`ನಂದಿನಿ ಸಹಕಾರಿ ಹಾಲಿನ ಬ್ರ್ಯಾಂಡ್' ಬಿಡುಗಡೆ

0
498

ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಕೆಎಂಎಫ್ ತನ್ನ ಉದ್ಯಮವನ್ನು ಮುಂಬಯಿಗೆ ವಿಸ್ತೃತಗೊಳಿಸಿ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನೆಂಟಸ್ತಿಕೆ ಮತ್ತಷ್ಟು ಬಲಗೊಳಿಸಿದೆ. ನಮ್ಮೊಳಗಿನ ಪರಸ್ಪರ ಮನೋಭಾವನೆ ಬಹಳ ಹತ್ತಿರವಾದದ್ದು. ಮಹಾರಾಷ್ಟ್ರದ ಸಂಸ್ಕೃತಿ ಮತ್ತು ವಂಶಪರಂಪರೆಗಳನ್ನು ಗೌರವಿಸಿ ಬಾಳಿದವರು. ಮಹಾರಾಷ್ಟ್ರ ಜನತೆಯ ಆರಾಧಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ಕರ್ನಾಟಕದ ಉದ್ದಗಳಲ್ಲೂ ಇರಿಸಿ ಗೌರವಿಸುವ ಸಂಪ್ರದಾಯ ನಮ್ಮಲ್ಲಿದೆ. ಇದು ನಮ್ಮ ಜನತೆಯ ಕರ್ಮಭೂಮಿ, ಉದ್ಯಮದಲ್ಲೂ ಸಂಬಂಧಗಳನ್ನು ಬೆಸೆದಿವೆ. ಇದೀಗ ಮತ್ತೊಂದು ಹೆಜ್ಜೆ ಮುಂದಾಗಿಸಿ `ನಂದಿನಿ ಹಾಲಿನ ಬ್ರ್ಯಾಂಡ್’ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಬಹುಶಃ ತಾಯಿಯ ಹಾಲಿನ ನಂತರ ದನದ ಹಾಲು ಪಾವಿತ್ರ್ಯಯತೆ ಮತ್ತು ಪೌಷ್ಠಿಕವಾಗಿ ಉಪಯುಕ್ತವಾದದ್ದು. ಇದೇ ನಂದಿನಿ ಹಾಲಿನ ಗುಟ್ಟಾಗಿದ್ದು ಇದರ ಶುದ್ಧತೆಗೆ ಜನತೆ ವಿಶ್ವಾಸ ಹೊಂದಿದ್ದಾರೆ. ಇಂತಹ ಭರವಸೆಗೂ ಮೀರಿದ ಗುಣವುಳ್ಳ ಉತ್ತಮ ಆರೋಗ್ಯದಾಯಕ ಹಾಲು ಈಗ ಮಹಾರಾಷ್ಟ್ರ ಜನರಿಗೆ ಒದಗಿಸುತ್ತಿರುವುದ ಅಭಿನಂದನೀಯ. ಗೋಮಾತೆಯ ಕ್ಷೀರ ಆರೋಗ್ಯ ಭಾಗ್ಯಕ್ಕೆ ಔಷದಿ ಆಗಿದ್ದು ಆರೋಗ್ಯದಾಯಕ ಬದುಕಿಗೆ ನಂದಿನಿ ಪ್ರೇರಕ. ಕೆಎಂಎಫ್ನ ಬೃಹತ್ ಯೋಜನೆ ಬೃಹ್ಮನ್ಮುಂಬಯಿಗೆ ವರವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
 
