ದೇಶಭಕ್ತಿಯ ನೈಜ ದರ್ಶನವಾಗಲಿ ನಮ್ಮೊಳಗೆ

0
433

ಅರಿತುಕೋ ಬದುಕ ವೈಖರಿ ಅಂಕಣ: ಎಂ ಎಸ್ ಸಂಚನಾ
“ದೇಶಭಕ್ತಿ” ಎಂಬ ಪದದಲ್ಲೇ ಒಂದು ಬಗೆಯ ಆಕರ್ಶಣೆಯಿದೆ. ಈ ಪದವನ್ನು ಕೇಳಿದ ಯಾವ ದೇಶಭಕ್ತನಿಗಾದರೂ ರೋಮಾಂಚನವಾಗದೆ ಇರಲು ಸಾಧ್ಯವಿಲ್ಲ. ಸ್ವದೇಶವ ಸ್ವರ್ಗ ಎಂದು ಭಾವಿಸುವವರಲ್ಲಿ ದೇಶಭಕ್ತಿಯು ಸಹಜವಾಗೇ ಸೇರಿಕೊಂಡಿರುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಒಬ್ಬ ವ್ಯಕ್ತಿಗೆ ತನ್ನ ತಾಯ್ನಡಿನ ಕುರಿತಂತೆ ಇರುವ ವಿಶೇಷ ಅಕ್ಕರೆಯೇ, ಮೆಚ್ಚುಗೆಯೇ ದೇಶಭಕ್ತಿ. ನಮ್ಮೊಳಗಿರುವ ದೇಶಭಕ್ತಿಯ ಭಾವವನ್ನು ಬಲವಂತವಾಗಿ ಇನ್ನೊಬ್ಬರ ಮೇಲೆ ಹೇರಿ ಅವರನ್ನೂ ದೇಶಭಕ್ತರನ್ನಾಗಿಸಿ ಬಿಡುತ್ತೇವೆಂಬುದೆಲ್ಲ ಭ್ರಮೆಯಷ್ಟೆ, ಹಾಗೆಲ್ಲಾ ಮಾಡುವ ಹಕ್ಕೂ ನಮಗಿಲ್ಲ,ಕಾರಣ ದೇಶಭಕ್ತಿಯೆಂದರೆ ಮತ್ತೊಬ್ಬರ ಒತ್ತಡಕ್ಕೆ ಮಣಿದು ನಮ್ಮೊಳಗೆ ಜನ್ಮತಾಳುವ ಭಾವವಗಿರುವುದಿಲ್ಲ,ಬದಲಿಗೆ ಸ್ವಸಂತೋಷದಿಂದ ಸಹಜವಾಗಿ ಅರಳುವ ಸುಮದಂತಿರುತ್ತದೆ.ಪ್ರತಿಯೊಬ್ಬರೊಳಗಿರುವ ಜ್ಞಾನ, ನಂಬಿಕೆಯೇ ದೇಶಭಕ್ತಿಯು ಜಾಗೃತವಾಗಿರುವಂತೆ ನೋಡಿಕೊಳ್ಳುವುದು.
 
