ನಡು ರಾತ್ರಿ ಬಾಗಿಲು ಬಡಿದರು!

0
1167

ನಿತ್ಯ ಅಂಕಣ: ೩೮

ಜೀವನದ ಬಹುಮುಖ್ಯ ಆಶೆಯಾಗಿದ್ದ ಕಾಶಿಯಾತ್ರೆಯನ್ನು ಪೂರೈಸಿದ್ದು ಈಶ್ವರ ಐಯ್ಯರ್ ಅವರಿಗೆ ಸಾರ್ಥಕತೆಯ ಸಂತೋಷ ನೀಡುತ್ತದೆ. ಆದರೆ ಬಲು ಮುಖ್ಯವಾದ ಕರ್ತವ್ಯ ಕೊನೆಯ ಮಗಳಿಗೆ ಮದುವೆ ಮಾಡುವುದು ಬಾಕಿಯಾಗಿ ಉಳಿದಿರುತ್ತದೆ. ಅದು ತಂದೆಯಾದವನ ಹೊಣೆಗಾರಿಕೆಯೂ ಹೌದು. ತನಗಿನ್ನು ವಯಸ್ಸಾಗಿದೆ ಆದಷ್ಟು ಬೇಗನೆ ಮಗಳ ಮದುವೆ ಮಾಡಬೇಕೆಂದು, ಐಯ್ಯರರು ವರನ ಹುಡುಕಾಟ ನಡೆಸುತ್ತಾರೆ. ಯೋಚಿಸಿದಂತೆ ಯೋಗ್ಯ ವರನೊಂದಿಗೆ ಜಾತಕವು ಕೂಡಿಬರುತ್ತದೆ. ಶುಭ ದಿನದಂದು ಶುಭ ಮುಹೂರ್ತದಲ್ಲಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆ ನಡೆಸಲು ಎರಡು ಕುಟುಂಬಗಳು ದಿನ ನಿಗದಿಪಡಿಸುತ್ತಾರೆ.

ಮಗಳ ಮದುವೆಗೆ ಪೂರ್ವ ಸಿದ್ಧತೆಗಳು ಮನೆಯಲ್ಲಿ ನಡೆಯುತ್ತಿದ್ದವು. ಮನೆಯಲ್ಲಿ ಮದುವೆಯ ಸಂಭ್ರಮದ ವಾತಾವರಣ. ರಾಮನು ಮನೆಯಲ್ಲಿ ಇದ್ದರೆ ಸಂತೋಷವು ಇಮ್ಮುಡಿ ಆಗುತಿತ್ತು ಎಂದು ಐಯ್ಯರರಿಗೆ ಅನಿಸಿತು. ರಾಮನು ಶುಭ ಸಂಭ್ರಮದಲ್ಲಿ ಈಶ್ವರ್ ಐಯ್ಯರ್ ಅವರಿಗೆ ನೆನಪಾಗ ತೊಡಗಿದ. ರಾಮ ನಮ್ಮಿಂದ ದೂರವಾಗಿ 4 ವರ್ಷಗಳು ಕಳೆದವು. ಆತ ತನ್ನ ತಂಗಿಯ ಮದುವೆ ಸಂಭ್ರಮ ಕಂಡಿದ್ದರೆ ನಾನು ಧನ್ಯನಾಗುತ್ತಿದ್ದೆ. ಹೀಗೆ ರಾಮನ ಗುಂಗಿನಲ್ಲಿ ಇರುವಾಗ ಮದುವೆಯ ದಿನದ ಮುಂಚಿನ ದಿನದ ನಡುರಾತ್ರಿ ಯಾರೋ ಮನೆಯ ಎದುರು ಬಾಗಿಲು ಬಡಿದ ಶಬ್ದ ಕೇಳಿ ಬಂದಿತು. ಮನೆಗೆ ಬಂದಿರುವ ನೆಂಟರೆಲ್ಲ ರಾತ್ರಿಯೆಲ್ಲ ಕೆಲಸ ಮುಗಿಸಿ ಮಲಗಿದ್ದರು. ಅವರಿಗೆ ಆಯಾಸವಾದ ಪರಿಣಾಮ ಬೇಗನೆ ನಿದ್ದೆ ಹತ್ತಿತು. ರಾಮನ ಸ್ಮರಣೆಯಲ್ಲಿದ್ದ ಈಶ್ವರ್ ಐಯ್ಯರ್ ಅವರಿಗೆ ಬಾಗಿಲು ಬಡಿಯುವ ಶಬ್ದ ಕೇಳಿಬಂದಿತು. ಯಾರಪ್ಪ ಈ ನಡು ರಾತ್ರಿ ಬಾಗಿಲು ಬಡಿಯುವುದು..! ಗಾಬರಿಗೊಂಡು ಐಯ್ಯರರು ಬಾಗಿಲನು ತೆರೆದರು. ಅವರಿಗೆ ಪರಮಾಶ್ಚರ್ಯ ಕಂಡಿತು..! ರಾಮನ ಸ್ಮರಣೆ ಮಾಡುತ್ತಿರುವಾಗಲೇ ರಾಮನು ಮನೆಗೆ ಬಂದಿದ್ದಾನೆ.

