`ದ್ರೌಪದಿ ಪ್ರತಾಪ'ದ ಮೂಲಕ ಸ್ತ್ರೀಶಕ್ತಿಯ ಅನಾವರಣ

0
411

 
ವರದಿ: ಯತಿರಾಜ್ ಬ್ಯಾಲಹಳ್ಳಿ
ಚಿತ್ರಗಳು: ರಂಜಿತ್ ನಿಡಗೋಡು
ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಶನಿವಾರ ಉಡುಪಿಯ ಎಲ್ಲೂರಿನ `ಶ್ರೀ ಪಂಚಾಕ್ಷರಿ ಮಕ್ಕಳ ಯಕ್ಷಗಾನ ಮೇಳ’ವು ಧರ್ಮಸ್ಥಳದ ಎಸ್ ಡಿ ಎಂ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆಸಿಕೊಟ್ಟ `ದ್ರೌಪದಿ ಪ್ರತಾಪ’ ಯಕ್ಷಗಾನ ನೆರೆದಿದ್ದ ಭಕ್ತಾದಿಗಳ ಪ್ರಶಂಸೆಗೆ ಪಾತ್ರವಾಯಿತು.
 
 
 
ಕುರುಕ್ಷೇತ್ರಯುದ್ಧದ ನಂತರ ಅರ್ಜುನ ಮತ್ತು ಭೀಮನ ನಡುವೆ ಗೆಲುವಿಗೆ ಕಾರಣರಾದವರು ಯಾರೆಂಬ ಕಲಹ ಉಂಟಾಗಿ ಇಬ್ಬರ ನಡುವೆ ನಡೆದ ಯುದ್ಧದಲ್ಲಿ ಅರ್ಜುನ ಗೆಲ್ಲುತ್ತಾನೆ. ಈ ಅವಮಾನದಿಂದ ನೊಂದ ಭೀಮ ದ್ರೌಪದಿಯನ್ನು ಬಳಸಿಕೊಂಡು ಅರ್ಜುನನ್ನು ಸೋಲಿಸುತ್ತಾನೆ. ಐವರು ಗಂಡರ ಹೆಂಡತಿಯಾದ ದ್ರೌಪದಿಗೆ ಭೀಮನ ಪರ ವಹಿಸಲು ಸಕಾರಣಗಳಿವೆ. ಪರಾಕ್ರಮಿಯಾದ ಅರ್ಜುನ ಹೆಂಡತಿಯಿಂದ ಸೋತು, ತನ್ನ ಮತ್ತೊರ್ವ ಪತ್ನಿ ಸುಭದ್ರೆಯನ್ನು ದ್ರೌಪದಿಯ ಮಣಿಸಲು ಕಳುಹಿಸುತ್ತಾನೆ. ಸುಭದ್ರೆಯೂ ಸೋಲುತ್ತಾಳೆ. ತನ್ನ ತಂಗಿಗಾದ ಅವಮಾನದಿಂದ ದ್ರೌಪದಿಗೆ ಪಾಠ ಕಲಿಸಲು ಬಂದ ಯದುವಂಶದ ಬಲರಾಮ, ಕೃಷ್ಣಾದಿಗಳೂ ಸೋಲುತ್ತಾರೆ. ಶಿವನಲ್ಲಿ ಮೊರೆಯಿಟ್ಟ ಕೃಷ್ಣ, ಆತನಲ್ಲಿ ವಿಷಯ ತಿಳಿಸುತ್ತಾನೆ. ಶಿವನ ಮಗ ವೀರಭದ್ರ, ನಂತರ ಶಿವನಿಗೂ ಸೋಲಾಗುತ್ತದೆ. ಕೊನೆಗೆ ಪಾರ್ವತಿ ಯುದ್ಧಕ್ಕೆ ಇಳಿದಾಗ ದ್ರೌಪದಿ ಶಕ್ತಿಗುಂದುತ್ತಾಳೆ. ನಂತರ ದ್ರೌಪದಿ ಚಂಡಿಯಾಗುತ್ತಾಳೆ. ಪಾರ್ವತಿ ಕಾಳಿಯಾಗುತ್ತಾಳೆ. ಹೀಗಾದರೆ ಜಗತ್ತು ಸರ್ವನಾಶವೆಂದು ತಿಳಿದ ನಾರದ ಮುನಿ ಮಧ್ಯಪ್ರವೇಶಿಸಿ, ಇಬ್ಬರ ಶಕ್ತಿಯ ಹಿಂದಿನ ಕಥೆ ಹೇಳಿ, ಇಬ್ಬರಕೋಪವನ್ನು ಶಮನ ಮಾಡುತ್ತಾರೆ.
 