 
ದುರಂತವೇನು ಗೊತ್ತಾ?ಇಂದು ನಮ್ಮಲ್ಲಿ ಕೆಲವರಿಗೆ ನಿಜಕ್ಕೂ ದೇಶಭಕ್ತಿ ಎಂದರೆ ಏನೆಂದೇ ತಿಳಿದಿಲ್ಲ. ಕೇವಲ ಆ ಪದದ ಪರಿಚಯವಿದೆಯಷ್ಟೆ, ಹಾಗಾಗಿ ದೇಶಭಕ್ತಿಯ ಸೋಗಿನಲ್ಲಿ ಬೇಡದ ಸಮಸ್ಯೆಗಳನ್ನೆಲ್ಲಾ ಹುಟ್ಟುಹಾಕುತ್ತಿದ್ದಾರೆ. ದೇಶಭಕ್ತನಿಗಿರಬೇಕಾದ ಅರ್ಹತೆ ಏನೆಂದು ತಿಳಿದರೆ ಸಾಕು, ದೇಶಭಕ್ತಿ ಏನೆಂದು ತಾನೇ ತಾನಾಗಿ ಅರಿವಾಗುತ್ತದೆ. ನಿಜವಾದ ದೇಶಭಕ್ತನೊಬ್ಬ ತನ್ನ ದೇಶ ನೆಚ್ಚಿರುವ,ನಂಬಿರುವ ಮೌಲ್ಯಗಳ ಕುರಿತಂತೆ ಹೆಮ್ಮೆ ಪಡುತ್ತಾನೆ, ತನ್ನ ಬದುಕಲ್ಲೂ ಆ ಮೌಲ್ಯಗಳ ಬೆಳೆಸಿಕೊಳ್ಳುತ್ತಾನೆ, ಮಾತ್ರವಲ್ಲ ಎಂದಾದರೂ, ಯಾರಿಂದಾದರೂ ಆ ಮೌಲ್ಯಗಳಿಗೆ ಅಪಚಾರವಾಗುತ್ತಿದೆ ಎಂಬ ಅರಿವಾದರೆ ಸಾಕು ಅದನ್ನು ಮತ್ತೆ ಮೇಲೆತ್ತುವ ಸಲುವಾಗಿ ಸಾತ್ವಿಕರೀತಿಯಲ್ಲಿ ತಿರುಗಿಬೀಳುತ್ತಾನೆ. ಇದೆಲ್ಲದರ ಫಲವಾಗಿ ಅವನನ್ನೊಬ್ಬ ಜವಬ್ದಾರಿಯುತ ವ್ಯಕ್ತಿ ಎನ್ನಲು ಅಡ್ಡಿಯಿಲ್ಲ.ಆದರೆ ಇಂದಾಗುತ್ತಿರುವುದೇನು? ದೇಶಭಕ್ತಿಯ ಬಣ್ಣ ಬಳಿದುಕೊಂಡು ಬೀದಿಗಿಳಿಯುವ ಬಹುತೇಕರು ತಮ್ಮ ನಿಷ್ಠೆಯನ್ನು ಪ್ರದಶರ್ಿಸುವುದು ಆ ದೇಶವ ಮುನ್ನೆಡೆಸಬೇಕಾದ ಮೌಲ್ಯಗಳಿಗಲ್ಲ, ಬದಲಿಗೆ ಆ ದೇಶದಲ್ಲಿ ಆಡಳಿತ ನಡೆಸುವ ಅಥವ ಆ ಆಡಳಿತವನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ, ನಿಜಕ್ಕೂ ನಾಚಿಕೆಯಾಗಬೇಕು ಅಂತವರಿಗೆ. ದೇಶವನಾಳುವ ದೊರೆಗಳು ಅಡ್ಡದಾರಿ ಹಿಡಿದಾಗ, ಅವರ ಕಿವಿಹಿಂಡಿ ಸರಿದಾರಿಗೆ ಕೊಂಡೊಯ್ಯದೆ, ಅವರ ಅಟ್ಟಹಾಸಕ್ಕೆಲ್ಲಾ ಬೆನ್ನು ತಟ್ಟಿ, ಚಪ್ಪಾಳೆ ಹಾಕುವುದೊಂದು ದೇಶಭಕ್ತಿಯಾ?
 
