ಧರ್ಮಸ್ಥಳದಲ್ಲಿ ಒಂದು ಸಾವಿರನೆ ಮದ್ಯವರ್ಜನ ಶಿಬಿರ

0
364

ವರದಿ: ಸುನೀಲ್ ಬೇಕಲ್
ವ್ಯಸನಮುಕ್ತರಿಗೆ 8 ಲಕ್ಷ ರೂ. ಮೌಲ್ಯದ ಸಮವಸ್ತ್ರ
ಧರ್ಮಸ್ಥಳದಲ್ಲಿ ಅಕ್ಟೋಬರ್ ಒಂದರಂದು ಶನಿವಾರ ನಡೆಯಲಿರುವ ಒಂದು ಸಾವಿರನೆ ಮದ್ಯವರ್ಜನ ಶಿಬಿರದಲ್ಲಿ ಎರಡು ಸಾವಿರ ವ್ಯಸನ ಮುಕ್ತರು ಮತ್ತು ಅವರ ಕುಟುಂಬದವರು ಭಾಗವಹಿಸಲಿದ್ದು ಭರದಿಂದ ಸಿದ್ಧತೆಗಳು ನಡೆಯುತ್ತಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.
 
 
ಅವರು ಮಂಗಳವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮಾರಂಭಕ್ಕೆ ಮೊದಲು ಅದೇ ದಿನ ಬೆಳಿಗ್ಯೆ ಗಾಂಧಿ ಸ್ಮೃತಿ ಕಾರ್ಯಕ್ರಮದ ಅಂಗವಾಗಿ ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಮೆರವಣಿಗೆ ಆಯೋಜಿಸಲಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವ್ಯಸನ ಮುಕ್ತರಿಗೆ 8 ಲಕ್ಷ ರೂ. ಮೌಲ್ಯದ ಸಮವಸ್ತ್ರ ನೀಡುವರು. ಸಮವಸ್ತ್ರವು ಗಾಂಧಿ ಟೋಪಿ, ಅಂಗಿ ಮತ್ತು ಶಲ್ಯ ಒಳಗೊಂಡಿದೆ.
 
 
ಇದಕ್ಕೆ ಪೂರ್ವಭಾವಿಯಾಗಿ ಇದೇ 24 ರಿಂದ 30ರ ವರೆಗೆ ರಾಜ್ಯದ ಹತ್ತು ಕಡೆಗಳಲ್ಲಿ ಏಕ ಕಾಲದಲ್ಲಿ ಮದ್ಯ ವರ್ಜನ ಶಿಬಿರ ಆಯೋಜಿಸಲಾಗಿದೆ. (ಸುಳ್ಯ, ಹೊನ್ನಾಳ್ಳಿ, ಶಿವಮೊಗ್ಗ, ಬೆಳ್ತಂಗಡಿ, ಮೂಡಬಿದ್ರೆ ಹಾಸನ, ಕೆ.ಆರ್. ನಗರ, ಶಿರಸಿ, ತುಮಕೂರು ಮತ್ತು ಕೊಪ್ಪ) ಪ್ರತಿ ಕೇಂದ್ರದ ತಲಾ ನೂರರಂತೆ ಒಂದು ಸಾವಿರ ವ್ಯಸನ ಮುಕ್ತರು ಮತ್ತು ಅವರ ಕುಟುಂಬದವರು ಅ. ಒಂದರಂದು ನಡೆಯುವ ಸಾವಿರನೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೆ 1250 ಮಂದಿ ಹೆಸರು ನೋಂದಾಯಿಸಿದ್ದು ಇವರ ಜೊತೆಗೆ ಎರಡು ಸಾವಿರ ಮಂದಿ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬದವರು ಭಾಗವಹಿಸುವರು.
 
 
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ರಾಜ್ಯದ ವಿವಿಧ ಕಡೆ ಈಗಾಗಲೆ 990 ಮದ್ಯವರ್ಜನ ಶಿಬಿರ ಆಯೋಜಿದ್ದು 70,224 ಮಂದಿ ಮದ್ಯ ವ್ಯಸನ ಮುಕ್ತರಾಗಿದ್ದಾರೆ. ಎಂದು ಅವರು ತಿಳಿಸಿದರು.
ಕೆ. ವಸಂತ ಸಾಲಿಯಾನ್, ಕಿಶೋರ್ ಹೆಗ್ಡೆ, ವಿವೇಕ್ ವಿ. ಪಾಸ್ ಮತ್ತು ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here