 
nandhinu_mubmbai1
 
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಸಂಸ್ಥೆಯ ಭಾರತ ರಾಷ್ಟ್ರದ ದ್ವಿತೀಯ ಅಗ್ರಗಣ್ಯ `ನಂದಿನಿ ಸಹಕಾರಿ ಹಾಲಿನ ಬ್ರ್ಯಾಂಡ್’ ಬಿಡುಗಡೆ ಗೊಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಬುಧವಾರ ಸಂಜೆ ಮುಂಬಯಿ ಸಾಂತಾಕ್ರೂಜ್ ಪೂರ್ವದಲ್ಲಿನ ಸಹರಾ ಸ್ಟಾರ್ ಹೊಟೇಲ್ ನಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭಕ್ಕೆ ಕರ್ನಾಟಕದ ಪಶು ಸಂಶೋಧನೆ ಮತ್ತು ರೇಷ್ಮೆ ಸಚಿವ ಎ.ಮಂಜು ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವರು `ತೃಪ್ತಿ ಹಾಲು’ನ್ನು ಹಾಗೂ ಸಚಿವ ಎ.ಮಂಜು ಅವರು `ನಂದಿನಿ ಮೊಸರು’ನ್ನು ಮಹಾರಾಷ್ಟ್ರದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
 
 
ಕೆಎಂಎಫ್ ನಿರ್ದೇಶಕ ಮತ್ತು ಬಳ್ಳಾರಿ ಶಾಸಕ ಎಂ.ಪಿ ರವೀಂದ್ರ, ತುಂಗಾ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಸುಧಾಕರ್ ಎಸ್.ಹೆಗ್ಡೆ, ಆಹಾರ್ ಸಂಸ್ಥೆಯ ಅಧ್ಯಕ್ಷ ಆದರ್ಶ್ ಶೆಟ್ಟಿ, ಕರ್ನಾಟಕ ಹಾಲು ಉತ್ಪಾದಕ ಒಕ್ಕೂಟದ ಗೌರವ ಕಾರ್ಯಾಧ್ಯಕ್ಷ ಪಿ.ನಾಗರಾಜು ಮತ್ತು ತುಮಕೂರು ಹಾಲು ಉತ್ಪಾದನಾ ಸಂಘಟನೆಯ ಗೌರವ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕ ರಾಕೇಶ್ ಸಿಂಗ್ ವೇದಿಕೆಯಲ್ಲಿ ಆಸೀನರಾಗಿದ್ದರು.
 
 
 
ಸಚಿವ ಎ.ಮಂಜು ಮಾತನಾಡಿ ಕರ್ನಾಟಕದಲ್ಲಿ 1975ರಲ್ಲಿ ನಾಲ್ಕು ಜಿಲ್ಲೆಗಳನ್ನು ಹೊಂದಿ ಕ್ರಮೇಣ 8 ಜಿಲ್ಲೆಗಳೊಂದಿಗೆ ರಾಜ್ಯದಾದ್ಯಂತ ಪಸರಿಸಿಕೊಂಡ ಕರ್ನಾಟಕ ಹಾಲು ಉತ್ಪಾದಕ ಒಕ್ಕೂಟ (ಕೆಎಂಎಫ್) 14 ಸಂಸ್ಥೆಗಳ ಮುಖೇನ ಅಂದು 69,000 ಲೀಟರ್ ಹಾಲು ಒದಗಿಸುತ್ತಿದ್ದು, ಇದೀಗ ಒಂದು ದಿನಕ್ಕೆ 72 ಲಕ್ಷ ಲೀಟರ್ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಜನತೆಗೆ ಒದಗಿಸುತ್ತಿದೆ. ಅದೂ ಬರೇ ಗೋವು ಹಾಲಿನ ವಿತರಣೆಯೊಂದಿಗೆ ಇಂದು ಕರ್ನಾಟಕ ಮೂಲದ ಕೆಎಂಎಫ್ ರಾಷ್ಟ್ರಕ್ಕೆ ನಂಬರ್ ಒಂದೆಣಿಸಿದೆ. ಮಹಾರಾಷ್ಟ್ರದಲ್ಲಿನ ಜನತೆಗೂ ದನದ ಶುದ್ಧ ಹಾಲು ಮತ್ತಿತರ ಉತ್ಪನ್ನಗಳ ಅವಶ್ಯಕತೆಯನ್ನು ನೀಗಿಸಲಿದ್ದು ಕೆಎಂಎಫ್ ಮುಂಬಯಿನಲ್ಲಿ ಉದ್ಯಮ ಆರಂಭಿಸಿದೆಯೇ ಹೊರತು ಸ್ಪರ್ಧೆಗಾಗಿ ಅಲ್ಲವೇ ಅಲ್ಲ. ಮುಂಬಯಿಯಲ್ಲಿನ ಗ್ರಾಹಕರ ನಿರೀಕ್ಷೆ ಮತ್ತು ಕರ್ನಾಟಕದ ರೈತರ ಹಿತದೃಷ್ಟಿ ನಮ್ಮ ಉದ್ದೇಶವಾಗಿದೆ. ಇಂದಿನಿಂದ ಮುಂಬಯಿಗರಿಗೆ ಒಂದು ದಿನಕ್ಕೆ ಕನಿಷ್ಠ 5 ಲಕ್ಷ ಲೀಟರ್ ಹಾಲು ಹಾಗೂ ಇತರೇ ಉತ್ಪನ್ನಗಳನ್ನು ಒದಗಿಸಿ ಇಲ್ಲಿನ ಜನತೆಯ ವಿಶ್ವಾಸಕ್ಕೆ ಕೆಎಂಎಫ್ ಪಾತ್ರವಾಗಲಿದೆ ಎಂದರು.
 