 
ನಮ್ಮ ಜೊತೆ ಇನ್ನೂ ಒಂದು ಬಗೆಯ ಅಭದ್ರತೆಭಾವವುಳ್ಳ ಜನರು ಬದುಕುತ್ತಿದ್ದಾರೆ, ಅವರೆಲ್ಲರ ಉದ್ಗಾರವೇನು ಗೊತ್ತಾ? ದೇಶಭಕ್ತಿ ಎಂಬ ಪದವನ್ನು ಕೇಳಿದರೆ ಅವರಿಗೆ ಭಯೋತ್ಪಾದನೆ ಎಂಬ ಪದವನ್ನು ಕೇಳಿದಂತಾಗುತ್ತದೆಯಂತೆ. ಹೀಗೆ ಹೇಳುವವರನ್ನು ಒಂದು ಮೂರ್ಖ ಜನರ ಗುಂಪೆಂದು ಪರಿಗಣಿಸಬಹುದು. ನಿಜ, ನಮಗೂ ದೇಶಭಕ್ತಿಯ ಹೆಸರಿನಲ್ಲಿ ಮನುಷ್ಯತ್ವವ ಮರೆತು ಮುಗ್ಧರ ಮಾರಣಹೋಮ ನಡೆಸುವ ಮಂದಿಯ ಕಂಡರೆ ಕೆಂಡದಂತ ಕೋಪಬರುತ್ತದೆ, ಅಂಥವರೆಲ್ಲಾ ದಂಡನೆಗೆ ಅರ್ಹರು ಕೂಡ.ಹಾಗೆಯೇ ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದಂಶವೂ ಇದೆ, ಅದೇನೆಂದರೆ ಆ ಮನುಷ್ಯ ರೂಪದ ಮೃಗಗಳು ದೇಶಭಕ್ತಿ ಎಂಬ ಪವಿತ್ರ ಪದವನ್ನು ಮುಂದಿಟ್ಟುಕೊಂಡು ಮಾಡಿದ ಮೋಸವದು. ನಿಜವಾದ ದೇಶಭಕ್ತ ಎಂದೂ ಮಾನವೀಯ ಮೌಲ್ಯಗಳ ಮೂಲೆಗುಂಪು ಮಾಡಲಾರ .ನಾಡರಕ್ಷಣೆಗೆ ತನ್ನ ಪ್ರಾಣವ ಬೇಕಾದರೂ ನೀಡುತ್ತೀನಿ ಎನ್ನುತ್ತಾನೆ ವಿನಃ ಎಂದೂ ಅಮಾಯಕರ ಪ್ರಾಣವ ಬಲಿಕೊಡುತ್ತೀನಿ ಎನ್ನುವುದಿಲ್ಲ.
ನಮ್ಮ ಬಾಲ್ಯದಲ್ಲಿ ಪೋಷಕರು ,ಶಿಕ್ಷಕರು ದೇಶಭಕ್ತನೆಂದರೆ ಈ ಎಲ್ಲಾ ಗುಣಗಳ ಗಣಿಯಾಗಿರುತ್ತಾನೆ ಎಂದು ಮಹಾನ್ ಚೇತನಗಳನ್ನು ಉದಾಹರಣೆ ನೀಡಿ ಭೋಧಿಸುತ್ತಿದ್ದುದ್ದು ಇನ್ನೂ ಮನದಲ್ಲಿ ಹಚ್ಚಹಸಿರಾಗೇ ಇದೆ. ಓಹೋ! ದೇಶಭಕ್ತನೆಂದರೆ ಅಹಿಂಸೆ, ತ್ಯಾಗ , ಬಲಿದಾನಗಳಂತ ಮೌಲ್ಯಗಳು ಮೈವೆತ್ತ ಮೂರ್ತಿಯೆಂದು ಅಂದೇ ಆ ಎಳೆಯ ಮನದಲ್ಲಿ ಒಂದು ಚಿತ್ರ ಮೂಡಿರುತ್ತದೆ.ಬೆಳೆಯುತ್ತಾ ಬಂದಂತೆ ಆ ಚಿತ್ರವು ವಿಚಿತ್ರವಾಗಿ ,ದೇಶಭಕ್ತನ ದೇಶದ್ರೋಹಿಯಂತೆ, ದೇಶದ್ರೋಹಿಯ ದೇಶಭಕ್ತನಂತೆ ಬಿಂಬಿಸಿದಾಗ ವಿಷಾದಿಸದೆ ವಿಧಿಯಿಲ್ಲ.ಶಾಲಾದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತ ಕಾರ್ಯಕ್ರಮಗಳಿಗೆ ತಪ್ಪದೆ ಸಂತೋಷದಲ್ಲಿ ಸಾಗುತ್ತಿದ್ದವರು , ಕಾಲೇಜಿನ ಮೆಟ್ಟಿಲೇರಿದ ತಕ್ಷಣ ಆ ಒಂದು ದಿನ ಸಿಗುವ ರಜದಲ್ಲಿ ಮಜಮಾಡಬಹುದೆಂದು ಎದಿರು ನೋಡುವಂತಾದರೆ, ಯುವ ಜನಾಂಗ ತಮ್ಮನ್ನು ತಾವು ಕೇಳಿಕೊಳ್ಳಲೇ ಬೇಕು ಅಂದು ತಮ್ಮೊಳಗಿದ್ದ ಆ ದೇಶಭಕ್ತಿ ಇಂದು ಸತ್ತುಹೋಯಿತಾ? ಎಂದು.
ಈಗಂತೂ ಗನ್ಹಿಡಿದು ಗಡಿಕಾಯುವವನು ಮಾತ್ರ ದೇಶಭಕ್ತ ಎನ್ನುವಂತಾಗಿದೆ, ಆದರೆ ಹಾಗೇನು ಇಲ್ಲ, ಗನ್ ಹಿಡಿದು ಸೈನಿಕನಂತೆ ದೇಶಸೇವೆಗೈಯಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ , ಹಾಗಂತ ಚಿಂತೆಮಾಡುವ ಅವಶ್ಯಕತೆಯೂ ಇಲ್ಲ. ಅವರಲ್ಲಿ ಗನ್ ಹಿಡಿದರೆ, ನಾವಿಲ್ಲಿ ದೇಶದೊಳಗಿರುವ ಅನ್ಯಾಯ, ಅಧರ್ಮ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಂತಹ ಕಸವನ್ನು ಗುಡಿಸಿ ಹಾಕಿದರಾಯಿತು, ಅದು ಕೂಡ ದೇಶಸೇವೆಯೇ ಆಗುವುದು, ಆಮೇಲೆ ನಾವೇ ಹೆಮ್ಮೆಯಲಿ ಬೀಗಬಹುದು ನಾನೊಬ್ಬ ದೇಶಭಕ್ತ ಎಂದು.
 
