ದೇಶಕ್ಕಿಂತಲೂ ಮೊದಲು ಗೋವು

0
237

ನಮ್ಮ ಪ್ರತಿನಿಧಿ ವರದಿ
ಮಾನವ ತನ್ನ ಹಕ್ಕುಗಳ ಬಗ್ಗೆ ಮಾತ್ರ ಆಲೋಚಿಸಿ ಮಾನವ ಹಕ್ಕುಗಳ ದಿನವನ್ನು ಮಾಡಿಕೊಂಡಿದ್ದಾನೆ. ಆದರೆ ಬಾಧ್ಯತೆಗಳ ಬಗ್ಗೆ ಆಲೋಚಿಸದೇ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾನೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ ಇವರು ಅಭಿಪ್ರಾಯಪಟ್ಟರು.
 
mata_gomangala
ರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ಕೂಡ್ಲಿಗಿಯ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ನಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಜಗತ್ತಿನ ಎರಡು ಕಡೆ ಮಾತ್ರ. ಕೂಡ್ಲಿಗಿ ಮತ್ತು ದಿಲ್ಲಿಯಲ್ಲಿ ಮಾತ್ರ ಗಾಂಧೀಜಿಯವರ ಚಿತಾಭಸ್ಮ ಇರುವುದು. ಸ್ವರಾಜ್ಯ ಮತ್ತು ಗೋರಕ್ಷೆಯ ನಡುವೆ ಗಾಂಧೀಜಿಯವರು ಆರಿಸಿದ್ದು ಗೋರಕ್ಷೆಯೆನ್ನುವ ಪವಿತ್ರ ಕಾರ್ಯ. ಇದರಿಂದಲೇ ದೇಶಕ್ಕಿಂತಲೂ ಮೊದಲು ಗೋವು ಎನ್ನುವುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಹಾಗಾಗಿ ಗಾಂಧೀಜಿಯ ಇನ್ನೊಂದು ಚಿತಾಭಸ್ಮ ಇರುವ ದಿಲ್ಲಿಯವರೆಗೂ ಗೋರಕ್ಷಣೆಯ ಕೂಗು ತಲುಪಬೇಕಿದೆ ಎಂದರು.
 
 
ಗೀತಾಜಯಂತಿಯಂದು ಧರ್ಮಸಂಗ್ರಾಮ
ಅಂದು ಸಂಗರಬಾಹಿರನಾಗಿ ನಿಂತ ಅರ್ಜುನನನ್ನು ಸಂಗರಕ್ಕೆ ಪ್ರೇರೇಪಿಸಿದ್ದು ಗೀತೆ. ಹಾಗೆಯೇ ಗೋಮಾತೆಯ ರಕ್ಷಣೆಯಿಂದ ಬಾಹಿರರಾಗಿ ನಿಂತವರನ್ನು ಪ್ರೇರೇಪಿಸಲಿರುವುದು ಮಂಗಲಗೋಯಾತ್ರೆ ಎಂದರು. ಈ ಧರ್ಮಸಂಗ್ರಾಮಕ್ಕೆ ಸರ್ಕಾರ, ಆಪ್ತೇಷ್ಟರು ಯಾರೇ ಅಡ್ಡಬಂದರೂ ಗೋವಿನ ಉಳಿವಿಗಾಗಿ, ನಮ್ಮ ಉಳಿವಿಗಾಗಿ ಹೋರಾಡಲೇಬೇಕಿದೆ ಅದಕ್ಕಾಗಿ ಈ ಮಂಗಲಗೋಯಾತ್ರೆ. ಇದರ ಯಶಸ್ಸಿಗಾಗಿ ಯೋಗದಾನ, ತ್ಯಾಗದಾನ ಎಲ್ಲವನ್ನೂ ಗೋಭಕ್ತರಿಂದ ಆಶಿಸುತ್ತೇವೆ. ಮಾನವನಿಗೆ ಮಾತ್ರ ಹಕ್ಕಿರುವುದಲ್ಲ. ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಬವಣೆ, ಬಂಧನದ ನಡುವೆ ಸಹಜವಾದ ಹುಟ್ಟು, ಬದುಕು, ಸಾವನ್ನು ಕಾಣಲು ಗೋವು ಕಷ್ಟಪಡುವಂತೆ ಮಾಡುವುದು ಸಮಾಜ ಶ್ರೇಯಸ್ಕರವಲ್ಲ ಎಂದು ಗೋಜಾಗೃತಿಯ ನುಡಿಗಳನ್ನಾಡಿದರು.
 