 
ಇಂತಹ ಸೇವಾ ಮಧ್ಯಸ್ಥಿಕೆಯೊಂದಿಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳೊಳಗೆ ಒಳ್ಳೆಯ ಸೌಲಭ್ಯ ಲಭಿಸಿ ಉಭಯ ಎರಡು ರಾಜ್ಯಗಳೊಳಗೆ ಸಂಬಂಧಗಳೂ ಬಲಯುತವಾಗಲು ಕಾರಣವಾಗಿದೆ. ಜನತೆಗೆ ಸೂಕ್ತವಾದ ಮತ್ತು ಲಾಭದಾಯಕ ಸೇವೆ ಒದಗಿಸುವುದು ಸರಕಾರದ ಕೆಲಸ. ಇದನ್ನು ಖಾಸಾಗಿಯಾಗಿ ಪೂರೈಸುವಲ್ಲಿ ಕೆಎಂಎಫ್ ಶ್ರಮಿಸುತ್ತಿರುವುದು ಅಭಿನಂದನೀಯ. ಯಾವೋತ್ತೂ ಸ್ಪರ್ಧೆಯಿಂದ ಒಳ್ಳೆಯ ಸೌಲಭ್ಯ ನೀಡಲು ಸಾಧ್ಯ ಎನ್ನುವುದಕ್ಕೆ ಈ ಯೋಜನೆಯೇ ಪ್ರಮಾಣವಾಗಿದೆ. ಕರ್ನಾಟಕದಲ್ಲಿ ಹಾಲು ಉತ್ಪನ್ನಗಳು ಕಡಿಮೆದರದಲ್ಲಿ ಲಭ್ಯವಾಗುತ್ತಿದ್ದರೆ ಭಾರತದೊಳಗಿನ ಮಹಾರಾಷ್ಟ್ರದಲ್ಲಿ ಹಾಲು ಬೆಲೆ ಜಾಸ್ತಿ ಆಗಲು ಕಾರಣ ನಾವು ಕಂಡು ಹಿಡಿಯಬೇಕಾಗಿದೆ. ಇದೊಂದು ವಿವೇಚನೆಯುಳ್ಳ ವಿಚಾರವಾಗಿದೆ. ಇಲ್ಲಿನ ಹಾಲು ಉತ್ಪಾಧಿಸುವ ರೈತರಿಗೆ ಸಿಗುವ ಮೂಲ ಸೌಕರ್ಯ ಮತ್ತು ಉತ್ಪನ್ನಕಾರಕ ಬೆಲೆ ಬಗ್ಗೆ ಚರ್ಚಿಸಲಾಗುತ್ತಿದ್ದು ವಿಶೇಷವಾಗಿ ಮುಂಬಯಿಕರ್ ಜನತೆಗೆ ಕೆಎಂಎಫ್ ಕ್ಷೀರ ಉತ್ಪನ್ನಗಳನ್ನು ಅನುಕೂಲಕಾರಕವಾಗಿ ಸಿಗುವಂತಾಗಲಿ. ಆ ಮೂಲಕ ರೈತರ ಬದುಕೂ ಹಸನಾಗಲಿ ಎಂದು ಸಂಸದ ಗೋಪಾಲ ಶೆಟ್ಟಿ ತಿಳಿಸಿದರು.
 
