ದೇಶದಲ್ಲಿ ಮನಃಶಾಸ್ತ್ರಜ್ಞರ ಅಗತ್ಯತೆ ಇದೆ

0
205

 
ಉಜಿರೆ ಪ್ರತಿನಿಧಿ ವರದಿ
ಮನಃಶಾಸ್ತ್ರ ಭಾವನೆ, ಸ್ವಭಾವ ಮುಂತಾದವುಗಳ ಸಮ್ಮಿಲನವಾಗಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಇದು ಅತ್ಯಂತ ಕ್ಲಿಷ್ಟಕರ ವಿಚಾರ. ಇದರಲ್ಲಿ ಶಿಕ್ಷಣ, ಇಂಡಸ್ಟ್ರಿಯಲ್, ಕ್ಲಿನಿಕಲ್ ಹೀಗೆ ಹಲವು ವಿಭಾಗಗಳಿದ್ದು ಯಾವುದಾದರೊಂದು ವಿಭಾಗದಲ್ಲಿ ಪ್ರಾವೀಣ್ಯತೆ ಪಡೆಯಬೇಕು ಎಂದು ಉಡುಪಿ ಎ.ವಿ. ಬಾಳಿಗ ಆಸ್ಪತ್ರೆಯ ಕ್ಲಿನಿಕಲ್ ಸೈಕೋಲಾಜಿಸ್ಟ್ ಮಹೇಶ್ ಬಿ.ಎಸ್. ಹೇಳಿದರು.
 
ಅವರು ಇತ್ತೀಚೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಮನೋವಿಜ್ಞಾನ ವಿಭಾಗದ ‘ಕಾಗ್ನಿಟೋ ಅಸೋಸಿಯೇಷನ್’ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೈದ್ಯಕೀಯ ಮನೋವಿಜ್ಞಾನದಲ್ಲಿ ಮಾನಸಿಕ ಅಸ್ವಸ್ಥರನ್ನು ಅಧ್ಯಯನ ಮಾಡಲಾಗುತ್ತದೆ. ಮಾನಸಿಕ ಅಸ್ವಸ್ಥರು ಎಂದು ಪರಿಗಣಿಸಬೇಕಾದರೆ ಅವರಲ್ಲಿ ವೈದ್ಯಕೀಯವಾಗಿ ಗುರುತಿಸಲು ಸಾಧ್ಯವಾಗುವ ಕೆಲವು ಲಕ್ಷಣಗಳಿರಬೇಕು. ಅವರು ದೈಹಿಕವಾಗಿ ಸದೃಢರಾಗಿದ್ದರೂ ತಮ್ಮ ಆಲೋಚನೆ, ಸ್ವಭಾವ, ಭಾವನೆಗಳಿಂದ ತಮಗೆ ಹಾಗೂ ಇತರರಿಗೆ ಸಮಸ್ಯೆಯನ್ನುಂಟು ಮಾಡುತ್ತಾರೆ ಎಂದು ವಿವರಿಸಿದರು.
 
ಕ್ಲಿನಿಕಲ್ ಸೈಕಾಲಜಿಸ್ಟ್ ಆಗಬೇಕಿದ್ದರೆ ಕೇವಲ ಸೈಕಾಲಜಿಯಲ್ಲಿ ಎಮ್.ಎ., ಎಮ್.ಎಸ್.ಸಿ ಪಡೆದರೆ ಸಾಲದು. ಪ್ರತಿಷ್ಠಿತ ವಿಶ್ವ ವಿದ್ಯಾಲಯದಿಂದ ಎಮ್.ಫಿಲ್ ಕೂಡಾ ಮಾಡಿರಬೇಕು. ದೇಶದಲ್ಲಿ 25 ಮಿಲಿಯನ್ಗಿಂತಲೂ ಹೆಚ್ಚಿನ ಮಾನಸಿಕ ಅಸ್ವಸ್ಥರಿದ್ದು ಕೇವಲ ಆಪ್ತಸಮಾಲೋಚನೆಯಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಇದಕ್ಕೆ ಮಾತ್ರೆ, ಥೆರಪಿಗಳ ಆವಶ್ಯಕತೆಯಿದೆ. ಆದರೆ ಪ್ರಸ್ತುತ, ದೇಶದಲ್ಲಿ ಒಂದು ಲಕ್ಷ ರೋಗಿಗಳಿಗೆ ಕೇವಲ 0.4% ಮನೋ ವಿಜ್ಞಾನಿಗಳು, 0.04% ಮನೋ ವಿಜ್ಞಾನ ನರ್ಸ್ ಗಳು, 0.02%ಮನಃಶಾಸ್ತ್ರಜ್ಞರು, 0.02% ಸಮಾಜ ಸೇವಕರಿದ್ದಾರೆ ಎಂದು ವಿಷಾದಿಸಿದರು.
 