 
ದೇಶವನ್ನು ಪ್ರೀತಿಸುವವನಿಗೆ , ಅಲ್ಲಿರುವ ತಪ್ಪುಗಳನ್ನು ಎತ್ತಿಹೇಳುವ ಹಕ್ಕಿದೆ. ದೇಶಭಕ್ತಿಯ ಕುರಿತಂತೆ ಹೇಳುವಾಗ ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರ ಕುರಿತಂತೆ ಎಳ್ಳಷ್ಟೂ ಹೇಳದೆ ಹೋದರೆ ತಪ್ಪಾಗಬಹುದು. ಹಾಗಾಗಿ ಅವರನ್ನು ಈಗ ನೆನೆಯೋಣ. ನಮ್ಮ ನಡುವೆ ತಾವು ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರದೊಂದು ದೊಡ್ಡ ಗುಂಪಿದೆ. ಅವರು ಸದಾ ಬೊಬ್ಬೆ ಹಾಕುವುದೇನು ಗೊತ್ತಾ? ಆ ದೇಶದಲ್ಲಿ ಹಾಗಿದೆ , ಹೀಗಿದೆ ಈ ದೇಶದಲ್ಲಿ ಅದಿಲ್ಲ, ಇದಿಲ್ಲ, ಆ ವ್ಯವಸ್ಥೆ ಸರಿಯಿಲ್ಲ .ಈ ವ್ಯವಸ್ಥೆ ಸರಿಯಿಲ್ಲ ಎಂದು. ಇಂತವರನ್ನು ಕಂಡು ನಗಬೇಕೋ? ಅಳಬೇಕೋ? ಗೊತ್ತಿಲ್ಲ. ಒಂದು ವ್ಯವಸ್ಥೆಯಿಂದ ಮಾರುದೂರ ನಿಂತು ಅದನ್ನು ತೆಗಳುವ ಬದಲು, ಸಾದ್ಯವಾದರೇ ಆ ವ್ಯವಸ್ಥೆ ಒಳಗೆ ಒಂದಾಗಿ ತಮ್ಮ “ಬುದ್ಧಿ” ಉಪಯೋಗಿಸಿ ಅಲ್ಲಿರುವ ಲೋಪ- ದೋಷಗಳನ್ನು ಸರಿಪಡಿಸಿದರೆ ನಾವು ಕೂಡ ಯಾವ ನಾಚಿಕೆಯಿಲ್ಲದೆ ಅವರಿಗೆ ಜೈಕಾರ ಹಾಕುತ್ತೇವೆ, ವಂದಿಸುತ್ತೇವೆ. ಅದನ್ನು ಬಿಟ್ಟು ಕೇವಲ ಟೀಕಿಸುವುದರಲ್ಲಿ, ದೂರುವುದರಲ್ಲಿ ದಿನ ದೂಡುವವರನ್ನು ದೊಡ್ಡವ್ಯಕ್ತಿಗಳೆಂದು ಹೇಳಲು ನಮ್ಮ ಪ್ರಜ್ಞೆ ಒಪ್ಪದು.
 
