ನಗ್ನತೆಗೆ ನಾಚದೆಲೇ…

0
1682

 
ದೃಷ್ಠಿ ಅಂಕಣ: ಸೌಮ್ಯ ಕುಗ್ವೆ
ಘಮ ಘಮ ಮೂಗರಳಿಸುವ ಸುಗಂಧ ಮೈಗೆ ಗಾಢವಾಗಿ ಸಿಂಪಡಿಸಿಕೊಳ್ಳುವ ಅರೆನಗ್ನ ಗಂಡಸು; ಈ ಗಂಡಸಿಗೆ ಮುಗಿಬೀಳುವ ಹಲವು ಹೆಣ್ಣುಗಳು. ಇದೊಂದು ಸುಗಂಧ ದ್ರವ್ಯದ ಜನಪ್ರಿಯ ಜಾಹೀರಾತು. ಚಿತ್ರರಂಗದಲ್ಲಿ ಹೆಸರು ಮಾಡಿದ ಒಬ್ಬ ನಾಯಕ ನಟ. ಆ ನಾಯಕ ಒಳಅಂಗಿಯ ಕರಾಮತ್ತಿಗೆ ಸೋಲುವ ಹುಡುಗಿಯರು. ಸುಂದರವಾರ ಅರೆನಗ್ನ ಹುಡುಗಿಯ ಚರ್ಮ ಸೌಂದರ್ಯಕ್ಕೆ ಮನಸೋಲುವ ಹುಡುಗನ ಕೈ ಸದಾ ಹುಡುಗಿಯ ಮೈಮೇಲೆಯೇ. ಅದು ಒಂದು ಕಂಪನಿಯ ಸಾಬೂನಿನ ಜಾಹೀರಾತಿನದ್ದಾಗಿದೆ.
 
 
ಇಂದಿನ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಹಲವು ಪ್ರಾಡಕ್ಟ್ ಗಳು ಅವುಗಳ ಜಾಹೀರಾತಿನ ಜನಪ್ರಿಯತೆಯನ್ನು ಆಧರಿಸಿರುವುದಂತು ಸುಳ್ಳಲ್ಲ. ಆದರೆ ಈ ವಸ್ತುಗಳ ಜೊತೆ ಹೆಚ್ಚಿನ ಬೇಡಿಕೆಯನ್ನುಂಟು ಮಾಡಿದ್ದು ಹೆಚ್ಚು ಹೆಚ್ಚು ಮೈಮಾಟ ತೋರಿಸುವ ಬೆಡಗಿಯರು-ಹರೆಯದ ಹುಡುಗಿಯರು. ‘ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಮಾತಿಗೆ ಬದಲಾಗಿ ಜಾಹೀರಾತು ಲೋಕ ಬಿಚ್ಚಿದರೆ ಲಾಭ ನಮಗೆ ಮುಚ್ಚಿಟ್ಟರೆ ಲಾಸ್ ನಿನಗೆ ಎಂಬ ಹೊಸ ಸಂದೇಶ ನೀಡಿದೆ.
 
ಪ್ರತಿ ನಿತ್ಯವೂ ನಮ್ಮ ಮಾಧ‍್ಯಮಗಳ ಮೂಲಕ ಹಲವಾರು ಜಾಹೀರಾತುಗಳು ಪ್ರಸಾರಗೊಳ್ಳುತ್ತದೆ. ಈ ಜಾಹೀರಾತುಗಳ ತಯಾರಿಕೆಗೆಂದೇ ಹಲವು ಜಾಹೀರಾತು ಸಂಸ್ಥೆಗಳು ತಲೆಯೆತ್ತಿದೆ. ಇದೆಲ್ಲವುಗಳ ಪ್ರಮುಖ ಸೂತ್ರ ಹಣಗಳಿಕೆ. ಹಾಗೆಯೇ ಬೇಕಾದರೂ, ಬೇಡವಾದರೂ ಈ ಜಾಹೀರಾತುಗಳಲ್ಲಿನ ಮೊದಲ ಆದ್ಯತೇ ಹೆಚ್ಚೆಚ್ಚು ಬಿಚ್ಚಿ ತೋರಿಸುವ ರೂಪದರ್ಶಿಗಳು.
 
