ಧರ್ಮಸ್ಥಳ ಲಕ್ಷದೀಪೋತ್ಸವ : ಪೂರ್ವ ಸಿದ್ಧತೆ ಸಮಾಲೋಚನಾ ಸಭೆ

0
137

ವರದಿ: ಸುನೀಲ್ ಬೇಕಲ್
ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಇದೇ 24 ರಿಂದ 29ರ ವರೆಗೆ ನಡೆಯಲಿರುವ ಲಕ್ಷದೀಪೋತ್ಸವದ ಪೂರ್ವ ಸಿದ್ಧತೆಗಳ ಬಗ್ಯೆ ಸಮಾಲೋಚನಾ ಸಭೆಯು ಶುಕ್ರವಾರ ಧರ್ಮಸ್ಥಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾಣಾಥ ರೈ ನೇತೃತ್ವದಲ್ಲಿ ನಡೆಯಿತು.
 
 
 
ರಸ್ತೆ ದುರಸ್ತಿ ಮತ್ತು ಡಾಮರೀಕರಣ, ಆರೋಗ್ಯ ಸೇವೆ, ನಿರಂತರ ವಿದ್ಯುತ್ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಸುಗಮ ಸಂಚಾರ ಸೌಲಭ್ಯ, ಸಿ.ಸಿ. ಕ್ಯಾಮರಾ ಅಳವಡಿಕೆ ಬಗ್ಯೆ ಸಚಿವರು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿ ದೀಪೋತ್ಸವ ಪ್ರಾರಂಭವಾಗುವ ಮೊದಲು ಎಲ್ಲಾ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.  ಯಾತ್ರಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಸೂಚನಾ ಫಲಕಗಳು, ಪ್ರತಿಫಲಕಗಳನ್ನು ಹಾಕುವಂತೆ ತಿಳಿಸಿದರು.
 
 
 
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಾಗಿ 200 ಕೋಟಿ ರೂ. ಅನುದಾನ ಮಂಜೂರಾಗಿದೆ. ಪ್ರತಿ ಕ್ಷೇತ್ರಕ್ಕೆ 20 ಕೋಟಿ ರೂ. ಮಂಜೂರಾಗಿದೆ ಎಂದು ಅವರು ತಿಳಿಸಿದರು. ಬೆಳ್ತಂಗಡಿ ತಾಲ್ಲೂಕಿಗೆ 28 ಕೋಟಿ ರೂ. ಮಂಜೂರಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳು ಪೂರಕವಾಗಿ, ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿ ಲಕ್ಷದೀಪೋತ್ಸವ ಯಶಸ್ವಿಯಾಗುವಂತೆ ಸಹಕರಿಸಬೇಕು.
ಧರ್ಮಸ್ಥಳದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಪರಂಪರಾಗತವಾಗಿ ನಡೆಯುವ ಲಕ್ಷದೀಪೋತ್ಸವ ನಮ್ಮೆಲ್ಲರ ಸಮಾಜೋತ್ಸವವಾಗಿದೆ. ಜಿಲ್ಲೆಯ ಜನರಿಗೆ ದೊಡ್ಡ ಉತ್ಸವವಾಗಿದೆ ಎಂದು ಸಚಿವರು ಹೇಳಿದರು.
 
 
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧಾರ್ಮಿಕ ನಂಬಿಕೆ ನಡವಳಿಕೆಗಳು, ಉತ್ಸವ-ಜಾತ್ರೆಗಳು ಜನರಿಗೆ ವಿಶೇಷ ಸಂತೋಷ, ಶಾಂತಿ, ನೆಮ್ಮದಿ ನೀಡುವುದರ ಜೊತೆಗೆ ಸಾರ್ಥಕ ಜೀವನಕ್ಕೆ ಮಾರ್ಗದರ್ಶನ, ಪ್ರೇರಣೆ ನೀಡುತ್ತದೆ. ಲಕ್ಷ ದೀಪೋತ್ಸವ ಕ್ಷೇತ್ರದ ಅತಿ ದೊಡ್ಡ ಉತ್ಸವವಾಗಿದ್ದು, ಜನರಿಗೆ ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ ಬಗ್ಯೆ ಅರಿವು , ಜಾಗೃತಿ ಮೂಡಿಸುವುದರೊಂದಿಗೆ ತಮ್ಮ ಉದ್ಯೋಗ, ವ್ಯವಹಾರ, ಕುಟುಂಬ ಹಾಗೂ ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ದೇವಸ್ಥಾನದ ಸಿಬ್ಬಂದಿಯ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳು ಪೂರ್ಣ ಸಹಕಾರ ನೀಡಿ ಯಾತ್ರಿಕರಿಗೆ ಸುವ್ಯವಸ್ಥೆ ಮಾಡಬೇಕು. ಲಕ್ಷದೀಪೋತ್ಸವ ಯಶಸ್ವಿಯಾಗುವಂತೆ ಸಹಕರಿಸಬೇಕು ಎಂದು ಕೋರಿದರು.
 
 
ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ, ಜಿಲ್ಲಾ ಆರೋಗ್ಯಧಿಕಾರಿ ಡಾ. ರಾಮಕೃಷ್ಣ, ತಹಸೀಲ್ದಾರ್ ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here