 
ನಿಜವಾದ ದೇಶಭಕ್ತನಾದರೆ ಆತ ನನ್ನ ದೇಶ ನನಗೇನು ಕೊಟ್ಟಿದೆ ಎಂದು, ಎಂದೂ ಕೇಳುವುದಿಲ್ಲ. ಬದಲಿಗೆ ನನ್ನ ದೇಶಕ್ಕೆ ನಾನೇನು ಕೊಟ್ಟೆ ಎಂದೇ ಕೇಳಕೊಳ್ಳುತ್ತಿರುತ್ತಾನೆ. ನಾವು ಕೇಳದಿದ್ದರೂ ದೇಶ ನಮಗೆ ಸಕಲವನ್ನೂ ಕೊಟ್ಟಿರುತ್ತದೆ. ನಿಲ್ಲಲು ನೆಲೆಯನ್ನು .ವಿದ್ಯೆಯನ್ನು. ವೃತಿಯನ್ನು, ಸೇವೆಮಾಡಲು ಅವಕಾಶವನ್ನು. ಗೌರವವನ್ನು , ಸರ್ವವನ್ನೂ. ಆದರೆ ಕೇವವೊಮ್ಮೆ ಅವುಗಳನ್ನೆಲ್ಲಾ ಸಮರ್ಥವಾಗಿ ಉಪಯೋಗಿಸುವಲ್ಲಿ ನಾವೇ ಎಡವಿ ಬಿದ್ದಿರುತ್ತೇವೆ. ಬಲ್ಲವರು ಹೇಳುತ್ತಾರೆ ಯಾವ ದೇಶದಲ್ಲಾದರೂ ಅಸಂತೋಷ ತಾಂಡವವಾಡುತ್ತಿದೆ ಎಂದರೆ ಆ ದೇಶದಲ್ಲಿ ದೇಶಭಕ್ತರಿಗೆ ಬರವಿದೆ ಎಂದು .ಸಾಗರದಷ್ಟು ನೀಡಿದ ದೇಶಕ್ಕೇ, ಸಾಸಿವೆಯಷ್ಟಾದರೂ ಸೇವೆಯ ಸಲ್ಲಿಸಿ ಆ ರೀತಿಯ ಬರವು ಬರದಿರುವಂತೆ ತಡೆಯೋಣ. ನಮ್ಮ ದೇಶವ ಪ್ರೀತಿಸುವುದರ ಜೊತೆ ಜೊತೆಗೆ ಪರದೇಶಗಳನ್ನೂ ಗೌರವಿಸಿ ದೇಶದ ಘನತೆಯ ಮುಗಿಲೆತ್ತರಕ್ಕೇರಿಸೋಣ. ಭಾರತ ಅಮೇರಿಕ ಆಗಲಿ ಎಂದು ಆಶಿಸುವ ಬದಲು, ಭಾರತ ನಿಜವಾದ ಅರ್ಥದಲ್ಲಿ ಭಾರತವಾಗಿ (ಭಾ=ಜ್ಞಾನ, ರತ=ಆಸಕ್ತಿಉಳ್ಳವ, ಜ್ಞಾನದಲ್ಲಿ ಆಸಕ್ತಿ ಉಳ್ಳವರ ದೇಶ ಭಾರತ) ಉಳಿಯಲಿ ಎಂದು ಬಯಸೋಣ. ದೇಶಭಕ್ತರೆಲ್ಲರ ಬುದ್ಧಿ,ಭಾವಗಳು ಒಂದಾದರೆ ಈ ಬಯಕೆ ಖಂಡಿತಾ ಈಡೇರುವುದರಲ್ಲಿ ಎರಡು ಮಾತಿಲ್ಲ.
 
ಎಂ ಎಸ್ ಸಂಚನಾ
[email protected]

LEAVE A REPLY

Please enter your comment!
Please enter your name here