ವಿದ್ಯಾರ್ಥಿಗಳಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚುತ್ತಿದ್ದು, ವ್ಯಸನ, ಉದ್ವೇಗ, ಖಿನ್ನತೆ, ಗುಣ- ನಡತೆಗಳಲ್ಲಿನ ಸಮಸ್ಯೆ ಹೆಚ್ಚುತ್ತಿದೆ. ಇವರಲ್ಲಿ 10% ಜನರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅನೇಕರಿಗೆ ಈ ಸಮಸ್ಯೆಗಳಿಗೆ ಔಷಧವಿದೆ ಎಂದು ತಿಳಿದಿಲ್ಲ. ದಿನಕಳೆದಂತೆ ಈ ಸಮಸ್ಯೆಗಳು ಹೆಚ್ಚಾಗುವುದಲ್ಲದೇ ಚಿಕಿತ್ಸೆಗೂ ಹೆಚ್ಚಿನ ಸಮಯ ತಗಲುತ್ತದೆ. ಆದರೆ ಜನರಿಗೆ ಅಷ್ಟು ತಾಳ್ಮೆ ಇಲ್ಲ. ಕೊನೆಗೆ ಮಾಟ ಮಂತ್ರಗಳ ಮೊರೆ ಹೋಗುತ್ತಾರೆ ಎಂದರು.
 
ಯುವ ಪೀಳಿಗೆ ಬೇಗ ಉದ್ಯೋಗ ದೊರಕಬೇಕೆನ್ನುವ ಬಯಕೆಯಿಂದ ಐ.ಟಿ., ಇಂಜಿನಿಯರಿಂಗ್ ಗಳ ಮೊರೆ ಹೋಗುತ್ತಿದ್ದಾರೆ. ಆದರೆ ದೇಶಕ್ಕೆ ಮನಃಶಾಸ್ತ್ರಜ್ಞರ ಅಗತ್ಯ ಬಹಳಷ್ಟಿದೆ. ವಿದ್ಯಾರ್ಥಿಗಳನ್ನು ಇತ್ತಕಡೆ ಸೆಳೆವ ಕೆಲಸವಾಗಬೇಕಿದೆ ಎಂದ ಅವರು ಸೈಕಾಲಜಿಯಲ್ಲಿನ ಉದ್ಯೋಗಾವಕಾಶಗಳು, ಕ್ಲಿನಿಕಲ್ ಸೈಕಾಲಜಿಯಲ್ಲಿ ಅಧ್ಯಯನ ಮಾಡಬೇಕಾದ ವಿಷಯಗಳ ಬಗ್ಗೆ ತಿಳಿಸಿದರು.
 
ವಿಭಾಗ ಮುಖ್ಯಸ್ಥ ಪ್ರೊ. ಗೋಪಾಲ್ ಪಟವರ್ಧನ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಕಾಲೇಜು ಒಳ್ಳೆಯ ಅವಕಾಶ, ಅಧ್ಯಾಪಕ ವೃಂದ, ಸೌಲಭ್ಯಗಳನ್ನೊದಗಿಸುತ್ತಿದೆ. ಇವುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಹಾರೈಸಿದರು.
ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿ, ವೈಷ್ಣವಿ ಸ್ವಾಗತಿಸಿ, ಚೈತ್ರಾ ವಂದಿಸಿದರು. ಹಿರಿಯ ವಿದ್ಯಾರ್ಥಿ ಸನಲ್, ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here