 
ಯಶವಂತನಗರದ ಗಂಗಾಧರೇಂದ್ರ ಸ್ವಾಮಿಗಳು ಮಾತನಾಡಿ, ರಾಮಚಂದ್ರಾಪುರಮಠ ಗೋವಿನ ಸಂರಕ್ಷಣೆಯ ಬಗ್ಗೆ ಬಹಳಷ್ಟು ಕಾಲದಿಂದ ಜಾಗೃತಿ ಮೂಡಿಸುತ್ತಿದೆ. ಆಧುನಿಕ ದಿನಮಾನಕ್ಕೆ ಮಾರುಹೋಗಿ ದೇಸಿ ಗೋತಳಿಗಳ ಬಗೆಗೆ ಜಾಗೃತಿ ಮಾಯವಾಗುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯ ಅತ್ಯಂತ ಶ್ಲಾಘನೀಯ. ಆಕಳ ಉಸಿರ ಸ್ಪರ್ಶವೇ ಪುಣ್ಯಕಾರಕ ಎಂಬ ನಂಬಿಕೆ ಇದೆ. ಈ ಪರಂಪರೆಯ ಉಳಿವು ನಮ್ಮ ಉಳಿವಿಗೆ ಕಾರಣವಾಗುತ್ತದೆ. ಹಾಗಾಗಿ ಮಂಗಲಗೋಯಾತ್ರೆಗೆ ನಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು.
 
 
ಒಬ್ಬ ಆದರ್ಶ ಸಂತರು ಏನು ಮಾಡಬಲ್ಲರು ಎನ್ನುವುದಕ್ಕೆ ಸಾಕ್ಷಿ ರಾಘವೇಶ್ವರ ಶ್ರೀಗಳು. ಅಂದು ರಾಮ ಸೀತೆಗಾಗಿ ಯುದ್ಧವನ್ನು ಮಾಡಲು ಹೊರಟರೆ, ರಾಘವೇಶ್ವರ ಶ್ರೀಗಳು ಇಂದು ಗೋವಿಗಾಗಿ ಹೋರಾಟ ಮಾಡಲು ಹೊರಟಿದ್ದಾರೆ. ಹೀಗೆ ಅಧರ್ಮದ ವಿರುದ್ಧ ಧರ್ಮದ ಬಾಣ ಹೊಡೆಯಲು ಹೊರಟಿರುವ ಶ್ರೇಷ್ಟ ಶ್ರೀಗಳೊಡನೆ ಸಂತ ಸಮುದಾಯವೆಲ್ಲವೂ ನಿಲ್ಲಲಿದೆ ಎಂದು ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
 
 
ಹರಪನಹಳ್ಳಿಯಿಂದ ಕೂಡ್ಲಿಗಿ ತಲುಪಿದ ಮಂಗಲಗೋಯಾತ್ರೆಯ ರಥಗಳು ಕೂಡ್ಲಿಗಿ ನಗರದಾದ್ಯಂತ ಭವ್ಯ ಶೋಭಾಯಾತ್ರೆಯನ್ನು ನಡೆಸಿದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆ ಗೋಸಂದೇಶವನ್ನು ಪಸರಿಸಿತು. ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಶಂಕರಾನಂದ ಸ್ವಾಮಿಗಳು, ಅಶೋಕ್ ಬಾಬುರಾವ್, ಸಚಿನ್, ಶಕ್ರಪ್ಪ, ವಿವೇಕ್, ಸತೀಶ್, ಗುರುರಾಜ್, ದಯಾನಂದ್ ಸಜ್ಜನ್, ಸುಭಾಷ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here