 
 
`ದ್ರೌಪದಿ ಪ್ರತಾಪ’ ಮಹಿಳಾ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ. ದ್ರೌಪದಿಯನ್ನು ಬಗ್ಗು ಬಡಿಯಲು ಒಂದು ಕಡೆ ಪುರುಷ ಪ್ರಾಧಾನ್ಯಮನಸ್ಥಿತಿ ಹೋರಾಡುತ್ತದೆ. ಅದಕ್ಕೆ ಸ್ತ್ರೀ ಪ್ರಧಾನ ಪಾತ್ರಗಳಾದ ಪಾರ್ವತಿ, ಸುಭದ್ರೆ ಬೆಂಬಲವಿದೆ. ದ್ರೌಪದಿ ತನ್ನ ಗಂಡನ ಪರ ನಿಂತರೂ ಆಕೆಯಲ್ಲಿ ಸ್ತ್ರೀ ಅಸ್ಮಿತೆ ನಿಚ್ಛಳವಾಗಿದ್ದರೆ, ಇನ್ನುಳಿದವರೆಲ್ಲಾ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಪ್ರತಿನಿಧಿಸುತ್ತಿದ್ದಾರೆಂಬುದು ಖಾತ್ರಿ. ದ್ರೌಪದಿ, ಭೀಮರನ್ನು ಹೊರತುಪಡಿಸಿ ಉಳಿದೆಲ್ಲಾ ಪಾತ್ರಗಳು ಲೋಕನಿಯಮದ ಕುರಿತು ಮಾತನಾಡುವುದು ಸ್ತ್ರೀ ಎಲ್ಲೆಮೀರಬಾರದೆಂಬ ಧೋರಣೆಯದ್ದಾಗಿದೆ.
 
 
 
ಯಕ್ಷಗುರು ಸತೀಶ್ ಕಾಫು ಅವರ ತರಬೇತಿಯಲ್ಲಿ ಪಾತ್ರಧಾರಿಗಳು ಮನೋಜ್ಞವಾಗಿ ಅಭಿನಯಿಸಿದರು. ಭಾಗವತಿಕೆಯಲ್ಲಿ ಚಂದ್ರಕಾಂತ ಶೆಟ್ಟಿ, ನಾಗರಾಜ ಭಟ್ ಗಮನಸೆಳೆದರು. ಮದ್ದಳೆಯಲ್ಲಿ ನಾಗೇಶ್ ಮುಲ್ಕಿ, ಶ್ರೀ ವಿಷ್ಣು ಮೂರ್ತಿ ಭಟ್ ಇದ್ದರು. ಚಕ್ರತಾಳದಲ್ಲಿ ಜಗದೀಶ್ ಎರ್ಮಾಳ್ ಯಶಸ್ವಿಯಾದರು. ದ್ರೌಪದಿಯ ಪಾತ್ರದಲ್ಲಿ ವೈಷ್ಣವಿ, ಅರ್ಜುನನ ಪಾತ್ರದಲ್ಲಿ ಸುನಿಲ್ ಸೊಗಸಾಗಿ ಅಭಿನಯಿಸಿದರು. ಸುಭದ್ರೆಯ ಪಾತ್ರದಲ್ಲಿ ಶ್ರೀಲಕ್ಷ್ಮೀ, ನಾರದನ ಪಾತ್ರದಲ್ಲಿ ದಿಶಾ, ಶ್ರೀಕಾಂತ್, ಕೃಷ್ಣ ಪಾತ್ರದಲ್ಲಿ ವಿನಿತ್, ಬಲರಾಮನ ಪಾತ್ರದಲ್ಲಿ ಸನತ್, ಪಾರ್ವತಿಯ ಪಾತ್ರದಲ್ಲಿ ಧನ್ಯಾ ಗಮನಸೆಳೆದರು.

LEAVE A REPLY

Please enter your comment!
Please enter your name here