನಮಾಮಿ ಗಂಗೆ ಕಾರ್ಯಕ್ರಮದ ಅನ್ವಯ 231 ಯೋಜನೆಗಳಿಗೆ ಈ ದಿನ ಚಾಲನೆ ಸಿಗಲಿದೆ.
 
 
ಚರಂಡಿ ನೀರು ಸ್ವಚ್ಛತಾ ಘಟಕಗಳನ್ನು ಸ್ಥಾಪಿಸುವುದು ಪ್ರಮುಖವಾಗಿದೆ. ಗಂಗಾ ನದಿ ತಟದ 104 ಸ್ಥಳಗಳಲ್ಲಿ ಏಕಕಾಲಕ್ಕೆ ಯೋಜನೆ ಆರಂಭವಾಗಲಿದೆ. ಈ ಆಂದೋಲನಕ್ಕೆ 5 ವರ್ಷಗಳ ಅವಧಿಗೆ 20 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿರಿಸಿದೆ. 2019ರೊಳಗೆ ಗಂಗೆಯನ್ನು ವಿಶ್ವದ ಟಾಪ್‌-10 ಸ್ವಚ್ಛ ನದಿ ಎಂದು ಘೋಷಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕೆಂದೇ ಪ್ರತ್ಯೇಕ ಸಚಿವ ಖಾತೆಯನ್ನು ಸೃಷ್ಟಿಸಿ ಅದನ್ನು ಹಿರಿಯ ಸಚಿವೆ ಉಮಾಭಾರತಿ ಅವರ ಹೆಗಲಿಗೆ ವಹಿಸಿದ್ದಾರೆ.
 
 
ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಉಮಾ ಭಾರತಿ, ನರೇಂದ್ರ ತೋಮರ್‌ ಮತ್ತು ಮಹೇಶ ಶರ್ಮಾ ಹರಿದ್ವಾರದಲ್ಲಿ ಅಭಿಯಾನ ಆರಂಭಿಸಲಿದ್ದು, ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್‌ ರಾವತ್‌ ಕೂಡ ಹಾಜರಿರಲಿದ್ದಾರೆ. ‘ಇದೊಂದು ಐತಿಹಾಸಿಕ ಸಂದರ್ಭ. ಇದೇ ಮೊದಲ ಬಾರಿ ಇಷ್ಟೊಂದು ಸಂಪೂರ್ಣ ಪ್ರಮಾಣದಲ್ಲಿ ನದಿಯೊಂದನ್ನು ಶುದ್ಧೀಕರಿಸಲಾಗುತ್ತಿದೆ.
 
 
ಅಕ್ಟೋಬರ್‌ 2016ರ ವೇಳೆಗೆ ಮೊದಲ ಹಂತ ಮುಗಿಯಲಿದೆ. 2ನೇ ಹಂತದ ಶುದ್ಧೀಕರಣಕ್ಕೆ 2 ವರ್ಷ ಹಿಡಿಯಲಿದೆ’ ಎಂದು ಉಮಾ ತಿಳಿಸಿದರು. ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗು ವುದು. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉನ್ನತ ತಂತ್ರಜ್ಞಾನ ಬಳಸಿ ಶುದ್ಧೀಕರಣ ನಡೆಸಲಾಗುವುದು ಎಂದು ಜಲಸಾರಿಗೆ ಸಚಿವ ನಿತಿನ್‌ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
 
 
ಗಂಗಾ ಕಾಯ್ದೆ ಎಂಬ ಪ್ರತ್ಯೇಕ ಕಾಯ್ದೆಯನ್ನೂ ತರುವ ಇರಾದೆ ಸರ್ಕಾರದ್ದು. ಇದಕ್ಕೆ ರಾಜ್ಯಗಳ ಸಹಕಾರ ಪಡೆಯಲಾಗುವುದು. ಯೋಜನೆ ಉದ್ಘಾಟನೆ ವೇಳೆ ನಮಾಮಿ ಗಂಗೆ ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಲಾಗುವುದು ಎಂದು ಉಮಾ ಭಾರತಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here