ಪಾಕಿಸ್ತಾನದ ಬಹು ಮುಖ್ಯ ಬರಹಗಾರ್ತಿ, ಕವಯಿತ್ರಿ, ಕಿಶ್ವರ್ ನಹೀದರ ‘I am not that woman’ ಪದ್ಯ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಏಕತಾನವಾಗಿ ನೋಡುವುದನ್ನು ವಿಮರ್ಶಿಸುತ್ತದೆ ಹಾಗೂ ಖಂಡಿಸುತ್ತದೆ. ಹೆಣ್ಣು ಪುರುಷನ ಕಣ್ಣಿಗೆ ಕಾಣುವ ಮಾದಕ ವಸ್ತುವಿನ ಹಾಗೆ ಅಲ್ಲವೇ ಅಲ್ಲ. ಜಾಹೀರಾತುಗಳಲ್ಲಿ ಕಾಣುವ ಅರೆನಗ್ನ ದೇಹದ ಕಾಲು-ತೊಡೆಗಳನ್ನು ಬಹಿರಂಗವಾಗಿ ತೋರಿಸುವಂತೆ ಕಾಣುವ ಹೆಣ್ಣಿಗೆ ಅನಿವಾರ್ಯತೆ ಮೀರಿದ ಒಂದು ಹೆಣ್ಣುತನವಿದೆ. ಹೆಣ್ಣಿನ ದೇಹವನ್ನು ಬಿಕರಿಗೊಳಪಡಿಸಿದ್ದು ಪುರುಷನೇ ಹೊರತು ಹೆಣ್ಣಲ್ಲ. ಹೆಣ್ಣಿಗೆ ತನ್ನತನವನ್ನು ಮರೆಸಿ ವಸ್ತುವನ್ನಾಗಿ ಮಾಡಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ವಸ್ತುವಾಗಿಸಿದ್ದು ಪುರುಷಗಣ್ಣಿನ ಸಮಾಜವೇ ಹೊರತು ಮತ್ತೇನೂ ಅಲ್ಲ.
 
ಆಧುನಿಕ ಮಾರುಕಟ್ಟೆಯಲ್ಲಿ ಪುರುಷ ಪ್ರಧಾನ ಚಿಂತನೆ ಹೆಣ್ಣನ್ನು ಸರಕಾಗಿಸಿದೆ. ಅದರಲ್ಲೂ ವ್ಯಾವಹಾರಿಕ ಜಗತ್ತಿನ ಮನುಷ್ಯ ಹೆಣ್ಣನ್ನು ಸರಕಂತಲ್ಲದೆ ಹೆಣ್ಣಿನಂತೆಯೇ ಬಿಂಬಿಸಲಾರ. ಅತಿಹೆಚ್ಚು ನಗ್ನತೆಯನ್ನು ತುಂಬಿದ, ಸ್ತನ-ನಿತಂಬ-ತೊಡೆಗಳನ್ನು ಹೊಂದಿದ-ಪ್ರದರ್ಶಿಸುವ ಹೆಣ್ಣು ಈ ಜಗತ್ತಿನಲ್ಲಿ ಅತಿ ಹೆಚ್ಚಿನ ಮೌಲ್ಯವುಳ್ಳವಳಾಗಿದ್ದಾಳೆ. ಹರೆಯದ ವಯಸ್ಸಿನ ಬೆಡಗಿಗೆ ಇರುವ ಮಾರುಕಟ್ಟೆ ವಯಸ್ಸು ಮಾಗಿದ ದೇಹಕ್ಕಿಲ್ಲ: ಸೌಂದರ್ಯ ವರ್ಧಕಗಳಾಗಿರಲಿ, ಬಟ್ಟೆಗಳಾಗಿರಲಿ, ದೇಹ-ತೂಕ ಇಳಿಸುವಿಕೆಯ ಜಾಹೀರಾತಾಗಿರಲಿ, ಸಾಬೂನು-ಶಾಂಪೂಗಳದ್ದಾಗಿರಲಿ ಇವುಗಳ ಮಾರುಕಟ್ಟೆ ಬೇಡಿಕೆ ಕುದುರುವುದು ಜಾಹೀರಾತಿನಲ್ಲಿ ಭಾಗವಹಿಸಿ ಪ್ರದರ್ಶಿಸಿದ ದೇಹದ ಸೌಂದರ್ಯ, ನಗ್ನತೆಯನ್ನಾಧರಿಸಿದೆ. ಈ ಜಾಹೀರಾತುಗಳ ಮುಖ್ಯ ಗುರಿಯೂ-ಗಿರಾಕಿಯೂ ಹರಿಹರೆಯದವರಾಗಿದ್ದು ಅತಿ ಹೆಚ್ಚು ಗ್ರಾಹಕರನ್ನು ಈ ರೀತಿಯ ಜಾಹಿರಾತುಗಳು ಸೆಳೆಯುತ್ತದೆ.
 
