ದ. ಕ. ದ ಉಭಯ ತಂಡಗಳು ಚಾಂಪಿಯನ್

0
206

ವರದಿ: ಭರತ್ ಭಾರದ್ವಾಜ್ ಮತ್ತು ಶಿವಮಲ್ಲಯ್ಯ
ಚಿತ್ರ : ಕೃಷ್ಣಪ್ರಶಾಂತ್ .ವಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯ ಉಭಯ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಪ್ರಥಮ ಸ್ಥಾನದ ಮನ್ನಣೆ ಪಡೆದು ಗೆಲುವಿನ ನಗೆ ಬೀರಿದವು.
 
 
ಡಿಸೆಂಬರ್ ತಿಂಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಈ ಉಭಯ ತಂಡಗಳ ಆಟಗಾರರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
 
 
ಬಾಲಕರ ವಿಭಾಗ:
ಸೆಮಿಫೈನಲ್ ನಲ್ಲಿ ಬೆಂಗಳೂರು ದಕ್ಷಿಣ ತಂಡವನ್ನು 3-2 ಸೆಟ್ ಗಳಿಂದ ಮಣಿಸಿದ ದಕ್ಷಿಣ ಕನ್ನಡ ತಂಡ ಫೈನಲ್ ಗೆ ಅರ್ಹತೆ ಪಡೆದಿತ್ತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉಡುಪಿ ತಂಡ ಕಳೆದ ಬಾರಿಯ ರನ್ನರ್ ಆಪ್ ಹಾವೇರಿ ತಂಡವನ್ನು 3-0 ಸೆಟ್ ಗಳಿಂದ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿತು.
 
 
ಅಶ್ವಲ್ ರೈ ಅಂಕಣದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ ನಲ್ಲಿ ದಕ್ಷಿಣ ಕನ್ನಡ ತಂಡವು ಉಡುಪಿಯನ್ನು 3-0 ನೇರ ಸೆಟ್ ಗಳಿಂದ ಮಣಿಸಿ ಪ್ರಥಮ ಸ್ಥಾನ ಗಳಿಸಿಕೊಂಡಿತು. ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ನಲ್ಲಿ ಪ್ರಬಲ ದಕ್ಷಿಣ ಕನ್ನಡ ತಂಡದ ಎದುರು ಉಡುಪಿ ತಂಡ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡಿತು. ಮೊದಲ ಮೂರೂ ಸೆಟ್ ಗಳನ್ನು 25-23, 25-11, 25-12 ಸೆಟ್ಗಳಿಂದ ಸುಲಭವಾಗಿ ಜಯಿಸಿದ ದಕ್ಷಿಣ ಕನ್ನಡ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
 
 
ಬಾಲಕಿಯರ ವಿಭಾಗ:
ನೇತ್ರಾವತಿ ಅಂಕಣದಲ್ಲಿ ನಡೆದ ಬಾಲಕಿಯರ ವಿಭಾಗದ ಫೈನಲ್ ನಲ್ಲಿ ಅತಿಥೇಯ ದಕ್ಷಿಣ ಕನ್ನಡ ಜಿಲ್ಲೆಯ ತಂಡವು ಎದುರಾಳಿ ಬೆಂಗಳೂರು ಉತ್ತರ ತಂಡವನ್ನು ಸುಲಭವಾಗಿ ಹಣಿಯುವುದರ ಮೂಲಕ ಜಯಭೇರಿ ಬಾರಿಸಿತು. ಅತ್ಯಂತ ರೋಚಕತೆಯಿಂದ ಕೂಡಿದ್ದ ಫೈನಲ್ ನಲ್ಲಿ 3-0 ಸೆಟ್ ಗಳಿಂದ ಆತಿಥೇಯರು ಬೆಂಗಳೂರು ದಕ್ಷಿಣ ತಂಡವನ್ನು ಮಣಿಸಿದರು. ರಾಷ್ಟ್ರಮಟ್ಟದ ಆಟಗಾರ್ತಿಯರನ್ನು ಹೊಂದಿದ್ದ ದಕ್ಷಿಣ ಕನ್ನಡ ತಂಡ 25-18, 25-22, 25-19 ಸೆಟ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.
 
 
ಸೆಮಿಫೈನಲ್ ಪಂದ್ಯದಲ್ಲಿ ವಿಜಯಿ ದಕ್ಷಿಣ ಕನ್ನಡ ತಂಡ ಬೆಳಗಾವಿ ತಂಡವನ್ನು 3-0 ಸೆಟ್ ಗಳಿಂದ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಅತ್ಯಂತ ರೋಚಕತೆಯಿಂದ ಕೂಡಿದ್ದ ಎರಡನೇ ಸೆಮಿಸ್ನಲ್ಲಿ ಬೆಂಗಳೂರು ಉತ್ತರ ತಂಡ ಬೆಂಗಳೂರು ದಕ್ಷಿಣ ತಂಡವನ್ನು 3-1 ಸೆಟ್ ಗಳಿಂದ ಮಣಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿತ್ತು.

LEAVE A REPLY

Please enter your comment!
Please enter your name here