ಧರ್ಮಸ್ಥಳಕ್ಕೆ ಭಕ್ತಾದಿಗಳ ಪಾದಯಾತ್ರೆ 

0
348

ವರದಿ: ಸುನೀಲ್ ಬೇಕಲ್
ದೇಹ, ಮನಸ್ಸು ಮತ್ತುಇಂದ್ರಿಯಗಳ ನಿಗ್ರಹದೊಂದಿಗೆ ಆರೋಗ್ಯ ರಕ್ಷಣೆಯೊಂದಿಗೆ ಸಂಸ್ಕೃತಿಯ ಸಂರಕ್ಷಣೆ ಮಾಡಬೇಕು. ತನ್ಮೂಲಕ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
 
 
ಧರ್ಮಸ್ಥಳದಲ್ಲಿ ಗುರುವಾರ ಲಕ್ಷ ದೀಪೋತ್ಸವ ಪ್ರಾರಂಭದ ದಿನ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಸಾವಿರಾರು ಭಕ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
 
 
 
 
ಪಾದಯಾತ್ರೆಯಲ್ಲಿ ಬಂದವರೆಲ್ಲ ಯೋಗಿಗಳು. ದೇಹಕ್ಕೆ ವ್ಯಾಯಾಮದೊಂದಿಗೆ ಮನಸ್ಸಿಗೆ ಶಾಂತಿ, ವಿಶ್ರಾಂತಿ ದೊರಕುತ್ತದೆ. ಆದುದರಿಂದ ದಿನಾಲು ಪಾದಯಾತ್ರೆ ಮಾಡಿ ಆರೋಗ್ಯ ಭಾಗ್ಯ ಪಡೆಯಿರಿ. ರೋಗ ನಿರೋಧಕ ಶಕ್ತಿಯನ್ನು ಬೆಳೆಸಿ ಎಂದು ಅವರು ಕಿವಿ ಮಾತು ಹೇಳಿದರು.
 
 
 
 
ನಾವು ದಿನಾ ನೋಡುವ, ಕೇಳುವ, ಮಾಧ್ಯಮದಲ್ಲಿ ಬರುವ ಯಾವುದೇ ವಿಚಾರವನ್ನು ವಿಮರ್ಶೆ ಮಾಡದೆ ಒಪ್ಪಿಕೊಳ್ಳಬಾರದು. ದೇವಸ್ಥಾನ, ಚರ್ಚ್, ಮಸೀದಿ, ಬಸದಿ, ಮಠ-ಮಂದಿರಗಳು ಭಗವಂತನ ಜೊತೆ ನಮ್ಮ ಸಂಬಂಧ ಕಲ್ಪಿಸುವ ಮಾಧ್ಯಮಗಳು ಅವು ಪವಿತ್ರವಾದರೆ ನಾವು ಕೂಡಾ ಪವಿತ್ರರಾಗುತ್ತೇವೆ. ಧರ್ಮ, ಸಂಸ್ಕೃತಿ, ಪರಂಪರೆಯ ರಕ್ಷಣೆಯಿಂದ ಸಮಾಜದಲ್ಲಿ ಬೇಧ-ಭಾವದೂರವಾಗಿ ಸಂಘಟಣೆ ಬೆಳೆಯುತ್ತದೆ. ದೋಷಗಳೆಲ್ಲ ಪರಿಹಾರವಾಗುತ್ತವೆ.
 
 
 
ಕ್ಷೇತ್ರದ ಮೇಲಿನ ಶ್ರದ್ಧಾ-ಭಕ್ತಿ, ಅಭಿಮಾನದಿಂದ ಪಾದಯಾತ್ರೆ ಮಾಡಿದವರ ಬಗ್ಗೆ ಸಂತೋಷ ವ್ಯಕ್ತ ಪಡಿಸಿಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಆಯುರಾರೋಗ್ಯ ಭಾಗ್ಯವನ್ನಿತ್ತು ಸುಖ-ಶಾಂತಿ, ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸಿದರು.
 
 
 
ಧರ್ಮಸ್ಥಳದ ವತಿಯಿಂದ ಅನೇಕ ಪ್ರಗತಿಪರ ಯೋಜನೆಗಳನ್ನು ರೂಪಿಸಿದ್ದು ಬೆಳ್ತಂಗಡಿ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಕಟಿಸಿದರು. ಬೆಳ್ತಂಗಡಿಯ ವಕೀಲ ಬಿ.ಕೆ.ಧನಂಜಯರಾವ್ ಸ್ವಾಗತಿಸಿದರು. ಕಿಶೋರ್ ಕುಮಾರ್ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.
 
 
 
ಉಜಿರೆಯ ವಿಜಯರಾಘವ ಪಡ್ವೆಟ್ನಾಯ, ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್, ಪ್ರೊಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here