 
 
ಪುರುಷ ಪ್ರಧಾನ ಜಾಹಿರಾತುಗಳಲ್ಲಿ ನಾಯಕತ್ವ ಗುಣ, ಪೌರುಷ, ಧೈರ್ಯ, ಸಾಹಸಗಳು ಆಕರ್ಷಣೆಯಾದರೆ, ಸ್ತ್ರೀ ಪ್ರಧಾನ ಜಾಹಿರಾತುಗಳಲ್ಲಿ ಬೆತ್ತಲೆಗೊಳ್ಳುವಿಕೆ, ಸೌಂದರ್ಯ, ಬಣ್ಣ, ಆಕರ್ಷಕ ಮೈಕಟ್ಟು ಮತ್ತು ‘ಎದೆಗಾರಿಕೆ’ ಬಹುಮುಖ್ಯ ಆಕರ್ಷಣೆಯಾಗಿದೆ. ಆದರೆ ಪ್ರತಿ ಜಾಹೀರಾತುಗಳು ‘ಸೆಕ್ಸ್ ಸೆಲ್ಲಿಂಗ್’ ಆಗಿದೆ. ಲಿಂಗಾಧಾರಿತ ಜಾಹೀರಾತುಗಳಲ್ಲಿಯೂ ತಾರತಮ್ಯತೆಯಿದ್ದು ಅರೆ ನಗ್ನತೆಯನ್ನು ಕ್ಯಾಮೆರಾವು ಪ್ರತಿ ಕೋನದಲ್ಲಿಯೂ ಚಿತ್ರಿಸುತ್ತದೆ.
 
 
 
ಶಿಲ್ಪಾ ಶೆಟ್ಟಿ ಅಥವಾ ಐಶ್ವರ್ಯ ರೈಯವರ ಸೌಂದರ್ಯ ಜನ್ಮದತ್ತವಾಗಿ ಬಂದಿದ್ದು, ಕಟ್ಟುನಿಟ್ಟಿನ ಆಹಾರ ಕ್ರಮ, ವ್ಯಾಯಾಮ-ಯೋಗಗಳ ಮೂಲಕ ವರ್ಧಿಸಿದೆ ಎಂಬುದರ ಅರಿವಿಲ್ಲದೆ ಸಾಮಾನ್ಯ ಜನ ಇವರು ರೂಪದರ್ಶಿಯಾಗಿ ಭಾಗವಹಿಸಿದ ಜಾಹಿರಾತು ಪ್ರಾಡಕ್ಟ್ ಗಳಿಗೆ ಮುಗಿ ಬೀಳುವುದು ಸಾಮಾನ್ಯ ಸಂಗತಿಯಾಗಿದೆ. ಅಷ್ಟೇ ಅಲ್ಲದೇ ನಾಲ್ಕು ಗೋಡೆಯ ಮಧ್ಯದಲ್ಲಿ ಮುಚ್ಚು-ಮರೆಯಲ್ಲಿ ನಡೆಯಬೇಕಿದ್ದ ಲೈಂಗಿಕತೆಯೆಂಬುದೂ ವಸ್ತುವಾಗಿ ಇಂದು ಜಾಹೀರಾತುಗಳ ಮೂಲಕ ಪ್ರಸಾರವಾಗುತ್ತಿರುವುದು ಖೇದಕರ.
 
 
 
ಕಾಂಡೋಮ್, ಪರ್ಫ್ಯೂಮ್, ಸೋಪ್, ಜೀನ್ಸ್ ಗಳ ಜಾಹೀರಾತುಗಳು ಬಹಳ ಪರಿಣಾಮಕಾರಿಯಾಗಿ ಬಿಂಬಿತವಾಗುತ್ತಿರುವುದು ಹೆಣ್ಣು-ಗಂಡಿನ ಸಂಬಂಧದ ರಹಸ್ಯವನ್ನು ಬಿಚ್ಚಿಡುವುದರ ಮೂಲಕ. ದೂರದರ್ಶನದ ಮೂಲಕ ಜಗತ್ತಿಗೆ ತೆರೆದುಕೊಳ್ಳುವ ಪ್ರತಿ ವೀಕ್ಷಕನ ಕಣ್ಣಿಗೆ ಇಷ್ಟವಿದ್ದರೂ-ಇಲ್ಲದಿದ್ದರೂ ಈ ಜಾಹೀರಾತುಗಳು ಬಿತ್ತರಗೊಳ್ಳುತ್ತಿದೆ. ಕುಟುಂಬದ ಸಣ್ಣ ವಯಸ್ಸಿನ ಮಗುವಿನಿಂದ ಹಿಡಿದು ವೃದ್ಧರವರೆಗೂ ಒಟ್ಟಿಗೆ ಕುಳಿತು ನೋಡುವ ಕಾರ್ಯಕ್ರಮವಿದ್ದರೂ ಸಹಿತ ಮಧ್ಯೆ ಮಧ್ಯೆ ನುಸುಳುವ ಜಾಹೀರಾತುಗಳು ಅಶ್ಲೀಲತೆಯ ಸೋಂಕಿನೊಡನೆ ಪ್ರಸಾರಗೊಳ್ಳುತ್ತದೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಇದು ಹೆಚ್ಚಿನ ಕುತೂಹಲ ವೃದ್ಧಿಗೊಳಿಸಿ ಅಡ್ಡದಾರಿಗೆಳೆದರೆ, ವಯಸ್ಕರಲ್ಲಿ ಕುಟುಂಬ ಸದಸ್ಯರೊಡನೆಯೇ ಮುಜುಗರವಾಗುವಂತೆ ಮಾಡುತ್ತದೆ.
 