ರಾಮ ಬದಲಾವಣೆಯಾಗಿದ್ದ ಈಗ ಆತನಿಗೆ 16 ವರ್ಷದ ಪ್ರಾಯ. ಮನೆ ಬಿಟ್ಟು ತೆರಳುವಾಗ ರಾಮ 12 ವರ್ಷ ಪ್ರಾಯದ ಹುಡುಗ. 4 ವರ್ಷದ ಅವಧಿಯಲ್ಲಿ ಯುವ ನಿತ್ಯಾನಂದರು ಯಾವ ಯಾವ ಪವಿತ್ರ ತೀರ್ಥ ಕ್ಷೇತ್ರಗಳು ಸಂದರ್ಶಿಸಿದ್ದಾರೆ, ಎಂದು ನಿಖರವಾಗಿ ತಿಳಿದು ಬಂದಿಲ್ಲ. ಹಿಮಾಲಯದಲ್ಲಿ ಶ್ರೇಷ್ಠ ಕುಂಡಲಿನೀಯೋಗಿ, ರಾಜಯೋಗಿಗಳೆಂದು ಸದ್ಗುರು ಎಂದು ಆರಾಧಿಸಲ್ಪಡುತ್ತಾರೆ. ರಾಮ ಅಂದು ಕಾಶಿಯಾತ್ರೆಯಲ್ಲಿ ಐಯ್ಯರ್ ಅವರಿಂದ ಬೆರ್ಪಡುವಾಗ ಒಂದು ಮಾತು ನೀಡಿರುತ್ತಾನೆ. ಶುಭ ಸಮಯದಲ್ಲಿ ಮನೆಗೆ ಬರುತ್ತೇನೆಂದು. ಐಯ್ಯರರು ಕೆಲವು ದಿನಗಳಿಂದ ಮಾಡುತ್ತಿರುವ ಮದುವೆಯ ಸಿದ್ಧತೆಗಳು ರಾಮ ನಾಮದ ಸ್ಮರಣೆ ರಾಮನಿಗೆ ತಿಳಿದುಬಂದವು. ರಾಮ ಮಾತಿನಂತೆ ಈಶ್ವರ ಐಯ್ಯರ ಮಗಳ ಮದುವೆಗೆ ಬಂದಿರುತ್ತಾನೆ. ಬಂದವನೆ ತನ್ನ ತಂಗಿಯ ಮದುವೆಗೆ ಬಂದೆ ಎನ್ನುತ್ತಾನೆ. ಎಲ್ಲರೂ ರಾಮನ ಆಗಮನದಿಂದ ಸಂಭ್ರಮಿಸಿದರು. ಮರುದಿನ ಎಲ್ಲರೂ ಗುರುವಾಯೂರು ಶ್ರೀಕೃಷ್ಣನ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಮದುವೆ ನಿರ್ವಿಘ್ನದಿಂದ ನಡೆಯಿತು. ಈಶ್ವರ್ ಐಯ್ಯರರು ತಮ್ಮ ಜವಾಬ್ದಾರಿಯಿಂದ ಕಳಚಿಕೊಂಡು ಗೆಲುವಿನ ನಗೆ ಬಿರಿದರು.

ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here