ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನ

0
521

ವರದಿ: ಸುನೀಲ್ ಬೇಕಲ್
ಬದುಕು ಮತ್ತು ಬರಹ ವ್ಯತ್ಯಾಸ ಇರಬಾರದು. ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜ ಸುಧಾರಣೆಯ ಜವಾಬ್ದಾರಿ ಆತನಿಗೆ ಇದೆ. ಯುವಜನತೆ ಸಾಹಿತ್ಯದ ಬಗ್ಗೆ ಒಲವು, ಅಭಿಮಾನ ಮತ್ತು ಆಸಕ್ತಿ ಹೊಂದಿರಬೇಕು. ಸರ್ವರ ಹಿತವೇ ಸಾಹಿತ್ಯದ ಉದ್ದೇಶವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಬದುಕನ್ನು ಹಸನುಗೊಳಿಸಿ ಸುಖಮಯವನ್ನಾಗಿ ಮಾಡುವ ಬಗ್ಗೆ ಚಿಂತನೆ – ಮಂಥನ ನಡೆಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
 
 
 
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸೋಮವಾರ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ 84ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
 
 
ಜಾನಪದ ಕಲೆಗಳು ಮತ್ತು ಸಂಸ್ಕೃತಿ ಇಂದು ವಿನಾಶದಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು. ಈ ದಿಸೆಯಲ್ಲಿ ಸರ್ಕಾರ, ಅಕಾಡೆಮಿಗಳು ಮತ್ತು ಮಠ – ಮಂದಿರಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.
 
 
 
ಸಾಹಿತ್ಯವು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡದೆ ಅವುಗಳನ್ನು ಬೆಸೆಯುವ ಕಾರ್ಯ ಮಾಡಬೇಕು ಎಂದು ಹೇಳಿದರು. ಧರ್ಮಸ್ಥಳವು ಕೇವಲ ಸರ್ವಧರ್ಮ ಸಮನ್ವಯ ಕೇಂದ್ರವಲ್ಲ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮ್ಮಿಲನದ ಕೇಂದ್ರವೂ ಆಗಿದ್ದು ನಿರಂತರ ಸಮಾಜಕ್ಕೆ ಸ್ಪೂರ್ತಿಯ ಚಿಲುಮೆ ಆಗಿದೆ. ವೀರೇಂದ್ರ ಹೆಗ್ಗಡೆಯವರು ಚತುರ್ವೇಧ ದಾನಪರಂಪರೆಯೊಂದಿಗೆ ಮಾಡುತ್ತಿರುವ ಸಮಾಜ ಸೇವೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ, ಸ್ವಚ್ಛತೆಗೆ ಆದ್ಯತೆ ಇತ್ಯಾದಿಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು.
 
 
 
ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ವ್ಯಕ್ತಿಗೆ ಹಾಗೂ ಸಮಾಜಕ್ಕೆ ಹಿತವನ್ನುಂಟು ಮಾಡುವ ಸಾಹಿತ್ಯಕ್ಕೆ ಸಾರ್ವತ್ರಿಕವಾದ ಬೆಂಬಲ ಅಗತ್ಯವಾಗಿದೆ. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಾತೃ ಭಾಷೆಯಾದ ಕನ್ನಡ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಮನೆಯಲ್ಲಿಯೂ, ಸಾಮಾಜಿಕ ಸಂಘಟನೆಗಳಲ್ಲಿಯೂ, ಶಾಲಾ-ಕಾಲೇಜುಗಳಲ್ಲಿಯೂ ಕನ್ನಡದ ಬಗ್ಯೆ ಪ್ರೇಮ ಮತ್ತು ಅಭಿಮಾನ ಬೆಳೆಯಬೇಕು. ಸಾಹಿತ್ಯ ಪ್ರಸಾರದಲ್ಲಿ ಸಮೂಹ ಮಾಧ್ಯಮಗಳು ಉತ್ತಮ ಕೊಡುಗೆ ನೀಡುತ್ತಿವೆ. ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ಅಕಾಡೆಮಿ ಕನ್ನಡಕ್ಕೆ ಪ್ರೋತ್ಸಾಹ ನೀಡುತ್ತಿವೆ.
 
 
 
ಸಾಹಿತ್ಯ ಕೃತಿಗಳು ನವ ಸಮಾಜ ರೂಪಿಸುವಲ್ಲಿ ಪ್ರೇರಣೆ ನೀಡುತ್ತವೆ. ಆದುರಿಂದ ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಪ್ರಕಾಶಕರನ್ನು ಹಾಗೂ ಓದುಗರನ್ನು ಬೆಂಬಲಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
 
 
 