 
 
ಎಷ್ಟೋ ಜಾಹೀರಾತುಗಳು ಇತ್ತೀಚೆಗೆ ಮಹಿಳಾ ಸಾಮರ್ಥ್ಯದ ವಿಸ್ತರಣೆಯನ್ನು ಪ್ರತಿಬಿಂಬಿಸಿದರೂ ಅವುಗಳ ಸಂಖ್ಯೆ ತುಂಬಾ ಕಡಿಮೆ. ಪ್ರತಿ ಜಾಹೀರಾತಿನಲ್ಲಿ ಪುರುಷ ಸಾಮರ್ಥ್ಯದ ಮುಂದೆ ಮಹಿಳಾ ಸಾಮರ್ಥ್ಯ ಗೌಣವೆನಿಸುವಂತೆ ಬಿಂಬಿಸಲಾಗುತ್ತದೆ. ಮಹಿಳಾವಾದಿಗಳು ಇದರ ಬಗ್ಗೆ ಬಹಳಷ್ಟು ಹೋರಾಟ ಮಾಡಿದರೂ ಸಹ ಜಾಹೀರಾತುಗಳು ಅವುಗಳ ‘ಥಿಯರಿ’ಯಲ್ಲಿ ಯಾವುದೇ ವ್ಯತ್ಯಾಸ ಮಾಡಲಿಲ್ಲ.
 
 
 
ನಗ್ನತೆಗೆ ನಾಚದ ಮನಸ್ಸುಗಳು ಇಂದು ಆಧುನಿಕ ರೀತಿ ಇದೇ ಎಂಬಂತೇ ನಡೆದುಕೊಳ್ಳುತ್ತದೆ. ದೇಹ ಸೌಂದರ್ಯದ ಪ್ರದರ್ಶನ ಆಂತರಿಕ ಸೌಂದರ್ಯದ ಬೆಲೆ ಕುಗ್ಗಿಸುವಂತೆ ಮಾಡಿದೆ. ಮೈತುಂಬಾ ಸುತ್ತಿದ ಸೀರೆಯ ಗೌರವಯುತ ವ್ಯಕ್ತಿತ್ವದ ಹೆಣ್ಣಿಗಿಂತ 2 ಪೀಸ್ ಬಟ್ಟೆ, ತುಂಡುಡುಗೆಯ ಹೆಣ್ಣು ಗಳಿಕೆಯಲ್ಲಿ ಮುಂದಿದ್ದಾರೆ. ಮಾಯಾ ಬಜಾರಿನಂತ ಜೀವನದಲ್ಲಿ ಕ್ಷಣಿಕತೆಯ ಪ್ರಾಮುಖ್ಯತೆ ಹೆಚ್ಚಿದ್ದು, ನೈತಿಕತೆಯ ಮಟ್ಟ ಕುಸಿಯುತ್ತಿದೆ. ನಮ್ಮ ಸರ್ಕಾರವು ಯುವ ಜನರನ್ನು ಪ್ರಚೋದಿಸುವ ‘ಸೆಕ್ಸ್ ಸೆಲ್ಲಿಂಗ್’ ಜಾಹೀರಾತುಗಳಿಗೆ ಕಡಿವಾಣ ಹಾಕಿದರೆ ಲೈಂಗಿಕ-ಪ್ರಚೋದನಾತ್ಮಕ ಜಾಹೀರಾತುಗಳ ವ್ಯಾಪಕತೆಯನ್ನು ನಿರ್ಬಂಧಿಸಬಹುದು. ಮಾಧ್ಯಮಗಳು ನೈತಿಕತೆಯನ್ನು ಎತ್ತಿಹಿಡಿಯುವ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವಂತಾದರೆ ಕ್ರಮೇಣವಾದರೂ ಹೆಣ್ಣನ್ನು ಬಿಕರಿಯ ವಸ್ತುವಂತೆ ನೋಡುವ ಮನಸ್ಸುಗಳನ್ನು ಬದಲಾಯಿಸಬಹುದು. ಸ್ತ್ರೀತ್ವ ಅಥವಾ ಪುರುಷತ್ವ ಪ್ರದರ್ಶನವಾಗದೇ ಗೌರವಯುತ ಬದುಕಿನ ತಳಹದಿಯಾಗಬೇಕು.
ಸೌಮ್ಯ ಕುಗ್ವೆ
[email protected]

LEAVE A REPLY

Please enter your comment!
Please enter your name here