 
ಪಿ.ನಾಗರಾಜು ಪ್ರಸ್ತಾವಿಕ ನುಡಿಗಳನ್ನಾಡಿ ಕೆಎಂಎಫ್ನ ನಂದಿನಿ ಬ್ರ್ಯಾಂಡ್ ಸದ್ಯ 60 ಉತ್ಪನ್ನಗಳೊಂದಿಗೆ ಸ್ವಾಧಿಷ್ಟಕರ ಮತ್ತು ಕಡಿಮೆ ಬೆಲೆಗೆ ಲಭಿಸುತ್ತಿರುವುದೇ ಜನರ ಆಯ್ಕೆಗೆ ಪೂರವಾಗಿದೆ. ದನದ ಗುಣಮಟ್ಟದ ಹಾಲು ಮತ್ತು ಸ್ವಾಭಾವಿಕ ರುಚಿಕಾರ ಉತ್ಪನ್ನಗಳು ಆರೋಗ್ಯದಾಯಕ ಎಂದು ಆರಿಸುತ್ತಿರುವುದು ಮುಖ್ಯ ಕಾರಣವಾಗಿದೆ. ಹಾಲು ಉತ್ಪದಕರ ಮತ್ತು ಕಾರ್ಯಸ್ಥರ(ಏಜನ್ಸಿಗಳ) ಪರಿವಾರಕ್ಕೂ ವಿಮೆಯನ್ನೂ ಒದಗಿಸುತ್ತಿರುವ ಕೆಎಂಎಫ್ ನಂದಿನಿ ಪರಿವಾರವನ್ನಾಗಿಸಿದ ಕಾರಣ ಸಂಸ್ಥೆ ಇಷ್ಟೆತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
 
 
ಕಾರ್ಯಕ್ರಮದಲ್ಲಿ ಕೆಎಫ್ ನ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಆಹಾರ್ನ ಮಾಜಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರು, ತುಮಕೂರು ಸಹಕಾರಿ ಹಾಲು ಉತ್ಪಾದಕ ಸಂಘದ ನಿರ್ದೇಶಕರು, ಉದ್ಯಮಿ ಸದಾನಂದ ಶೆಟ್ಟಿ ವರ್ಲಿ, ಧರ್ಮಪಾಲ್ ಯು.ದೇವಾಡಿಗ, ನಿತ್ಯಾನಂದ ಡಿ.ಕೋಟ್ಯಾನ್, ಧರ್ಮಪಾಲ್ ಅಂಚನ್, ಎಸ್.ಕೆ ಶ್ರೀಯಾನ್, ಸುರೇಶ್ ಶೆಟ್ಟಿ ಯೆಯ್ಯಾಡಿ, ರತ್ನಾಕರ್ ಶೆಟ್ಟಿ ಮೋರ್ಲಾ ಮತ್ತಿತರ ಮತ್ತಿತರರು ಉಪಸ್ಥಿತರಿದ್ದರು.
 
 
ಪಿ.ನಾಗರಾಜು ಸ್ವಾಗತಿಸಿದರು. ಆರಂಭದಲ್ಲಿ ಹಾಲು ಸಹಕಾರಿ ರಂಗದ ಪಿತಾಮಹಾ ಸ್ವರ್ಗೀಯ ಡಾ| ವರ್ಗಿಸ್ ಕುರಿಯಾನ್ ಅವರ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ನಮಿಸಲಾಯಿತು. ಪ್ರಜಕ್ತ ಜೋಶಿ ಪ್ರಾರ್ಥನೆಯನ್ನಾಡಿದರು. ವಿದೂಲಾ ಇಂಗ್ಳೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೆಎಂಎಫ್ ಮಂಗಳೂರು ಅಧ್ಯಕ್ಷ ರವಿರಾಜ್ ಹೆಗ್ಡೆ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here