ಅಧ್ಯಕ್ಷತೆ ವಹಿಸಿದ ಖ್ಯಾತ ಸಾಹಿತಿ ಬೆಂಗಳೂರಿನ ಎಂ. ಎನ್. ವ್ಯಾಸರಾವ್ ಮಾತನಾಡಿ ಇಂದು ಜನಪ್ರಿಯತೆಗಾಗಿ ಮತ್ತು ಅಗ್ಗದ ಪ್ರಚಾರಕ್ಕಾಗಿ ಬರೆಯುವವರೇ ಹೆಚ್ಚಾಗಿದ್ದಾರೆ. ಇಂದಿನ ಸಾಹಿತ್ಯದಲ್ಲಿ ಮೌಲ್ಯಗಳು ಮಾಯವಾಗುತ್ತಿವೆ. ಕಾವ್ಯ, ಕಾದಂಬರಿ, ನಾಟಕಗಳಲ್ಲಿ ಮಾನವೀಯ ಮೌಲ್ಯಗಳು ಕಾಣುತ್ತಿಲ್ಲ. ಅಕ್ಷರಗಳ ಜೋಡಣೆಯೊಂದಿಗೆ ಅನುಭವವನ್ನು ಲಿಖಿತ ರೂಪದಲ್ಲಿ ಸಾದರಪಡಿಸುವುದೇ ಸಾಹಿತ್ಯವಾಗಿದೆ. ಆದರೆ ಇಂದಿನ ಸಾಹಿತ್ಯ ರಚನೆಯಲ್ಲಿ ಲೋಕಾನುಭವ ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.
 
 
 
ಸಾಹಿತಿಗೆ ಆತ್ಮವಿಶ್ವಾಸ ಇರಬೇಕು. ಆಯಾ ಪರಿಸರದಿಂದ ಪ್ರಭಾವಿತನಾಗಿ ತಾನು ಪಡೆದ ಲೋಕಾನುಭವವನ್ನು ಸಾಹಿತ್ಯ ರೂಪದಲ್ಲಿ ಸಾದರಪಡಿಸಬೇಕು ಎಂದು ಅವರು ಸಲಹೆ ನೀಡಿದರು.
 
 
ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಶಿವರಾಮ ಕಾರಂತ, ಮಂಜೇಶ್ವರ ಗೋವಿಂದ ಪೈ, ರತ್ನಾಕರ ವರ್ಣಿ, ಪಂಜೆ ಮಂಗೇಶ ರಾವ್, ಕು.ಶಿ. ಹರಿದಾಸ ಭಟ್, ಮುದ್ದಣ ಮೊದಲಾದವರು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಅವರು ಸ್ಮರಿಸಿದರು.
 
 
 
ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ. ವೀಣಾ ಮತ್ತು ಬೆಂಗಳೂರಿನ ಹರಿಪ್ರಕಾಶ್ ಕೋಣೆಮನೆ ಮಾತನಾಡಿ ಬದುಕಿನಲ್ಲಿ ಸಾಹಿತ್ಯದ ಮಹತ್ವ ಮತ್ತು ಉಪಯೋಗದ ಬಗ್ಯೆ ಮಾಹಿತಿ ನೀಡಿದರು.
ಕಾರ್ಯಕ್ರಮ ನಿರ್ವಹಿಸಿದ ಕಾರ್ಕಳದ ಪ್ರೊ. ಎಂ. ರಾಮಚಂದ್ರ ಕೊನೆಯಲ್ಲಿ ಧನ್ಯವಾದವಿತ್ತರು.
ರಾತ್ರಿ ನಡೆದ ಲಕ್ಷದೀಪೋತ್ಸವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಧನ್ಯತೆಯನ್ನು ಪಡೆದರು.
 
 
 
ಬೆಂಗಳೂರಿನಿಂದ 20 ತಂಡಗಳಲ್ಲಿ ಬಂದ ಭಕ್ತಾದಿಗಳು ಸೋಮವಾರ ರಾತ್ರಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ ಮಾಡಿ ಪುಣ್ಯಭಾಗಿಗಳಾದರು.
ರಾಜ್ಯದ ವಿವಿಧ ಭಾಗಗಳಿಂದ ಬಂದ 2,345 ಮಂದಿ ಕಲಾವಿದರು ಇಡೀ ರಾತ್ರಿ ಕಲಾ ಸೇವೆ ಮಾಡಿದರು. (ಶಂಖ, ಕೊಂಬು, ಕಹಳೆ, ಬ್ಯಾಂಡ್, ವಾಲಗ, ವೀರಗಾಸೆ, ಚೆಂಡೆ ಇತ್ಯಾದಿ ಕಲಾವಿದರು ಭಾಗವಹಿಸಿದರು)
 
 
 
ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ ಶುಭ ಹಾರೈಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಭೋಜನ ಸಾಹಿತ್ಯ ಸರಿಯಾದರೆ ಎಲ್ಲವೂ ಯಶಸ್ವಿಯಾಗುತ್ತದೆ : ಮನು ಬಳಿಗಾರ್
ಎಂ.ಎನ್. ವ್ಯಾಸ ರಾವ್ ರಚಿಸಿದ ಎರಡು ಹಾಡುಗಳನ್ನು ಉಜಿರೆಯ ಸುಬ್ರಹ್ಮಣ್ಯ ಭಟ್ ಮತ್ತು ಅವರ ಮಗಳು ಅನನ್ಯಾ ಭಟ್ ಸುಶ್ರಾವ್ಯವಾಗಿ ಹಾಡಿದರು. ಇಬ್ಬರನ್ನೂ ಕವನ ರಚಿಸಿದ ಎಂ.ಎನ್. ವ್ಯಾಸ ರಾವ್ ಸನ್ಮಾನಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here